ಕನ್ನಡ ಸುದ್ದಿ  /  Cricket  /  Rcb Swot Analysis Ipl 2024 Royal Challengers Bangalore Strengths Weaknesses Opportunities And Threats Virat Kohli Jra

RCB SWOT Analysis: ಬಲಿಷ್ಠ ಬ್ಯಾಟಿಂಗ್‌ ಲೈನಪ್‌ ತಂಡಕ್ಕೆ ಸ್ಪಿನ್‌ ಬಳಗದ್ದೇ ಭೀತಿ;‌ ಆರ್‌ಸಿಬಿ ತಂಡದ ಬಲಾಬಲಗಳ ವಿಶ್ಲೇಷಣೆ

RCB SWOT Analysis: ಐಪಿಎಲ್‌ನಲ್ಲಿ 16 ಆವೃತ್ತಿಗಳಲ್ಲಿ ಆಡಿದ್ದರೂ, ಆರ್‌ಸಿಬಿ ತಂಡಕ್ಕೆ ಕಪ್‌ ಮಾತ್ರ ಗಗನ ಕುಸುಮವಾಗಿದೆ. ಪ್ರಶಸ್ತಿ ಬರವನ್ನು ಕೊನೆಗೊಳಿಸಲು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಯಾರಿ ನಡೆಸುತ್ತಿದೆ. ಪ್ರಸಕ್ತ ಆವೃತ್ತಿಯಲ್ಲಿ ತಂಡದ ಮೊದಲ ಪಂದ್ಯಕ್ಕೂ ಮುನ್ನ ತಂಡದ ಬಲಾಬಲಗಳ ವಿಮರ್ಶೆ ಮಾಡೋಣ.

ಆರ್‌ಸಿಬಿ ತಂಡದ ಬಲಾಬಲಗಳ ವಿಶ್ಲೇಷಣೆ
ಆರ್‌ಸಿಬಿ ತಂಡದ ಬಲಾಬಲಗಳ ವಿಶ್ಲೇಷಣೆ

ನಿಷ್ಠಾವಂತ ಅಭಿಮಾನಿ ಬಳಗವನ್ನು ಹೊಂದಿರುವ ಐಪಿಎಲ್‌ನ ಅತ್ಯಂತ ಜನಪ್ರಿಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore). 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮೂಲಕ ಟೂರ್ನಿಯಲ್ಲಿ ಹೊಸ ಹೆಸರು, ಹೊಸ ಜೆರ್ಸಿ, ಹೊಸ ಭರವಸೆಯೊಂದಿಗೆ ‘ಹೊಸ ಅಧ್ಯಾಯ’ ಆರಂಭಿಸಲು ಮುಂದಾಗಿರುವ ಆರ್​ಸಿಬಿ, ಅದೃಷ್ಟ ಪರೀಕ್ಷೆಗೆ ಇಳಿದಿದೆ. ಆ ಮೂಲಕ ಹೊಸ ಚರಿತ್ರೆ ಸೃಷ್ಟಿಸಲು ಹೊಸ ಹೆಜ್ಜೆಯನ್ನಿಟ್ಟಿದೆ.ದಾಖಲೆಯ 8 ಬಾರಿ ಪ್ಲೇಆಫ್ ಅರ್ಹತೆ ಪಡೆದು, ಮೂರು ಬಾರಿ ಫೈನಲ್ ತಲುಪಿದರೂ, ಆ ಒಂದು ಕಪ್‌ ಎತ್ತಿ ಹಿಡಿದು ಸಂಭ್ರಮಿಸಲು ರೆಡ್​ ಆರ್ಮಿಗೆ ಇನ್ನೂ ಸಾಧ್ಯವಾಗಿಲ್ಲ. ಸತತ 16 ವರ್ಷಗಳಿಂದ ಗಗನ ಕುಸುಮವಾಗಿರುವ ಐಪಿಎಲ್‌ ಟ್ರೋಫಿ ಗೆಲ್ಲಲು, ಹೊಸತನದೊಂದಿಗೆ ಮೈಕೊಡವಿ ಹೊರಟಿರುವ ಫಾಫ್‌ ಡುಪ್ಲೆಸಿಸ್‌ ತಂಡ ಹೇಗಿದೆ? ತಂಡದ ಬಲಾಬಲಗಳೇನು? ಈ ಕುರಿತು ಸವಿವರವಾಗಿ ತಿಳಿಯೋಣ ಬನ್ನಿ.

