ಹೆಚ್ಚು ಬಯ್ಯೋದು ಅವರೇ, ಪ್ರೀತ್ಸೋದು ಅವರೇ; ಆರ್ಸಿಬಿ ಅಭಿಮಾನಿಗಳ ಬಗ್ಗೆ ಸ್ಮೃತಿ ಮಂಧಾನ ಮಾತು
Smriti Mandhana: ಬೇರೆ ತಂಡಗಳ ಅಭಿಮಾನಿಗಳಿಗೆ ಹೋಲಿಸಿದರೆ ಹೆಚ್ಚು ಬಯ್ಯೋದು ಅವರೇ, ಪ್ರೀತಿಸೋದು ಅವರೇ ಎಂದು ಆರ್ಸಿಬಿ ಅಭಿಮಾನಿಗಳ ಬಗ್ಗೆ ಸ್ಮೃತಿ ಮಂಧಾನ ಮಾತನಾಡಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್ (WPL 2025) 3ನೇ ಆವೃತ್ತಿಯು ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ಕುರಿತು ನಾಯಕಿ ಸ್ಮೃತಿ ಮಂಧಾನ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತವರಿನ ಮೈದಾನ ಚಿನ್ನಸ್ವಾಮಿ ಮೈದಾನದಲ್ಲಿ ಭಾರಿ ಅಭಿಮಾನಿಗಳ ಮಧ್ಯೆ ಕಣಕ್ಕಿಳಿದು ಅತ್ಯುತ್ತಮ ಪ್ರದರ್ಶನ ನೀಡು ಕಾತರದಿಂದ ಕಾಯುತ್ತಿರುವುದಾಗಿಯೂ ಹೇಳಿದ್ದಾರೆ. ಹಾಗೆಯೇ ಅದರೊಂದಿಗೆ ಬರುವ ಒತ್ತಡವನ್ನೂ ವಿವರಿಸಿದ್ದಾರೆ ಆರ್ಸಿಬಿ ನಾಯಕಿ.
ನಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ತಂಡವಾಗಿ ಉತ್ತಮ ಕ್ರಿಕೆಟ್ ಆಡುವತ್ತ ಗಮನ ಹರಿಸುತ್ತೇವೆ. ಏಕೆಂದರೆ ಆರ್ಸಿಬಿ ಅಭಿಮಾನಿ ಬಳಗವು ಇತರ ತಂಡಗಳಿಗೆ ಹೋಲಿಸಿದರೆ ಹೆಚ್ಚು ಟೀಕಿಸೋದು ಅವರೇ, ಪ್ರೀತಿಸೋದು ಅವರೇ. ನಾವು ಒಂದು ಗುಂಪಾಗಿ ಒಟ್ಟಿಗೆ ಶ್ರಮಿಸುವುದು ಮುಖ್ಯ ಎಂದು ನಾಯಕಿಯರ ಸಭೆಯಲ್ಲಿ ಸ್ಮೃತಿ ಹಿಂದೂಸ್ತಾನ್ ಟೈಮ್ಸ್ ಪ್ರಶ್ನೆಗೆ ಉತ್ತರಿಸಿದ್ದಾರೆ. ನಾವು ಪ್ರಯಾಣಿಸುವ ಎಲ್ಲೆಡೆಯೂ ಆರ್ಸಿಬಿ ಎಂದು ಕೂಗುವುದನ್ನು ತುಂಬಾ ಇಷ್ಟ ಪಡುತ್ತೇವೆ. ಅದು ನಮ್ಮ ಪಾಲಿಗೆ ದೊಡ್ಡ ಸಕಾರಾತ್ಮಕವಾಗಿದೆ ಎಂದು ಹೇಳಿದ್ದಾರೆ.
3ನೇ ಆವೃತ್ತಿಯ ಡಬ್ಲ್ಯುಪಿಎಲ್ ವಡೋದರಾ, ಬೆಂಗಳೂರು, ಲಕ್ನೋ, ಮುಂಬೈನಲ್ಲಿ ನಡೆಯಲಿದೆ. ಎಲಿಮಿನೇಟರ್ ಮತ್ತು ಫೈನಲ್ ಪಂದ್ಯಗಳು ಕ್ರಮವಾಗಿ ಮಾರ್ಚ್ 13 ಮತ್ತು 15 ರಂದು ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಬರೋಡಾ ಒಟ್ಟು ಆರು ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದು, ನಂತರ ಬೆಂಗಳೂರಿಗೆ ಸ್ಥಳಾಂತರಗೊಳ್ಳಲಿದೆ. ಅಲ್ಲಿ ಆರ್ಸಿಬಿ ಫೆಬ್ರವರಿ 21 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ತನ್ನ ಮೊದಲ ತವರು ಪಂದ್ಯವನ್ನಾಡಲಿದೆ.
