ಕನ್ನಡ ಸುದ್ದಿ  /  ಕ್ರಿಕೆಟ್  /  ಒಂದು ಅವಕಾಶ ಕೊಡಿ ಎಂದು ಅಂಗಾಲಾಚಿದ್ದಾತ ಈಗ ಆರ್‌ಸಿಬಿ ಲಕ್ಕೀ ಚಾರ್ಮ್; ನಡೆದು ಬಂದ ಹಾದಿ ನೆನೆದು ಕಣ್ಣೀರಿಟ್ಟ ಸ್ವಪ್ನಿಲ್‌ ಸಿಂಗ್

ಒಂದು ಅವಕಾಶ ಕೊಡಿ ಎಂದು ಅಂಗಾಲಾಚಿದ್ದಾತ ಈಗ ಆರ್‌ಸಿಬಿ ಲಕ್ಕೀ ಚಾರ್ಮ್; ನಡೆದು ಬಂದ ಹಾದಿ ನೆನೆದು ಕಣ್ಣೀರಿಟ್ಟ ಸ್ವಪ್ನಿಲ್‌ ಸಿಂಗ್

ಐಪಿಎಲ್ 2024ರ ದ್ವಿತೀಯಾರ್ಧದಲ್ಲಿ ಆರ್‌ಸಿಬಿ ತಂಡವು ಕಂಬ್ಯಾಕ್‌ ಮಾಡಿದ ರೀತಿ ಅಮೋಘ. ತಂಡದ ಪ್ರದರ್ಶನದಲ್ಲಿ ಆಲ್‌ರೌಂಡರ್ ಸ್ವಪ್ನಿಲ್ ಸಿಂಗ್ ಪಾತ್ರ ನಿರ್ಣಾಯಕ. ಆದರೆ, ಒಂದು ಹಂತದಲ್ಲಿ ಒಂದೊಂದು ಅವಕಾಶಕ್ಕಾಗಿಯೂ ಅವರು ಅಂಗಾಲಾಚಿದ್ದರು. ಆದರೆ, ಈಗ ಆರ್‌ಸಿಬಿ ತಂಡ ಅವರ ಅದೃಷ್ಟ ಬದಲಿಸಿದರೆ, ಅವರು ಆರ್‌ಸಿಬಿ ಅದೃಷ್ಟ ಬದಲಿಸಿದರು.

ಒಂದು ಅವಕಾಶ ಕೊಡಿ ಎಂದು ಅಂಗಾಲಾಚಿದ್ದಾತ ಈಗ ಆರ್‌ಸಿಬಿ ಲಕ್ಕೀ ಚಾರ್ಮ್
ಒಂದು ಅವಕಾಶ ಕೊಡಿ ಎಂದು ಅಂಗಾಲಾಚಿದ್ದಾತ ಈಗ ಆರ್‌ಸಿಬಿ ಲಕ್ಕೀ ಚಾರ್ಮ್

