ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಬಿಟ್ಟು ಟಾಪ್-5 ಬ್ಯಾಟರ್ಸ್ ಅಬ್ಬರಿಸ್ತಿಲ್ಲ; ನಮ್ಮವರಿಗೆ ಫಾರ್ಮ್ ಜತೆಗೆ ಆತ್ಮವಿಶ್ವಾಸ ಕೊರತೆ ಇದೆ ಎಂದ ಆರ್‌ಸಿಬಿ ಕೋಚ್

ವಿರಾಟ್ ಬಿಟ್ಟು ಟಾಪ್-5 ಬ್ಯಾಟರ್ಸ್ ಅಬ್ಬರಿಸ್ತಿಲ್ಲ; ನಮ್ಮವರಿಗೆ ಫಾರ್ಮ್ ಜತೆಗೆ ಆತ್ಮವಿಶ್ವಾಸ ಕೊರತೆ ಇದೆ ಎಂದ ಆರ್‌ಸಿಬಿ ಕೋಚ್

ವಿರಾಟ್‌ ಕೊಹ್ಲಿ ಹೊರತಾಗಿ ಆರ್‌ಸಿಬಿ ತಂಡದ ಯಾವೊಬ್ಬ ಬ್ಯಾಟರ್‌ ಕೂಡಾ ಪ್ರಸಕ್ತ ಐಪಿಎಲ್‌ ಆವೃತ್ತಿಯಲ್ಲಿ ಅಬ್ಬರಿಸಿಲ್ಲ. ಈ ಕುರಿತು ಮಾತನಾಡಿರುವ ತಂಡದ ಕೋಚ್‌ ಆಂಡಿ ಫ್ಲವರ್‌, ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಬ್ಬರಿಸುತ್ತಿಲ್ಲ. ತಂಡದ ಬ್ಯಾಟರ್‌ಗಳು ಫಾರ್ಮ್‌ ಮತ್ತು ಆತ್ಮವಿಶ್ವಾಸದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ನಮ್ ಹುಡುಗರಿಗೆ ಫಾರ್ಮ್ ಜತೆಗೆ ಆತ್ಮವಿಶ್ವಾಸ ಕೊರತೆ ಇದೆ ಎಂದ ಆರ್‌ಸಿಬಿ ಕೋಚ್
ನಮ್ ಹುಡುಗರಿಗೆ ಫಾರ್ಮ್ ಜತೆಗೆ ಆತ್ಮವಿಶ್ವಾಸ ಕೊರತೆ ಇದೆ ಎಂದ ಆರ್‌ಸಿಬಿ ಕೋಚ್

ಪ್ರಸಕ್ತ ಆವೃತ್ತಿಯ ಐಪಿಎಲ್‌ ಪಂದ್ಯಾವಳಿಯ ಆರಂಭಕ್ಕೂ ಮುನ್ನ, ಹೆಸರು ಹಾಗೂ ಜೆರ್ಸಿ ಬದಲಾಯಿಸಿಕೊಂಡು ಆರ್‌ಸಿಬಿ ತಂಡ ಟೂರ್ನಿಗೆ ಎಂಟ್ರಿಕೊಟ್ಟಿತು. ‘ಇದು ಆರ್‌ಸಿಬಿಯ ಹೊಸ ಅಧ್ಯಾಯ’ ಎಂದು ಖುದ್ದು ವಿರಾಟ್ ಕೊಹ್ಲಿ‌ ಹೇಳಿದಾಗ, ಅಭಿಮಾನಿಗಳು ಈ ಸಲ ಕಪ್‌ ನಮ್ದೇ ಎಂದು ಖುಷಿಪಟ್ಟರು. ಆದರೆ, ಈವರೆಗೆ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿ ತಂಡವು ನಾಲ್ಕು ಪಂದ್ಯಗಳಲ್ಲಿ ಆಡಿದರೂ, ಗೆಲುವು ದಕ್ಕಿದ್ದು ಒಂದರಲ್ಲಿ ಮಾತ್ರ. ಕೊನೆಯ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್‌ ಸೋಲಿನೊಂದಿಗೆ ನಾಲ್ಕರಲ್ಲಿ ಸೋತಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದರೊಂದಿಗೆ ತಂಡದ ಮುಖ್ಯ ಕೋಚ್‌ ಆಂಡಿ ಫ್ಲವರ್ ಕೂಡಾ, ಆಟಗಾರರ ಕಳಪೆ ಪ್ರದರ್ಶನವೇ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರು ವಿಕೆಟ್‌ಗಳ ಅಂತರದಿಂದ ಸೋಲು ಕಂಡಿತು. ಟೂರ್ನಿಯಲ್ಲಿ ತಂಡದ ನಾಲ್ಕನೇ ಸೋಲಿನ ಬಳಿಕ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ತರಬೇತುದಾರ ಆಂಡಿ ಫ್ಲವರ್, ಆರ್‌ಸಿಬಿ ಆಟಗಾರರು ಒಂದು ನಿರ್ದಿಷ್ಟ ಮಿತಿಯನ್ನು ಮೀರಿ ಆಕ್ರಮಣಕಾರಿ ಆಟವಾಡಬೇಕು ಎಂದು ಸಲಹೆ ನೀಡಿದ್ದಾರೆ. ಅಲ್ಲದೆ ಎದುರಾಳಿ ತಂಡವನ್ನು ಹೇಗೆ ಒತ್ತಡಕ್ಕೆ ಸಿಲುಕಿಸಬೇಕು ಎಂಬುದನ್ನು ಕಲಿಯಬೇಕು ಎಂದು ತಿಳಿಸಿದ್ದಾರೆ.

