ಆರ್​ಸಿಬಿ ತಂಡದಲ್ಲಿ ಮತ್ತೊಂದು ಬದಲಾವಣೆ; ಜೇಕಬ್ ಬೆಥೆಲ್ ಜಾಗಕ್ಕೆ ಬಂದ್ರು ಕಿಲಾಡಿ ವಿಕೆಟ್ ಕೀಪರ್
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್​ಸಿಬಿ ತಂಡದಲ್ಲಿ ಮತ್ತೊಂದು ಬದಲಾವಣೆ; ಜೇಕಬ್ ಬೆಥೆಲ್ ಜಾಗಕ್ಕೆ ಬಂದ್ರು ಕಿಲಾಡಿ ವಿಕೆಟ್ ಕೀಪರ್

ಆರ್​ಸಿಬಿ ತಂಡದಲ್ಲಿ ಮತ್ತೊಂದು ಬದಲಾವಣೆ; ಜೇಕಬ್ ಬೆಥೆಲ್ ಜಾಗಕ್ಕೆ ಬಂದ್ರು ಕಿಲಾಡಿ ವಿಕೆಟ್ ಕೀಪರ್

ಆರ್​ಸಿಬಿ ತಂಡದಲ್ಲಿ ಮತ್ತೊಂದು ಬದಲಾವಣೆಯಾಗಿದ್ದು, ಜೇಕಬ್ ಬೆಥೆಲ್ ಜಾಗಕ್ಕೆ ನ್ಯೂಜಿಲೆಂಡ್ ವಿಕೆಟ್ ಕೀಪರ್​ ಟಿಮ್ ಸೀಫರ್ಟ್ ಅವರನ್ನು ಆಯ್ಕೆ ಮಾಡಿಕೊಂಡಿದೆ.

ಆರ್​ಸಿಬಿ ತಂಡದಲ್ಲಿ ಮತ್ತೊಂದು ಬದಲಾವಣೆ; ಜೇಕಬ್ ಬೆಥೆಲ್ ಜಾಗಕ್ಕೆ ಬಂದ್ರು ಕಿಲಾಡಿ ವಿಕೆಟ್ ಕೀಪರ್
ಆರ್​ಸಿಬಿ ತಂಡದಲ್ಲಿ ಮತ್ತೊಂದು ಬದಲಾವಣೆ; ಜೇಕಬ್ ಬೆಥೆಲ್ ಜಾಗಕ್ಕೆ ಬಂದ್ರು ಕಿಲಾಡಿ ವಿಕೆಟ್ ಕೀಪರ್

2025ರ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಪ್ಲೇಆಫ್ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮತ್ತೊಂದು ಮಹತ್ವದ ಬದಲಾವಣೆಯಾಗಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವೇಗಿ ಲುಂಗಿ ಎನ್​ಗಿಡಿ ಜಾಗಕ್ಕೆ ಜಿಂಬಾಬ್ವೆಯ ಬ್ಲೆಸಿಂಗ್ ಮುಜರಬಾನಿ ಅವರನ್ನು ಆಯ್ಕೆ ಮಾಡಿದ್ದ ಆರ್​ಸಿಬಿ ಇದೀಗ ಇಂಗ್ಲೆಂಡ್​ನ ಸ್ಟಾರ್ ಬ್ಯಾಟರ್ ಜೇಕಬ್ ಬೆಥೆಲ್ ಬದಲಿಗೆ ನ್ಯೂಜಿಲೆಂಡ್​ನ ಕಿಲಾಡಿ ಬ್ಯಾಟರ್​ ಟಿಮ್ ಸೀಫರ್ಟ್ ಅವರನ್ನು 2 ಕೋಟಿಗೆ ತಂಡಕ್ಕೆ ಸೇರಿಸಿಕೊಂಡಿದೆ. ಬೆಂಗಳೂರು ಈ ಬಗ್ಗೆ ಅಧಿಕೃತವಾಗಿ ಪೋಸ್ಟ್ ಮಾಡಿದೆ.

ಮೇ 23ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಲೀಗ್ ಪಂದ್ಯದ ನಂತರ ಬೆಥೆಲ್ ಅವರನ್ನು ಆರ್‌ಸಿಬಿ ತಂಡದಿಂದ ಬಿಡುಗಡೆ ಮಾಡಲಾಗುವುದು. ಮೇ 29 ರಿಂದ ಪ್ರಾರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ವೈಟ್-ಬಾಲ್ ಸರಣಿಗಾಗಿ ಬೆಥೆಲ್ ಇಂಗ್ಲೆಂಡ್ ರಾಷ್ಟ್ರೀಯ ತಂಡವನ್ನು ಸೇರಲಿದ್ದಾರೆ. '#ನಮ್ಮಆರ್​​ಸಿಬಿಗೆ ಸ್ವಾಗತ, ಬಾಮ್ ಬಾಮ್' ಎಂದು ಸೀಫರ್ಟ್​ರನ್ನು ವೆಲ್​ಕಮ್ ಮಾಡಿಕೊಂಡಿದೆ. ಇವರು ವಿರಾಟ್ ಕೊಹ್ಲಿ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಪ್ಲೇಆಫ್ ಪಂದ್ಯಗಳಲ್ಲೂ ಇವರೇ ಆಡಬಹುದು.

