ಪ್ರಚಾರ ಪ್ರಿಯರ ಮೊಮ್ಮಕ್ಕಳ ಸೆಲ್ಫಿಗಾಗಿ ಬೀದಿಯಲ್ಲಿ ಹೆಣವಾದ ಜನಸಾಮಾನ್ಯರ ಮಕ್ಕಳು; ರಾಜೀವ ಹೆಗಡೆ ಬರಹ
ಕನ್ನಡ ಸುದ್ದಿ  /  ಕ್ರಿಕೆಟ್  /  ಪ್ರಚಾರ ಪ್ರಿಯರ ಮೊಮ್ಮಕ್ಕಳ ಸೆಲ್ಫಿಗಾಗಿ ಬೀದಿಯಲ್ಲಿ ಹೆಣವಾದ ಜನಸಾಮಾನ್ಯರ ಮಕ್ಕಳು; ರಾಜೀವ ಹೆಗಡೆ ಬರಹ

ಪ್ರಚಾರ ಪ್ರಿಯರ ಮೊಮ್ಮಕ್ಕಳ ಸೆಲ್ಫಿಗಾಗಿ ಬೀದಿಯಲ್ಲಿ ಹೆಣವಾದ ಜನಸಾಮಾನ್ಯರ ಮಕ್ಕಳು; ರಾಜೀವ ಹೆಗಡೆ ಬರಹ

ಪ್ರಚಾರ ಪ್ರಿಯರ ಮೊಮ್ಮಕ್ಕಳ ಸೆಲ್ಫಿಗಾಗಿ ಬೀದಿಯಲ್ಲಿ ನಿರ್ಜೀವವಾದ ಜನಸಾಮಾನ್ಯರ ಮಕ್ಕಳು ಎಂಬ ಬರಹವನ್ನು ರಾಜೀವ ಹೆಗಡೆ ಅವರು ಫೇಸ್​ಬುಕ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಪ್ರಚಾರ ಪ್ರಿಯರ ಮೊಮ್ಮಕ್ಕಳ ಸೆಲ್ಫಿಗಾಗಿ ಬೀದಿಯಲ್ಲಿ ನಿರ್ಜೀವವಾದ ಜನಸಾಮಾನ್ಯರ ಮಕ್ಕಳು; ರಾಜೀವ ಹೆಗಡೆ ಬರಹ
ಪ್ರಚಾರ ಪ್ರಿಯರ ಮೊಮ್ಮಕ್ಕಳ ಸೆಲ್ಫಿಗಾಗಿ ಬೀದಿಯಲ್ಲಿ ನಿರ್ಜೀವವಾದ ಜನಸಾಮಾನ್ಯರ ಮಕ್ಕಳು; ರಾಜೀವ ಹೆಗಡೆ ಬರಹ

ನಿನ್ನೆ ರಾತ್ರಿ (ಜೂನ್ 3) ಕೊಹ್ಲಿಯ ಆನಂದ ಭಾಷ್ಪ ನೋಡಿ ಅದೆಷ್ಟೋ ಕ್ರಿಕೆಟ್‌ ಅಭಿಮಾನಿಗಳು ಕಣ್ಣೀರು ಸುರಿಸಿದ್ದರು. ಕೊಹ್ಲಿಯ ಹದಿನೆಂಟು ವರ್ಷದ ಪ್ರಯಾಸಕ್ಕೆ ಸಿಗಬೇಕಿದ್ದ ಫಲವು ತಡವಾಗಿ ಬಂದಿದ್ದನ್ನು ಕೋಟ್ಯಂತರ ಅಭಿಮಾನಿಗಳು ಕಣ್ತುಂಬಿಕೊಂಡಿದ್ದರು. ಅದೆಷ್ಟೋ ಅಭಿಮಾನಿಗಳು ರಾತ್ರಿಯಿಂದ ನಿದ್ದೆಯನ್ನೇ ಮಾಡದೇ ಗೆಲುವನ್ನು ಮೆಲುಕು ಹಾಕುತ್ತಿದ್ದರು. ಈ ಅಪರೂಪದ ಗೆಲುವನ್ನು ಅರಗಿಸಿಕೊಳ್ಳಲು ವಾರವೇ ಬೇಕಾಗಬಹುದು ಎಂದು ಕನವರಿಸುತ್ತಿದ್ದರು. ಆದರೆ ಇವೆಲ್ಲ ಖುಷಿಯಲ್ಲಿ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಹೊರಟ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ ಎನ್ನುವ ಜೋಡೆತ್ತುಗಳು ಸಂಭ್ರಮದ ಮನೆಗೆ ಸೂತಕವನ್ನು ತಂದಿಟ್ಟರು.