ರಾಜಸ್ಥಾನ ವಿರುದ್ಧ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿದರು. ಈವರೆಗೆ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಅವರು, ಅತಿ ಹೆಚ್ಚು ರನ್‌ಗಳೊಂದಿಗೆ ಆರೆಂಜ್‌ ಕ್ಯಾಪ್‌ ಗೆದ್ದಿದ್ದಾರೆ. ವಿರಾಟ್‌ ಹೊರತಾಗಿ, ತಂಡದ ಯಾವೊಬ್ಬ ಬ್ಯಾಟರ್‌ ಕೂಡಾ ಇದುವರೆಗೆ ಕನಿಷ್ಠ ಒಂದು ಅರ್ಧಶತಕ ಕೂಡಾ ಗಳಿಸಿಲ್ಲ. ಈ ಕುರಿತು ಮಾತನಾಡಿರುವ ಫ್ಲವರ್‌, ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡುತ್ತಿಲ್ಲ ಎಂದು ತಂಡದ ಬ್ಯಾಟಿಂಗ್ ವಿಭಾಗದ ಕಳಪೆ ಪ್ರದರ್ಶನವನ್ನು ಒಪ್ಪಿಕೊಂಡಿದ್ದಾರೆ.

ಅಗ್ರ ಕ್ರಮಾಂಕದ ಐವರು ಸಿಡಿಯುತ್ತಿಲ್ಲ

"ನಾವು ಸ್ಟ್ರೈಕ್ ರೇಟ್ ಮತ್ತು ಆಕ್ರಮಣಕಾರಿ ಆಟದ ಕುರಿತು ಚರ್ಚಿಸುತ್ತೇವೆ. ಇದು ಟಿ20 ಪಂದ್ಯಾವಳಿ ಆಗಿರುವುದರಿಂದ ಆಕ್ರಮಣಶೀಲತೆಯ ಮಟ್ಟವು ಒಂದು ನಿರ್ದಿಷ್ಟ ಮಿತಿಗಿಂತ ಮೇಲಿರಬೇಕು. ಅಲ್ಲದೆ ಎದುರಾಳಿ ತಂಡವನ್ನು ಒತ್ತಡಕ್ಕೆ ಒಳಪಡಿಸಬೇಕು. ಸದ್ಯಕ್ಕೆ ನಮ್ಮಲ್ಲಿ ವಿರಾಟ್ ಹೊರತುಪಡಿಸಿ ತಂಡದ ಅಗ್ರ ಕ್ರಮಾಂಕದ ಐವರು ಬ್ಯಾಟರ್‌ಗಳು ಪ್ರಬಲ ಫಾರ್ಮ್‌ನಲ್ಲಿಲ್ಲ ಎಂಬುದು ಸತ್ಯ. ಹಾಗಂತ ಇದು ಆಟಗಾರರ ಶ್ರಮದ ಕೊರತೆಯಿಂದಲ್ಲ. ಎಲ್ಲರೂ ಕಠಿಣ ಪ್ರಯತ್ನದಿಂದ ಆಡುತ್ತಿದ್ದಾರೆ. ತಮ್ಮಿಂದ ಸಾಧ್ಯವಾದ ಎಲ್ಲಾ ಪ್ರಯತ್ನ ಹಾಕುತ್ತಿದ್ದಾರೆ. ಆದರೆ, ಸದ್ಯಕ್ಕೆ ನಿರೀಕ್ಷಿತ ಸ್ಫೋಟಕ ಆಟ ಮಾತ್ರ ಬರುತ್ತಿಲ್ಲ ಅಷ್ಟೇ. ತಂಡದ ಅದೃಷ್ಟ ಬದಲಿಸಬೇಕಾದರೆ, ಆಟಗಾರರು ಸಿಡಿಯಬೇಕಿದೆ” ಎಂದು ಫ್ಲವರ್ ಅವರು ರಾಜಸ್ಥಾನ ವಿರುದ್ಧದ ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ | ಜೋಸ್ ಬಟ್ಲರ್ ಗೆಲುವಿನ ಸೆಂಚುರಿ ಮುಂದೆ ಕೊಹ್ಲಿ ಶತಕ ವ್ಯರ್ಥ; ರಾಜಸ್ಥಾನ್​ಗೆ ಸತತ 4ನೇ ಜಯ, ಆರ್​​ಸಿಬಿ ಹ್ಯಾಟ್ರಿಕ್​ ಸೋಲು