ಐಪಿಎಲ್‌ 2024ರ ಆರಂಭದಲ್ಲಿ ಆರ್‌ಸಿಬಿ ತಂಡದ ಅಭಿಯಾನ ಹೇಗಿತ್ತು ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ತಂಡವು, ಪ್ಲೇಆಫ್‌ ಪ್ರವೇಶಿಸಲು ಸಾಧ್ಯವೇ ಇಲ್ಲ ಎಂದು ಹೇಳಲಾಗಿತ್ತು. ಏಕೆಂದರೆ ಆರಂಭದಲ್ಲಿ ಆಡಿದ 8 ಪಂದ್ಯಗಳಲ್ಲಿ 7ರಲ್ಲಿ ಮುಗ್ಗರಿಸಿದ್ದ ತಂಡವು, ಮೈಕೊಡವಿ ಗೆಲುವಿನ ಲಯ ಕಾಣುವ ಸಾಧ್ಯತೆಯೇ ಇರಲಿಲ್ಲ. ಆ ಬಳಿಕ ಸನ್‌ರೈಸರ್ಸ್‌ ವಿರುದ್ಧ ಗೆದ್ದ ತಂಡವು ಆ ಬಳಿಕ ಹಿಂತಿರುಗಿ ನೋಡೇ ಇಲ್ಲ. ಸತತ ಆರು ಪಂದ್ಯಗಳನ್ನು ಗೆದ್ದು ಅದ್ಧೂರಿಯಾಗಿ ಪ್ಲೇಆಫ್‌ಗೆ ಲಗ್ಗೆ ಹಾಕಿತು. ಹಾಗಿದ್ರೆ ತಂಡದ ಅದೃಷ್ಟ ಬದಲಾಗಿದ್ದು ಹೇಗೆ? ತಂಡದ ಸೋಲಿನ ಅಭಿಯಾನ ಗೆಲುವಿನತ್ತ ತಿರುಗಿದ್ದು ಹೇಗೆ? ಇದಕ್ಕೆ ಸರಳ ಉತ್ತರವಿದೆ. ಆ ಒಬ್ಬ ಆಟಗಾರ ಆಡುವ ಬಳಗಕ್ಕೆ ಎಂಟ್ರಿ ಕೊಟ್ಟಿದ್ದೇ ತಡ. ಆಡಿದ ಎಲ್ಲಾ ಪಂದ್ಯಗಳಲ್ಲೂ ಆರ್‌ಸಿಬಿ ಗೆದ್ದು ಬೀಗಿದೆ. ಆ ಆಟಗಾರ ಬೇರಾರೂ ಅಲ್ಲ. ಇನ್ನೂ ಟೀಮ್‌ ಇಂಡಿಯಾಗೆ ಕಾಲಿಡದ ಸ್ವಪ್ನಿಲ್‌ ಸಿಂಗ್‌.

ಟ್ರೆಂಡಿಂಗ್​ ಸುದ್ದಿ

ಈಗಾಗಲೇ ಅಭಿಮಾನಿಗಳೂ ಈತನನ್ನು ಲಕ್ಕೀ ಚಾರ್ಮ್‌ ಎಂದು ಕರೆಯಲು ಶುರು ಮಾಡಿದ್ದಾರೆ. ಸನ್‌ರೈಸರ್ಸ್‌ ವಿರುದ್ಧದ ಪಂದ್ಯದಲ್ಲಿ ಮೊದಲ ಬಾರಿಗೆ ಆರ್‌ಸಿಬಿ ಪರ ಆಡುವ ಅವಕಾಶ ಪಡೆದ ಸ್ವಪ್ನಿಲ್‌, ಮೊದಲ ಪಂದ್ಯದಲ್ಲೇ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ನೀಡಿದರು. ಬ್ಯಾಟಿಂಗ್‌ನಲ್ಲಿ 12 ರನ್‌ ಗಳಿಸಿದರೆ, ಬೌಲಿಂಗ್‌ನಲ್ಲಿ ಎರಡು ನಿರ್ಣಾಯಕ ವಿಕೆಟ್‌ (ಮರ್ಕ್ರಾಮ್‌, ಕ್ಲಾಸೆನ್) ಪಡೆದರು. ಪಂದ್ಯದಲ್ಲಿ ಆರ್‌ಸಿಬಿ 35 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಅಲ್ಲಿಂದ ಆರಂಭವಾದ ಆರ್‌ಸಿಬಿಯ ಗೆಲುವಿನ ಅಭಿಯಾನ ಹಾಗೆಯೇ ಮುಂದುವರೆದಿದೆ. ಈ ಎಲ್ಲಾ ಗೆಲುವಿನ ಪಂದ್ಯಗಳಲ್ಲಿಯೂ ಸ್ವಪ್ನಿಲ್‌ ಆಡಿದ್ದಾರೆ. ಇದಕ್ಕಾಗಿಯೇ ಅವರು ಆರ್‌ಸಿಬಿಯ ಅದೃಷ್ಟ ಬದಲಿಸಿದ ಆಟಗಾರ ಎಂದು ಅಭಿಮಾನಿಗಳಿಂದ ಕರೆಸಿಕೊಂಡಿದ್ದು.‌