ಆರ್‌ಸಿಬಿಯು ಚೊಚ್ಚಲ ಟ್ರೋಫಿ ಗೆದ್ದಾಗಲೇ ರಾಜ್ಯದ ಹಲವೆಡೆ ಅಭಿಮಾನಿಗಳ ಅತಿರೇಕದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಹೀಗಿರುವಾಗ ಯಾವುದೇ ಪೂರ್ವ ಸಿದ್ಧತೆಯಿಲ್ಲದೇ ಸಂಭ್ರಮಾಚರಣೆಗೆ ತಯಾರಿಗೆ ರಾಜ್ಯ ಸರ್ಕಾರವೇ ಅತಿಯಾದ ಉತ್ಸಾಹ ತೋರಿದಂತೆ ಕಾಣಿಸುತ್ತಿದೆ. ಆದರೆ ಅದಕ್ಕೆ ಪೂರಕವಾಗಿ ನಯಾಪೈಸೆ ತಯಾರಿ ಮಾಡಿಕೊಳ್ಳುವ ಅವಕಾಶವನ್ನು ಪೊಲೀಸರಿಗೆ ಸರ್ಕಾರ ನೀಡಲೇ ಇಲ್ಲ. ಮಾಧ್ಯಮದಲ್ಲಿ ಬೈಟ್‌ ಕೊಡುವ ಶೂರ ಮಂತ್ರಿಗಳು ಆರ್‌ಸಿಬಿ ಜಪ ಮಾಡುತ್ತಾ ರಾಜಕೀಯ ಮೈಲೇಜ್‌ ಪಡೆಯುವ ಬಗ್ಗೆಯಷ್ಟೇ ಆಲೋಚಿಸಿದರು.

ಮಾನ್ಯ ಮುಖ್ಯಮಂತ್ರಿಗಳು ಸುದ್ದಿಗೋಷ್ಠಿ ನಡೆಸಿ, ಮ್ಯಾಜಿಸ್ಟ್ರೇಟ್‌ ಆದೇಶವೆನ್ನುವ ತಿಪ್ಪೆ ಸಾರುವ ಕೆಲಸ ಮಾಡಿದ್ದಾರೆ. ಅದರ ಜತೆಗೆ ಪರಿಹಾರ ಧನದ ಘೋಷಣೆ ಕೈ ತೊಳೆದುಕೊಂಡಿದ್ದಾರೆ. ಅಷ್ಟಕ್ಕೂ ಈ ದುರ್ಘಟನೆಯಲ್ಲಿ ಸತ್ತವರು ನಮ್ಮ ಸಾಮಾನ್ಯ ಜನರ ಮಕ್ಕಳು. ಈ ಪ್ರಚಾರ ಪ್ರಿಯರ ಮಕ್ಕಳು, ಮೊಮ್ಮಕ್ಕಳು ವೇದಿಕೆಯ ಮೇಲೆ ಸುರಕ್ಷಿತವಾಗಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಅಲ್ಲಿ ಯಾವುದೇ ದುರ್ಘಟನೆಯಾಗದಂತೆ ಚೆಂದವಾಗಿ ಬೇಲಿ ಹಾಕಿಕೊಂಡು ಮೇಯುತ್ತಿರುವುದನ್ನು ನೀವೆಲ್ಲರೂ ನೋಡಿರಬಹುದು.

