ಲೇಡಿ ಎಬಿ ಪೆರ್ರಿ ಪರಾಕ್ರಮ, ಕನ್ನಡತಿ ಖಡಕ್ ಆಟ; ಮುಂಬೈ ಇಂಡಿಯನ್ಸ್ ಮಣಿಸಿ ಚೊಚ್ಚಲ ಫೈನಲ್ಗೇರಿದ ಆರ್ಸಿಬಿ
WPL 2024 Eliminator : ವುಮೆನ್ಸ್ ಪ್ರೀಮಿಯರ್ ಲೀಗ್ 2ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೊಚ್ಚಲ ಫೈನಲ್ ಪ್ರವೇಶಿಸಿದೆ.
ಮಹಿಳಾ ಪ್ರೀಮಿಯರ್ ಲೀಗ್ನ ಎರಡನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತು. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಎಲಿಮಿನೇಟರ್ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ನೇತೃತ್ವದ ಮುಂಬೈ ತಂಡವನ್ನು 5 ರನ್ಗಳಿಂದ ಮಣಿಸಿದ ಆರ್ಸಿಬಿ, 16 ವರ್ಷಗಳ ಟ್ರೋಫಿ ಬರ ನೀಗಿಸಲು ಸಜ್ಜಾಗಿದೆ. ಆದರೆ, ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸುವ ಮುಂಬೈ ಕನಸು ಭಗ್ನಗೊಂಡಿದೆ.
ಫೈನಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರಾಳಿ
2ನೇ ಆವೃತ್ತಿಯ ಡಬ್ಲ್ಯುಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವುದರೊಂದಿಗೆ ನೇರವಾಗಿ ಫೈನಲ್ ಪ್ರವೇಶಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆರ್ಸಿಬಿ ಎದುರಿಸಲಿದೆ. ಕಳೆದ ಬಾರಿಯೂ ಡೆಲ್ಲಿ ಫೈನಲ್ ಪ್ರವೇಶಿಸಿತ್ತು. ಆದರೆ ಮುಂಬೈ ವಿರುದ್ಧ ಸೋತು ರನ್ನರ್ಅಪ್ಗೆ ತೃಪ್ತಿಯಾಗಿತ್ತು. ಈ ಬಾರಿ ಆರ್ಸಿಬಿ ಮತ್ತು ಡೆಲ್ಲಿ ಯಾರೇ ಗೆದ್ದರೂ ಡಬ್ಲ್ಯುಪಿಎಲ್ನಲ್ಲಿ ನೂತನ ಚಾಂಪಿಯನ್ ಆಗಲಿದೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸ್ಮೃತಿ ಮಂಧಾನ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಅತ್ಯಂತ ಕಳಪೆ ಆರಂಭ ಪಡೆಯಿತು. ಸ್ಮೃತಿ ಮಂಧಾನ (10) ಮತ್ತು ಸೋಫಿ ಡಿವೈನ್ (10) ಮತ್ತು ದಿಶಾ ಕಸತ್ (0) ತಂಡದ ಮೊತ್ತ 23 ರನ್ ಆಗುವಷ್ಟರಲ್ಲಿ ಔಟಾದರು. ಇದು ಆರ್ಸಿಬಿ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತು. ಫಾರ್ಮ್ನಲ್ಲಿದ್ದ ರಿಚಾ ಘೋಷ್ (14) ಕೂಡ ನಿರಾಸೆ ಮೂಡಿಸಿದರು.
ಎಲ್ಲಿಸ್ ಪೆರ್ರಿ ಏಕಾಂಗಿ ಹೋರಾಟ
ಸತತ ವಿಕೆಟ್ಗಳ ನಡುವೆಯೂ ನಿಧಾನವಾಗಿ ಬೀಸುತ್ತಾ ವಿಕೆಟ್ ಕಾಯ್ದುಕೊಂಡ ಪೆರ್ರಿ, ಮುಂಬೈ ಬೌಲಿಂಗ್ ವಿರುದ್ಧ ದಿಟ್ಟವಾಗಿ ಹೋರಾಟ ನಡೆಸಿದರು. ಜವಾಬ್ದಾರಿಯುತ ಆಟವಾಡಿ ಏಕಾಂಗಿ ಹೋರಾಟ ನಡೆಸಿದರು. ಅಲ್ಪಮೊತ್ತಕ್ಕೆ ಕುಸಿಯಬೇಕಿದ್ದ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ನೆರವಾದರು. 50 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ 66 ರನ್ ಚಚ್ಚಿದರು. ಅಂತಿಮವಾಗಿ ಆರ್ಸಿಬಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತ್ತು.
