ಆರ್‌ಸಿಬಿ ಟ್ರೋಫಿ ಬರ ನೀಗಿಸಲು ನೆರವಾದ ಕನ್ನಡತಿ; ಅತ್ಯಧಿಕ ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ಗೆದ್ದ ಶ್ರೇಯಾಂಕಾ ಪಾಟೀಲ್
Shreyanka Patil: ಆರ್‌ಸಿಬಿ ತಂಡವು ಕಪ್ ಗೆಲ್ಲುವಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್ ಪಾತ್ರ ಮಹತ್ವದ್ದು. ಫೈನಲ್ ಪಂದ್ಯದಲ್ಲಿ ನಿರ್ಣಾಯಕ ನಾಲ್ಕು ವಿಕೆಟ್ ಪಡೆಯುವ ಡಬ್ಲ್ಯೂಪಿಎಲ್ ಎರಡನೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯಾಗಿ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.
ಕೊನೆಗೂ ಆರ್‌ಸಿಬಿ ತಂಡ ಕಪ್ ಗೆದ್ದಿದೆ. ಸತತ 16 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುರುಷರ ತಂಡವು ಕಪ್ ಬರ ಎದುರಿಸುತ್ತಿತ್ತು. ಆದರೆ, ಇದೀಗ ಆ ಬರವನ್ನು ಆರ್‌ಸಿಬಿ ವನಿತೆಯರ ತಂಡ ನೀಗಿಸಿದೆ. ವಿಮೆನ್ಸ್ ಪ್ರೀಮಿಯರ್ ಲೀಗ್‌ನ ಎರಡನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ಸ್ಮೃತಿ ಮಂಧಾನ ಪಡೆ, ಚೊಚ್ಚಲ ಡಬ್ಲ್ಯೂಪಿಎಲ್ ಟ್ರೋಫಿ ಗೆದ್ದು ಸಂಭ್ರಮಿಸಿದೆ. ಈ ಸಲ ಕಪ್ ನಮ್ದೇ ಎನ್ನುವ ಘೋಷವಾಕ್ಯವನ್ನು ಆರ್‌ಸಿಬಿ ಮಹಿಳಾ ತಂಡ ಸಾಧಿಸಿ ತೋರಿಸಿದೆ. ಹೌದು, ಈ ಸಲ ಕಪ್ ನಮ್ದು.
ಆರ್‌ಸಿಬಿ ತಂಡವು ಕಪ್ ಗೆಲ್ಲುವಲ್ಲಿ ಕನ್ನಡತಿಯೊಬ್ಬರ ಪಾತ್ರ ಮಹತ್ವದ್ದು. ಅವರೇ ಚಿನಕುರುಳಿ ಶ್ರೇಯಾಂಕಾ ಪಾಟೀಲ್. ಚೊಚ್ಚಲ ಆವೃತ್ತಿಯಲ್ಲೇ ಅಭಿಮಾನಿಗಳ ಮನಗೆದ್ದಿದ್ದ ಆಟಗಾರ್ತಿ, ಈ ಬಾರಿ ಎರಡನೇ ಆವೃತ್ತಿಯಲ್ಲಿ ಮತ್ತಷ್ಟು ಇಷ್ಟವಾಗಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಉತ್ತಮ ಪ್ರದರ್ಶನ ನೀಡುತ್ತಾ ಬಂದ ಬೆಂಗಳೂರ ಬಾಲೆ, ಫೈನಲ್ ಪಂದ್ಯದಲ್ಲಿ ನಿರ್ಣಾಯಕ ನಾಲ್ಕು ವಿಕೆಟ್ ಪಡೆದರು. ಆ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯಾಗಿ ಪರ್ಪಲ್ ಕ್ಯಾಪ್ ಗೆದ್ದರು.
ಪ್ರಸಕ್ತ ಆವೃತ್ತಿಯಲ್ಲಿ ಶ್ರೇಯಾಂಕಾ ಆಡಿರುವುದು 8 ಪಂದ್ಯಗಳನ್ನು ಮಾತ್ರ. ಆರ್‌ಸಿಬಿ ತಂಡ ಒಟ್ಟು 10 ಪಂದ್ಯಗಳನ್ನು ಆಡಿದ್ದರೂ, 2 ಪಂದ್ಯಗಳಲ್ಲಿ ಕನ್ನಡತಿ ಆಡಿರಲಿಲ್ಲ. ಆದರೆ, ಆಡಿದ 8 ಪಂದ್ಯಗಳಲ್ಲಿ ಬರೋಬ್ಬರಿ 13 ವಿಕೆಟ್ ಪಡೆಯುವುದರೊಂದಿಗೆ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ ಅಗ್ರ ವಿಕೆಟ್ ಟೇಕರ್‌ಗಳ ಪಟ್ಟಿಯಲ್ಲಿ ಅಗ್ರ ಮೂವರು ಆರ್‌ಸಿಬಿಯನ್ನರೇ ಇರುವುದು ವಿಶೇಷ.
