ಆಶಾ ಶೋಭಾನಾ ಬೆಂಕಿ ಬೌಲಿಂಗ್; ಮೊದಲ ಪಂದ್ಯದಲ್ಲೇ ಗೆದ್ದು ಬೀಗಿದ ಆರ್​ಸಿಬಿ, ಯುಪಿ ವಾರಿಯರ್ಸ್​ಗೆ 2 ರನ್ ಸೋಲು
ಕನ್ನಡ ಸುದ್ದಿ  /  ಕ್ರಿಕೆಟ್  /  ಆಶಾ ಶೋಭಾನಾ ಬೆಂಕಿ ಬೌಲಿಂಗ್; ಮೊದಲ ಪಂದ್ಯದಲ್ಲೇ ಗೆದ್ದು ಬೀಗಿದ ಆರ್​ಸಿಬಿ, ಯುಪಿ ವಾರಿಯರ್ಸ್​ಗೆ 2 ರನ್ ಸೋಲು

ಆಶಾ ಶೋಭಾನಾ ಬೆಂಕಿ ಬೌಲಿಂಗ್; ಮೊದಲ ಪಂದ್ಯದಲ್ಲೇ ಗೆದ್ದು ಬೀಗಿದ ಆರ್​ಸಿಬಿ, ಯುಪಿ ವಾರಿಯರ್ಸ್​ಗೆ 2 ರನ್ ಸೋಲು

RCB vs UPW: ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ರನ್​ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.

ಶೋಭಾನಾ ಆಶಾ ಬೆಂಕಿ ಬೌಲಿಂಗ್; ಕೊನೆಯ ಓವರ್​​ನಲ್ಲಿ ರೋಚಕ ಗೆಲುವು ದಾಖಲಿಸಿದ ಆರ್​ಸಿಬಿ
ಶೋಭಾನಾ ಆಶಾ ಬೆಂಕಿ ಬೌಲಿಂಗ್; ಕೊನೆಯ ಓವರ್​​ನಲ್ಲಿ ರೋಚಕ ಗೆಲುವು ದಾಖಲಿಸಿದ ಆರ್​ಸಿಬಿ

ಅಭಿಮಾನಿಗಳ ಆರ್​ಸಿಬಿ.. ಆರ್​ಸಿಬಿ.. ಘೋಷಣೆಯ ಬೆಂಬಲದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ಸಾಧಿಸಿದೆ. ಕಳೆದ ವರ್ಷ ಮೊದಲ ಐದು ಪಂದ್ಯಗಳಲ್ಲಿ ಸೋತಿದ್ದ ಸ್ಮೃತಿ ಮಂಧಾನ ಪಡೆ, ಇದೀಗ ತನ್ನ ಆರಂಭಿಕ ಪಂದ್ಯದಲ್ಲೇ ಶುಭಾರಂಭ ಮಾಡಿದೆ. ಯುಪಿ ವಾರಿಯರ್ಸ್ ವಿರುದ್ಧ 2 ರನ್​ಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿ ಅಭಿಯಾನ ಆರಂಭಿಸಿದೆ. ಆಶಾ ಶೋಭನಾ ಅವರ ಬೆಂಕಿ ಬೌಲಿಂಗ್ ಮುಂದೆ ಅಲೀಸಾ ಹೀಲಿ ಪಡೆ ಮಂಡಿಯೂರಿತು.

ತವರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಆರ್​ಸಿಬಿ ಮೊದಲು ಬ್ಯಾಟಿಂಗ್ ನಡೆಸಿತು. ರೆಡ್ ಆರ್ಮಿ ಪರ ಇನ್ನಿಂಗ್ಸ್​ ಆರಂಭಿಸಿದ ಸ್ಮೃತಿ ಮಂಧಾನ ಮತ್ತು ಸೋಫಿ ಡಿವೈನ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಡಿವೈನ್ 1 ರನ್, ಸ್ಮೃತಿ 13 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಕಣಕ್ಕಿಳಿದ ಎಲ್ಲಿಸ್ ಪೆರ್ರಿ 8 ರನ್​ಗೆ ಆಟ ಮುಗಿಸಿ ಪೆವಿಲಿಯನ್ ಸೇರಿದರು. ಇದರೊಂದಿಗೆ ಆರ್​ಸಿಬಿ ಆತಂಕಕ್ಕೆ ಸಿಲುಕಿತ್ತು.

