ಭಾರತ ಟಿ20 ವಿಶ್ವಕಪ್ ತಂಡದಿಂದ ವಿರಾಟ್ ಕೊಹ್ಲಿ ಹೊರಗುಳಿಯಲ್ಲ; ವಿಕೆಟ್ ಕೀಪರ್ ರೇಸ್‌ನಲ್ಲಿ ರಿಷಭ್ ಪಂತ್
Virat Kohli: ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಐಪಿಎಲ್ 2024ರಲ್ಲಿ ಉಭಯ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ಆಯ್ಕೆ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ದಾಖಲೆಯ ಎಂಟನೇ ಐಪಿಎಲ್ ಶತಕ ಸಿಡಿಸಿದರು. ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಶತಕ ಸಿಡಿಸಿದ ಕಿಂಗ್ ಕೊಹ್ಲಿ, ತಮ್ಮ ದಾಖಲೆಯಾಟ ಮುಂದುವರೆಸಿದರು. ಟೂರ್ನಿಯಲ್ಲಿ ಆರ್‌ಸಿಬಿ ತಂಡ ಆಡಿದ ಮೊದಲ ಐದು ಪಂದ್ಯಗಳಲ್ಲಿ, ತಂಡದ ಪರ ಉತ್ತಮ ಪ್ರದರ್ಶನ ನೀಡಿದ ಏಕೈಕ ಆಟಗಾರ ಕೊಹ್ಲಿ. ಆದರೂ, ರಾಜಸ್ಥಾನ್ ವಿರುದ್ಧ ಕೊಹ್ಲಿ ಸಿಡಿಸಿದ ಅಜೇಯ 113 ರನ್‌ಗಳ ಶತಕವು, ವ್ಯಾಪಕ ಟೀಕೆಗೆ ಒಳಗಾಗಿದ್ದು ಖೇದಕರ. ಈ ಆವೃತ್ತಿಯಲ್ಲಿ ಹೆಚ್ಚು ಚರ್ಚೆಗೊಳಗಾದ ಅಂಶಗಳಲ್ಲಿ ಕೊಹ್ಲಿಯ ಸ್ಟ್ರೈಕ್ ರೇಟ್ ಕೂಡಾ ಒಂದು. ಕಡಿಮೆ ಸ್ಟ್ರೈಕ್ ರೇಟ್‌ನಿಂದಾಗಿ ವಿರಾಟ್ ಆಟವನ್ನು ಕೆಲವೊಬ್ಬರು ಟೀಕಿಸಿದ್ದಾರೆ.
ಐಪಿಎಲ್ ಟೂರ್ನಿ ಮುಗಿಯುತ್ತಿದ್ದಂತೆಯೇ, ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದೆ. ಮಹತ್ವದ ಚುಟುಕು ವಿಶ್ವಸಮರಕ್ಕೆ ಕೊಹ್ಲಿ ಆಯ್ಕೆ ಬೇಕು ಬೇಡ ಎನ್ನುವ ಕುರಿತು ಚರ್ಚಿಸಗಲಾಗುತ್ತಿದೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೊಹ್ಲಿ 67 ಎಸೆತಗಳಲ್ಲಿ ಶತಕ ಪೂರೈಸಿದ್ದು, ಐಪಿಎಲ್ ಇತಿಹಾಸದಲ್ಲಿ ಇದು ನಿಧಾನಗತಿಯ (ಜಂಟಿಯಾಗಿ) ಶತಕವಾಗಿದೆ. 2009ರ ಐಪಿಎಲ್ ಟೂರ್ನಿಯಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಮನೀಶ್ ಪಾಂಡೆ ಕೂಡಾ 67 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇವರೆಡು ಕೂಡಾ ಐಪಿಎಲ್‌ನ ನಿಧಾನಗತಿಯ ಸೆಂಚುರಿಗಳು. ಹೀಗಾಗಿ ಟಿ20 ವಿಶ್ವಕಪ್ ವರ್ಷದಲ್ಲಿ ಕೊಹ್ಲಿಯ ಸ್ಟ್ರೈಕ್ ರೇಟ್ ಟೀಕಾಕಾರರ ಬಾಯಿಗೆ ಆಹಾರವಾಗಿದೆ.