ಇದನ್ನೂ ಓದಿ | ಖುಷಿ-ಅಚ್ಚರಿ-ನಿರಾಳ, 16 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯ; ಚೊಚ್ಚಲ ಕಿರೀಟ ತೊಟ್ಟ ಆರ್‌ಸಿಬಿ, ‘ಈ ಸಲ ಕಪ್ ನಮ್ದೇ’
ಪಂದ್ಯಾವಳಿಯುದ್ದಕ್ಕೂ 7.30ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ ಶ್ರೇಯಾಂಕಾ, ಎರಡು ಬಾರಿ ಮೂರು ವಿಕೆಟ್ ಗೊಂಚಲನ್ನು ಪಡೆದಿದ್ದಾರೆ. ಫೈನಲ್ ಪಂದ್ಯದಲ್ಲಿ 12 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದಿರುವುದು ಅವರ ಅತ್ಯತ್ತಮ ಬೌಲಿಂಗ್ ಅಂಕಿ-ಅಂಶವಾಗಿದೆ. ಆರ್‌ಸಿಬಿ ತಂಡದ ಕೊನೆಯ ಮೂರು ಪಂದ್ಯಗಳಲ್ಲಿ ಶ್ರೇಯಾಂಕ ಪ್ರದರ್ಶನ ಅಮೋಘವಾಗಿತ್ತು.
ಮುಂಬೈ ವಿರುದ್ಧದ ಎಲಿಮನೇಟರ್ ಪಂದ್ಯದಲ್ಲಿ 2 ವಿಕೆಟ್ ಪಡೆದಿದ್ದ ಶ್ರೇಯಾಂಕಾ, ಅದಕ್ಕೂ ಮುನ್ನ ಲೀಗ್ ಹಂತದ ಕೊನೆಯ ಪಂದ್ಯದಲ್ಲೂ ಮುಂಬೈ ವಿರುದ್ಧ 3 ನಿರ್ಣಾಯಕ ವಿಕೆಟ್ ಉರುಳಿಸಿದ್ದರು.
ಇದನ್ನೂ ಓದಿ | Video: ದೆಹಲಿಯಲ್ಲಿ ಆರ್‌ಸಿಬಿಗೆ ಬೆಂಬಲ ಕಂಡು ರವಿ ಶಾಸ್ತ್ರಿ ಮೂಕವಿಸ್ಮಿತ; ಇದು ಬೆಂಗಳೂರಿನಂತಿದೆ ಎಂದ ಮಾಜಿ ಕ್ರಿಕೆಟಿಗ
ಫೈನಲ್ ಪಂದ್ಯದಲ್ಲಿ ಕನ್ನಡತಿ ಆರ್ಭಟ ಮತ್ತಷ್ಟು ಜೋರಾಗಿತ್ತು. ಮೆಗ್ ಲ್ಯಾನಿಂಗ್ (23), ಮಿನ್ನು ಮಣಿ (5), ಅರುಂಧತಿ ರೆಡ್ಡಿ (10) ಮತ್ತು ತಾನಿಯಾ ಭಾಟಿಯಾ (0) ವಿಕೆಟ್ ಪಡೆದು ಅಬ್ಬರಿಸಿದರು. ಇದರೊಂದಿಗೆ ಟೂರ್ನಿಯ ಎಮರ್ಜಿಂಗ್ ಪ್ಲೇಯರ್ ಆಗಿ ಹೊರಹೊಮ್ಮಿದರು.
ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೂ ಟ್ರೋಫಿ ಗೆದ್ದಿಲ್ಲ. ಆದರೆ ಮಹಿಳಾ ಪ್ರೀಮಿಯರ್ ಲೀಗ್ 2ನೇ ಆವೃತ್ತಿಯಲ್ಲೇ ವನಿತೆಯರ ತಂಡ ಚೊಚ್ಚಲ ಕಿರೀಟಕ್ಕೆ ಮುತ್ತಿಕ್ಕಿದೆ. ಈ ಸಲ ಕಪ್ ನಮ್ದೇ ಎಂಬ ಘೋಷವಾಕ್ಯ ಕೊನೆಗೂ ನಿಜವಾಗಿದೆ. ಕೋಟ್ಯಂತರ ಅಭಿಮಾನಿಗಳ ಕನಸು ನನಸಾಗಿದೆ.