2008ರಿಂದ ನಾಯಕತ್ವ ಬದಲಾವಣೆಯೊಂದಿಗೆ ಆಡುತ್ತಾ ಬಂದಿರುವ ರಾಯಲ್‌ ಚಾಲೆಂಜರ್ಸ್‌, ಕಳೆದ ಎರಡು ಋತುಗಳಲ್ಲಿ ದಕ್ಷಿಣ ಆಫ್ರಿಕಾದ ಮಾಜಿ‌ ಕ್ರಿಕೆಟಿಗ ಫಾಫ್ ಡು ಪ್ಲೆಸಿಸ್ ಸಾರಥ್ಯದಲ್ಲಿ ಅಖಾಡಕ್ಕಿಳಿಯುತ್ತಿದೆ. ಪ್ರತಿ ಬಾರಿಯಂತೆ ಈ ಬಾರಿ ಕೂಡ ಕಪ್‌ ಗೆಲುವಿಗೆ ಮುಂದಾಗಿರುವ ಆರ್‌ಸಿಬಿಯು, ಒಂದು ತಂಡವಾಗಿ ಆಲ್‌ರೌಂಡ್‌ ತಂಡವಾಗಿಲ್ಲ ಎಂಬುದು ಸತ್ಯ.

ಮಾರ್ಚ್ 22ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2024ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಕಣಕ್ಕಿಳಿಯುತ್ತಿದೆ. ಹಾಲಿ ಚಾಂಪಿಯನ್‌ ವಿರುದ್ಧ ಶುಭಾರಂಭದ ನಿರೀಕ್ಷೆಯಲ್ಲಿರುವ ಫಾಫ್‌ ಪಡೆ, ಹೊಸ ಆಶಾವಾದ ಮತ್ತು ಸಂಕಲ್ಪದೊಂದಿಗೆ ಕಣಕ್ಕಿಳಿಯುವುದು ಖಚಿತ.

ಸಾಮರ್ಥ್ಯ (Strength)

ಆರ್‌ಸಿಬಿ ತಂಡದ ಬ್ಯಾಟಿಂಗ್ ಕ್ರಮಾಂಕದ ಸಾಮರ್ಥ್ಯದ ಬಗ್ಗೆ ಎರಡು ಮಾತಿಲ್ಲ. ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಸ್ಫೋಟಕ ದಾಂಡಿಗರು. ಈ ನಾಲ್ವರ ಅನುಭವ, ಕ್ರೀಸ್‌ಕಚ್ಚಿ ಆಡುವ ಸಾಮರ್ಥ್ಯ ಹಾಗೂ ಸಂದರ್ಭಕ್ಕೆ ತಕ್ಕಂತೆ ಸ್ಫೋಟಿಸುವ ಸಾಧ್ಯತೆಯನ್ನು ತಳ್ಳಿ ಹಾಕಿವಂತಿಲ್ಲ. ಡು ಪ್ಲೆಸಿಸ್ ಚುರುಕಾದ ನಾಯಕತ್ವ, ಕೊಹ್ಲಿಯ ಅನುಭವ ಹಾಗೂ ಆಟಗಾರರ ಹುರಿದುಂಬಿಸುವ ಗುಣ, ಪರಿಸ್ಥಿತಿಗೆ ಅನುಗುಣವಾಗಿ ಆಟದ ವೈಖರಿ ಬದಲಾಯಿಸಬಲ್ಲ ಪಾಟೀದಾರ್ ಪವರ್‌, ಮ್ಯಾಕ್ಸ್‌ವೆಲ್‌ ಮ್ಯಾಕ್ಸಿಮಮ್‌ ಶೋ ಆರ್‌ಸಿಬಿ ಪಂದ್ಯದಲ್ಲಿ ಇದ್ದೇ ಇರಲಿದೆ. ದಿನೇಶ್‌ ಕಾರ್ತಿಕ್‌ ಫಿನಿಶಿಂಗ್‌ ಸಿಕ್ಕರೆ ಬ್ಯಾಟಿಂಗ್‌ ಇನ್ನಷ್ಟು ಪರ್ಫೆಕ್ಟ್ ಆಗಲಿದೆ.

