ಸ್ಮೃತಿ ಮಂಧಾನ ಅಬ್ಬರದಾಟ, ಬೌಲರ್ಗಳು ಮೆರೆದಾಟ; ಡೆಲ್ಲಿ ಕ್ಯಾಪಿಟಲ್ಸ್ ಸೋಲಿಸಿ ಸತತ 2ನೇ ಗೆಲುವು ಸಾಧಿಸಿದ ಆರ್ಸಿಬಿ
Delhi Capitals vs Royal Challengers Bengaluru: ಮಹಿಳಾ ಪ್ರೀಮಿಯರ್ ಲೀಗ್ನ ನಾಲ್ಕನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್ಗಳಿಂದ ಗೆದ್ದು ಬೀಗಿದೆ.

ನಾಯಕಿ ಸ್ಮತಿ ಮಂಧಾನ ಅವರ ಸ್ಫೋಟಕ ಅರ್ಧಶತಕ (81) ಮತ್ತು ಬೌಲರ್ಗಳ ವಿಕೆಟ್ ಬೇಟೆಯ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಸತತ 2ನೇ ಜಯ ಕಂಡಿದೆ. ಗೆದ್ದವರ ಕಾದಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 2ನೇ ಪಂದ್ಯದಲ್ಲಿ ಸೋಲಿಗೆ ಶರಣಾಯಿತು. ಕಳೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ದಾಖಲೆಯ ಚೇಸ್ ಮಾಡಿದ್ದ ಆರ್ಸಿಬಿ, ತನ್ನ ಎರಡನೇ ಪಂದ್ಯದಲ್ಲಿ ಮತ್ತೊಂದು ದಾಖಲೆಯ ಜೊತೆಗೆ ಸುಲಭವಾಗಿ ಗೆದ್ದು ಬೀಗಿದೆ. ಆದರೆ ಮುಂಬೈ ಇಂಡಿಯನ್ಸ್ ಎದುರು ಕೊನೆಯ ಎಸೆತದಲ್ಲಿ ಜಯಿಸಿದ್ದ ಡೆಲ್ಲಿ 8 ವಿಕೆಟ್ಗಳಿಂದ ಸೋಲನುಭವಿಸಿತು.
ವಡೋದರಾದ ಕೋಟಂಬಿ ಕ್ರಿಕೆಟ್ ಮೈದಾನದಲ್ಲಿ ನಡೆದ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಆರ್ಸಿಬಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡಕ್ಕೆ ಆರ್ಸಿಬಿ ಬೌಲರ್ಗಳು ಆಘಾತ ನೀಡಿದರು. ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಜೆಮಿಮಾ ರೋಡ್ರಿಗಸ್ ಅವರ 34 ರನ್ಗಳ ಕಾಣಿಕೆಯ ಸಹಾಯದಿಂದ 19.3 ಓವರ್ಗಳಲ್ಲಿ 141ಕ್ಕೆ ಆಲೌಟ್ ಆಯಿತು. ಈ ಸಾಧಾರಣ ಗುರಿ ಬೆನ್ನಟ್ಟಿದ ರೆಡ್ ಆರ್ಮಿ 16.2 ಓವರ್ಗಳಲ್ಲಿ ಗೆಲುವಿನ ಗೆರೆ ದಾಟಿತು. ಸ್ಮೃತಿ ಮಂಧಾನ ಕಳೆದ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದ ಡೇನಿಯಲ್ ವ್ಯಾಟ್ (42) ಅಬ್ಬರಿಸಿ ಡೆಲ್ಲಿ ಬೌಲಿಂಗ್ ಕೋಟೆಯನ್ನು ಧ್ವಂಸಗೊಳಿಸಿದರು.
