ಬೆಂಗಳೂರಿನಲ್ಲಿ 'ಕನ್ನಡ ಜಿಲೇಬಿ' ಅಭಿಯಾನ ಆರಂಭಿಸಿದ ಆರ್‌ಸಿಬಿ; ಕನ್ನಡ ಕಲಿಯುವ ಆಸಕ್ತಿ ಇರುವವರಿಗೆ ಇದು ಬೆಸ್ಟ್ ಗಿಫ್ಟ್
ಆರ್‌ಸಿಬಿ ತಂಡವು ಕನ್ನಡ ಭಾಷೆಯ ಕುರಿತಾಗಿ ಅಭಿಯಾನವೊಂದು ನಡೆಯುತ್ತಿದೆ. ಈ ಅಭಿಯಾನವು ಕನ್ನಡೇತರ ಅಭಿಮಾನಿಗಳಿಗೆ ಸ್ಥಳೀಯ ಭಾಷೆಯನ್ನು ಸರಳವಾಗಿ ಕಲಿಯಲು ಅವಕಾಶ ಮಾಡಿಕೊಡುತ್ತದೆ. ಸಿಹಿಯಾದ ಜಿಲೇಬಿ ಸವಿದು ಕನ್ನಡ ಕಲಿಯಬಹುದು.

ಕನ್ನಡ ಒಂದು ಸುಂದರ ಭಾಷೆ. ಭಾರತದ ಭಾಷೆಗಳ ರಾಣಿ ಎಂದು ಕರೆಯಲ್ಪಡುವ ಭಾಷೆ ಕನ್ನಡಿಗರಿಗೆ ಮಾತ್ರವಲ್ಲದೆ ಹೊರಗಿನವರಿಗೂ ಇಷ್ಟ. ಬೆಂಗಳೂರಿನಲ್ಲಿ ಭಾಷೆಯ ಬಗ್ಗೆ ಆಗಾಗ ಚರ್ಚೆಗಳು ನಡೆಯುವುದು ಬೆಳಕಿಗೆ ಬರುತ್ತದೆ. ಈ ನಡುವೆ ಕನ್ನಡ ಕಲಿಯಲು ಆಸಕ್ತಿ ತೋರುವವರೂ ಇದ್ದಾರೆ. ಇದೀಗ, ಐಪಿಎಲ್‌ನ ಜನಪ್ರಿಯ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಪಂದ್ಯಗಳ ಜೊತೆಗೆ ಕನ್ನಡ ಭಾಷೆ ಕಲಿಕೆಗೆ ಜನರನ್ನು ಪ್ರೇರೇಪಿಸುತ್ತಿದೆ. ಇದಕ್ಕಾಗಿ ಭಿನ್ನ ಅಭಿಯಾನ ಕೈಗೊಂಡಿದೆ. ಕನ್ನಡ ಅಕ್ಷರ ಮತ್ತು ಪದಗಳಿರುವ ಜಿಲೇಬಿಗಳನ್ನು ಬಳಸಿಕೊಂಡು ಅಭಿಮಾನಿ ಬಳಗದಲ್ಲಿ ಕನ್ನಡ ಭಾಷೆ ಕಲಿಕೆಗೆ ಉತ್ತೇಜಿಸಲು ಮುಂದಾಗಿದೆ. ಯಾಕೆಂದರೆ ಕನ್ನಡ ಭಾಷೆ ಜಿಲೇಬಿಯಷ್ಟೇ ಸಿಹಿ ಅಲ್ವಾ.
ಆರ್‌ಸಿಬಿ ತಂಡವು ಐಪಿಎಲ್ ಜೊತೆಜೊತೆಗೆ ಹಲವು ಅಭಿಯಾನಗಳನ್ನು ನಡೆಸಿ ಗಮನ ಸೆಳೆದಿದೆ. ಇದೇ ಮೊದಲ ಬಾರಿಗೆ ಎನ್ನುವಂತೆ ಕನ್ನಡ ಭಾಷೆಯ ಕುರಿತಾಗಿ ಭಾರತೀಯ ಕ್ರಿಕೆಟ್‌ನಲ್ಲಿ ಅಭಿಯಾನವೊಂದು ನಡೆಯುತ್ತಿದೆ. ಈ ಅಭಿಯಾನವು ಅಭಿಮಾನಿಗಳಿಗೆ ಸ್ಥಳೀಯ ಭಾಷೆಯನ್ನು ಸರಳವಾಗಿ ಕಲಿಯಲು ಅವಕಾಶ ಮಾಡಿಕೊಡುತ್ತದೆ. ಕನ್ನಡವನ್ನು ಹೊರಗಿನವರಿಗೆ ಗ್ರಹಿಸುವುದು ತುಸು ಕಷ್ಟ ಎಂದು ಹೇಳಲಾಗುತ್ತದೆ. ಇದಕ್ಕಾಗಿ ಆರ್‌ಸಿಬಿ ಫ್ರಾಂಚೈಸಿಯು ಆಹಾರ ಉತ್ಪನ್ನದ ಮೂಲಕ ಭಿನ್ನವಾಗಿ ಕನ್ನಡ ಕಲಿಸಲು ಮುಂದಾಗಿದೆ.