ಜೈಪುರ ಪಿಚ್‌ನಲ್ಲಿ 200ಕ್ಕಿಂತ ಹೆಚ್ಚು ರನ್‌ ಗಳಿಸಬೇಕಾಗಿತ್ತು. ಅದು ಸಾಧ್ಯವಾಗಲಿಲ್ಲ. ಆದರೆ ನಮ್ಮ ಬೌಲರ್‌ಗಳು ಕೊನೆಯ ಹಂತದಲ್ಲಿ ಪುಟಿದೆದ್ದರು. ಚೆಂಡಿನೊಂದಿಗೆ ಆರಂಭದಲ್ಲಿ ಟಾಪ್ಲಿ, ಯಶ್ ಮತ್ತು ಕೊನೆಯಲ್ಲಿ ಸಿರಾಜ್ ಉತ್ತಮ ಪ್ರದರ್ಶನ ನೀಡಿದರು. ಪವರ್‌ಪ್ಲೇನ ಕೊನೆಯ ಓವರ್ ನಮಗೆ ದುಬಾರಿಯಾಯ್ತು ಎಂದು ಫ್ಲವರ್‌ ಹೇಳಿದರು.

ಆಟಗಾರರಲ್ಲಿ ಆತ್ಮವಿಶ್ವಾಸದ ಕೊರತೆ

“ನಮ್ಮ ಬ್ಯಾಟಿಂಗ್‌ನಲ್ಲಿ ಕೆಲವೊಂದು ಸಮಸ್ಯೆಗಳಿವೆ. ವಿರಾಟ್‌ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ ಇತರ ಆಟಗಾರರು ಫಾರ್ಮ್ ಮತ್ತು ಆತ್ಮವಿಶ್ವಾಸದ ಕೊರತೆಯಿಂದ ಹೆಣಗಾಡುತ್ತಿದ್ದಾರೆ. ನಾವು ಎಲ್ಲವನ್ನೂ ಪ್ರಯತ್ನಿಸುತ್ತಿದ್ದೇವೆ. ಈ ಟೂರ್ನಿಯಲ್ಲಿ ತಂಡಗಳ ಆಕ್ರಮಣಕಾರಿ ಆಟವೇ ತಂಡಗಳಿಗೆ ಉತ್ತಮ ಫಲಿತಾಂಶ ತಂದುಕೊಡುತ್ತಿವೆ. ಹೀಗಾಗಿ ನಮ್ಮ ಹುಡುಗರಿಗೆ ಆತ್ಮವಿಶ್ವಾಸದ ಅಗತ್ಯವಿದೆ” ಎಂದು ಆರ್‌ಸಿಬಿಯ ಕೋಚ್‌ ಹೇಳಿಕೊಂಡಿದ್ದಾರೆ.

ಐಪಿಎಲ್‌ 2024 ಟೀಮ್‌ ಸ್ಟಾಟ್

ಐಪಿಎಲ್‌ 2024 ಪಾಯಿಂಟ್ಸ್‌ ಟೇಬಲ್

ಐಪಿಎಲ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point