ಇದನ್ನೂ ಓದಿ | ಐಪಿಎಲ್​ ಮಧ್ಯದಲ್ಲೇ ಧೋನಿ ಕ್ರಿಕೆಟ್​ಗೂ ವಿದಾಯ; ಹೆಡ್​ಕೋಚ್​ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ ಸಿಎಸ್​ಕೆ ಮಾಜಿ ನಾಯಕ?

ಈ ಬಾರಿ ತಂಡದ ಬ್ಯಾಟಿಂಗ್‌ಗೆ ಮತ್ತಷ್ಟು ಬಲ ಬಂದಿದ್ದು, ಆಸೀಸ್‌ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಕೆಳ ಕ್ರಮಾಂಕದಲ್ಲಿ ಸಿಡಿಯಲಿದ್ದಾರೆ. ಕಳೆದ ವರ್ಷ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಗ್ರೀನ್, ತಮ್ಮ ಚೊಚ್ಚಲ ಐಪಿಎಲ್‌ ಆವೃತ್ತಿಯಲ್ಲೇ 16 ಪಂದ್ಯಗಳಲ್ಲಿ 452 ರನ್‌ ಸಿಡಿಸಿದ್ದರು. ಇದರಲ್ಲಿ ಒಂದು ಶತಕವೂ ಸೇರಿದೆ. ಹೀಗಾಗಿ ಆರ್‌ಸಿಬಿಯ ಬ್ಯಾಟಿಂಗ್‌ ಲೈನಪ್‌ ಬಲಿಷ್ಠವಾಗಿದೆ ಎಂದರೆ ಅತಿಶಯೋಕ್ತಿ ಅಲ್ಲ.

ದೌರ್ಬಲ್ಯ (Weakness)

ಬಲಿಷ್ಠ ಬ್ಯಾಟಿಂಗ್‌ಗೆ ಹೋಲಿಸಿದರೆ, ತಂಡದ ಬೌಲಿಂಗ್‌ ಸಮತೋಲನ ಕಳೆದುಕೊಂಡಿರುವುದು ಸುಲಭವಾಗಿ ಅರ್ಥವಾಗುತ್ತಿದೆ. ಕಳೆದ ವರ್ಷ ತಂಡದಲ್ಲಿದ್ದ ಜೋಶ್ ಹೇಜಲ್‌ವುಡ್, ವನಿಂದು ಹಸರಂಗ ಅವರಂಥ ವಿಶ್ವದರ್ಜೆಯ ಬೌಲರ್‌ಗಳನ್ನು ತಂಡದಿಂದ ಕೈಬಿಟ್ಟು ಫ್ರಾಂಚೈಸ್ ಅಚ್ಚರಿ ಮೂಡಿಸಿತ್ತು. ಇದೇ ವೇಳೆ ಹರ್ಷಲ್ ಪಟೇಲ್ ಕೂಡಾ ಹೊರಬಿದ್ದರು. ಹರಾಜಿನಲ್ಲಿ ತಂಡವು ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಯಶ್ ದಯಾಳ್ ಮತ್ತು ಟಾಮ್ ಕರನ್ ಅವರನ್ನು ತನ್ನ ವೇಗದ ಬತ್ತಳಿಕೆಗೆ ಸೇರಿಸಿಕೊಂಡಿದೆ. ಆದರೆ ಕಳೆದ ಬಾರಿಯ ಧಮ್‌ ತಂಡದಲ್ಲಿ ಕಾಣುತ್ತಿಲ್ಲ. ಮೊಹಮ್ಮದ್ ಸಿರಾಜ್ ಆರ್‌ಸಿಬಿಯ ಬೌಲಿಂಗ್‌ ದಾಳಿಯನ್ನು ಮುನ್ನಡೆಸಲಿದ್ದಾರೆ. ಆದರೆ, ಎಲ್ಲಾ ಐದು ಬೌಲರ್‌ಗಳ ಐಪಿಎಲ್ ಎಕಾನಮಿ ದರ 8.5ಕ್ಕಿಂತ ಕಡಿಮೆಯಿಲ್ಲ ಎಂಬುದು ಪ್ರಮುಖ ಅಂಶ.

