ಆರ್​​ಸಿಬಿ 16 ವರ್ಷಗಳ ಟ್ರೋಫಿ ಬರ ನೀಗಿಸಲು ಎರಡೇ ಹೆಜ್ಜೆ ಬಾಕಿ; ಎಲಿಮಿನೇಟರ್​​ನಲ್ಲಿ​ ಬಲಿಷ್ಠ ಮುಂಬೈಗೆ ಸವಾಲೆಸೆಯಲು ಸಜ್ಜು
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್​​ಸಿಬಿ 16 ವರ್ಷಗಳ ಟ್ರೋಫಿ ಬರ ನೀಗಿಸಲು ಎರಡೇ ಹೆಜ್ಜೆ ಬಾಕಿ; ಎಲಿಮಿನೇಟರ್​​ನಲ್ಲಿ​ ಬಲಿಷ್ಠ ಮುಂಬೈಗೆ ಸವಾಲೆಸೆಯಲು ಸಜ್ಜು

ಆರ್​​ಸಿಬಿ 16 ವರ್ಷಗಳ ಟ್ರೋಫಿ ಬರ ನೀಗಿಸಲು ಎರಡೇ ಹೆಜ್ಜೆ ಬಾಕಿ; ಎಲಿಮಿನೇಟರ್​​ನಲ್ಲಿ​ ಬಲಿಷ್ಠ ಮುಂಬೈಗೆ ಸವಾಲೆಸೆಯಲು ಸಜ್ಜು

WPL 2024 Eliminator MI vs RCB : ಡಬ್ಲ್ಯುಪಿಎಲ್​ 2024 ರ ಎಲಿಮಿನೇಟರ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಸೆಣಸಾಟ ನಡೆಸಲಿದೆ.

ಆರ್​​ಸಿಬಿ 16 ವರ್ಷಗಳ ಟ್ರೋಫಿ ಬರ ನೀಗಿಸಲು ಎರಡೇ ಹೆಜ್ಜೆ ಬಾಕಿ
ಆರ್​​ಸಿಬಿ 16 ವರ್ಷಗಳ ಟ್ರೋಫಿ ಬರ ನೀಗಿಸಲು ಎರಡೇ ಹೆಜ್ಜೆ ಬಾಕಿ

ಮಹಿಳಾ ಪ್ರೀಮಿಯರ್​ ಲೀಗ್​ನ 2ನೇ ಆವೃತ್ತಿಯು ಕೊನೆಯ ಹಂತಕ್ಕೆ ಬಂದು ನಿಂತಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ನೇರವಾಗಿ ಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಮಾರ್ಚ್​ 15ರಂದು ನಡೆಯುವ ಎಲಿಮಿನೇಟರ್​​​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ಗೆದ್ದವರು ಫೈನಲ್​​​​ನಲ್ಲಿ ಡೆಲ್ಲಿ ವಿರುದ್ಧ ಸೆಣಸಾಟ ನಡೆಸಲಿದ್ದಾರೆ.

ಎಲಿಮಿನೇಟರ್​ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಜರುಗಲಿದೆ. 16 ವರ್ಷಗಳಿಂದ ಪ್ರಶಸ್ತಿ ಬರ ಎದುರಿಸುತ್ತಿರುವ ಆರ್​ಸಿಬಿ ಟ್ರೋಫಿ ಗೆಲ್ಲಲು ಸುವರ್ಣಾವಕಾಶ ಸಿಕ್ಕಿದೆ. ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿ ಇತಿಹಾಸ ನಿರ್ಮಿಸಲು ಎರಡು ಹೆಜ್ಜೆಯಷ್ಟೇ ಬಾಕಿ ಇದೆ. ಅದಕ್ಕಾಗಿ ಎಲಿಮಿನೇಟರ್​​ನಲ್ಲಿ ಮುಂಬೈ ಮತ್ತು ಫೈನಲ್​​ನಲ್ಲಿ ಡೆಲ್ಲಿ ತಂಡವನ್ನು ಮಣಿಸಬೇಕಿದೆ. ಒಂದು ವೇಳೆ ಇದು ಸಾಧ್ಯವಾದರೆ ಕೋಟ್ಯಂತರ ಅಭಿಮಾನಿಗಳ ಕನಸು ನನಸಾಗಲಿದೆ.