ಘಟನೆಯಾದ ಬಳಿಕ ನಾವೆಲ್ಲರೂ ಟೀಕಿಸುವುದು ಸಾಮಾನ್ಯ. ಆದರೆ ಅಧಿಕಾರದಲ್ಲಿ ಇರುವವರು ಇಂತಹ ಅಪಾಯಗಳನ್ನು ನಿರೀಕ್ಷಿಸಿಕೊಂಡೇ ಕೆಲಸ ಮಾಡಬೇಕು. ಅದಕ್ಕಾಗಿಯೇ ಅವರನ್ನು ಅಲ್ಲಿ ಕೂರಿಸಿಯಾಗಿದೆ. ಆದರೆ ಈ ದರಿದ್ರ ರಾಜಕಾರಣಿಗಳಿಗೆ ಪ್ರಚಾರದ ಹೊರತಾಗಿ ಇನ್ನೇನು ಕಾಣಿಸುವುದಿಲ್ಲ. ಯಾವುದೇ ಜವಾಬ್ದಾರಿಯುತ ಮಂತ್ರಿಯು ಈ ಸರ್ಕಾರದಲ್ಲಿ ಆಡಳಿತ ನಡೆಸುತ್ತಿದ್ದರೆ, ಹಿಂದಿನ ಐಪಿಎಲ್‌ ರೋಡ್‌ ಶೋ, ವಿಜಯೋತ್ಸವ, ಕೆಲವೇ ತಿಂಗಳುಗಳ ಹಿಂದೆ ಮುಂಬೈನಲ್ಲಿ ನಡೆದ ವಿಶ್ವಕಪ್‌ ವಿಕ್ಟರಿ ಮಾರ್ಚ್‌ನ್ನು ಅಧ್ಯಯನ ಮಾಡುತ್ತಿದ್ದರು. ಅದಕ್ಕೆ ಪೂರಕವಾಗಿ ತಯಾರಿ ಮಾಡಿಕೊಂಡು, ಬಳಿಕ ಒಂದೆರಡು ದಿನವಾದ ಮೇಲೆ ಕೊಹ್ಲಿ ಹಾಗೂ ತಂಡವನ್ನು ಬೆಂಗಳೂರಿಗೆ ಆಹ್ವಾನಿಸಿ ಅದ್ಧೂರಿಯಾಗಿ ಕಣ್ತುಂಬಿಕೊಳ್ಳುವಂತೆ ಮಾಡುತ್ತಿದ್ದರು. ಆದರೆ ಇಲ್ಲಿರುವರೆಲ್ಲರಿಗೂ ಪ್ರಚಾರದ ತೆವಲು, ಈಗಲೇ ಮೈಲೇಜ್‌ ಪಡೆದುಕೊಳ್ಳಬೇಕು ಎನ್ನುವ ಹುಚ್ಚಾಟ.

ಅಷ್ಟಕ್ಕೂ ವಾರದ ಮಧ್ಯದ ದಿನದಲ್ಲಿ ಮರು ದಿನವೇ ವಿಜಯೋತ್ಸವಕ್ಕೆ ಅನುಮತಿ ನೀಡಲಾಯಿತು. ರೋಡ್‌ ಶೋ ಮಾಡಿದ್ದರೆ ಒಂದಿಷ್ಟು ಸಾವಿರ ಜನರು ರಸ್ತೆಯಲ್ಲಿಯೇ ಕರಗಿ ಹೋಗುತ್ತಿದ್ದರು. ಆದರೆ ವಿಧಾನಸೌಧದಲ್ಲಿ ಕಾರ್ಯಕ್ರಮ ಮಾಡಬೇಕು ಎನ್ನುವ ಹುಚ್ಚಾಟಕ್ಕೆ ಬಿದ್ದು ಎಲ್ಲ ಅಭಿಮಾನಿಗಳನ್ನು ವಿಧಾನಸೌಧ ಹಾಗೂ ಚಿನ್ನಸ್ವಾಮಿ ಮೈದಾನದ ಸುತ್ತ ತುಂಬುವಂತೆ ಮಾಡಿದರು. ‌35-40 ಸಾವಿರ ಜನರು ಸೇರಬಹುದಾದ ಮೈದಾನವು ಲಕ್ಷಗಟ್ಟಲೇ ಅಭಿಮಾನಿಗಳನ್ನು ನಿಭಾಯಿಸಲು ಸಾಧ್ಯವಿಲ್ಲ ಎನ್ನುವ ಸಾಮಾನ್ಯ ಜ್ಞಾನ ಇಲ್ಲದವರೆಲ್ಲ ಈ ರಾಜ್ಯವನ್ನು ಹೇಗೆ ಆಳುವ ಕನಸು ಕಾಣುತ್ತಿದ್ದಾರೆ ಎನ್ನುವುದೇ ಗೊತ್ತಾಗುವುದಿಲ್ಲ. ಮಾನ್ಯ ಮುಖ್ಯಮಂತ್ರಿಗಳ ಹೇಳಿಕೆ ಪ್ರಕಾರ 35-40 ಸಾವಿರ ಜನರು ಬರಬಹುದು ಎಂದು ನಿರೀಕ್ಷಿಸಿದ್ದರಂತೆ.

