ಫಾಫ್ ಡು ಪ್ಲೆಸಿಸ್ ವಿವಾದಾತ್ಮಕ ರನೌಟ್, ವಿರಾಟ್ ಕೊಹ್ಲಿ ಅಚ್ಚರಿ; ಅಂಪೈರ್ಸ್ ವಿರುದ್ಧ ನೆಟ್ಟಿಗರ ಆಕ್ರೋಶ
Faf du Plessis controversy run out: ಐಪಿಎಲ್ ಪ್ಲೇಆಫ್ ಡಿಸೈಡರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ವಿವಾದಾತ್ಮಕ ರನೌಟ್ಗೆ ಬಲಿಯಾದರು. ಅಂಪೈರ್ಗಳ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧದ ಪಂದ್ಯದಲ್ಲಿ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಆಸರೆಯಾಗುತ್ತಿದ್ದ ಆರಂಭಿಕ ಆಟಗಾರ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ (Faf Du plessis) ಅವರು ಐಪಿಎಲ್ನಲ್ಲಿ ವಿವಾದಾತ್ಮಕವಾಗಿ ಔಟಾಗಿದ್ದಾರೆ. ಆರಂಭದಲ್ಲಿ ಸ್ಪಿನ್ನರ್ಗಳ ವಿರುದ್ಧ ರನ್ ಗಳಿಸಲು ಪರದಾಡಿದ ಫಾಫ್, ಕೊನೆಗೂ ಲಯಕ್ಕೆ ಮರಳಿದರು. ಇದರೊಂದಿಗೆ 12ನೇ ಓವರ್ನಲ್ಲಿ ಅರ್ಧಶತಕವನ್ನೂ ಬಾರಿಸಿದರು.
ಅರ್ಧಶತಕ ಸಿಡಿಸಿದ ಮರು ಓವರ್ನಲ್ಲೇ ಫಾಫ್ ಡು ಪ್ಲೆಸಿಸ್ ರನೌಟ್ ಆಗಿ ಹೊರ ನಡೆದರು. ವಿರಾಟ್ ಕೊಹ್ಲಿ ಅಮೋಘ 47 ರನ್ ಸಿಡಿಸಿ ಔಟಾದ ಬಳಿಕ ಸ್ಫೋಟಕ ಆಟಕ್ಕೆ ಒತ್ತು ನೀಡಿದ ಫಾಫ್, 35 ಎಸೆತಗಳಲ್ಲಿ 50ರ ಗಡಿಯನ್ನು ದಾಟಿದರು. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಅವರ 4ನೇ ಹಾಫ್ ಸೆಂಚುರಿಯಾಗಿದೆ. 50ರ ನಂತರ ಮತ್ತಷ್ಟು ಆಕ್ರಮಣಕಾರಿಯಾಗುತ್ತಿದ್ದ ಫಾಫ್, ವಿವಾದಾತ್ಮಕ ರನೌಟ್ ಆಗಿದ್ದಾರೆ. ಬ್ಯಾಟ್ ನೆಲಕ್ಕೆ ತಾಗಿದ್ದರೂ ಔಟ್ ನೀಡಲಾಗಿದೆ.
ಇಷ್ಟಕ್ಕೂ ಆಗಿದ್ದೇನು?
13ನೇ ಓವರ್ನ ಕೊನೆಯ ಎಸೆತದಲ್ಲಿ ರಜತ್ ಪಾಟೀದಾರ್ ಸ್ಟ್ರೈಕ್ನಲ್ಲಿ ಬ್ಯಾಟ್ ಬೀಸುತ್ತಿದ್ದರು. ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ನಲ್ಲಿ ಪಾಟೀದಾರ್ ಸ್ಟ್ರೈಟ್ ಹಿಟ್ ಮಾಡಿದರು. ಆದರೆ ನೇರವಾಗಿ ಸ್ನಾಂಟ್ನರ್ ಅವರ ಬೆರಳ ತುದಿಗೆ ತಾಗಿದ ಚೆಂಡು ನಾನ್ಸ್ಟ್ರೈಕ್ನ ವಿಕೆಟ್ ಬೇಲ್ಸ್ ಎಗರಿಸಿತು. ಆದರೆ, ಚೆಂಡು ವಿಕೆಟ್ಗೆ ಬಡಿಯವುದಕ್ಕೂ ಮುನ್ನವೇ ಫಾಫ್ ಡು ಪ್ಲೆಸಿಸ್ ತನ್ನ ಬ್ಯಾಟ್ ಅನ್ನು ಕ್ರೀಸ್ ಒಳಗೆ ಇಟ್ಟಿದ್ದರು. ಪರಿಶೀಲನೆ ನಡೆಸಿದ ಮೂರನೇ ಅಂಪೈರ್, ಔಟೆಂದು ಪ್ರಕಟಿಸಿದರು.
