ಆರ್‌ಸಿಬಿ vs ಸಿಎಸ್‌ಕೆ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್‌ ಬುಕಿಂಗ್ ಆರಂಭ; ಆನ್‌ಲೈನ್‌ ಕ್ಯೂ ಕಂಡು ಫ್ಯಾನ್ಸ್ ನಿರಾಶೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್‌ಸಿಬಿ Vs ಸಿಎಸ್‌ಕೆ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್‌ ಬುಕಿಂಗ್ ಆರಂಭ; ಆನ್‌ಲೈನ್‌ ಕ್ಯೂ ಕಂಡು ಫ್ಯಾನ್ಸ್ ನಿರಾಶೆ

ಆರ್‌ಸಿಬಿ vs ಸಿಎಸ್‌ಕೆ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್‌ ಬುಕಿಂಗ್ ಆರಂಭ; ಆನ್‌ಲೈನ್‌ ಕ್ಯೂ ಕಂಡು ಫ್ಯಾನ್ಸ್ ನಿರಾಶೆ

ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳ ನಡುವಿನ ಆನ್‌ಲೈನ್‌ ಟಿಕೆಟ್ ಬುಕಿಂಗ್ ಆರಂಭಿಸಿದೆ. ಆದರೆ, ತಮ್ಮ ನೆಚ್ಚಿನ ತಂಡಗಳ ಪಂದ್ಯ ವೀಕ್ಷಿಸಲು ಟಿಕೆಟ್‌ ಖರೀದಿಗೆ ಮುಂದಾದ ಅಭಿಮಾನಿಗಳು ನಿರಾಶೆ ಅನುಭವಿಸಿದ್ದಾರೆ.

ಆರ್‌ಸಿಬಿ vs ಸಿಎಸ್‌ಕೆ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್‌ ಬುಕಿಂಗ್ ಆರಂಭ
ಆರ್‌ಸಿಬಿ vs ಸಿಎಸ್‌ಕೆ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್‌ ಬುಕಿಂಗ್ ಆರಂಭ

ಡಬ್ಲ್ಯುಪಿಎಲ್‌ ಮುಕ್ತಾಯವಾಯ್ತು. ಇನ್ನೇನೇ ಇದ್ದರೂ ಮಿಲಿಯನ್‌ ಡಾಲರ್‌ ಟೂರ್ನಿ ಐಪಿಎಲ್‌ದೇ ಹವಾ. ವನಿತೆಯರ ಕ್ರಿಕೆಟ್‌ನತ್ತ ಇದ್ದ ಕ್ರಿಕೆಟ್‌ ಅಭಿಮಾನಿಗಳ ಕ್ರೇಜ್‌ ಈಗ ಪುರುಷರ ಕ್ರಿಕೆಟ್‌ನತ್ತ ತಿರುಗುವ ಸಮಯ. ಅದ್ಧೂರಿ ಪಂದ್ಯಾವಳಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿಯಲು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸಜ್ಜಾಗಿದೆ. ಹಾಲಿ ಚಾಂಪಿಯನ್‌ ಎದುರು ತೊಡೆ ತಟ್ಟಿ ನಿಲ್ಲಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಿದ್ಧತೆ ನಡೆಸಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆರಂಭಿಕ ಪಂದ್ಯ ನಡೆಯಲಿದ್ದು, ಭಾರತ ಕ್ರಿಕೆಟ್‌ನ ಇಬ್ಬರು ಜನಪ್ರಿಯ ಆಟಗಾರರಾದ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಬಳಗವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಜ್ಜಾಗಿದ್ದಾರೆ.

ಉಭಯ ತಂಡಗಳಿಗೆ ದೇಶ ಮಾತ್ರವಲ್ಲದೆ ವಿಶ್ವಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಚೆಪಾಕ್‌ ಅಂಗಳದಲ್ಲಿ ಈವರೆಗೆ ಯಶಸ್ಸು ಗಳಿಸದ ಆರ್‌ಸಿಬಿ, ಚೆನ್ನೈ ತಂಡವನ್ನು ಅದರದೇ ತವರಿನಲ್ಲಿ ಮಣಿಸುವ ಲೆಕ್ಕ ಹಾಕಿಕೊಂಡಿದೆ. ಇಂಡೋ-ಪಾಕ್‌ ಪಂದ್ಯದಂತೇ ರೋಚಕತೆ ಹೆಚ್ಚಿರುವ ಪಂದ್ಯದ ವೀಕ್ಷಣೆಗೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಮೊದಲ ಪಂದ್ಯದ ಟಿಕೆಟ್‌ಗಳನ್ನು ಈಗಾಗಲೇ ಮಾರಾಟಕ್ಕೆ ಬಿಡಲಾಗಿದ್ದು, ಸಾವಿರಾರು ಅಭಿಮಾನಿಗಳು ಟಿಕೆಟ್‌ ಕೊಳ್ಳಲು ಮುಗಿಬಿದ್ದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಟಿಕೆಟ್ ಬುಕಿಂಗ್ ಪ್ರಾರಂಭಿಸುವುದಾಗಿ ಘೋಷಿಸಿದೆ. ಘೋಷಣೆಯಾದ ಕೂಡಲೇ ಅಭಿಮಾನಿಗಳು ಆನ್‌ಲೈನ್‌ ಮೂಲಕ ಟಿಕೆಟ್‌ ಬುಕ್‌ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಟಿಕೆಟ್‌ ಪಡೆಯಲು ಆನ್‌ಲೈನ್‌ನಲ್ಲೂ ಸರದಿ ಸಾಲು ಶುರುವಾಗಿದೆ. ಕ್ಯೂ ಇದ್ದ ಕಾರಣದಿಂದಾಗಿ, ಅಭಿಮಾನಿಗಳಿಗೆ ಬೇಗನೆ ಟಿಕೆಟ್‌ ಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಆನ್‌ಲೈನ್‌ನಲ್ಲೂ ಅಭಿಮಾನಿಗಳು ಸಮಸ್ಯೆ ಎದುರಿಸುವಂತಾಯ್ತು. ಅಭಿಮಾನಿಗಳು ಆ ಕೋಪವನ್ನು ಸೋಷಿಯಲ್‌ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ.