ಆರ್‌ಸಿಬಿ ಸೋಲುತ್ತದೆ ಎನ್ನುವ ಖಾತ್ರಿ ಇರುವ ಪಂದ್ಯ ನೋಡಲೇ ಇದಕ್ಕಿಂತ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಮೈದಾನಕ್ಕೆ ಬರುತ್ತಾರೆ. ಏಕೆಂದರೆ ಕೊಹ್ಲಿ ಹಾಗೂ ಆರ್‌ಸಿಬಿಗೆ ಇರುವ ಅಭಿಮಾನವೇ ಹಾಗಿದೆ. ಹೀಗಿರುವಾಗ 18 ವರ್ಷಗಳಿಂದ ಟ್ರೋಫಿಯ ಕನಸು ಕಾಣುತ್ತಿದ್ದವರೆಲ್ಲ ಮೈದಾನದತ್ತ ನುಗ್ಗುತ್ತಾರೆ. ಮೈದಾನದ ಸಾಮರ್ಥ್ಯದ ಹತ್ತರಷ್ಟು ಜನ ಸೇರುತ್ತಾರೆ ಎನ್ನುವುದು ಗೊತ್ತಿರದಿರಲು ಸಾಧ್ಯವೇ ಇಲ್ಲ. ಆದರೆ ಇದ್ಯಾವುದೂ ಈ ಸರ್ಕಾರಕ್ಕೆ ಬೇಕಿರಲಿಲ್ಲ. ವಿಧಾನಸೌಧದ ಮುಂದೆ ಅದ್ಧೂರಿಯಾಗಿ ಸನ್ಮಾನಿಸಿ, ಅಲ್ಲಿ ಸಂಬಂಧವೇ ಇಲ್ಲದ ಭಾಷೆ, ರಾಜ್ಯ ಪ್ರೇಮವನ್ನು ಬೆರೆಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಹೇಗೆ ಎನ್ನುವುದು ಮಾತ್ರ ಜೋಡೆತ್ತುಗಳ ಲೆಕ್ಕವಾಗಿತ್ತು. ಇಂತಹ ದಯನೀಯ ಸ್ಥಿತಿಯಲ್ಲಿ ಚಿನ್ನಸ್ವಾಮಿ ಮೈದಾನ ಮಸಣವಾಗಿ ಹೋಯಿತು.

ಹೊಲಸು ರಾಜಕಾರಣಿಗಳ ಸಿದ್ಧತೆ ಎಷ್ಟಿತ್ತು?

ಅಷ್ಟಕ್ಕೂ ಈ ಪ್ರಚಾರ ಪ್ರಿಯ ಹೊಲಸು ರಾಜಕಾರಣಿಗಳ ಸಿದ್ಧತೆ ಎಷ್ಟಿತ್ತು ಎನ್ನುವುದಕ್ಕೆ ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ಜನಸಾಮಾನ್ಯರ ಮಕ್ಕಳನ್ನು ಬೀದಿಯಲ್ಲಿ ನಿಲ್ಲಿಸಿ, ಸಚಿವ, ಶಾಸಕ ಹಾಗೂ ಅಧಿಕಾರಿಗಳ ಮಕ್ಕಳು-ಮೊಮ್ಮಕ್ಕಳಿಗೆ ಸೆಲ್ಫಿ ತೆಗೆಯಲು ಈ ಕಾರ್ಯಕ್ರಮ ಆಯೋಜಿಸಿದಂತಿತ್ತು. ವೇದಿಕೆಯಲ್ಲಿ ಆರ್‌ಸಿಬಿಯ 25 ಸಾಧಕರಿಗಿಂತ ನಿಷ್ಪ್ರಯೋಜಕ ನೂರಾರು ಮಂದಿ ವೇದಿಕೆಯ ಮೇಲಿದ್ದರು. ಅವರೆಲ್ಲ ಮಕ್ಕಳು-ಮೊಮ್ಮಕ್ಕಳನ್ನು ಸ್ಟಾರ್‌ ಆಟಗಾರರ ಬಳಿ ಕರೆದುಕೊಂಡು ಹೋಗಿ ಸೆಲ್ಫಿ ಕೊಡಿಸುವ ಪ್ರಯತ್ನ ಮಾಡುತ್ತಿದ್ದರು. ಇನ್ನೊಂದಿಷ್ಟು ಹುಚ್ಚರು ಟ್ರೋಫಿ ಜತೆಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಇದರ ಮಧ್ಯೆಯೇ ಕೊಹ್ಲಿ ಸೇರಿ ಎಲ್ಲರ ಸನ್ಮಾನ ಕಾರ್ಯಕ್ರಮವೂ ನಡೆದುಹೋಯಿತು. ಸನ್ಮಾನ ಕಾರ್ಯಕ್ರಮದ ವೇದಿಕೆಯಲ್ಲಿ ಆರ್‌ಸಿಬಿ ಸಾಧಕರು ಕಾಣಿಸಲೇ ಇಲ್ಲ. ಒಂದೊಮ್ಮೆ ಅವರು ಕೆಂಪು ಶರ್ಟ್‌ ಹಾಕಿರದಿದ್ದರೆ, ತಮ್ಮ ಮೊಮ್ಮಕ್ಕಳಿಗೆ ಶಾಲು ಹಾಕಿ ಕಳುಹಿಸುವ ಸಾಧ್ಯತೆಯೂ ಇ್ತು. ನನ್ನ ಜೀವನದಲ್ಲಿ ಇಲ್ಲಿಯವರೆಗೆ ಇಷ್ಟೊಂದು ಕೆಟ್ಟ ಸನ್ಮಾನ ಕಾರ್ಯಕ್ರಮವನ್ನು ನೋಡಿಲ್ಲ. ಇದಕ್ಕಿಂತ ಬಿಬಿಎಂಪಿ ನಡೆಸುವ ಕೆಂಪೇಗೌಡ ಪ್ರಶಸ್ತಿ ಪ್ರದಾನ ಕಾರ್ಯಕ್ರವೇ ಅದ್ಭುತವಾಗಿತ್ತು. ಇದರ ಬದಲಿಗೆ ಕೆಆರ್ ಮಾರ್ಕೆಟ್‌‌ನಲ್ಲಿ ಕಾರ್ಯಕ್ರಮ ಮಾಡಿದರೆ, ಇನ್ನೂ ಚೆಂದ ಆಗ್ತಿತ್ತು. ವಿಧಾನಸೌಧದ ಆವರಣದೊಳಗೆ ಒಂದು ಕಾರ್ಯಕ್ರಮವನ್ನು ಚೆಂದವಾಗಿ ಮಾಡಲಾಗದಷ್ಟು ಕೆಟ್ಟದಾಗಿ ಆಯೋಜನೆ ಮಾಡಿದ್ದ ಸರ್ಕಾರ, ಇನ್ನು ಬೀದಿಯಲ್ಲಿ ಹೇಗೆ ಸಿದ್ಧತೆ ಮಾಡಿಕೊಂಡಿರಬಹುದು ಎಂದು ಒಮ್ಮೆ ಅಂದಾಜಿಸಿ.