142 ರನ್ ಗುರಿ ಬೆನ್ನಟ್ಟಿದ ಆರ್ಸಿಬಿ, ಡೆಲ್ಲಿ ಬೌಲರ್ಗಳ ಸವಾರಿ ಮಾಡಿತು. ಸ್ಮೃತಿ ಮಂಧಾನ ಮತ್ತು ಡೇನಿಯಲ್ ವ್ಯಾಟ್ ಮೊದಲ ವಿಕೆಟ್ಗೆ 107 ರನ್ಗಳ ಪಾಲುದಾರಿಕೆ ಒದಗಿಸಿದರು. ಇದು ಆರ್ಸಿಬಿಯ ಎರಡನೇ ಅತಿ ದೊಡ್ಡ ಜೊತೆಯಾಟವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದ ಈ ಇವರಿಬ್ಬರು, ಡೆಲ್ಲಿ ಬೌಲರ್ಗಳ ಬೆವರಳಿಸಿ ಸೋಲನ್ನು ಖಚಿತಪಡಿಸಿದರು. ಇನ್ನಿಂಗ್ಸ್ ಆರಂಭಿಸಿದ ಮೊದಲ ಓವರ್ನಿಂದಲೇ ಅಷ್ಟ ದಿಕ್ಕಿಗೂ ಚೆಂಡಿನ ದರ್ಶನ ಮಾಡಿದ ಈ ಜೋಡಿ, ಬೌಲರ್ಗಳನ್ನು ಸುಸ್ತುಗೊಳಿಸಿ ಡೆಲ್ಲಿ ಹೆಣೆದಿದ್ದ ಕಾರ್ಯತಂತ್ರಗಳನ್ನು ಹಾನಿ ಮಾಡಿದರು. ಇದೇ ವೇಳೆ ಸ್ಮೃತಿ ಅರ್ಧಶತಕ ಸಿಡಿಸಿ ಟೂರ್ನಿಯಲ್ಲಿ 500+ ರನ್ಗಳ ಸಾಧನೆ ಮಾಡಿದರು.
47 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಿತ 81 ರನ್ ಚಚ್ಚಿದರು. ಇದು ಆರ್ಸಿಬಿ ಸಿಡಿಸಿದ ಎರಡನೇ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಆದರೆ ಗೆಲುವಿನ ಸನಿಹದಲ್ಲಿದ್ದ ವೇಳೆ ವ್ಯಾಟ್ ಮತ್ತು ಮಂಧಾನ ಔಟಾದರು. ಇಂಗ್ಲೆಂಡ್ ಆಟಗಾರ್ತಿ 33 ಎಸೆತಗಳಲ್ಲಿ 7 ಬೌಂಡರಿ ಸಹಿತ 43 ರನ್ ಸಿಡಿಸುವ ಮೂಲಕ ಮಿಂಚಿ ಅರುಂಧತಿ ರೆಡ್ಡಿ ಬೌಲಿಂಗ್ನಲ್ಲಿ ಔಟಾದರು. ಇನ್ನು ಗೆಲ್ಲಲು 9 ರನ್ ಬೇಕಿದ್ದಾಗ 47 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಿತ 81 ರನ್ ಸಿಡಿಸಿದ್ದ ಮಂಧಾನ ಅವರು ಶಿಖಾ ಪಾಂಡೆ ಬೌಲಿಂಗ್ನಲ್ಲಿ ಔಟಾದರು. ಕೊನೆಯಲ್ಲಿ ಎಲಿಸ್ ಪೆರಿ ಮತ್ತು ರಿಚಾ ಘೋಷ್ ಅವರು ಕ್ರಮವಾಗಿ 7 ಮತ್ತು 11 ರನ್ಗಳಿಸಿ ಇನ್ನೂ 22 ಎಸೆತಗಳನ್ನು ಬಾಕಿ ಉಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ರೇಣುಕಾ, ಜಾರ್ಜಿಯಾ ಅಬ್ಬರ, ಡೆಲ್ಲಿ ತತ್ತರ
