WPL: ಮೊದಲ ಕಪ್‌ ಗೆಲುವಿನ ಸಂಭ್ರಮದಲ್ಲಿ ಮುಳುಗಿದ ಬೆಂಗಳೂರು; ಟ್ರೋಫಿ ಗೆಲ್ಲುತ್ತಿದ್ದಂತೆ ಮೊಳಗಿದ ಆರ್‌ಸಿಬಿ ಘೋಷಣೆ
ಕನ್ನಡ ಸುದ್ದಿ  /  ಕ್ರಿಕೆಟ್  /  Wpl: ಮೊದಲ ಕಪ್‌ ಗೆಲುವಿನ ಸಂಭ್ರಮದಲ್ಲಿ ಮುಳುಗಿದ ಬೆಂಗಳೂರು; ಟ್ರೋಫಿ ಗೆಲ್ಲುತ್ತಿದ್ದಂತೆ ಮೊಳಗಿದ ಆರ್‌ಸಿಬಿ ಘೋಷಣೆ

WPL: ಮೊದಲ ಕಪ್‌ ಗೆಲುವಿನ ಸಂಭ್ರಮದಲ್ಲಿ ಮುಳುಗಿದ ಬೆಂಗಳೂರು; ಟ್ರೋಫಿ ಗೆಲ್ಲುತ್ತಿದ್ದಂತೆ ಮೊಳಗಿದ ಆರ್‌ಸಿಬಿ ಘೋಷಣೆ

ಡಬ್ಲ್ಯುಪಿಎಲ್ ಎರಡನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಭರ್ಜರಿಯಾಗಿ ಮಣಿಸಿದ ಆರ್‌ಸಿಬಿ ವನಿತೆಯರ ತಂಡವು, ಮೊದಲ ಟ್ರೋಫಿಯನ್ನು ತವರಿಗೆ ತಂದಿದೆ. ಇದೇ ಖುಷಿಯಲ್ಲಿ ಬೆಂಗಳೂರಿನ ಅಭಿಮಾನಿಗಳು ಭಾರಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ.

ಆರ್‌ಸಿಬಿಯ ಮೊದಲ ಕಪ್‌ ಗೆಲುವಿನ ಸಂಭ್ರಮದಲ್ಲಿ ಮುಳುಗಿದ ಬೆಂಗಳೂರು ಅಭಿಮಾನಿಗಳು
ಆರ್‌ಸಿಬಿಯ ಮೊದಲ ಕಪ್‌ ಗೆಲುವಿನ ಸಂಭ್ರಮದಲ್ಲಿ ಮುಳುಗಿದ ಬೆಂಗಳೂರು ಅಭಿಮಾನಿಗಳು (PTI)

ಕೊನೆಗೂ ಈ ಸಲ ಕಪ್‌ ನಮ್ಮದಾಗಿದೆ. 16 ವರ್ಷಗಳಿಂದ ಒಂದು ಟ್ರೋಫಿಗಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದ ಆರ್‌ಸಿಬಿ ಅಭಿಮಾನಿಗಳ ಕೋರಿಕೆ ನೆರವೇರಿದೆ. ಪುರುಷರ ತಂಡ 16 ವರ್ಷಗಳಿಂದ ಗೆಲ್ಲಲಾಗದ ಐಪಿಎಲ್‌ ಟ್ರೋಫಿಯನ್ನು, ವನಿತೆಯರ ತಂಡ ಗೆದ್ದಿದೆ. ಅದು ವಿಮೆನ್ಸ್‌ ಪ್ರೀಮಿಯರ್‌ ಲೀಗ್ ಮೂಲಕ. ಇದೇ ಮೊದಲ ಬಾರಿಗೆ ಕಪ್‌ ಗೆದ್ದ ಖುಷಿಯಲ್ಲಿರುವ ಆರ್‌ಸಿಬಿ ಆಟಗಾರ್ತಿಯರು ಹಾಗೂ ಅಭಿಮಾನಿಗಳು ಭಾರಿ ಸಂಭ್ರಮದಲ್ಲಿದ್ದಾರೆ. ಅತ್ತ ದೆಹಲಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಟ್ರೋಫಿಗೆ ಮುತ್ತಿಡುತ್ತಿದ್ದಂತೆಯೇ, ಇತ್ತ ಬೆಂಗಳೂರಿನಲ್ಲಿ ಅಭಿಮಾನಿಗಳು ಬೀದಿಗಿಳಿದು ಸಂಭ್ರಮಿಸಿದ್ದಾರೆ.

ಮಾರ್ಚ್‌ 17ರ ಭಾನುವಾರ ಆರ್‌ಸಿಬಿ ಅಭಿಮಾನಿಗಳಿಗೆ ಮರೆಯಲಾಗದ ದಿನ. ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವನಿತೆಯರ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರ ತಂಡವು, ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿದೆ. ಕಳೆದ ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ತಂಡವು, ಈ ಬಾರಿ ಟೂರ್ನಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಪ್ಲೇಆಫ್‌ಗೆ ಪ್ರವೇಶಿಸುವ ಸಾಧ್ಯತೆ ಕಷ್ಟವಾಗಿದ್ದಾಗ, ಹಾಲಿ ಚಾಂಪಿಯನ್‌ ತಂಡವನ್ನು ಸತತವಾಗಿ ಮಣಿಸಿ ಫೈನಲ್‌ ಪ್ರವೇಶಿಸಿದೆ.