ಹತ್ತಾರು ಲಕ್ಷ ಜನರು ಕೆಲಸಕ್ಕೆ ಹೋಗುವ ದಿನವಿದು. ವಿಜಯೋತ್ಸವದ ಬಗ್ಗೆ ಬೆಳಗ್ಗೆ ಘೋಷಣೆ ಆಗುತ್ತದೆ. ಅದರ ಬೆನ್ನಲ್ಲೇ ಸರ್ಕಾರಿ ಕಾರ್ಯಕ್ರಮದ ಆಯೋಜನೆ ಬಗ್ಗೆ ಮಾತು ಶುರುವಾಗುತ್ತದೆ. ಇದ್ಯಾವುದರ ಬಗೆಗೂ ಸ್ಪಷ್ಟತೆಯಿಲ್ಲದ ಸಮಯದಲ್ಲಿ ಸಂಚಾರ ಪೊಲೀಸರು ಒಂದಿಷ್ಟು ಎಚ್ಚರಿಕೆ ನೀಡುತ್ತಾರೆ. ವಿಜಯೋತ್ಸವ ನಡೆಯುತ್ತದೆ ಎನ್ನುವ ಸುದ್ದಿಯನ್ನೇ ನಂಬಿಕೊಂಡು ಮೈದಾನದ ಸುತ್ತಲಿನ ರಸ್ತೆಗಳತ್ತ ಧಾವಿಸಿದ ಜನರಿಗೆ ರೋಡ್‌ ಶೋ ರದ್ದಾಗುವ ಸುದ್ದಿ ಕೊನೆಗೆ ಸಿಗುತ್ತದೆ. ಅದು ತಿಳಿದ ಕೂಡಲೇ ಎಲ್ಲರೂ ಮೈದಾನದತ್ತ ನುಗ್ಗುತ್ತಾರೆ. ಇವಿಷ್ಟು ಪ್ರಕ್ರಿಯೆಯಲ್ಲಿ ಅಭಿಮಾನಿಗಳ ಅತಿರೇಕದ ವರ್ತನೆ ಕೂಡ ಇರಬಹುದು. ಆದರೆ ಅದನ್ನು ಸುಲಲಿತವಾಗಿ ಮಾಡುವ ಅವಕಾಶ ಎಲ್ಲರಿಗೂ ಇತ್ತು. ಒಂದು ದಿನ ತಡವಾಗಿ ಪ್ರಚಾರ ಪಡೆದು, ಮಕ್ಕಳು-ಮೊಮ್ಮಕ್ಕಳಿಗೆ ಸೆಲ್ಫಿ ಕೊಡಿಸುವ ಕೆಲಸವನ್ನೂ ನಾಳೆ, ನಾಡಿದ್ದೂ ಮಾಡಿಸಬಹುದಿತ್ತು. ಒಂದೆರಡು ದಿನ ತಡವಾಗಿ ಉತ್ತಮವಾಗಿ ಆಯೋಜಿಸಿದರೆ ಟ್ರೋಫಿ ಪಂಜಾಬಿಗೆ ಓಡಿ ಹೋಗುತ್ತಿರಲಿಲ್ಲ. ಆದರೆ ಲಕ್ಷ್ಮಮ್ಮನವರು ಮಧ್ಯರಾತ್ರಿ ಎರಡೆರಡು ಬಾರಿ ಮ್ಯಾಚ್‌ ನೋಡಿದಂತೆ ʼಫೇಕ್‌ʼ ಅಭಿಮಾನ ತೋರಲು ಹೋದಾಗ ಇಂತಹ ಅವಘಡಗಳು ಜನರನ್ನು ಅಪ್ಪಿಕೊಳ್ಳುತ್ತವೆ.