ಮಾಹಿ ಬಳಗವು ಈಗಾಗಲೇ ತರಬಬೇತಿ ಆರಂಭಿಸಿದೆ. ಮಾರ್ಚ್ 2ರಂದು ಒಟ್ಟು ಸೇರಿರುವ ತಂಡವು, ಪೂರ್ವಸಿದ್ಧತಾ ಶಿಬಿರದಲ್ಲಿ ಭಾಗಿಯಾಗಿದೆ. ನಾಯಕ ಎಂಎಸ್ ಧೋನಿ ಕೂಡ ಕೆಲವು ದಿನಗಳ ಹಿಂದೆ ಶಿಬಿರ ಸೇರಿಕೊಂಡಿದ್ದಾರೆ. ಅತ್ತ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ಮಿಚೆಲ್ ಸ್ಯಾಂಟರ್ ಭಾನುವಾರ ಚೆನ್ನೈಗೆ ಆಗಮಿಸಿದ್ದಾರೆ. ರುತುರಾಜ್ ಗಾಯಕ್ವಾಡ್, ರಾಜವರ್ಧನ್ ಹಂಗರ್ಗೇಕರ್, ಮುಖೇಶ್ ಚೌಧರಿ ಮತ್ತು ಪ್ರಶಾಂತ್ ಸೋಲಂಕಿ ಕೂಡಾ ಅಭ್ಯಾಸದಲ್ಲಿ ಭಾಗಿಯಾಗಿದ್ದಾರೆ.

ಅತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ತರಬೇತಿ ಆರಂಭಿಸಿದೆ. ಆದರೆ, ಪ್ರಮುಳ ಆಟಗಾರ ವಿರಾಟ್ ಕೊಹ್ಲಿ ಇನ್ನೂ ತಂಡ ಸೇರಿಕೊಂಡಿಲ್ಲ. ಹಲವಾರು ವಿದೇಶಿ ಆಟಗಾರರು ಈಗಾಗಲೇ ತಮ್ಮ ಶಿಬಿರಕ್ಕೆ ಹಾಜರಾಗಿದ್ದಾರೆ.

ಇದನ್ನೂ ಓದಿ | ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಹಿನ್ನೆಲೆ; ಜಲಮಂಡಳಿ ಜೊತೆ ಕೆಎಸ್‌ಸಿಎ ಸಭೆ, ಐಪಿಎಲ್ ಪಂದ್ಯಗಳ ಭವಿಷ್ಯ ನಿರ್ಧಾರ

ಪಂದ್ಯಾವಳಿಯ ಆರಂಭಕ್ಕೂ ಮುನ್ನ ಸಿಎಸ್‌ಕೆ ತಂಡಕ್ಕೆ ಗಾಯದ ಹೊಡೆತ ಬಿದ್ದಿದೆ. ನ್ಯೂಜಿಲ್ಯಾಂಡ್‌ ಆರಂಭಿಕ ಆಟಗಾರ ಡೆವೊನ್ ಕಾನ್ವೇ, ಹೆಬ್ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾದ ಕಾರಣದಿಂದಾಗು ಪಂದ್ಯಾವಳಿಯ ಮೊದಲಾರ್ಧದಿಂದ ಹೊರಗುಳಿದಿದ್ದಾರೆ. ಇದೇ ವೇಳೆ ಲಂಕಾ ವೇಗಿ ಮಥೀಶಾ ಪತಿರಾನಾ ಕೂಡಾ ಹೊರಬಿದ್ದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ

ಎಂಎಸ್ ಧೋನಿ (ನಾಯಕ), ಮೊಯೀನ್ ಅಲಿ, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಶಿವಂ ದುಬೆ, ಋತುರಾಜ್ ಗಾಯಕ್ವಾಡ್, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಖೇಶ್ ಚೌಧರಿ, ಮಥೀಶಾ ಪತಿರಾನಾ, ಅಜಿಂಕ್ಯ ರಹಾನೆ, ಶೇಕ್ ರಶೀದ್, ಮಿಚೆಲ್ ಸ್ಯಾಂಟ್ನರ್, ಸಿಮರ್ಜೀತ್ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡೇರಿಲ್ ಮಿಚೆಲ್, ಸಮೀರ್ ರಿಜ್ವಿ, ಮುಸ್ತಾಫಿಜುರ್ ರೆಹಮಾನ್, ಅವನೀಶ್ ರಾವ್ ಅರವೆಲ್ಲಿ, ಡೆವೊನ್ ಕಾನ್ವೇ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರರ್, ಕರಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ಡಾಗರ್, ವಿಜಯಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟಾಪ್ಲೆ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೂನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರ್ರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್‌ ಚೌಹಾಣ್.

ಐಪಿಎಲ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner