ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸುವ ಕುರಿತು ನಾಯಕ ಫಾಫ್ ಡು ಪ್ಲೆಸಿಸ್ ಮಾತು
ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಜೊತೆಗೆ ಬ್ಯಾಟಿಂಗ್ ಮಾಡುವ ಕುರಿತು ಮಾತನಾಡಿದ್ದಾರೆ. ಕಳೆದ ಆವೃತ್ತಿಯಲ್ಲಿ ಉಭಯ ಆಟಗಾರರು ಬೆಂಗಳೂರು ತಂಡದ ಪರ ಐಪಿಎಲ್‌ನಲ್ಲಿ ಇನ್ನಿಂಗ್ಸ್ ಆರಂಭಿಸಿದ್ದರು. ಈ ಬಾರಿಯೂ ಈ ಸಂಪ್ರದಾಯ ಮುಂದುವರೆಯುವ ಸಾಧ್ಯತೆ ಇದೆ.
ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಇದೇ ವೇಳೆ ಚೊಚ್ಚಲ ಕಪ್ ಗೆಲುವಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಸಜ್ಜಾಗಿದೆ. ಟೂರ್ನಿಯ ಆರಂಭಕ್ಕೂ ಮುನ್ನ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಲಂಡನ್‌ನಿಂದ ಭಾರತಕ್ಕೆ ಮರಳಿದ್ದಾರೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಕಣಕ್ಕಿಳಿಯಲಿರುವ ಆರ್‌ಸಿಬಿ, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಖಾಡಕ್ಕಿಳಿಯಲು ಸಜ್ಜಾಗಿದೆ. ಈ ಬಾರಿ ಕೂಡಾ ಫಾಫ್ ಡು ಪ್ಲೆಸಿಸ್ ಬೆಂಗಳೂರು ತಂಡವನ್ನು ಮುನ್ನಡೆಸುತ್ತಿದ್ದು, ಅತ್ತ ಕೊಹ್ಲಿ ಇನ್ನೇನು ಆರ್‌ಸಿಬಿ ಶಿಬಿರ ಸೇರಿಕೊಳ್ಳಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ, ಲಂಡನ್‌ಗೆ ತೆರಳಿದ್ದರು. ಪತ್ನಿ ಅನುಷ್ಕಾ ಶರ್ಮಾ ಫೆಬ್ರವರಿ 15ರಂದು ಗಂಡು ಮಗು ಅಕಾಯ್‌ಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ, ವಿರಾಟ್ ಕ್ರಿಕೆಟ್‌ನಿಂದ ಹೊರಗುಳಿದಿದ್ದಾರೆ.
ಐಪಿಎಲ್ 2024ರ ಆವೃತ್ತಿಗೆ ಸಿದ್ಧತೆ ಕುರಿತಾಗಿ ಮಾತನಾಡುವಾಗ, ಆರ್‌ಸಿಬಿ ಐಕಾನ್ ವಿರಾಟ್ ಬಗ್ಗೆ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಡು ಪ್ಲೆಸಿಸ್ ಮಾತನಾಡಿದ್ದಾರೆ. ಕೊಹ್ಲಿಯೊಂದಿಗೆ ತಂಡದ ಪರ ಇನ್ನಿಂಗ್ಸ್ ಆರಂಭಿಸುವ ಬಗ್ಗೆ ವಿವರಿಸಿದ ಅವರು, ಕೊಹ್ಲಿ ತಮ್ಮ ನೆಚ್ಚಿನ ಆಟಗಾರರಲ್ಲಿ ಒಬ್ಬರು ಎಂದು ಹೇಳಿದ್ದಾರೆ. ಇವರೊಂದಿಗೆ ಇನ್ನಿಂಗ್ಸ್ ಆರಂಭಿಸುವುದು ಖುಷಿಯ ವಿಚಾರ. ಕಳೆದ ಬಾರಿಯ ಆವೃತ್ತಿಯಲ್ಲಿ ಈ ಜೋಡಿಯೇ ಆರ್‌ಸಿಬಿ ಪರ ಇನ್ನಿಂಗ್ಸ್ ಆರಂಭಿಸಿದ್ದರು. ಅಲ್ಲದೆ ಕಳೆದ ಋತುವಿನಲ್ಲಿ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
