ವಿರಾಟ್ ಕೊಹ್ಲಿಗೆ ಹೇಳದೆ ಬ್ಯಾಗ್‌ಗೆ ಕೈ ಹಾಕಿ ಪರ್ಫ್ಯೂಮ್ ಬಳಸಿದ ಯುವ ಆಟಗಾರ; ಕೇಳಿದ್ರೆ ಅವ್ರು ನಮ್ಮ ದೊಡ್ಣಣ್ಣ ಅಲ್ಲೇ ಅನ್ನೋದಾ!
ಆರ್‌ಸಿಬಿ ತಂಡದ ಯುವ ಆಟಗಾರ ಸ್ವಸ್ತಿಕ್ ಚಿಕಾರ, ವಿರಾಟ್ ಕೊಹ್ಲಿ ಬ್ಯಾಗಿನಿಂದ ಪರ್‌ಫ್ಯೂಮ್ ತೆಗೆದು ಬಳಸಿದ್ದಾರೆ. ಇದು ಅವರ ತಂಡದ ಸದಸ್ಯರನ್ನು ಆಶ್ಚರ್ಯಗೊಳಿಸಿದೆ. ಆದರೆ, ಅವರು ನಮ್ಮ ದೊಡ್ಡಣ ಅಲ್ವೇ ಎಂದು ಸ್ವಸ್ತಿಕ್ ಸರಳವು ವಿಷಯ ಮುಗಿಸಿದ್ದಾರೆ.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶುಭಾರಂಭ ಮಾಡಿದೆ. ಶನಿವಾರ (ಮಾ.22) ಐಪಿಎಲ್ 18ರ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿದ ನಂತರ ಆರ್‌ಸಿಬಿ ತಂಡ ಭಾರಿ ಉತ್ಸಾಹದಲ್ಲಿದೆ. ಕಳೆದ ವರ್ಷ ಪ್ಲೇಆಫ್‌ಗೆ ಅರ್ಹತೆ ಪಡೆದ ನಾಲ್ಕು ತಂಡಗಳಲ್ಲಿ ಒಂದಾದ ಆರ್‌ಸಿಬಿ, ಚಾಂಪಿಯನ್ ತಂಡವನ್ನೇ ಮಣಿಸಿದ್ದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಆವೃತ್ತಿಯ ಎರಡನೇ ಪಂದ್ಯಕ್ಕೂ ಮುನ್ನ ಆಟಗಾರರು ವಿಶ್ರಾಂತಿ ಮತ್ತು ಸಂಭ್ರಮಾಚರಣೆಗಾಗಿ ತುಸು ಸಮಯ ಕಳೆದಿದ್ದಾರೆ. ಎರಡನೇ ಪಂದ್ಯದ ನಡುವೆ ಆರು ದಿನಗಳ ಅಂತರವಿರುವುದರಿಂದ, ಆರ್‌ಸಿಬಿ ಶಿಬಿರವು ವಿವಿಧ ವಿನೋದ ಚಟುವಟಿಕೆಗಳಲ್ಲಿ ತೊಡಗಿತ್ತು. ಈ ನಡುವೆ ಒಂದು ಮಜವಾದ ಘಟನೇ ನಡೆದಿದೆ.
ಆರ್‌ಸಿಬಿ ಫ್ರಾಂಚೈಸಿಯು ಸ್ವಸ್ತಿಕ್ ಚಿಕಾರ ಎಂಬ ಯುವ ಆಟಗಾರನನ್ನು 30 ಲಕ್ಷ ರೂಪಾಯಿ ಮೂಲ ಬೆಲೆಗೆ ಖರೀದಿಸಿತ್ತು. ಈ ಯುವ ಆಟಗಾರ ಬೇರೆ ಯಾವೊಬ್ಬ ಆಟಗಾರ ಮಾಡದ ಕೆಲಸ ಮಾಡಿದ್ದಾರೆ. ಇದು ವಿರಾಟ್ ಅರೊಂದಿಗೆ ಹಲವು ವರ್ಷಗಳಿಂದ ಆಡುತ್ತಿರುವ ಆಟಗಾರರನ್ನೇ ಅಚ್ಚರಿಗೊಳಿಸಿದೆ.
19 ವರ್ಷದ ಚಿಕಾರ, ಕೊಹ್ಲಿಯ ಅನುಮತಿಯೂ ಪಡೆಯದೆ ಅವರ ಬ್ಯಾಗ್ ತೆರೆದು, ಅದರಲ್ಲಿದ್ದ ಪರ್‌ಫ್ಯೂಮ್ ಬಳಸಿದ್ದಾರೆ. ಇದನ್ನು ನೋಡಿದ ಯಶ್ ದಯಾಳ್ ಸೇರಿದಂತೆ ಆರ್‌ಸಿಬಿ ನಾಯಕ ರಾಜತ್ ಪಾಟೀದಾರ್‌ಗೂ ಅಚ್ಚರಿಯಾಗಿದೆ. ಒಂದು ಕ್ಷಣ ಅವರ ಕಣ್ಣುಗಳನ್ನೇ ಅವರು ನಂಬಿಲ್ಲ.
“ನಾವು ಕೋಲ್ಕತ್ತಾದಲ್ಲಿ ನಮ್ಮ ಕೊನೆಯ ಪಂದ್ಯದ ನಂತರ ಡ್ರೆಸ್ಸಿಂಗ್ ರೂಮಿನಲ್ಲಿ ಕುಳಿತಿದ್ದೆವು. ಚಿಕಾರ ಹೋಗಿ ವಿರಾಟ್ ಕೊಹ್ಲಿಯ ಬ್ಯಾಗಿನಿಂದ ಪರ್‌ಫ್ಯೂಮ್ ಬಾಟಲಿ ತೆಗೆದು ಅವರಲ್ಲಿ ಕೇಳದೆ ಬಳಸಿದರು. ಆಗ ಎಲ್ಲರೂ ನಗಲು ಪ್ರಾರಂಭಿಸಿದರು. ಅವರು (ಕೊಹ್ಲಿ) ಏನೂ ಮಾಡಲಿಲ್ಲ,” ಎಂದು ಯಶ್ ದಯಾಳ್ ಹೇಳಿದ್ದಾರೆ.
“ವಿರಾಟ್ ಅಲ್ಲೇ ಇದ್ದರು. ಈ ಹುಡುಗ ಏನು ಮಾಡುತ್ತಿದ್ದಾನೆ ಎಂದು ನಾನು ಆಶ್ಚರ್ಯ ಪಟ್ಟೆ,” ಎಂದು ತಂಡದ ನಾಯಕ ರಜತ್ ಪಾಟೀದಾರ್ ಕೂಡಾ ಹೇಳಿಕೊಂಡಿದ್ದಾರೆ.
ಇಲ್ಲಿದೆ ವಿಡಿಯೋ
ಅವರು ನಮ್ಮ ದೊಡ್ಡಣ್ಣ
"ಅವರು ನಮ್ಮ ದೊಡ್ಡಣ್ಣ, ಅಲ್ಲವೇ? ಹೀಗಾಗಿ ಅವರು ಚೆನ್ನಾಗಿರುವ ಪರ್‌ಫ್ಯೂಮ್ ಬಳಸುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾನು ಪರಿಶೀಲಿಸುತ್ತಿದ್ದೆ. ಅದು ಹೇಗಿತ್ತು ಎಂದು ಅವರು ನನ್ನಲ್ಲಿ ಕೇಳಿದನು. ಅದು ಚೆನ್ನಾಗಿದೆ ಎಂದು ನಾನು ಹೇಳಿದೆ. ಹೇಗಿದೆ ಅನ್ನೋದನ್ನು ನಾನು ನೋಡ್ತಿದ್ದೆ ಎಂದು ಅವರಿಗೆ ಹೇಳಿದೆ ಎಂದು ಸ್ವಸ್ತಿಕ್ ಚಿಕಾರ ಹೇಳಿದ್ದಾರೆ.
2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ವಿರಾಟ್ ಕೊಹ್ಲಿ ಆರ್‌ಸಿಬಿ ಪರ ಆಡುತ್ತಿದ್ದಾರೆ. ಈ ಬಾರಿ ಯಶಸ್ವಿಯಾಗಿ ಒಂದೇ ಫ್ರಾಂಚೈಸಿ ಪರ ಕೊಹ್ಲಿ 18 ವರ್ಷಗಳವರೆಗೆ ಆಡುತ್ತಿದ್ದಾರೆ. ಯುವ ಆಟಗಾರರನ್ನು ಸದಾ ಪ್ರೋತ್ಸಾಹಿಸುವ, ಹುರಿದುಂಬಿಸುವ ವಿರಾಟ್, ಅವರ ಭವಿಷ್ಯಕ್ಕೆ ಅಗತ್ಯ ಸಲಹೆ ನೀಡುತ್ತಾ ಬರುತ್ತಿದ್ದಾರೆ.