ಗಾಯವು ನಮ್ಮ ಕೈಯಲಿಲ್ಲ ಎಂದ ಮಂಧಾನ
ಮೂರನೇ ಆವೃತ್ತಿಗೂ ಮುನ್ನ ಗಾಯದ ಸಮಸ್ಯೆಗಳ ಕಾರಣ ಹಲವು ಹೊರಗುಳಿದಿದ್ದರ ಕುರಿತು ಮಾತಾಡಿದ ಸ ಮಂಧಾನ, ಪ್ರಸ್ತುತ ತಂಡದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಹಲವರು ಗಾಯದ ಸಮಸ್ಯೆಗೆ ತುತ್ತಾದರು. ಇದು ತಂಡದ ಮೇಲೆ ಪರಿಣಾಮ ಬೀರುವಂತೆ ಮಾಡಿತು. ಆದರೆ, ಗಾಯ ನಮ್ಮ ಕೈಯಲ್ಲಿಲ್ಲದ ವಿಷಯ. ದೇಶೀಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಯುವಕರು ತಂಡದಲ್ಲಿದ್ದಾರೆ. ತಂಡವನ್ನು ಕೂಡಿಕೊಂಡ ವಿದೇಶಿ ಆಟಗಾರ್ತಿಯರೂ ಅತ್ಯುತ್ತಮರು ಎಂದು ಗುಜರಾತ್ ಜೈಂಟ್ಸ್ ವಿರುದ್ಧದ ಆರಂಭಿಕ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಂಧಾನ ಹೇಳಿದ್ದಾರೆ.
ಡಬ್ಲ್ಯುಪಿಎಲ್ ಆರಂಭಕ್ಕೂ ಮುನ್ನ ಸೋಫಿ ಡಿವೈನ್ ಅವರು ಮಾನಸಿಕ ಆರೋಗ್ಯದ ಕಾರಣ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ವಿಶ್ರಾಂತಿ ಪಡೆದಿದ್ದಾರೆ. ಕೇಟ್ ಕ್ರಾಸ್, ಸೋಫಿ ಮೊಲಿನೆಕ್ಸ್ ಗಾಯಗೊಂಡು ಹೊರಬಿದ್ದರು. ಅಲ್ಲದೆ, ಆಶಾ ಶೋಭಾನಾ ಕೊನೆ ಕ್ಷಣದಲ್ಲಿ ತಂಡದಿಂದ ಹೊರಬಿದ್ದರು. ಶ್ರೇಯಂಕಾ ಪಾಟೀಲ್ ಕೂಡ ಗಾಯದಿಂದ ಚೇತರಿಕೆ ಕಾಣುತ್ತಿದ್ದಾರೆ. ಅಕ್ಟೋಬರ್ 2024 ರಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ.
ಸೋಫಿ ನಿರ್ಧಾರ ಗೌರವಿಸುತ್ತೇವೆ ಎಂದ ಸ್ಮೃತಿ
ಕಳೆದ ವರ್ಷ ತಂಡದಲ್ಲಿದ್ದ ಕೆಲವರು ಗಾಯದ ಕಾರಣ ಹೊರಗುಳಿದಿದ್ದಾರೆ. ಸೋಫಿ ಡಿವೈನ್ ವಿಶ್ವದ ಅತ್ಯುತ್ತಮ ಆಲ್ರೌಂಡರ್ಗಳಲ್ಲಿ ಒಬ್ಬರು. ಅವರು ಕಳೆದ 10 ವರ್ಷಗಳಿಂದ ತನ್ನ ಸಾಮರ್ಥ್ಯ ಏನೆಂಬುದನ್ನು ತೋರಿಸಿದ್ದಾರೆ. ನಾವು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಆದರೆ ಮಾನಸಿಕ ಯೋಗಕ್ಷೇಮವು ಎಲ್ಲಕ್ಕಿಂತ ಮುಖ್ಯವಾಗಿದೆ. ನಾವು ಅವರ ನಿರ್ಧಾರವನ್ನು ಗೌರವಿಸುತ್ತೇವೆ ಎಂದಿದ್ದಾರೆ.