ತಂಡದ ಸ್ಪಿನ್‌ ಬಳಗದ ಸ್ಥಿತಿ ಘೋರವಾಗಿದೆ. ತಂಡದಲ್ಲಿ ಗುಣಮಟ್ಟದ ಹಾಗೂ ಅನುಭವಿ ಸ್ಪಿನ್ನರ್‌ಗಳೇ ಇಲ್ಲ. ಕರಣ್ ಶರ್ಮಾ ಮತ್ತು ಹಿಮಾಂಶು ಶರ್ಮಾ ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಹೆಚ್ಚು ಗುರುತಿಸಲ್ಪಡುವ ಆಟಗಾರರು. ಮ್ಯಾಕ್ಸ್‌ವೆಲ್‌ ತಂಡಕ್ಕೆ ಆಗಾಗ ನೆರವಾಗಲಿದ್ದಾರೆ. ಹರಾಜಿನಲ್ಲಿ ವನಿಂದು ಹಸರಂಗ ಕೌಶಲ್ಯಕ್ಕೆ ಸರಿಹೊಂದುವ ಬದಲಿ ಸ್ಪಿನ್ನರ್‌ ಆರಿಸುವಲ್ಲಿ ಫ್ರಾಂಚೈಸ್ ವಿಫಲವಾಯ್ತು. ತಂಡದ ಇತರ ಸ್ಪಿನ್ನರ್‌ಗಳಲ್ಲಿ ಈವರೆಗೆ 7 ಐಪಿಎಲ್ ಪಂದ್ಯಗಳನ್ನು ಆಡಿರುವ 33 ವರ್ಷದ ಸ್ವಪ್ನಿಲ್ ಸಿಂಗ್ ಎಷ್ಟು ಪರಿಣಾಮಕಾರಿಯಾಗಿ ಆಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

ಅವಕಾಶ (Opportunity)

ಈ ಋತುವಿನಲ್ಲಿ ವಿಲ್ ಜಾಕ್ಸ್, ಕ್ಯಾಮರೂನ್ ಗ್ರೀನ್ ಮತ್ತು ಅನುಜ್ ರಾವತ್ ಅವರಂಥ ಪ್ರತಿಭೆಗಳನ್ನು ಪೋಷಿಸುವುದು ಆರ್‌ಸಿಬಿ ತಂಡದ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ. ತಂಡದಲ್ಲಿ ಅನುಭವಿ ಆಟಗಾರರ ಬಳಗವಿದ್ದು, ಬಹುತೇಕರು ತಮ್ಮ ವೃತ್ತಿಜೀವನದ ಅಂತಿಮ ಹಂತದಲ್ಲಿದ್ದಾರೆ. ಹೀಗಾಗಿ ಭರವಸೆಯ ಯುವ ಆಟಗಾರರಿಗೆ ಮಾರ್ಗದರ್ಶನ ಅವಶ್ಯವಾಗಿದೆ. ನಾಯಕ ಫಾಫ್ ಡು ಪ್ಲೆಸಿಸ್ ಈ ವರ್ಷ 40ನೇ ವರ್ಷಕ್ಕೆ ಕಾಲಿಡಲಿದ್ದು, ವಿರಾಟ್ ಕೊಹ್ಲಿ ಈಗಾಗಲೇ 35 ವರ್ಷ ಪೂರೈಸಿದ್ದಾರೆ. ಮ್ಯಾಕ್ಸ್‌ವೆಲ್ ಕೂಡ ಅಕ್ಟೋಬರ್‌ನಲ್ಲಿ 36ನೇ ವರ್ಷಕ್ಕೆ ಕಾಲಿಡಲಿದ್ದು, ದಿನೇಶ್ ಕಾರ್ತಿಕ್ ವಿದಾಯದ ಸುಳಿವು ನೀಡಿದ್ದಾರೆ. ದಿಗ್ಗಜ ಆಟಗಾರರು ಮುಂದಿನ ಪೀಳಿಗೆಯ ಆಟಗಾರರಿಗೆ ಪರಂಪರೆಯನ್ನು ವರ್ಗಾಯಿಸುವ ಅತಿ ದೊಡ್ಡ ಅವಕಾಶವಿದೆ.