ಇಂತಹ ಸಂದರ್ಭದಲ್ಲಿ ನಾವು ಸುಲಭವಾಗಿ ಅಭಿಮಾನಿಗಳನ್ನು ಟೀಕಿಸಿಬಹುದು. ಆದರೆ ತಾವು ಅತಿಯಾಗಿ ಇಷ್ಟಪಡುವ ಆಟಗಾರ ಗೆಲುವಿನ ಶಿಖರವೇರಿದಾಗ ಒಮ್ಮೆ ಕಣ್ತುಂಬಿಕೊಳ್ಳಬೇಕೆಂದು ಬಯಸುವುದು ತಪ್ಪಲ್ಲ. ಈ ಹಿಂದಿನ ಫ್ರಾಂಚೈಸಿಗಳಿಗಿಂತ ವಿಭಿನ್ನವಾಗಿ ಬೆಂಗಳೂರಿನ ರಸ್ತೆಯನ್ನು ಕೆಂಪುಮಯ ಮಾಡಬೇಕು ಎಂದು ಕನಸು ಕಾಣುವುದು ತಪ್ಪಲ್ಲ. ಓರ್ವ ಕ್ರಿಕೆಟ್‌ ಪ್ರಿಯನ ಸಾಮಾನ್ಯ ಕನಸದು. ನಾವದನ್ನು ಅಭಿಮಾನದ ಪರಾಕಾಷ್ಠೆ ಎಂದು ಹೇಳಬಹುದು. ಆದರೆ ಇಂತಹ ಸಂಭ್ರಮಕ್ಕೆ ಹೋಗುವ ಜನರು ತಾವು ಇರುವ ನೆಲದ ಸರ್ಕಾರದ ಮೇಲೆ ಸಣ್ಣ ನಂಬಿಕೆಯಿಟ್ಟು ಹೋಗುತ್ತಾರೆ. ಆದರೆ ಈ ರಾಜ್ಯದಲ್ಲಿ ಇಂತಹ ಜವಾಬ್ದಾರಿ ಸರ್ಕಾರ ನಿರ್ನಾಮವಾಗಿ ವರ್ಷಗಳೇ ಕಳೆದವು ಎನ್ನುವುದು ಮುಗ್ದ ಅಭಿಮಾನಿಗಳಿಗೆ ಗೊತ್ತಿಲ್ಲ. ಜನರ ನಂಬಿಕೆಯನ್ನು ಅಕ್ಷರಶಃ ಪಾಲಿಸಿದ ಸರ್ಕಾರ ರೆಡ್‌ ಜೆರ್ಸಿಯ ಬದಲಿಗೆ, ಜನರ ರಕ್ತವೇ ಹರಿಯುವಂತೆ ನೋಡಿಕೊಂಡಿತು.

ಇನ್ನೊಂದೆಡೆ ಕೆಎಸ್‌ಸಿಎ ಹಾಗೂ ಆರ್‌ಸಿಬಿ ಫ್ರಾಂಚೈಸಿ ಕೂಡ ಸ್ವಲ್ಪ ಅವಸರ ಮಾಡಿರಬಹುದು. ಆದರೆ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಸರ್ಕಾರ ತನ್ನ ಜವಾಬ್ದಾರಿ ಮೆರೆಯುವ ಅವಕಾಶವಿತ್ತು. ಸೂಕ್ತ ಭದ್ರತೆ ಹಾಗೂ ವ್ಯವಸ್ಥೆಗಾಗಿ ಒಂದು ದಿನ ಕಾಲಾವಕಾಶ ಕೋರಬಹುದಿತ್ತು. ಭದ್ರತೆ ನೆಪವೊಡ್ಡಿ ಪ್ರಧಾನಿ ರೋಡ್‌ ಶೋಗೆ ಅನುಮತಿ ನಿರಾಕರಿಸುವ ಸರ್ಕಾರಕ್ಕೆ, ಇದು ದೊಡ್ಡ ವಿಚಾರವಾಗಿರಲಿಲ್ಲ. ಒಂದೊಮ್ಮೆ ಹೀಗೆ ಮಾಡಿದ್ದರೆ ಆಗ ಸರ್ಕಾರಕ್ಕೂ ಹೆಸರು ಬರುತ್ತಿತ್ತು. ಆರ್‌ಸಿಬಿಯ ಸಂಭ್ರಮ ಇಮ್ಮಡಿ ಆಗುತ್ತಿತ್ತು. ಆದರಿಂದು ಆರ್‌ಸಿಬಿ ಗೆಲುವಿನ ಸ್ಮರಣೆ ಮಾಡಬೇಕಾದವರೆಲ್ಲ, ನಿರ್ಜೀವ ಬಡಪಾಯಿಗಳನ್ನು ನೋಡುತ್ತಿದ್ದಾರೆ.

ತನಿಖೆಯ ವರದಿ ಹೀಗಿರುತ್ತದೆ

  • ನಿರೀಕ್ಷೆಗಿಂತ ಅಧಿಕ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಕಾಲ್ತುಳಿತವಾಯಿತು.
  • ಕೆಎಸ್‌ಸಿಎಯು ಅಗತ್ಯ ಸಿದ್ಧತೆ ಮಾಡಿಕೊಳ್ಳಲಿಲ್ಲ.
  • ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಪೂರಕ ಭದ್ರತಾ ಕ್ರಮ ತೆಗೆದುಕೊಳ್ಳಲಿಲ್ಲ.
  • ಸಂಬಂಧಪಟ್ಟ ಪೊಲೀಸರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು.

ಸರ್ಕಾರ ಆದೇಶಿಸುವ ಮ್ಯಾಜಿಸ್ಟ್ರೇಟ್‌ ತನಿಖೆಯ ಡಿಫಾಲ್ಟ್‌ ವರದಿಯಿದು. ಈ ಕಾರ್ಯಕ್ರಮ ಆಯೋಜನೆಗೆ ಅವಸರ ಮಾಡಿದ ಸರ್ಕಾರದ ಪ್ರತಿನಿಧಿಗಳ ಹೆಸರು ಇಲ್ಲಿರುವುದಿಲ್ಲ. ಪ್ರಚಾರ ಪ್ರಿಯರ ಅತ್ಯುತ್ಸಾಹದ ಬಗ್ಗೆ ಎಲ್ಲಿಯೂ ಉಲ್ಲೇಖವಾಗುವುದಿಲ್ಲ. ಮುಖ್ಯಮಂತ್ರಿಯ ಇಂದಿನ ಸುದ್ದಿಗೋಷ್ಠಿಯಲ್ಲೇ ಇವೆಲ್ಲವೂ ಬಹಿರಂಗವಾಗಿ ಹೋಗಿದೆ.

ಅಷ್ಟಕ್ಕೂ ಈ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೇ ಇಂತಹ ಕಾರ್ಯಕ್ರಮಕ್ಕೆ ಸೂಚನೆ ನೀಡಿದರೆ, ಅದನ್ನು ಧಿಕ್ಕರಿಸಿ ಯಾವುದಾದರೂ ಪೊಲೀಸ್‌ ಆಯುಕ್ತರು ಕಾರ್ಯನಿರ್ವಹಿಸಲು ಸಾಧ್ಯವೇ ಇಲ್ಲ. ನನಗೆ ತಿಳಿದಂತೆ ಬೆಂಗಳೂರಿನ ಪೊಲೀಸ್‌ ಆಯುಕ್ತರು ಯಾವುದೇ ಎಚ್ಚರಿಕೆ ನೀಡದೇ ಒಪ್ಪಿಕೊಂಡಿರಲು ಸಾಧ್ಯವೇ ಇಲ್ಲ. ಆದರೆ ಆರ್‌ಸಿಬಿಯ ಗೆಲುವುನ್ನು ಕನ್ನಡ ಹಾಗೂ ರಾಜ್ಯದ ಗೆಲುವೆಂದು ರಾಜಕೀಯ ಮಾಡುವ ತೆವಲು ಹಾಗೂ ಮಕ್ಕಳು-ಮೊಮ್ಮಕ್ಕಳ ಸೆಲ್ಫಿಗಾಗಿ ಅಮಾಯಕ ಯುವಕರನ್ನು ಬಲಿ ಹಾಕಿಬಿಟ್ಟರು. ಈ ಆಧುನಿಕ ನರ ರಾಕ್ಷಸರನ್ನು ನಂಬಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಕ್ಕೆ ದಯವಿಟ್ಟು ಹೋಗಬೇಡಿ. ನಿಮ್ಮ ಜೀವವನ್ನು ನೀವು ಕಾಪಾಡಿಕೊಳ್ಳಬಹುದಾದ ಜಾಗಕ್ಕೆ ಮಾತ್ರ ಹೋಗಿ. ಏಕೆಂದರೆ ಇವರೆಲ್ಲ ವೈಯಕ್ತಿಕ ಪ್ರಚಾರ ಸಾಧನೆಗಳಿಗೆ ಸೀಮಿತವಾಗಿ ಕೆಲಸ ಮಾಡುತ್ತಿದ್ದಾರೆ. ಜನರ ಬಗ್ಗೆ ಕಿಂಚಿತ್‌ ಕಾಳಜಿಯಿದ್ದರೆ ಇಂತಹ ಘಟನೆ ಆಗುತ್ತಿರಲಿಲ್ಲ.

ಅಷ್ಟಕ್ಕೂ ಹೈದರಾಬಾದ್‌ನಲ್ಲಿ ಡಿಕೆಶಿಯ ಶಿಷ್ಯ ರೇವಂತ್‌ ರೆಡ್ಡಿ ಅವರು ಕಾಲ್ತುಳಿತಕ್ಕೆ ಅಲ್ಲು ಅರ್ಜುನ್‌ ವಿರುದ್ಧ ದೂರು ದಾಖಲಿಸಿ ಜೈಲಿಗೆ ಅಟ್ಟಿದ್ದರು. ಈಗ ಅದೇ ತರ್ಕವನ್ನು ತಮ್ಮದೇ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಹಾಗೂ ಡಿಕೆಶಿ ಅನ್ವಯ ಮಾಡಬಲ್ಲರೇ? ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಪ್ರಕಾರ ಈಗ ಯಾರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಡಿಕೆಶಿ ಹೇಳಿದ್ದರೆ ಚೆಂದವಿರುತ್ತಿತ್ತು.

ಕೊನೆಯದಾಗಿ: ಈ ಘಟನೆಯನ್ನು ಕುಂಭಮೇಳಕ್ಕೆ ಹೋಲಿಸುವ ಕೆಲಸ ಶುರುವಾಗಬಹುದು. ಅಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದ ತಯಾರಿ ನಡೆದಿದ್ದರೂ ದುರ್ಘಟನೆ ನಡೆದಿತ್ತು. ಆದಾಗ್ಯೂ ಅಲ್ಲಿಯೂ ಸತ್ತವರು ಜನ ಸಾಮಾನ್ಯರೇ ಆಗಿದ್ದರು. ಯಾವುದೇ ವಿಐಪಿಗಳಿಗೆ ಸಮಸ್ಯೆ ಆಗಿರಲಿಲ್ಲ. ಹೀಗಾಗಿ ಈ ದೇಶದ ಯಾವುದೇ ಮೂಲೆಯಲ್ಲಾದರೂ ಸಾಯುವವರು ಜನಸಾಮಾನ್ಯರು ಮಾತ್ರ. ಈ ವ್ಯವಸ್ಥೆಯನ್ನು ನಂಬಿಕೊಂಡು ಜೀವವನ್ನು ಪಣಕ್ಕಿಡುವ ಕೆಲಸವನ್ನು ದಯವಿಟ್ಟು ಮಾಡಬೇಡಿ. ಇವರನ್ನು ನಂಬಿ ಹೋದರೆ ಮೊಸಳೆ ಕಣ್ಣೀರಷ್ಟೇ ಸಿಗುತ್ತದೆ, ಹುಷಾರಾಗಿರಿ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.