ಆರ್ಸಿಬಿ ಅಭಿಮಾನಿಗಳಿಗೆ ಬಂಪರ್ ಸುದ್ದಿ: ನಿವೃತ್ತಿ ನೀಡಿದ್ದರೂ ಮತ್ತೆ ಆಡಲು ಸಜ್ಜಾದ ಸ್ಫೋಟಕ ಬ್ಯಾಟರ್
Dinesh Karthik: ನಿವೃತ್ತಿ ಘೋಷಿಸಿದ ಕೆಲವೇ ತಿಂಗಳ ನಂತರ, ದಿನೇಶ್ ಕಾರ್ತಿಕ್ ಮತ್ತೊಮ್ಮೆ ಬ್ಯಾಟ್ ಹಿಡಿದುಕೊಂಡು ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಕಾರ್ತಿಕ್ ದಕ್ಷಿಣ ಆಫ್ರಿಕಾದಲ್ಲಿ SA20 ರ ಮುಂಬರುವ ಋತುವಿನಲ್ಲಿ ಆಡಲಿದ್ದಾರೆ. ರಾಜಸ್ಥಾನ್ ರಾಯಲ್ಸ್‌ನ ಸಹೋದರಿ ಫ್ರಾಂಚೈಸಿಯಾದ ಪಾರ್ಲ್ ರಾಯಲ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ 2024 (Indian Premier League) ಒಂದು ಯುಗದ ಕೆಲ ಆಟಗಾರರಿಗೆ ಕೊನೆಯ ಟೂರ್ನಿ ಆಯಿತು. ಲೀಗ್‌ನಲ್ಲಿ ಜಂಟಿ ಅತಿ ಹೆಚ್ಚು ಸೇವೆ ಸಲ್ಲಿಸಿದ 2ನೇ ಆಟಗಾರ ದಿನೇಶ್ ಕಾರ್ತಿಕ್ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಸಂದೇಶದೊಂದಿಗೆ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತ ಬಳಿಕ ಕಾರ್ತಿಕ್ ವಿದಾಯ ಹೇಳಿದರು.
ಆದಾಗ್ಯೂ, ನಿವೃತ್ತಿ ಘೋಷಿಸಿದ ಕೆಲವೇ ತಿಂಗಳ ನಂತರ, ಕಾರ್ತಿಕ್ ಮತ್ತೊಮ್ಮೆ ಬ್ಯಾಟ್ ಹಿಡಿದುಕೊಂಡು ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಪ್ರಕಾರ, ಕಾರ್ತಿಕ್ ದಕ್ಷಿಣ ಆಫ್ರಿಕಾದಲ್ಲಿ ಸೌತ್ ಆಫ್ರಿಕಾ ಟಿ20 ಲೀಗ್ ಮುಂಬರುವ ಋತುವಿನಲ್ಲಿ ಆಡಲಿದ್ದಾರೆ. ರಾಜಸ್ಥಾನ್ ರಾಯಲ್ಸ್‌ನ ಸಹೋದರ ಫ್ರಾಂಚೈಸಿಯಾದ ಪಾರ್ಲ್ ರಾಯಲ್ಸ್ ತಂಡದ ಪರ ಇವರು ಕಣಕ್ಕಿಳಿಯಲಿದ್ದಾರೆ. ಹೊಸ ಸೀಸನ್ ಜನವರಿ 9 ರಂದು ಪ್ರಾರಂಭವಾಗುತ್ತದೆ.
ಎಸ್ಎ20 ಲೀಗ್‌ನಲ್ಲಿ ಡಿಕೆ ಕಣಕ್ಕೆ
ಕಾರ್ತಿಕ್ ಸೌತ್ ಆಫ್ರಿಕಾ 20 ನಲ್ಲಿ ಆಡುವ ಮೊದಲ ಭಾರತೀಯ ಆಟಗಾರನಾಗಲಿದ್ದಾರೆ. ನಿವೃತ್ತಿ ಘೋಷಿಸಿದ ಬಳಿಕ ಅವರು ಆಡಲಿರುವ ಮೊದಲ ಟೂರ್ನಿ ಕೂಡ ಇದಾಗಿದೆ. ಮುಂದಿನ ಸೀಸನ್ನಲ್ಲಿ ಪಾರ್ಲ್ ತಂಡದ ಅನುಭವಿ ವಿಕೆಟ್‌ಕೀಪರ್ ಬ್ಯಾಟರ್ ಇಂಗ್ಲೆಂಡ್‌ನ ಜೋಸ್ ಬಟ್ಲರ್ ಆಡದ ಕಾರಣ ಅವರ ಜಾಗದಲ್ಲಿ ಬದಲಿ ಆಟಗಾರನಾಗಿ ಕಾರ್ತಿಕ್ ತಂಡ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ದಿನೇಶ್ ಕಾರ್ತಿಕ್ ಭಾರತೀಯ ಕ್ರಿಕೆಟ್‌ನ ಎಲ್ಲಾ ಮಾದರಿಯಿಂದ ನಿವೃತ್ತಿ ಹೊಂದಿದ್ದಾರೆ. ಹೀಗಾಗಿ ಭಾರತದ ಯಾವುದೇ ಪಂದ್ಯದಲ್ಲಿ ಇವರು ಪಾಲ್ಗೊಳ್ಳಲು ಸಾಧ್ಯವಿಲ್ಲ. ಆದರೆ, ತಮ್ಮ ಆಯ್ಕೆಯ ವಿದೇಶಿ ಲೀಗ್‌ನಲ್ಲಿ ಆಡಲು ಅರ್ಹರಾಗಿದ್ದಾರೆ. ಹೀಗಾಗಿ 39 ವರ್ಷದ ಅನುಭವಿ ಕಾರ್ತಿಕ್ ವಿದೇಶಿ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದು ಮತ್ತೊಮ್ಮೆ ಕ್ರಿಕೆಟ್ಗೆ ಮರಳಲು ಮುಂದಾಗಿದ್ದಾರೆ. ಐಪಿಎಲ್ ಹೊರತಾಗಿ ಟಿ20 ಲೀಗ್‌ನಲ್ಲಿ ಆಡಿದ ಕಾರ್ತಿಕ್ಗೆ ಇದು ಮೊದಲ ಅನುಭವವಾಗಿದೆ.