ಒಂದು ಅವಕಾಶ ಕೊಡಿ ಸಾಕು

ಸ್ವಪ್ನಿಲ್‌ ಸಿಂಗ್‌ ವಯಸ್ಸು ಈಗ 33 ವರ್ಷ. 2008ರ ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿಯೇ ಸ್ವಪ್ನಿಲ್ ಸಿಂಗ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಮೊದಲ ಬಾರಿಗೆ ಹರಾಜಿನಲ್ಲಿ ಖರೀದಿಸಿತ್ತು. ಆದರೆ, ಬೆಂಚ್‌ ಬೆಚ್ಚಗಾಗಿಸುವುದು ಬಿಟ್ಟರೆ ಆಡುವ ಅವಕಾಶ ಸಿಗಲಿಲ್ಲ. ಎಂಟು ವರ್ಷಗಳ ನಂತರ ಅವರನ್ನು ಪಂಜಾಬ್ ಫ್ರಾಂಚೈಸಿ ಖರೀದಿ ಮಾಡಿತು. ಅಲ್ಲೂ ಮಿಂಚಲಿಲ್ಲ. ಕಳೆದ ಐಪಿಎಲ್‌ ಋತುವಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಪಂದ್ಯಾವಳಿಯಲ್ಲಿ ಪದಾರ್ಪಣೆ ಮಾಡಿದರು. ಒಂದು ಅವಕಾಶ ಸಿಗಲು ಸುದೀರ್ಘ 16 ವರ್ಷಗಳ ಕಾಲ ಕಾಯಬೇಕಾಯ್ತು.‌ ಕೋಚ್ ಆಂಡಿ ಫ್ಲವರ್ ಅವರ ಮಾರ್ಗದರ್ಶನದಲ್ಲಿ ಲಕ್ನೋದಲ್ಲಿ ಆಡಿದರು. ಆ ಬಳಿಕ ಫ್ಲವರ್ ಆರ್‌ಸಿಬಿಗೆ ಬಂದರು. ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿಯ ಪ್ರಿ-ಸೀಸನ್ ಟ್ರಯಲ್ ಕ್ಯಾಂಪ್‌ನಲ್ಲಿ ಫ್ಲವರ್ ಅವರನ್ನು ಭೇಟಿಯಾದ ಸ್ವಪ್ನಿಲ್, ತಮಗೆ ಕೊನೆಯ ಅವಕಾಶ ನೀಡುವಂತೆ ಕೇಳಿಕೊಂಡಿದ್ದರು. ಈ ಕುರಿತು ಖುದ್ದು ಸ್ವಪ್ನಿಲ್‌ ಅವರೇ ಆರ್‌ಸಿಬಿ ಜೊತೆಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | ಐಪಿಎಲ್ 2024 ಲೀಗ್ ಹಂತ ಅಂತ್ಯ; ಆರೆಂಜ್‌, ಪರ್ಪಲ್‌ ಕ್ಯಾಪ್‌ ರೇಸ್‌ನಲ್ಲಿ ಯಾರಿದ್ದಾರೆ? ವಿರಾಟ್‌ ಹಿಂದಿಕ್ಕೋದು ಕಷ್ಟ ಕಷ್ಟ

ಕಳೆದ ವರ್ಷ ಎರಡು ಐಪಿಎಲ್ ಪಂದ್ಯಗಳನ್ನು ಆಡಿದ ಬಳಿಕ, 2024ರ ಹರಾಜಿನಲ್ಲಿಯೂ ಆಯ್ಕೆಯಾಗುವ ವಿಶ್ವಾಸ ಹೊಂದಿದ್ದರು. ಆದರೆ, ಆರಂಭದಲ್ಲಿ ಯಾರೂ ಅವರನ್ನು ಖರೀದಿ ಮಾಡಲಿಲ್ಲ. ಎಲ್ಲಾ ಭರವಸೆ ಕಳೆದುಕೊಂಡಿದ್ದ ಸ್ವಪ್ನಿಲ್‌ ಅವರನ್ನು ಅಂತಿಮವಾಗಿ ಕೊನೆಯ ಸುತ್ತಿನಲ್ಲಿ ಮೂಲ ಬೆಲೆ 20 ಲಕ್ಷ ರೂಪಾಯಿಗೆ ಆರ್‌ಸಿಬಿ ಖರೀದಿ ಮಾಡಿತು. ಇದನ್ನು ನೆನೆದು ಸ್ವಪ್ನಿಲ್‌ ಭಾವುಕರಾದರು.