ಇದನ್ನೂ ಓದಿ | ಐಪಿಎಲ್ 2024: ಸೂರ್ಯಕುಮಾರ್, ಶಮಿ, ಮಧುಶಂಕ; ಇಲ್ಲಿದೆ ತಂಡವಾರು ಗಾಯಗೊಂಡ ಆಟಗಾರರ ಪಟ್ಟಿ, ಕಂಬ್ಯಾಕ್ ದಿನಾಂಕ
“ಕೊಹ್ಲಿ ಜೊತೆಗೆ ಬ್ಯಾಟಿಂಗ್ ಮಾಡುವುದು ಅದೊಂದು ನಂಬಲಾಗದ ಅನುಭವ. ಜೊತೆಯಾಗಿ ಬ್ಯಾಟಿಂಗ್ ಮಾಡಲು ನನ್ನ ನೆಚ್ಚಿನ ಆಟಗಾರರಲ್ಲಿ ವಿರಾಟ್ ಒಬ್ಬರು. ಅವರು ನನ್ನಲ್ಲಿ ತುಂಬಾ ಶಕ್ತಿಯನ್ನು ಹೊರತರುತ್ತಾನೆ. ಗ್ಲೌಸ್ ಹಾಕಿ ಕೈಯಿಂದ ಮುಷ್ಟಿ ಹಿಡಿದು ಅವರ ಮುಷ್ಠಿಗೆ ಹೊಡೆವಾಗ ಶಕ್ತಿ ತುಂಬಿದಂತಾಗುತ್ತದೆ. ಅವರು ಶಕ್ತಿಯನ್ನು ತುಂಬುವ ರೀತಿ ಹೇಗಿರುತ್ತದೆ ಎಂಬುದು ಎದುರಾಳಿ ತಂಡದಲ್ಲಿದ್ದು ನನಗೆ ಗೊತ್ತಿದೆ,” ಎಂದು ಡು ಪ್ಲೆಸಿಸ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.
ಇದನ್ನೂ ಓದಿ | ಸಿಎಸ್‌ಕೆ ವಿರುದ್ಧ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ; ಈ 11 ಆಟಗಾರರು ಕಣಕ್ಕಿಳಿದರೆ ಚೆನ್ನೈ ಶೇಕ್ ಆಗೋದು ಪಕ್ಕಾ!
2021ರಲ್ಲಿ ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವವನ್ನು ತ್ಯಜಿಸಿದರು. ಆ ಬಳಿಕ ಹರಾಜಿನಲ್ಲಿ 7 ಕೋಟಿ ರೂಪಾಯಿಗೆ ತಂಡ ಸೇರಿಕೊಂಡ ಸಿಎಸ್‌ಕೆ ಮಾಜಿ ಆಟಗಾರ ಫಾಫ್ ಡು ಪ್ಲೆಸಿಸ್ ಅವರಿಗೆ 2022ರ ಆವೃತ್ತಿಗೆ ನಾಯಕತ್ವ ನೀಡಲಾಯ್ತು. ಐಪಿಎಲ್ ಇತಿಹಾಸದಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿರುವ ರನ್ ಮಷಿನ್ ವಿರಾಟ್ ಕೊಹ್ಲಿ, ಐಪಿಎಲ್‌ನ ಕಳೆದ ಋತುವಿನಲ್ಲಿ 14 ಪಂದ್ಯಗಳಲ್ಲಿ 639 ರನ್ ಗಳಿಸಿದ್ದರು. ನಾಯಕ ಡು ಪ್ಲೆಸಿಸ್ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರಗಿ ಹೊರಹೊಮ್ಮಿದರು. ಅವರು 14 ಪಂದ್ಯಗಳಲ್ಲಿ 730 ರನ್ ಗಳಿಸಿದ್ದರು. ಇದರಲ್ಲಿ 8 ಅರ್ಧಶತಕ ಸೇರಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಆಡುವ ಬಳಗ
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಕ್ಯಾಮೆರೂನ್ ಗ್ರೀನ್, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ಅಲ್ಜಾರಿ ಜೋಸೆಫ್/ಲಾಕಿ ಫರ್ಗುಸನ್, ವಿಜಯ್ ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.