ಭೀತಿ (Threat)

ಪ್ರತಿ ಆವೃತ್ತಿಯಲ್ಲೂ ಹೊಸ ಜೋಶ್‌ನಿಂದ ಆಡುವ ಆರ್‌ಸಿಬಿ, ಪ್ರತಿ ಬಾರಿಯು ಹತಾಶೆ ಹಾಗೂ ನಿರಾಶೆ ಅನುಭವಿಸುತ್ತಲೇ ಬಂದಿದೆ. ತಂಡದಲ್ಲಿ ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್, ವಿರಾಟ್ ಕೊಹ್ಲಿ ಅವರಂಥ ಸ್ಫೋಟಕ ಸೂಪರ್‌ಸ್ಟಾರ್‌ಗಳಿದ್ದರೂ ಕಪ್‌ ಗೆಲುವು ಸಾಧ್ಯವಾಗಿಲ್ಲ. ಕಳೆದ ಆವೃತ್ತಿಯಲ್ಲೂ ಕೊಹ್ಲಿ, ಮ್ಯಾಕ್ಸ್‌ವೆಲ್, ಡುಪ್ಲೆಸಿಸ್, ಹೇಜಲ್‌ವುಡ್‌, ಹಸರಂಗ ಅವರಂಥ ಸ್ಟಾರ್‌ ಆಟಗಾರರಿದ್ದರೂ, ಪ್ಲೇಆಫ್‌ ಅರ್ಹತೆ ಸಾಧ್ಯವಾಗಲಿಲ್ಲ. ಹೀಗಾಗಿ, ಮೇಲ್ನೋಟಕ್ಕೆ ತಂಡ ಎಷ್ಟೇ ಬಲಿಷ್ಠವಾಗಿದ್ದರೂ, ನಿರ್ಣಾಯಕ ಹಂತದಲ್ಲಿ ಎಡವುವುದು ಆರ್‌ಸಿಬಿಗಿರುವ ದೊಡ್ಡ ಭೀತಿ.

ಟೂರ್ನಿಗೂ ಮುಂಚಿತವಾಗಿ ನಡೆದ ಹರಾಜಿನಲ್ಲಿ ಫ್ರಾಂಚೈಸಿಯು ಹಸರಂಗ, ಹರ್ಷಲ್ ಪಟೇಲ್ ಮತ್ತು ಹೇಜಲ್‌ವುಡ್ ಅವರಂಥ ಗುಣಮಟ್ಟದ ಆಟಗಾರರನ್ನು ಕಡ್ಡಿ ಮುರಿದಂತೆ ತಂಡದಿಂದ ಕೈಬಿಟ್ಟಿದ್ದು, ತಂಡದ ಕಪ್‌ ಗೆಲುವಿಗೆ ದೊಡ್ಡ ಬೆದರಿಕೆಯಾಗಿ ಉಳಿಯುವುದು ಖಚಿತ. ಕೆಳ ಕ್ರಮಾಂಕದಲ್ಲಿ ಫಿನಿಶರ್‌ ಆಗಿ ಆಡುವ ದಿನೇಶ್ ಕಾರ್ತಿಕ್ ಅವರ ಮೇಲಿನ ಅವಲಂಬನೆಯೂ ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆ ದಟ್ಟವಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಆಡುವ ಬಳಗ

ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಕ್ಯಾಮೆರೂನ್ ಗ್ರೀನ್, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ಅಲ್ಜಾರಿ ಜೋಸೆಫ್/ಲಾಕಿ ಫರ್ಗುಸನ್, ವಿಜಯ್ ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

ಆರ್‌ಸಿಬಿ ತಂಡ

ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಾಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರರ್, ಕರಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ಡಾಗರ್, ವಿಜಯಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟಾಪ್ಲೆ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೂನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್.

IPL_Entry_Point