ಮೇಘನಾ-ರಿಚಾ ಬೊಂಬಾಟ್ ಆಟ

54ಕ್ಕೆ 3 ವಿಕೆಟ್ ನಷ್ಟವಾಗಿದ್ದ ವೇಳೆ ತಂಡದ ಜವಾಬ್ದಾರಿ ಹೊತ್ತ ಸಬ್ಬಿನೇನಿ ಮೇಘನಾ ಮತ್ತು ರಿಚಾ ಘೋಷ್ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ನೆರೆದಿದ್ದ ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿದರು. ಇಬ್ಬರು ಸಹ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಅಲ್ಲದೆ ಈ ಜೋಡಿ 71 ರನ್​ಗಳ ಜೊತೆಯಾಟವಾಡಿದರು. ಇದೇ ವೇಳೆ ಇಬ್ಬರೂ ಹಾಫ್ ಸೆಂಚುರಿ ಸಿಡಿಸಿದರು. ಇಬ್ಬರ ಆಟದಿಂದಾಗಿ ಆರ್​ಸಿಬಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಸಾಧ್ಯವಾಯಿತು.

ಅರ್ಧಶತಕ ಸಿಡಿಸಿ ಮಿಂಚು

ಮೇಘನಾ 44 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್​ ಸಹಿತ 53 ರನ್, ರಿಚಾ 37 ಎಸೆತಗಳಲ್ಲಿ 12 ಬೌಂಡರಿಗಳನ್ನು ಸಿಡಿಸಿ 62 ರನ್ ಚಚ್ಚಿದರು. ಆ ಮೂಲಕ ತಂಡವನ್ನು ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ಸೋಫಿ ಮೊಲಿನೆಕ್ಸ್ 9, ಶ್ರೇಯಾಂಕಾ 8 ರನ್ ಸಿಡಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಕಲೆ ಹಾಕಿತು. ರಾಜೇಶ್ವರಿ ಗಾಯಕ್ವಾಡ್ 2 ವಿಕೆಟ್ ಪಡೆದರು.

ಯುಪಿಗೂ ಆರಂಭಕ್ಕೂ ಆಘಾತ

158 ರನ್​ಗಳ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ತಂಡದ ಆರಂಭ ಕೂಡ ಉತ್ತಮವಾಗಿರಲಿಲ್ಲ. ನಾಯಕಿ ಅಲೀಸಾ ಹೀಲಿ 5 ರನ್​ಗೆ ಆಟ ಮುಗಿಸಿದರು. ವೃಂದಾ ದಿನೇಶ್ ನಿಧಾನಗತಿಯ ಬ್ಯಾಟಿಂಗ್ ನಡೆಸಿ ತಂಡದ ಹಿನ್ನಡೆಗೆ ಕಾರಣರಾದರು. ತಹ್ಲಿಯಾ ಮೆಗ್ರಾತ್ 22 ರನ್ ಗಳಿಸಿ ಅಬ್ಬರಿಸುವ ನಿರೀಕ್ಷೆ ಹುಟ್ಟು ಹಾಕಿದ್ದರು. ಇಬ್ಬರಿಗೂ ಆಶಾ ಶೋಭನಾ ಗೇಟ್ ಪಾಸ್ ನೀಡಿದರು. ಆದರೆ ಉಳಿದ ಬೌಲರ್​​ಗಳಿಂದ ಸರಿಯಾದ ಸಾಥ್ ಸಿಗಲಿಲ್ಲ.

ಬೆಂಡೆತ್ತಿದ ಶ್ವೇತಾ - ಹ್ಯಾರಿಸ್

ಸಂಕಷ್ಟದಲ್ಲಿದ್ದ ತಂಡಕ್ಕೆ ಶ್ವೇತಾ ಸೆಹ್ರಾವತ್ ಮತ್ತು ಗ್ರೇಸ್ ಹ್ಯಾರಿಸ್ ಆಸರೆಯಾದರು. ಒಂದೆಡೆ ಇಬ್ಬರು ಸೇರಿ ಸಿಕ್ಸರ್​ ಬೌಂಡರಿಗಳ ಸುರಿಮಳೆಗೈದರೆ, ಮತ್ತೊಂದೆಡೆ ಆರ್​​ಸಿಬಿ ಬೌಲರ್ಸ್ ವಿಕೆಟ್​ಗಾಗಿ ಪರದಾಡಿದರು. ನೋಡ ನೋಡುತ್ತಲೇ ಗೆಲ್ಲುವ ಹಂತದಿಂದ ಸೋಲಿನ ಅಂಚಿಗೆ ಆರ್​ಸಿಬಿಗೆ ಬಂದು ನಿಂತಿತು. ಕೊನೆಯ 4 ಓವರ್​​ಗಳಲ್ಲಿ 32 ಮಾತ್ರ ಆಗತ್ಯ ಇತ್ತು. ಆದರೆ 17ನೇ ಓವರ್​​​ನಲ್ಲಿ ವಾರಿಯರ್ಸ್ 3 ವಿಕೆಟ್ ಕಳೆದುಕೊಂಡಿತು.

ಒಂದೇ ಓವರ್​​ನಲ್ಲಿ 3 ವಿಕೆಟ್ ಕಿತ್ತ ಆಶಾ

ಈ ವೇಳೆ ದಾಳಿಗಿಳಿದ ಆಶಾ, 17ನೇ ಓವರ್​​ನಲ್ಲಿ 3 ವಿಕೆಟ್ ಕಿತ್ತರು. ಅದ್ಭುತ ಪ್ರದರ್ಶನ ನೀಡುತ್ತಿದ್ದ ಸೆಹ್ರಾವತ್ (31)​, ಹ್ಯಾರಿಸ್​ಗೆ (38) ಗೇಟ್​ ಪಾಸ್ ನೀಡಿದರು.​ 38 ರನ್ ಗಳಿಸಿ ಔಟಾದರು. ಇನ್ನು ಕೊನೆಯ ಎಸೆತದಲ್ಲಿ ಕಿರಣ್ ನವ್​ಗಿರೆ ಸ್ಟಂಪ್ ಆದರು. ಇದರೊಂದಿಗೆ ಆಶಾ ತನ್ನ ಅಂತಿಮ ಓವರ್​​ನಲ್ಲಿ 3 ವಿಕೆಟ್ ಸಹಿತ ಒಟ್ಟು 5 ವಿಕೆಟ್ ಪಡೆದರು. ಈ ಓವರ್​​​ ಮ್ಯಾಚ್​​ ಟರ್ನಿಂಗ್​ಗೆ ಪ್ರಮುಖ ಕಾರಣವಾಯಿತು.

ಕೊನೆಯ ಮೂರು ಓವರ್​​ಗಳಲ್ಲಿ 30 ರನ್ ಬೇಕಿದ್ದ ಅವಧಿಯಲ್ಲಿ ಶ್ರೇಯಾಂಕಾ 18ನೇ ಓವರ್​​​ನಲ್ಲಿ 14 ರನ್ ಬಿಟ್ಟುಕೊಟ್ಟು ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಆದರೆ ಜಾರ್ಜಿಯಾ ವೇರ್ಹ್ಯಾಮ್ ಮತ್ತೆ ಮುನ್ನಡೆ ತಂದುಕೊಟ್ಟರು. ಅಂತಿಮ ಹಂತದಲ್ಲಿ 14 ರನ್ ಚಚ್ಚಿದ್ದ  ಪೂನಂ ಖೇಮ್ನಾರ್​ಗೆ ಗೇಟ್​ಪಾಸ್ ಕೊಟ್ಟರು. ಕೊನೆಯ ಓವರ್​​ನಲ್ಲಿ ಯುಪಿಗೆ 11 ರನ್ ಬೇಕಿತ್ತು. ಆದರೆ 7 ರನ್ ಮಾತ್ರ ಗಳಿಸಲಾಯಿತು. ಇದರೊಂದಿಗೆ ಆರ್​ಸಿಬಿ ಗೆಲುವಿನ ನಗೆ ಬೀರಿತು.

Whats_app_banner