ಕಾರ್ತಿಕ್‌ನಂತೆ, ಅಂಬಟಿ ರಾಯುಡು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್‌ಗಾಗಿ ಕಾಣಿಸಿಕೊಂಡಿದ್ದರೆ, ರಾಬಿನ್ ಉತ್ತಪ್ಪ ಮತ್ತು ಯೂಸುಫ್ ಪಠಾಣ್ ಐಎಲ್ಟಿ20 ನಲ್ಲಿ ದುಬೈ ಕ್ಯಾಪಿಟಲ್ಸ್ ಪರ ಆಡಿದ್ದರು. ಸುರೇಶ್ ರೈನಾ ಕಳೆದ ವರ್ಷ ಅಬುಧಾಬಿ ಟಿ10ಯಲ್ಲಿ ಡೆಕ್ಕನ್ ಗ್ಲಾಡಿಯೇಟರ್ಸ್ ಪರ ಕಣಕ್ಕಿಳಿದಿದ್ದರು.
ನಿವೃತ್ತಿ ಘೋಷಿಸಿದ ನಂತರ ದಿನೇಶ್ ಕಾರ್ತಿಕ್ ಅವರನ್ನು ಐಪಿಎಲ್ 2025 ಕ್ಕಾಗಿ ಆರ್ಸಿಬಿ ಫ್ರಾಂಚೈಸಿ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ನೇಮಕ ಮಾಡಿತ್ತು. ನಿವೃತ್ತಿ ಹಿಂಪಡೆದ ಭಾರತೀಯರಿಗೆ ಬೇರೆ ದೇಶದ ಲೀಗ್‌ನಲ್ಲಿ ಆಡಲು ಬಿಸಿಸಿಐ ಎನ್ಒಸಿ ನೀಡುವುದಿಲ್ಲ. ನಿವೃತ್ತಿ ನೀಡಿದರಷ್ಟೆ ಬೇರೆ ಲೀಗ್ಗಳಲ್ಲಿ ಆಡಬಹುದು. ಪಾರ್ಲ್ ರಾಯಲ್ಸ್‌ನಲ್ಲಿ ದಿನೇಶ್ ಕಾರ್ತಿಕ್ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರರಾದ ಡೇವಿಡ್ ಮಿಲ್ಲರ್ ಮತ್ತು ಲುಂಗಿ ಎನ್‌ಗಿಡಿ ಅವರೊಂದಿಗೆ ಆಡಲು ಸಿದ್ಧರಾಗಿದ್ದಾರೆ.
ಸೌತ್ ಆಫ್ರಿಕಾ ಟಿ20 2025ಕ್ಕೆ ಪಾರ್ಲ್ ರಾಯಲ್ಸ್ ತಾತ್ಕಾಲಿಕ ತಂಡ
ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಜಾರ್ನ್ ಫೋರ್ಚುಯಿನ್, ಆಂಡಿಲ್ ಫೆಹ್ಲುಕ್ವಾಯೊ, ದಿನೇಶ್ ಕಾರ್ತಿಕ್, ಮಿಚೆಲ್ ವ್ಯಾನ್ ಬ್ಯೂರೆನ್, ಕೋಡಿ ಯೂಸುಫ್, ಕೀತ್ ಡುಡ್ಜನ್, ನ್ಕಾಬಾ ಪೀಟರ್, ಕ್ವೆನಾ ಮಫಕಾ, ಲುವಾನ್-ಡ್ರೆ ಪ್ರಿಟೋರಿಯಸ್, ದಯಾನ್ ಗಲಿಯೆಮ್.
(ವರದಿ: ವಿನಯ್ ಭಟ್)
ಇದನ್ನೂ ಓದಿ: ಚಿನ್ನ ಅಥವಾ ಬೆಳ್ಳಿ ಖಾತ್ರಿ; ಕುಸ್ತಿಯಲ್ಲಿ ಫೈನಲ್ ಪ್ರವೇಶಿಸಿ ಪದಕ ಖಚಿತಪಡಿಸಿದ ವಿನೇಶ್ ಫೋಗಾಟ್