“ಹರಾಜಿನ ದಿನದಂದು ನಾನು ರಣಜಿ ಪಂದ್ಯಕ್ಕಾಗಿ ಡೆಹ್ರಾಡೂನ್‌ಗೆ ಪ್ರಯಾಣಿಸುತ್ತಿದ್ದೆ. ಐಪಿಎಲ್ ಹರಾಜಿನ ಕೊನೆಯ ಸುತ್ತು ನಡೆಯುತ್ತಿತ್ತು. ಆವರೆಗೂ ನನ್ನನ್ನು ಯಾರೂ ಖರೀದಿಸಿರಲಿಲ್ಲ. ಹೀಗಾಗಿ ನಾನು ಎಲ್ಲವೂ ಮುಗಿಯಿತು ಎಂದುಕೊಂಡು ಭರವಸೆ ಕಳೆದುಕೊಂಡಿದ್ದೆ. ನಾನು ತುಂಬಾ ನಿರಾಶೆಗೊಂಡಿದ್ದೆ. ಅಷ್ಟರಲ್ಲಿ ನನ್ನ ಮನೆಯವರು ಕರೆ ಮಾಡಿ ಆಯ್ಕೆಯಾದ ಕುರಿತು ಹೇಳಿದರು. ನನ್ನ ಪಾಲಿಗೆ ಅದು ಎಷ್ಟು ಭಾವನಾತ್ಮಕ ಪ್ರಯಾಣ ಎಂಬುದು ಹಲವರಿಗೆ ತಿಳಿದಿಲ್ಲ” ಎಂದು ಹೇಳುತ್ತಿದ್ದಾಗ ಸ್ವಪ್ನಿಲ್‌ ಕಣ್ಣಂಚಲ್ಲಿ ನೀರು ಜಿನುಗಿತು.

ಇಲ್ಲಿದೆ ಸ್ವಪ್ನಿಲ್‌ ಮಾತನಾಡಿರುವ ವಿಡಿಯೋ

ವಿರಾಟ್ ಕೊಹ್ಲಿ ಜೊತೆಗೆ ಒಡನಾಟ

ಸ್ವಪ್ನಿಲ್‌ ಅವರಿಗೆ ಹಲವು ವರ್ಷಗಳ ಹಿಂದೆಯೇ ವಿರಾಟ್‌ ಪರಿಚಯವಾಗಿತ್ತು. 14ನೇ ವಯಸ್ಸಿನಲ್ಲಿ ಬರೋಡಾ ಪರ ಪದಾರ್ಪಣೆ ಮಾಡಿದ ನಂತರ, ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ವಿರಾಟ್ ಕೊಹ್ಲಿ ಅವರ ರೂಮ್‌ಮೇಟ್ ಕೂಡಾ ಆಗಿದ್ದರು.

ಒಂದು ಹಂತದಲ್ಲಿ ಉತ್ಸಾಹವನ್ನೇ ಕಳೆದುಕೊಂಡಿದ್ದ ಸ್ವಪ್ನಿಲ್, ಆರ್‌ಸಿಬಿ ಪರ ಆಡುವ ಅವಕಾಶ ಪಡೆದ ಬೆನ್ನಲ್ಲೇ ಭಾರತದಾದ್ಯಂತ ಮನೆ ಮಾತಾಗಿದ್ದಾರೆ. ಅವಕಾಶಕ್ಕಾಗಿ ಅಂಗಾಲಾಚುತ್ತಿದ್ದ ಆಟಗಾರನಿಗೆ ಅವಕಾಶ ಸಿಕ್ಕಿದೆ. ಅಷ್ಟೇ ಅಲ್ಲ ಆರ್‌ಸಿಬಿ ತಂಡದ ಲಕ್ಕಿ ಚಾರ್ಮ್‌ ಎಂದು ಅಭಿಮಾನಿಗಳಿಂದ ಕರೆಸಿಕೊಂಡಿದ್ದಾರೆ.

ಇದನ್ನೂ ಓದಿ | RCB vs RR: ಒಂದೂ ಸೋಲದ ಮತ್ತು ಒಂದೂ ಗೆಲ್ಲದ ತಂಡಗಳ ನಡುವೆ ಎಲಿಮಿನೇಟರ್ ಫೈಟ್; ಯಾರ ಕೈ ಹಿಡಿಯುತ್ತೆ ಅದೃಷ್ಟ?

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