ಏಪ್ರಿಲ್ 8 ರಿಂದ 11ರವರೆಗೆ ಬೆಂಗಳೂರಿನ ಆರ್‌ಸಿಬಿ ಬಾರ್ ಆಂಡ್ ಕೆಫೆಯಲ್ಲಿ ಕನ್ನಡ ಲಿಪಿಯ ಆಕಾರದಲ್ಲಿ ಮಾಡಲಾದ ಜಿಲೇಬಿಗಳನ್ನು ಮಾರಾಟ ಮಾಡಲಾಗುತ್ತದೆ. ಇಂಥಾ ಜಿಲೇಬಿಗಳು ಸೀಮಿತ ಸಂಖ್ಯೆಯಲ್ಲಿ ಮಾತ್ರವೇ ಲಭ್ಯವಿರಲಿದೆ. ಪ್ರತಿ ಪ್ಯಾಕ್ ಮೇಲೆ ಸ್ಕ್ಯಾನ್ ಮಾಡಬಹುದಾದ ಕೋಡ್ ಇರುತ್ತದೆ. ಸ್ಕ್ಯಾನ್ ಮಾಡಿದಾಗ ಆರ್‌ಸಿಬಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಇರುವ ಕನ್ನಡ ಕಲಿಕೆಯ ವಿಡಿಯೊಗಳು ಅನ್‌ಲಾಕ್ ಆಗುತ್ತವೆ. ಅಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ಟಿಮ್ ಡೇವಿಡ್ ಮತ್ತು ಯಶ್ ದಯಾಳ್ ಅವರಂತಹ ಆಟಗಾರರು ಕನ್ನಡ ಕಲಿಕೆಗೆ ಆರಂಭಿಕ ಹಂತದ ಪಾಠ ಮಾಡುತ್ತಾರೆ.
ಕನ್ನಡೇತರ ಸ್ನೇಹಿತರಿಗೆ ಉಡುಗೊರೆ ನೀಡಿ
ಈ ವಿಶೇಷ ಅಭಿಯಾನವು ಕನ್ನಡ ಕಲಿಯುವ ಆಸಕ್ತಿಯುಳ್ಳ ಕನ್ನಡೇತರ ಅಭಿಮಾನಿಗಳಿಗಾಗಿ ಆರ್‌ಸಿಬಿ ಪ್ರಾಯೋಜಿಸುತ್ತಿದೆ. ಇಲ್ಲಿ 1,000 ಉಚಿತ ಕನ್ನಡ ಭಾಷಾ ಸೆಷನ್‌ಗಳಿವೆ. ತಾವಾಗಿಯೇ ಕಲಿಯಲು ಇಚ್ಛಿಸುವ ಅಥವಾ ಬೆಂಗಳೂರಿನಲ್ಲಿ ವಾಸಿಸುವ ಹೊರರಾಜ್ಯಗಳ ಸ್ನೇಹಿತರಿಗೆ ಉಡುಗೊರೆ ನೀಡಲು ಇದು ಉತ್ತಮ ಐಡಿಯಾ.
ಇಲ್ಲಿದೆ ವಿಡಿಯೋ
“ಈ ನಗರವು ದೇಶದ ಮೂಲೆ ಮೂಲೆಗಳ ಜನರನ್ನು ಸ್ವಾಗತಿಸಿದೆ” ಎಂದು ಆರ್‌ಸಿಬಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಮೆನನ್ ಹೇಳಿದ್ದಾರೆ. "ಈ ಅಭಿಯಾನವು ಬೆಂಗಳೂರು ಮತ್ತು ಅದರ ಸಂಸ್ಕೃತಿಗೆ ನಮ್ಮ ಗೌರವವಾಗಿದೆ. ಕನ್ನಡ ಲಿಪಿಯನ್ನು ಸಿಹಿತಿಂಡಿಯಾಗಿ ಪರಿವರ್ತಿಸುವ ಮೂಲಕ, ನಾವು ಅಕ್ಷರಶಃ ಭಾಷೆಯನ್ನು ಸವಿಯಲು ಅಭಿಮಾನಿಗಳನ್ನು ಆಹ್ವಾನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ಅಭಿಯಾನವು ಮಾರ್ಕೆಟಿಂಗ್ ಗಿಮಿಕ್ ಅಂತೂ ಅಲ್ಲ. ತಂಡಕ್ಕೆ ಇರುವ ವೈವಿಧ್ಯಮಯ ಅಭಿಮಾನಿ ಬಳಗದೊಂದಿಗೆ ಆಳವಾದ ಭಾವನಾತ್ಮಕ ಸಂಪರ್ಕ ಹೊಂದುವ ಪ್ರಯತ್ನವಾಗಿದೆ ಎಂದು ತಂಡ ಹೇಳಿದೆ.