ಆದರೆ ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಲು ಮಾತ್ರ ಶಕ್ತವಾಯಿತು. 5 ರನ್ಗಳಿಂದ ಸೋತ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎಲಿಮಿನೇಟರ್ನಿಂದ ಹೊರಬಿತ್ತು. ಯಾಸ್ತಿಕಾ ಭಾಟಿಯಾ 19, ಹೇಲಿ ಮ್ಯಾಥ್ಯೂಸ್ 15, ನಟಾಲಿ ಸೀವರ್ 23 ರನ್ ಗಳಿಸಿದರು. ಆದರೆ ಕೊನೆಯಲ್ಲಿ ಹರ್ಮನ್ಪ್ರೀತ್ ಕೌರ್ 33 ರನ್ ಗಳಿಸಿ ಹೋರಾಟ ನಡೆಸಿದರು. ಆದರೆ ಅವರು ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ಹರ್ಮನ್ಪ್ರೀತ್ ಅವರು ಔಟಾಗುವುದಕ್ಕೂ ಮುನ್ನ ಮುಂಬೈ ಗೆಲ್ಲುವುದು ಖಚಿತ ಎಂದು ಹೇಳಲಾಗಿತ್ತು. ಆದರೆ 18ನೇ ಓವರ್ನ ಕೊನೆಯಲ್ಲಿ ಶ್ರೇಯಾಂಕಾ ಪಾಟೀಲ್ ಬೌಲಿಂಗ್ನಲ್ಲಿ ಲಾಂಗ್ ಆನ್ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಆಗ 2 ಓವರ್ಗಳಲ್ಲಿ ಮುಂಬೈ ಗೆಲುವಿಗೆ ಕೇವಲ 16 ರನ್ ಬೇಕಿತ್ತು. ಆದರೆ ಪೂಜಾ ವಸ್ತ್ರಾಕರ್, ಎಸ್ ಸಜನಾ, ಅಮನ್ಜೋತ್ ಕೌರ್, 27 ರನ್ ಗಳಿಸಿ ಕ್ರೀಸ್ನಲ್ಲಿ ಸೆಟಲ್ ಆಗಿದ್ದ ಅಮೆಲಿಯಾ ಕೇರ್ ಅವರು ಆರ್ಸಿಬಿ ಬೌಲಿಂಗ್ ಮುಂದೆ ಮಂಡಿಯೂರಿತು. ಕೊನೆಯಲ್ಲಿ ಜಾರ್ಜಿಯಾ ವೇರ್ಹ್ಯಾಮ್, ಸೋಫಿ ಮೊಲಿನೆಕ್ಸ್, ಶ್ರೇಯಾಂಕಾ ಪಾಟೀಲ್, ಆಶಾ ಶೋಭನಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು.
ಪೆರ್ರಿ ಪರಾಕ್ರಮ, ಕನ್ನಡತಿ ಖಡಕ್ ಆಟ
ಪಂದ್ಯದ ಗೆಲುವಿನಲ್ಲಿ ಪ್ರಮುಖ ಆಟಗಾರ್ತಿಯರು ಅಂದರೆ ಎಲ್ಲಿಸ್ ಪೆರ್ರಿ ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್. ಹೌದು, ಲೇಡಿ ಎಬಿ ಎಂದೇ ಕರೆಸಿಕೊಳ್ಳುವ ಎಲ್ಲಿಸ್ ಪೆರ್ರಿ ಬ್ಯಾಟಿಂಗ್ನಲ್ಲಿ ಅರ್ಧಶತಕ ಮತ್ತು ಬೌಲಿಂಗ್ನಲ್ಲಿ ವಿಕೆಟ್ ಪಡೆದು ಮಿಂಚಿದರು. ಮತ್ತೊಂದೆಡೆ ಶ್ರೇಯಾಂಕಾ ಒತ್ತಡದಲ್ಲಿ ಎರಡು ವಿಕೆಟ್ ಪಡೆದರು. ಹೇಲಿ ಮ್ಯಾಥ್ಯೂಸ್ ಮತ್ತು ಹರ್ಮನ್ಪ್ರೀತ್ ಕೌರ್ ಅವರನ್ನು ಔಟ್ ಮಾಡಿದರು. 4 ಓವರ್ಗಳಲ್ಲಿ 16 ರನ್ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದರು. ಆಶಾ ಶೋಭನಾ, ವೇರ್ಹ್ಯಾಮ್, ಸೋಫಿ ಮೊಲಿನೆಕ್ಸ್ ತಲಾ 1 ವಿಕೆಟ್ ಪಡೆದರು.