ಕೊಹ್ಲಿ ಬೆಂಬಲಕ್ಕೆ ನಿಂತ ಬ್ರಿಯಾನ್ ಲಾರಾ
ಎದುರಾಳಿ ತಂಡಗಳ ಪಾಲಿಗೆ ವಿರಾಟ್ ಕೊಗ್ಲಿ ಯಾವತ್ತಿಗೂ ಡೇಂಜರಸ್ ಆಟಗಾರ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆಕ್ರಮಣಕಾರಿ ಆಟದೊಂದಿಗೆ ತಂಡದ ಅಗತ್ಯಕ್ಕೆ ತಕ್ಕನಾಗಿ ಸಿಡಿಯುವ ಸಾಮರ್ಥ್ಯ ಅವರಲ್ಲಿದೆ. ಇದೇ ವಿಚಾರವಾಗಿ ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ಅವರು ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಆಡಬೇಕಾದ ಅಗ್ರ 3 ಬ್ಯಾಟರ್‌ಗಳ ಪಟ್ಟಿಯಲ್ಲಿ ಆರ್‌ಸಿಬಿ ಆಟಗಾರನಿಗೆ ವಿಂಡೀಸ್ ದಿಗ್ಗಜ ಸ್ಥಾನ ನೀಡಿದ್ದಾರೆ.
ಇದನ್ನೂ ಓದಿ | ಐಪಿಎಲ್‌ನಲ್ಲಿ ಈ ದಾಖಲೆ ಮಾಡಿದ ಏಕೈಕ ಆಟಗಾರ ರವೀಂದ್ರ ಜಡೇಜಾ; ಸಿಎಸ್‌ಕೆ ಆಲ್‌ರೌಂಡರ್ ವಿಶೇಷ ಮೈಲಿಗಲ್ಲು
ಕ್ರಿಕ್‌ಬಜ್ ವರದಿಯ ಪ್ರಕಾರ, ಟಿ20 ವಿಶ್ವಕಪ್‌ಗಾಗಿ ಭಾರತೀಯ ಕ್ರಿಕೆಟ್ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಐಪಿಎಲ್ ಆವೃತ್ತಿಯಲ್ಲಿ ಕೊಹ್ಲಿಯ ಸ್ಟ್ರೈಕ್ ರೇಟ್ ಪ್ರಶ್ನೆಗೊಳಗಾಗಿದ್ದರೂ, ಮಹತ್ವದ ಟೂರ್ನಿಯಿಂದ ಕೊಹ್ಲಿಯನ್ನು ಹೊರಗಿಡುವ ಯಾವ ಸಾಧ್ಯತೆಯೂ ಇಲ್ಲ ಎಂದು ವರದಿ ತಿಳಿಸಿದೆ. ಟೂರ್ನಿಯ ಮೊದಲ ಐದು ಐಪಿಎಲ್ ಪಂದ್ಯಗಳಲ್ಲಿ ಕೊಹ್ಲಿ ಆರ್‌ಸಿಬಿ ಆರಂಭಿಕನಾಗಿ 146.29ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 35ರ ಹರೆಯದ ಆಟಗಾರ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸುವುದರೊಂದಿಗೆ ಆರೆಂಜ್ ಕ್ಯಾಪ್ ಧರಿಸಿದ್ದಾರೆ.
ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಆಡಲಿದ್ದಾರೆ. ವಿಶ್ವಕಪ್ ತಂಡದಲ್ಲಿ ಕೊಹ್ಲಿ 3ನೇ ಸ್ಥಾನದಲ್ಲಿ ಆಡಿದರೆ, ಶುಭ್ಮನ್ ಗಿಲ್ ಅವರನ್ನು ಬ್ಯಾಟಿಂಗ್ ಲೈನ್ಅಪ್‌ಗೆ ಹೇಗೆ ಸೇರಿಸುತ್ತಾರೆ ಎಂಬುದನ್ನು ಆಸಕ್ತಿದಾಯಕವಾಗಿದೆ.
ಅತ್ತ ವಿಕೆಟ್ ಕೀಪರ್ ಸ್ಥಾನಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಕೂಡ ಅಗ್ರಪಂಕ್ತಿಯಲ್ಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ಸ್ಥಾನಕ್ಕೆ ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಜಿತೇಶ್ ಶರ್ಮಾ ಹಾಗೂ ಕೆಎಲ್ ರಾಹುಲ್ ನಡುವೆ ಪೈಪೋಟಿ ಇದೆ. ಆದರೆ, ಇವರೆಲ್ಲರಿಗಿಂತ ಪಂತ್ ಮುಂಚೂಣಿಯಲ್ಲಿದ್ದಾರೆ.