ಆದರೆ, ಬ್ಯಾಟ್ ಗಾಳಿಯಲ್ಲಿದೆಯೇ ಅಥವಾ ನೆಲಕ್ಕೆ ತಾಗಿದೆಯೇ ಎಂಬುದು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಮತ್ತೊಂದಿಷ್ಟು ಆ್ಯಂಗಲ್ನಲ್ಲಿ ಪರಿಶೀಲನೆ ನಡೆದ ಮೂರನೇ ಅಂಪೈರ್ ಮೈಕೆಲ್ ಗಾಫ್, ಔಟ್ ಕೊಟ್ಟರು. ಸ್ಯಾಂಟ್ನರ್ ಕೈಗೆ ತಾಗಿದ್ದು ಅಲ್ಟ್ರಾಎಡ್ಜ್ ಸ್ಪಷ್ಟವಾಗಿ ಕಂಡು ಬಂತು. ಆದರೆ ಬ್ಯಾಟ್ ತಾಗಿದ್ದನ್ನು ಸರಿಯಾಗಿ ಪರಿಶೀಲಿಸದೆ ಔಟ್ ಕೊಟ್ಟಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಈ ನಿರ್ಧಾರ ರಜತ್ ಪಾಟೀದಾರ್, ಫಾಫ್ ಸೇರಿದಂತೆ ಆರ್ಸಿಬಿ ಆಟಗಾರರಿಗೆ ಅಚ್ಚರಿ ಮೂಡಿಸಿತು.
ಅಂಪೈರ್ಗಳ ವಿರುದ್ಧ ನೆಟ್ಟಿಗರ ಆಕ್ರೋಶ
ಪ್ರಸಕ್ತ ಐಪಿಎಲ್ನಲ್ಲಿ ಅಂಪೈರ್ಗಳಿಂದಾದ ಪ್ರಮಾದಗಳಿಂದಲೇ ಹಲವು ತಂಡಗಳು ಸೋಲೊಪ್ಪಿಕೊಂಡಿವೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಕೆಟ್ಟ ಅಂಪೈರಿಂಗ್ ಐಪಿಎಲ್ನಲ್ಲಿ ಬಿಟ್ಟರೆ ಬೇರೆಲ್ಲೂ ನೋಡಿಲ್ಲ. ಈ ಹಿಂದೆ ಕೊಹ್ಲಿ ನೋ ಬಾಲ್, ಸಂಜು ಸ್ಯಾಮ್ಸನ್ ಕ್ಯಾಚ್ ಔಟ್, ವೈಡ್ಗಳು, ನೋಬಾಲ್ಗಳು, ರನೌಟ್ಗಳು, ಟಾಸ್ ಪೌಲ್ ಸೇರಿದಂತೆ ಹಲವು ಮೋಸಗಳಿಗೆ ಕಾರಣರಾಗಿದ್ದಾರೆ ಅಂಪೈರ್ಗಳು. ಆದರೂ ಅಂತಹ ಅಂಪೈರ್ಗಳ ವಿರುದ್ಧ ಬಿಸಿಸಿಐ ಕ್ರಮ ಕೈಗೊಂಡಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್ಸಿಬಿ 218/5
ಸಿಎಸ್ಕೆ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿದೆ. ವಿರಾಟ್ ಕೊಹ್ಲಿ 47, ಫಾಫ್ ಡು ಪ್ಲೆಸಿಸ್ 54, ರಜತ್ ಪಾಟೀದಾರ್ 41, ಕ್ಯಾಮರೂನ್ ಗ್ರೀನ್ 38* ರನ್ ಗಳಿಸಿದರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)