ಟಿಮ್ ಸೀಫರ್ಟ್ ಟಿ20ಐ ಪ್ರದರ್ಶನ

ನ್ಯೂಜಿಲೆಂಡ್ ಪರ 66 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸೀಫರ್ಟ್ 28 ಸರಾಸರಿಯಲ್ಲಿ 1,540 ರನ್ ಗಳಿಸಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್​ ಆಗಿರುವ ಬೆಥೆಲ್, ಈ ಋತುವಿನಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ ಅವರು ಆರ್‌ಸಿಬಿ ಪರ ಎರಡು ಪಂದ್ಯಗಳನ್ನು ಆಡಿದ್ದು, 1 ಅರ್ಧಶತಕ ಸಹಿತ 67 ರನ್‌ ಗಳಿಸಿದ್ದಾರೆ. ತಾನು ಪದಾರ್ಪಣೆ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 12 ರನ್ ಗಳಿಸಿದ್ದ ಬೆಥೆಲ್, ನಂತರ ಚೆನ್ನೈ ಸೂಪರ್ ಕಿಂಗ್ಸ್​ 33 ಎಸೆತಗಳಲ್ಲಿ 55 ರನ್ ಗಳಿಸಿದ್ದರು.

ಈ ಅರ್ಧಶತಕದೊಂದಿಗೆ ಐಪಿಎಲ್‌ನಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ವಿದೇಶಿ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವರು ಹೆಸರಿನಲ್ಲಿ ಈ ದಾಖಲೆ ಇತ್ತು. ಆರ್‌ಸಿಬಿ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಐಪಿಎಲ್ 2025 ರ ಲೀಗ್ ಹಂತದ ಅಂತ್ಯಕ್ಕೆ ಟಾಪ್-2ರಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿರುವ ಆರ್​ಸಿಬಿ, ಮೇ 23ರಂದು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಟ ನಡೆಸಲಿದೆ. ಆ ಬಳಿಕ ಮೇ 27ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಾದಾಟ ನಡೆಯಲಿದೆ.

ಆರ್‌ಸಿಬಿ ಬಲಿಷ್ಠ ತಂಡವಾಗಿದ್ದು, ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ನಾಯಕ ರಜತ್ ಪಾಟೀದಾರ್ ಮತ್ತು ಜಿತೇಶ್ ಶರ್ಮಾ ನಂತರದ ಸ್ಥಾನದಲ್ಲಿ ಕಣಕ್ಕಿಳಿಯಲಿದ್ದರೆ ಟಿಮ್ ಡೇವಿಡ್ ಮತ್ತು ರೊಮಾರಿಯೊ ಶೆಫರ್ಡ್ ಫಿನಿಷರ್‌ಗಳ ಪಾತ್ರವನ್ನು ನಿರ್ವಹಿಸುತ್ತಾರೆ. ಆರ್‌ಸಿಬಿಯ ಬ್ಯಾಟಿಂಗ್ ಘಟಕದ ಪ್ರಸ್ತುತ ಬಲವನ್ನು ಗಮನಿಸಿದರೆ, ಸೀಫರ್ಟ್‌ಗೆ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವುದು ಕಷ್ಟಕರವಾಗಬಹುದು.

ಬೌಲಿಂಗ್ ವಿಭಾಗದಲ್ಲಿ, ಕೃನಾಲ್ ಪಾಂಡ್ಯ ವಿಶ್ವಾಸಾರ್ಹ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ. ಆದರೆ ಸುಯಾಶ್ ಶರ್ಮಾ ಬ್ಯಾಟ್ಸ್‌ಮನ್‌ಗಳಿಗೆ ಕಠಿಣ ಬೆಂಬಲ ನೀಡುವಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದಾಗ್ಯೂ, ಜೋಶ್ ಹೇಜಲ್​ವುಡ್ ಅವರ ಫಿಟ್‌ನೆಸ್ ಬಗ್ಗೆ ಅನಿಶ್ಚಿತತೆಯು ಆರ್‌ಸಿಬಿಗೆ ಪ್ರಮುಖ ಕಳವಳವಾಗಿದೆ. ಈ ಋತುವಿನಲ್ಲಿ ಆರ್‌ಸಿಬಿಯ ಅತ್ಯಧಿಕ ವಿಕೆಟ್ ಪಡೆದ ಹೇಜಲ್‌ವುಡ್ 18 ವಿಕೆಟ್‌ ಪಡೆಯುವ ಮೂಲಕ ಪರ್ಪಲ್​ ಕ್ಯಾಪ್ ರೇಸ್​ನಲ್ಲಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರಿಷ್ಕೃತ ತಂಡ

ಟಿಮ್ ಸೀಫರ್ಟ್, ಜೇಕಬ್ ಬೆಥೆಲ್ (ಮೇ 23ರ ನಂತರ ತಂಡದಿಂದ ಹೊರಕ್ಕೆ) ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ರಜತ್ ಪಾಟೀದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಲುಂಗಿ ಎನ್‌ಗಿಡಿ (ಮೇ 26ರ ತನಕ), ಬ್ಲೆಸಿಂಗ್ ಮುಜರಬಾನಿ, ಯಶ್ ದಯಾಳ್, ಸುಯಾಶ್ ಶರ್ಮಾ, ರಸಿಕ್ ಸಮಾಮ್ ದಾರ್, ಮನೋಜ್ ಭಾಂಡಗೆ, ಲಿಯಾಮ್ ಲಿವಿಂಗ್ ಸ್ಟೋನ್, ಸ್ವಪ್ನಿಲ್ ಸಿಂಗ್, ಫಿಲಿಪ್ ಸಾಲ್ಟ್, ಮೋಹಿತ್ ರಥಿ, ಸ್ವಸ್ತಿಕ್ ಚಿಕಾರಾ, ಅಭಿನಂದನ್ ಸಿಂಗ್, ನುವಾನ್ ತುಷಾರ, ಜೋಶ್ ಹೇಜಲ್​ವುಡ್.

ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.