ತವರು ನೆಲ ಬೆಂಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಯಾನ ಆರಂಭಿಸಿದ ಆರ್‌ಸಿಬಿಗೆ, ವ್ಯಾಪಕ ಬೆಂಬಲ ಸಿಕ್ಕಿತು. ಆರ್‌ಸಿಬಿ ಪುರುಷರ ತಂಡಕ್ಕೆ ಸಿಕ್ಕಂತೆಯೇ, ಅಪಾರ ಸಂಖ್ಯೆಯ ಫ್ಯಾನ್ಸ್‌ ಮಹಿಳಾ ತಂಡಕ್ಕೂ ಸಿಕ್ಕಿದರು. ಅದರಲ್ಲೂ ಸ್ಮೃತಿ ಮಂಧಾನ ಮತ್ತು ಎಲ್ಲಿಸ್‌ ಪೆರ್ರಿ ನೆಚ್ಚಿನ ಆಟಗಾರ್ತಿಯರು. ಬೆಂಗಳೂರಿನ ಬಳಿಕ ದೆಹಲಿಯಲ್ಲಿಯೂ ಆರ್‌ಸಿಬಿ ಅಭಿಮಾನಿಗಳ ಸಂಖ್ಯೆ ಹೆಚ್ಚೇ ಇತ್ತು. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಡಬ್ಲ್ಯುಪಿಎಲ್ ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಅಭಿಮಾನಿಗಳಿಗಿಂತ ಆರ್‌ಸಿಬಿ ಅಭಿಮಾನಿಗಳ ಸಂಖ್ಯೆಯೆ ಹೆಚ್ಚಿತ್ತು.

ಇದನ್ನೂ ಓದಿ | ಆರ್​​ಸಿಬಿ ಟ್ರೋಫಿ ಬರ ನೀಗಿಸಲು ನೆರವಾದ ಕನ್ನಡತಿ; ಅತ್ಯಧಿಕ ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ಗೆದ್ದ ಶ್ರೇಯಾಂಕಾ ಪಾಟೀಲ್

ಆರ್‌ಬಿಯ ಐತಿಹಾಸಿಕ ವಿಜಯದ ಬೆನ್ನಲ್ಲೇ ಬೃಹತ್ ಪ್ರಶಸ್ತಿ ವಿಜಯದ ನಂತರ, ಬೆಂಗಳೂರಿನಲ್ಲಿ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸೇರಿದ ಅಭಿಮಾನಿಗಳು ಆರ್‌ಸಿಬಿ ಪರ ಘೋಷಣೆ ಕೂಗಿದ್ದಾರೆ. ಮಧ್ಯರಾತ್ರಿಯೇ ಮನೆಯಿಂದ ಹೊರಬಂದು ಬೀದಿಗಳಲ್ಲಿ ಒಟ್ಟಿಗೆ ಸಂಭ್ರಮದ ಕ್ಷಣವನ್ನು ಆಚರಿಸಿದ್ದಾರೆ. ಐಪಿಎಲ್‌ ಆರಂಭವಾದಾಗಿನಿಂದ ಟ್ರೋಫಿಗಾಗಿ ಕಾಯುತ್ತಿರುವ ತಂಡವು, ಇದೇ ಮೊದಲ ಬಾರಿಗೆ ಡಬ್ಲ್ಯುಪಿಎಲ್‌ ಮೂಲಕ ಟ್ರೋಫಿ ಸಂಭ್ರಮ ಅನುಭವಿಸಿದೆ. ಉದ್ಯಾನ ನಗರಿಯಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿರುವ ಹಲವಾರು ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ವನಿತೆಯರ ತಂಡದ ನಾಯಕಿ ಸ್ಮೃತಿ ಮಂದಾನ, ತಂಡದ ಐತಿಹಾಸಿಕ ಗೆಲುವಿನ ನಂತರ ಅಭಿಮಾನಿಗಳಿಗೆ ವಿಶೇಷ ಸಂದೇಶ ನೀಡಿದ್ದಾರೆ. ತಂಡದ ಏಳುಬೀಳುಗಳಲ್ಲಿ ಜೊತೆಯಾಗಿ ನಿಂತ ನಿಷ್ಠಾವಂತ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಇದನ್ನೂ ಓದಿ | ಅಭಿಮಾನಿಗಳಿಲ್ಲದೆ ನಾವಿಲ್ಲ, ಈ ಸಲ ಕಪ್ ನಮ್ದು ಎಂದು ಆರ್​ಸಿಬಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಸ್ಮೃತಿ ಮಂಧಾನ

"ಅಭಿಮಾನಿಗಳ ಬೆಂಬಲವಿಲ್ಲದೆ ಏನೂ ಸಾಧ್ಯವಾಗುತ್ತಿರಲಿಲ್ಲ. ಅವರಿಗಾಗಿ ನಾನು ಸಂದೇಶವನ್ನು ಹೊತ್ತು ತಂದಿದ್ದೇನೆ. ಆರ್‌ಸಿಬಿ ಅಭಿಮಾನಿಗಳು ಅತ್ಯಂತ ನಿಷ್ಠಾವಂತ ಅಭಿಮಾನಿಗಳು ಎಂಬುದು ಸಾಬೀತಾಗಿದೆ. ಈ ಸಲ ಕಪ್ ನಮ್ದೇ ಎನ್ನುವ ಒಂದು ಹೇಳಿಕೆ ಯಾವಾಗಲೂ ಹೇಳಲಾಗುತ್ತದೆ. ಆದರೆ, ಈಗ ಈ ಸಲ ಕಪ್ ನಮ್ದು. ಕನ್ನಡ ನನ್ನ ಪ್ರಥಮ ಭಾಷೆ ಅಲ್ಲ. ಆದರೆ ಅಭಿಮಾನಿಗಳಿಗೆ ಇದನ್ನು ಹೇಳುವುದು ತುಂಬಾ ಮುಖ್ಯ ಎಂದು ಹೇಳುವ ಮೂಲಕ ನಾಯಕಿ ಸ್ಮೃತಿ ಮಂಧಾನ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner