ಮೆಗಾ ಹರಾಜಿನ ಮೇಲೆ ಕಣ್ಣಿಟ್ಟ ಆರ್‌ಸಿಬಿ: ಈ ಆಟಗಾರರ ಖರೀದಿಗೆ ಹಣದ ಮಳೆ ಸುರಿಸಲಿದೆ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಐಪಿಎಲ್ 2025 ಮೆಗಾ ಹರಾಜಿಗೆ ಸಿದ್ಧತೆ ಶುರುಮಾಡಿಕೊಂಡಿದೆ. ಯಾರನ್ನೆಲ್ಲ ಖರೀದಿಸಬೇಕು?, ಎಷ್ಟು ಹಣ ನೀಡಬಹುದು ಎಂಬ ಕುರಿತು ಬ್ಲೂ ಪ್ರಿಂಟ್ ತಯಾರು ಮಾಡಿಕೊಳ್ಳುತ್ತಿದೆ. ಹಾಗಾದರೆ, ಬೆಂಗಳೂರು ಮುಖ್ಯವಾಗಿ ಕಣ್ಣಿಟ್ಟಿರುವ 5 ಆಟಗಾರರು ಯಾರು? (ವರದಿ-ವಿನಯ್ ಭಟ್)
ಐಪಿಎಲ್ 2025ರ ಮೆಗಾ ಹರಾಜಿಗು ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಅನೇಕ ಬದಲಾವಣೆ ಮಾಡಿದೆ. ಮುಖ್ಯವಾಗಿ ಧಾರಣ ನೀತಿಯನ್ನು ತಂದು ಎಲ್ಲಾ ಫ್ರಾಂಚೈಸಿಗಳು ತಮ್ಮ ಅಸ್ತಿತ್ವದಲ್ಲಿರುವ ತಂಡದಲ್ಲಿ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಬಹುದು. ಹರಾಜಿನ ಮೊದಲು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಲು ಮತ್ತು ಸಲ್ಲಿಸಲು ಫ್ರಾಂಚೈಸಿಗೆ ಅಕ್ಟೋಬರ್ 31, 2024 ರಂದು ಸಂಜೆ 5 ಗಂಟೆಯವರೆಗೆ ಸಮಯವಿದೆ. ಈ ಹಡಿಬಿಡಿಯ ಜೊತೆ ಹರಾಜಿನಲ್ಲಿ ಯಾರನ್ನು ಖರೀದಿಸಬೇಕು ಎಂಬುದನ್ನು ಕೂಡ ಫ್ರಾಂಚೈಸಿ ನಿರ್ಧರಿಸಬೇಕಿದೆ.
ಅತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೂಡ ಐಪಿಎಲ್ 2025 ಮೆಗಾ ಹರಾಜಿಗೆ ಸಿದ್ಧತೆ ಶುರುಮಾಡಿಕೊಂಡಿದೆ. ಯಾರನ್ನೆಲ್ಲ ಖರೀದಿಸಬೇಕು? ಎಷ್ಟು ಹಣ ನೀಡಬಹುದು ಎಂಬ ಕುರಿತು ಬ್ಲೂ ಪ್ರಿಂಟ್ ತಯಾರು ಮಾಡಿಕೊಳ್ಳುತ್ತಿದೆ. ಹಾಗಾದರೆ, ಬೆಂಗಳೂರು ಮುಖ್ಯವಾಗಿ ಕಣ್ಣಿಟ್ಟಿರುವ 5 ಆಟಗಾರರು ಯಾರು ಇರಬಹುದು ಎಂಬುದನ್ನು ನೋಡುವುದಾದರೆ...
ರೋಹಿತ್ ಶರ್ಮಾ
ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ಪರ ಉಳಿಯುವುದು ಅನುಮಾನ ಎಂಬ ಮಾತುಗಳು ಕಳೆದ ಕೆಲವು ತಿಂಗಳುಗಳಿಂದ ಕೇಳಿ ಬರುತ್ತಿವೆ. ಹಿಟ್ಮ್ಯಾನ್ ಹರಾಜಿಗೆ ಬಂದರೆ ಖರೀದಿಗೆ ಹಣದ ಮಳೆ ಸುರಿಸುವ ಮೊದಲ ಫ್ರಾಂಚೈಸಿ ಆರ್‌ಸಿಬಿ. ಏಕೆಂದರೆ ಬೆಂಗಳೂರು ತಂಡಕ್ಕೆ ಅನುಭವಿ ನಾಯಕನ ಅವಶ್ಯತೆ ಇದೆ. ಆತ ಭಾರತೀಯನಾದರೆ ಅತ್ಯುತ್ತಮ. ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಕೂಡ ಆರ್‌ಸಿಬಿ ಹರಾಜಿನಲ್ಲಿ ರೋಹಿತ್ ಶರ್ಮಾ ಅವರನ್ನು ಖರೀದಿಸಬೇಕು ಮತ್ತು ಮುಂದಿನ ನಾಯಕನಾಗಿ ಅವರನ್ನು ನೇಮಿಸಬೇಕು ಎಂದು ಹೇಳಿದ್ದಾರೆ.
ಟ್ರಾವಿಸ್ ಹೆಡ್
ಸನ್‌ರೈಸರ್ಸ್ ಹೈದರಾಬಾದ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಐಪಿಎಲ್ 2024 ರಲ್ಲಿ ಸಂಚಲನ ಮೂಡಿಸಿದರು. ಅನೇಕ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಆದರೆ, ತಂಡದಲ್ಲಿ ನಾಯಕನಾಗಿ ವಿದೇಶಿ ಆಟಗಾರ ಪ್ಯಾಟ್ ಕಮ್ಮಿನ್ಸ್ ಇರುವ ಕಾರಣ ಇವರನ್ನು ಬಿಡುಗಡೆ ಮಾಡಬಹುದು. ಅತ್ತ ಆರ್‌ಸಿಬಿ ಫಾಫ್ ಡುಪ್ಲೆಸಿಸ್ ಅವರನ್ನು ಬಿಡುಗಡೆ ಮಾಡಿದರೆ, ಇವರ ಜಾಗಕ್ಕೆ ಈ ಸ್ಫೋಟಕ ಆರಂಭಿಕ ಆಟಗಾರನನ್ನು ಖರೀದಿಸಬಹುದು.
ದುನಿತ್ ವೆಲ್ಲಲಾಗೆ
ಯುಜ್ವೇಂದ್ರ ಚಹಲ್ ನಂತರ ಆರ್‌ಸಿಬಿ ಇನ್ನೂ ಉತ್ತಮ ಸ್ಪಿನ್ನರ್‌ಗಾಗಿ ಹುಡುಕಾಟ ನಡೆಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಶ್ರೀಲಂಕಾದ ಬಲಿಷ್ಠ ಆಲ್‌ರೌಂಡರ್ ದುನಿತ್ ವೆಲ್ಲಲೆ ಅವರನ್ನು ಖರೀದಿಸಬಹುದು. ಇವರು ಬ್ಯಾಟಿಂಗ್ ಜೊತೆಗೆ ಸ್ಪಿನ್ ಮೂಲಕ ತಂಡಕ್ಕೆ ಕೊಡುಗೆ ನೀಡಬಲ್ಲರು.
ಮಿಚೆಲ್ ಸ್ಟಾರ್ಕ್
ಐಪಿಎಲ್ 2024ರ ಮಿನಿ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸ್ಟಾರ್ಕ್ ಅವರನ್ನು 24.75 ಕೋಟಿ ರೂ. ಗೆ ಖರೀದಿಸಿತು. ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ಇದೀಗ ಕೆಕೆಆರ್ ತಂಡ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆ. ಇಂತಹ ಪರಿಸ್ಥಿತಿಯಲ್ಲಿ ಅವರು ಹರಾಜಿಗೆ ಬರುವುದು ಖಚಿತ ಎಂದು ಪರಿಗಣಿಸಲಾಗಿದ್ದು, ಇದೇ ವೇಳೆ ಆರ್‌ಸಿಬಿಗೆ ಸ್ಟಾರ್ಕ್ ಸೇರ್ಪಡೆಯಾಗುವ ಅವಕಾಶವಿದೆ.
ಫಿಲ್ ಸಾಲ್ಟ್
ಫಿಲ್ ಸಾಲ್ಟ್ ಐಪಿಎಲ್ 2024 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಉತ್ತಮ ಪ್ರದರ್ಶನ ನೀಡಿದರು. ಇದರ ಹೊರತಾಗಿಯು ಇವರನ್ನು ಉಳಿಸಿಕೊಳ್ಳುವುದು ಅನುಮಾನ. ಈ ಸ್ಫೋಟಕ ಓಪನರ್ ಮೇಲೆ ಆರ್‌ಸಿಬಿ ಕಣ್ಣಿಡಬಹುದು. ದಿನೇಶ್ ಕಾರ್ತಿಕ್ ನಿರ್ಗಮನದ ನಂತರ ಆರ್‌ಸಿಬಿಗೆ ವಿಕೆಟ್‌ಕೀಪರ್ ಕೂಡ ಅಗತ್ಯವಿದೆ. ಅಂತಹ ಪರಿಸ್ಥಿತಿಯಲ್ಲಿ, ಸಾಲ್ಟ್ ಉತ್ತಮ ಆಯ್ಕೆ ಆಗಿದೆ.