ಉದ್ಘಾಟನಾ ಪಂದ್ಯದಲ್ಲಿ 201 ರನ್ ಚೇಸ್ ಮಾಡಿದ್ದ ಕಾರಣ ಡೆಲ್ಲಿ ಬೃಹತ್ ಮೊತ್ತ ಕಲೆ ಹಾಕುವ ಲೆಕ್ಕಾಚಾರದಲ್ಲಿತ್ತು. ಡೆಲ್ಲಿ ಗೇಮ್ ಪ್ಲಾನ್ಗೆ ಆರ್ಸಿಬಿ ಬೌಲರ್ಸ್ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಡೇಂಜರಸ್ ಬ್ಯಾಟರ್ ಶಫಾಲಿ ವರ್ಮಾರನ್ನು ರೇಣುಕಾ ಸಿಂಗ್ ಮೊದಲ ಓವರ್ನಲ್ಲೇ ಗೋಲ್ಡನ್ ಡಕ್ಗೆ ಹೊರದಬ್ಬಿದರು. ಆ ಬಳಿಕ ಮೆಗ್ ಲ್ಯಾನಿಂಗ್ ಮತ್ತು ಜೆಮಿಮಾ ರೋಡ್ರಿಗಸ್ ಅವರು ಆರಂಭಿಕ ಆಘಾತದಿಂದ ಚೇತರಿಕೆ ನೀಡುವ ಮೂಲಕ 2ನೇ ವಿಕೆಟ್ಗೆ 59 ರನ್ಗಳ ಜೊತೆಯಾಟ ಕೂಡ ಆಡಿದರು. 17 ರನ್ ಬಾರಿಸಿದ್ದ ಲ್ಯಾನಿಂಗ್ಗೆ ಕಿಮ್ ಗಾರ್ತ್ ಗೇಟ್ ಪಾಸ್ ನೀಡಿದರೆ, 34 ರನ್ ಸಿಡಿಸಿ ಸೆಟಲ್ ಆಗಿದ್ದ ಜೆಮಿಮಾರನ್ನು ಜಾರ್ಜಿಯಾ ವೆರ್ಹ್ಯಾಮ್ ಹೊರದಬ್ಬಿದರು.
ಆ ಬಳಿಕ ಡೆಲ್ಲಿ ಬ್ಯಾಟರ್ಸ್ ಕ್ರೀಸ್ ಕಚ್ಚಿ ನಿಲ್ಲುವ ಪ್ರಯತ್ನ ನಡೆಸಲಿಲ್ಲ. ಅದಕ್ಕೆ ಆರ್ಸಿಬಿ ಬೌಲರ್ಗಳು ಅವಕಾಶವೂ ನೀಡಲಿಲ್ಲ. ಅನ್ನಾಬೆಲ್ ಸದರ್ಲ್ಯಾಂಡ್ 19, ಮರಿಜಾನ್ನೆ ಕಪ್ 12, ಜೆಸ್ ಜೊನಾಸೆನ್ 1, ಸಾರಾ ಬ್ರೈಸ್ 23, ಶಿಖಾ ಪಾಂಡೆ 14 ರನ್ಗಳ ಕಾಣಿಕೆ ನೀಡಿದರು. ಆದರೆ ರೇಣುಕಾ ಸಿಂಗ್ ಮತ್ತು ಜಾರ್ಜಿಯಾ ಮಿಂಚಿನ ದಾಳಿ ನಡೆಸಿ ಮಧ್ಯಮ ಕ್ರಮಾಂಕ ಕುಸಿತದ ಜೊತೆಗೆ ಅಲ್ಪಮೊತ್ತಕ್ಕೆ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ರೇಣುಕಾ, ಜಾರ್ಜಿಯಾ ತಲಾ 3 ವಿಕೆಟ್ ಪಡೆದರೆ, ಕಿಮ್ ಗಾರ್ತ್, ಏಕ್ತಾ ಬಿಶ್ತ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.