ಆರ್​ಸಿಬಿ ಮಹಿಳೆಯರ ತಂಡವೇ ಚೊಚ್ಚಲ ಟ್ರೋಫಿ ಗೆಲ್ಲುತ್ತಾ?

ಪುರುಷರ ಆರ್​​ಸಿಬಿ ತಂಡವು 2008ರಿಂದ ಐಪಿಎಲ್​ ಆಡುತ್ತಿದೆ. ಆದರೆ 3 ಬಾರಿ ಫೈನಲ್ ಪ್ರವೇಶಿಸಿದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಪ್ರತಿ ಆವೃತ್ತಿಯೂ ತೀವ್ರ ನಿರಾಶೆಯೊಂದಿಗೆ ಐಪಿಎಲ್ ಮುಗಿಸುವ ಆರ್​ಸಿಬಿ, 16 ವರ್ಷಗಳಿಂದ ಟ್ರೋಫಿ ಬರ ಎದುರಿಸುತ್ತಿದೆ. ಇದೀಗ ಅಭಿಮಾನಿಗಳು ಸ್ಮೃತಿ ಮಂಧಾನ ಪಡೆಯ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಮಹಿಳೆಯರ ತಂಡವೇ ಆರ್​​ಸಿಬಿಗೆ ಚೊಚ್ಚಲ ಟ್ರೋಫಿ ಗೆದ್ದುಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಎಲಿಮಿನೇಟರ್​​ನಲ್ಲಿ ಮುಂಬೈ ವಿರುದ್ಧ ಆರ್​ಸಿಬಿ ಗೆಲ್ಲುವುದು ಸುಲಭವಲ್ಲ. ಎಲ್ಲಾ ವಿಭಾಗಗಳಲ್ಲೂ ಮುಂಬೈ, ಆರ್​​ಸಿಬಿಗಿಂತ ಹೆಚ್ಚು ಬಲಿಷ್ಠವಾಗಿದೆ. ಎರಡನೇ ಆವೃತ್ತಿಯಲ್ಲಿ ಎರಡೂ ತಂಡಗಳು ಎರಡು ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಆದರೆ ಎದುರಾದ ಮೊದಲ ಪಂದ್ಯದಲ್ಲಿ ಮುಂಬೈ ಗೆದ್ದಿತ್ತು. 2ನೇ ಪಂದ್ಯದಲ್ಲಿ ಆರ್​ಸಿಬಿ ಗೆದ್ದು ಸೇಡು ತೀರಿಸಿಕೊಂಡಿತ್ತು. ಈಗ ಮುಂಬೈ ಅದೇ ಸೇಡು ತೀರಿಸಿಕೊಂಡು 2ನೇ ಬಾರಿಗೆ ಫೈನಲ್ ಪ್ರವೇಶಿಸಲು ಯೋಜನೆ ರೂಪಿಸುತ್ತಿದೆ.

ಕಳೆದ ಪಂದ್ಯದಂತೆ ಪ್ರದರ್ಶನ ನೀಡಬೇಕಿದೆ ಆರ್​ಸಿಬಿ

ಮುಂಬೈ ಪರ ಯಾಸ್ತಿಕಾ ಭಾಟಿಯಾ, ಹೇಲಿ ಮ್ಯಾಥ್ಯೂಸ್ ಭರ್ಜರಿ ಆರಂಭ ಒದಗಿಸಿದರೆ, ನಟಾಲಿ ಸೀವರ್ 3ನೇ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ. ಮತ್ತೊಂದೆಡೆ ನಾಯಕಿ ಹರ್ಮನ್​ಪ್ರೀತ್​ ಕೌರ್ ಸಿಡಿದೆದ್ದರೆ ಬೆಟ್ಟದಂತಹ ಸ್ಕೋರ್​ ಇದ್ದರೂ ಚೇಸ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಹಾಗಾಗಿ ಅವರನ್ನು ಬೇಗನೇ ಕಟ್ಟಿ ಹಾಕಬೇಕಿದೆ. ಇನ್ನು ಅಮೆಲಿಯಾ ಕೇರ್ ಭರ್ಜರಿ ಆಲ್​ರೌಂಡ್ ಆಟ ನೀಡುತ್ತಿರುವುದು ಮುಂಬೈಗೆ ಪ್ಲಸ್ ಆಗಿದೆ. ಬೌಲಿಂಗ್​​​ನಲ್ಲಿ ಶಬ್ನಿಮ್ ಇಸ್ಮಾಯಿಲ್, ಸಾಯಿಕಾ ಇಶಾಕ್ ಮಿಂಚುತ್ತಿದ್ದು, ಎಚ್ಚರಿಕೆಯಿಂದ ಎದುರಿಸಬೇಕಿದೆ.

ಆರ್​ಸಿಬಿ ಪರ ಸ್ಮೃತಿ ಮಂಧಾನ ಅವರ ಬ್ಯಾಟ್ ಸದ್ದು ಮಾಡಬೇಕಿದೆ. ಕಳೆದ ಮೂರು ಪಂದ್ಯಗಳಿಂದ ಅವರು ವಿಫಲರಾಗುತ್ತಿದ್ದಾರೆ. ಆರಂಭಿಕ ಆಟಗಾರ್ತಿಯಾಗಿ ಸೋಫಿ ಮೊಲಿನಿಕ್ಸ್ ಸಹ ತನ್ನ ಸ್ಟ್ರೈಕ್​ರೇಟ್ ಹೆಚ್ಚಿಸಿಕೊಳ್ಳಲು ಅಬ್ಬರಿಸಬೇಕಿದೆ. ಸದ್ಯ ಎಲ್ಲಿಸ್ ಪೆರ್ರಿ ಮತ್ತು ರಿಚಾ ಘೋಷ್ ಭರ್ಜರಿ ಫಾರ್ಮ್​ನಲ್ಲಿದ್ದು ತಂಡದ ಬಲ ಹೆಚ್ಚಿಸಿದೆ. ಆದರೆ ಸೋಫಿ ಡಿವೈನ್ ಒಂದು ಬಾರಿಯೂ ದೊಡ್ಡ ಇನ್ನಿಂಗ್ಸ್ ಕಟ್ಟಿಲ್ಲ. ಅವರು ಎಲಿಮಿನೇಟರ್​​ನಲ್ಲಿ ಮಿಂಚಿದರೆ, ಆರ್​​ಸಿಬಿ ಫೈನಲ್​ಗೇರುವುದು ಖಚಿತ. ಬೌಲಿಂಗ್​​ನಲ್ಲಿ ರೇಣುಕಾ ಸಿಂಗ್​ ಕಳಪೆ ಬೌಲಿಂಗ್ ಪ್ರದರ್ಶನ ನೀಡುತ್ತಿರುವುದು ಹಿನ್ನಡೆಯಾಗುತ್ತಿದೆ. ಕಳೆದ ಪಂದ್ಯದಂತೆ ಪ್ರದರ್ಶನ ನೀಡಬೇಕಿದೆ ಆರ್​ಸಿಬಿ.

ಮುಂಬೈ ಇಂಡಿಯನ್ಸ್ ಸಂಭಾವ್ಯ XI

ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನಟಾಲಿ ಸೀವರ್​, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಎಸ್ ಸಜನಾ, ಅಮಂಜೋತ್ ಕೌರ್, ಹುಮಾರಿಯಾ ಕಾಜಿ, ಶಬ್ನಿಮ್ ಇಸ್ಮಾಯಿಲ್, ಸಾಯಿಕಾ ಇಶಾಕ್.

ಆರ್​ಸಿಬಿ ಸಂಭವನೀಯ XI

ಸ್ಮೃತಿ ಮಂಧಾನ (ನಾಯಕಿ), ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರ್ರಿ, ಸೋಫಿ ಡಿವೈನ್, ರಿಚಾ ಘೋಷ್ (ವಿಕೆಟ್ ಕೀಪರ್), ಜಾರ್ಜಿಯಾ ವೇರ್ಹ್ಯಾಮ್, ಸೋಫಿ ಮೊಲಿನೆಕ್ಸ್, ದಿಶಾ ಕಸತ್, ಶ್ರೇಯಾಂಕಾ ಪಾಟೀಲ್, ಆಶಾ ಶೋಭನಾ, ರೇಣುಕಾ ಸಿಂಗ್.

Whats_app_banner