ಆರ್‌ಸಿಬಿ vs ಸಿಎಸ್‌ಕೆ ಮುಖಾಮುಖಿಯಲ್ಲಿ ಹೆಚ್ಚು ರನ್‌, ವಿಕೆಟ್‌, ಸಿಕ್ಸ್-ಫೋರ್ ಗಳಿಸಿದವರು ಯಾರು? ಹೀಗಿದೆ ತಂಡಗಳ ಬಲಾಬಲ
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್‌ಸಿಬಿ Vs ಸಿಎಸ್‌ಕೆ ಮುಖಾಮುಖಿಯಲ್ಲಿ ಹೆಚ್ಚು ರನ್‌, ವಿಕೆಟ್‌, ಸಿಕ್ಸ್-ಫೋರ್ ಗಳಿಸಿದವರು ಯಾರು? ಹೀಗಿದೆ ತಂಡಗಳ ಬಲಾಬಲ

ಆರ್‌ಸಿಬಿ vs ಸಿಎಸ್‌ಕೆ ಮುಖಾಮುಖಿಯಲ್ಲಿ ಹೆಚ್ಚು ರನ್‌, ವಿಕೆಟ್‌, ಸಿಕ್ಸ್-ಫೋರ್ ಗಳಿಸಿದವರು ಯಾರು? ಹೀಗಿದೆ ತಂಡಗಳ ಬಲಾಬಲ

RCB vs CSK: ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳ ನಡುವಿನ ಪಂದ್ಯವೆಂದರೆ ಅಲ್ಲಿ ರೋಚಕತೆ ಹೆಚ್ಚು. ಐಪಿಎಲ್‌ನಲ್ಲಿ ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಎರಡು ತಂಡಗಳ ಮುಖಾಮುಖಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಹಾಗಿದ್ದರೆ ಈ ಎರಡು ತಂಡಗಳ ಆಟಗಾರರ ಬಲಾಬಲ, ದಾಖಲೆಗಳನ್ನು ನೋಡೋಣ.

ಆರ್‌ಸಿಬಿ vs ಸಿಎಸ್‌ಕೆ ಮುಖಾಮುಖಿಯಲ್ಲಿ ಹೆಚ್ಚು ರನ್‌, ವಿಕೆಟ್‌, ಸಿಕ್ಸ್-ಫೋರ್ ಗಳಿಸಿದವರು ಯಾರು
ಆರ್‌ಸಿಬಿ vs ಸಿಎಸ್‌ಕೆ ಮುಖಾಮುಖಿಯಲ್ಲಿ ಹೆಚ್ಚು ರನ್‌, ವಿಕೆಟ್‌, ಸಿಕ್ಸ್-ಫೋರ್ ಗಳಿಸಿದವರು ಯಾರು

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 18ರ ಶನಿವಾರ ಐಪಿಎಲ್ 2024ರ ಪ್ರಮುಖ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅತಿರೋಚಕ ಪಂದ್ಯದಲ್ಲಿ ಸೆಣಸುತ್ತಿವೆ. ಪ್ಲೇಆಫ್‌ ಹಂತಕ್ಕೆ ಲಗ್ಗೆ ಹಾಕಲು ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದೆ. ಈವರೆಗೆ 17 ಆವೃತ್ತಿಯ ಐಪಿಎಲ್‌ ಪಂದ್ಯಾವಳಿಯಲ್ಲಿ ಈ ತಂಡಗಳು ಹಲವು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಎರಡು ತಂಡಗಳು ಹಲವಾರು ದಾಖಲೆಗಳನ್ನು ನಿರ್ಮಿಸಿವೆ. ಹಾಗಿದ್ದರೆ, ಈ ಬಾರಿಯ ರೋಚಕ ಪಂದ್ಯಕ್ಕೂ ಮುನ್ನ ಉಭಯ ತಂಡಗಳ ಬಲಾಬಲ ನೋಡೋಣ. ಉತ್ತಮ ಬ್ಯಾಟರ್‌ ಹಾಗೂ ಬೌಲರ್‌ಗಳ ಕುರಿತು ತಿಳಿಯೋಣ.

ಐಪಿಎಲ್ 2024ರ ಆರಂಭಿಕ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದವು. ಚೆಪಾಕ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್‌ಕೆ 6 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು. ಇದೇ ಲಯವನ್ನು ಬೆಂಗಳೂರಿನಲ್ಲಿ ಕಂಡುಕೊಳ್ಳುವ ವಿಶ್ವಾಸ ಸಿಎಸ್‌ಕೆ ತಂಡದ್ದು.

ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಎರಡು ತಂಡಗಳ ನಡುವಿನ ಕಾಳಗಕ್ಕೆ ಚಿನ್ನಸ್ವಾಮಿ ಅಂಗಳ ಸಾಕ್ಷಿಯಾಗುತ್ತಿದೆ. ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಚೆನ್ನೈ ತಂಡಗಳ 33ನೇ ಮುಖಾಮುಖಿ ಇದಾಗಲಿದೆ. ಅತ್ತ ಚಿನ್ನಸ್ವಾಮಿಯಲ್ಲಿ 11ನೇ ಬಾರಿಗೆ ಕಾದಾಡಲಿವೆ.

ಇದನ್ನೂ ಓದಿ | ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ಮಳೆಯಿಂದ ರದ್ದಾದರೆ ಬೆಂಗಳೂರು ಎಲಿಮನೇಟ್‌; 5 ಓವರ್‌ ಪಂದ್ಯ ನಡೆದರೆ ಪ್ಲೇಆಫ್‌ ಲೆಕ್ಕಾಚಾರವೇನು?

2008ರಿಂದ ಒಟ್ಟು 32 ಬಾರಿ ಚೆನ್ನೈ ಹಾಗೂ ಬೆಂಗಳೂರು ತಂಡಗಳು ಮುಖಾಮುಖಿಯಾಗಿವೆ. ಅದರಲ್ಲಿ ಚೆನ್ನೈ ದಾಖಲೆಯ 21 ಬಾರಿ ಗೆದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ಬಾರಿ ಮಾತ್ರ ಜಯಭೇರಿ ಬಾರಿಸಿದೆ. ಬೆಂಗಳೂರಿನಲ್ಲಿ ಈ ತಂಡಗಳು 11 ಬಾರಿ ಪರಸ್ಪರ ಮುಖಾಮುಖಿಯಾಗಿದ್ದು, ರಾಯಲ್ ಚಾಲೆಂಜರ್ಸ್ 4 ಬಾರಿ ಗೆದ್ದರೆ, ಸಿಎಸ್‌ಕೆ 5 ಬಾರಿ ಆರ್‌ಸಿಬಿಯನ್ನು ಅದರದ್ದೇ ತವರಲ್ಲಿ ಮಣಿಸಿದೆ.

ಇದೀಗ ಉಭಯ ತಂಡಗಳು ಪರಸ್ಪರ ಮುಖಾಮುಖಿಯಾದಾಗ ಆಟಗಾರರ ದಾಖಲೆ ಹೇಗಿದೆ ನೋಡೋಣ.

ಅಧಿಕ ರನ್‌ ಗಳಿಸಿದ ಬ್ಯಾಟರ್‌

ಉಭಯ ತಂಡಗಳ ಮುಖಾಮುಖಿ ಸಮಯದಲ್ಲಿ ಅಧಿಕ ರನ್‌ ಗಳಿಸಿದ ಆಟಗಾರರ ಪೈಕಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸಿಎಸ್‌ಕೆ ವಿರುದ್ಧ ಕಿಂಗ್‌ ಕೊಹ್ಲಿ 1006 ರನ್‌ ಗಳಿಸಿದ್ದಾರೆ. ಅತ್ತ ಎದುರಾಳಿ ತಂಡದ ಮಾಜಿ ನಾಯಕ ಎಂಎಸ್ ಧೋನಿ ಕೆಳಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದರೂ 838 ರನ್‌ ಸಿಡಿಸಿದ್ದಾರೆ. ಮಾಜಿ ಆಟಗಾರ ಸುರೇಶ್ ರೈನಾ 702 ರನ್‌ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.

ಹೆಚ್ಚು ವಿಕೆಟ್‌ ಪಡೆದ ಬೌಲರ್‌

ಬೌಲಿಂಗ್ ವಿಭಾಗ ನೋಡುವುದಾದರೆ, ಸ್ಪಿನ್ನರ್ ರವೀಂದ್ರ ಜಡೇಜಾ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 18 ವಿಕೆಟ್‌ ಕಬಳಿಸಿದ್ದಾರೆ. ಮಾಜಿ ಆಟಗಾರರಾದ ಡ್ವೇನ್ ಬ್ರಾವೊ 17 ವಿಕೆಟ್‌ ಕಿತ್ತರೆ ಆಲ್ಬಿ ಮೊರ್ಕೆಲ್ 15 ವಿಕೆಟ್‌ ಪಡೆದಿದ್ದಾರೆ. ಆರ್‌ಸಿಬಿ ಪರ ಮಾಜಿ ಬೌಲರ್‌ (ಈಗ ರಾಜಸ್ಥಾನ್ ರಾಯಲ್ಸ್)‌ 14 ವಿಕೆಟ್‌ ಪಡೆದಿದ್ದಾರೆ.

  • ಅಧಿಕ ರನ್‌ ಗಳಿಸಿದ ಬ್ಯಾಟರ್‌: ವಿರಾಟ್‌ ಕೊಹ್ಲಿ (1006), ಎಂಎಸ್‌ ಧೋನಿ (838)
  • ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರು: ವಿರಾಟ್ ಕೊಹ್ಲಿ (90*) ಶಿವಂ ದುಬೆ ಮತ್ತು ಮುರಳಿ ವಿಜಯ್ (95)
  • ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರು: ವಿರಾಟ್ ಕೊಹ್ಲಿ (38 ಸಿಕ್ಸರ್), ಎಂಎಸ್ ಧೋನಿ (43 ಸಿಕ್ಸರ್)
  • ಅತಿ ಹೆಚ್ಚು ಬೌಂಡರಿ: ವಿರಾಟ್ ಕೊಹ್ಲಿ (73 ಬೌಂಡರಿ), ಸುರೇಶ್ ರೈನಾ (54 ಬೌಂಡರಿ)
  • ಅತಿ ಹೆಚ್ಚು ಅರ್ಧಶತಕ: ವಿರಾಟ್ ಕೊಹ್ಲಿ (9 ಅರ್ಧಶತಕ), ಎಂಎಸ್ ಧೋನಿ ಮತ್ತು ಸುರೇಶ್ ರೈನಾ (ತಲಾ 4 ಅರ್ಧಶತಕ)
  • ಅತಿ ಹೆಚ್ಚು ವಿಕೆಟ್‌ ಪಡೆದವರು: ಯುಜ್ವೇಂದ್ರ ಚಹಾಲ್ (14 ವಿಕೆಟ್), ರವೀಂದ್ರ ಜಡೇಜಾ (18 ವಿಕೆಟ್)

ಇದನ್ನೂ ಓದಿ | ನಾನು ಒಮ್ಮೆ ಹೋದರೆ, ನೀವು ಮತ್ತೆ ನನ್ನ ನೋಡಲ್ಲ; ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಅಚ್ಚರಿ ಹೇಳಿಕೆ, ಫ್ಯಾನ್ಸ್​ಗೆ ಆತಂಕ

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner