ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ಮಳೆಯಿಂದ ರದ್ದಾದರೆ ಬೆಂಗಳೂರು ಎಲಿಮನೇಟ್; 5 ಓವರ್ ಪಂದ್ಯ ನಡೆದರೆ ಪ್ಲೇಆಫ್ ಲೆಕ್ಕಾಚಾರವೇನು?
ಆರ್ಸಿಬಿ ತಂಡವು ಪ್ಲೇಆಫ್ ಹಂತಕ್ಕೆ ಲಗ್ಗೆಹಾಕಬೇಕಿದ್ದರೆ, ಸಿಎಸ್‌ಕೆ ವಿರುದ್ಧ ಕನಿಷ್ಠ 5 ಓವರ್‌ಗಳ ಪಂದ್ಯ ನಡೆಯಲೇಬೇಕಿದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ, ಫಾಫ್ ಡುಪ್ಲೆಸಿಸ್ ತಂಡವು ಐಪಿಎಲ್ 2024ರಿಂದ ಹೊರಬೀಳಲಿದೆ. ಹಾಗಿದ್ದರೆ ತಂಡದ ಪ್ಲೇಆಫ್ ಲೆಕ್ಕಾಚಾರವೇನು ಎಂಬುದನ್ನು ನೋಡೋಣ.
ಕ್ರಿಕೆಟ್ ಅಭಿಮಾನಿಗಳ ಚಿತ್ತವೀಗ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಹರಿದಿದೆ. ಐಪಿಎಲ್ 2024ರಲ್ಲಿ ಮೇ 18ರ ಶನಿವಾರ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ತಂಡಗಳ ಹೈವೋಲ್ಟೇಜ್ ಹಣಾಹಣಿಗೆ ಕಾತರ ಹೆಚ್ಚುತ್ತಿದೆ. ಪ್ಲೇಆಫ್ ಪಂದ್ಯದ ಮಟ್ಟಕ್ಕೆ ಕುತೂಹಲ ಮೂಡಿಸಿರುವ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳು ಮಾಡು ಇಲ್ಲವೇ ಮಡಿ ಎಂಬಂತೆ ಜಿದ್ದಿನ ಕದನಕ್ಕಿಳಿಯಲಿವೆ. ಆದರೆ, ಪಂದ್ಯದ ದಿನಕ್ಕೂ ಮುನ್ನವೇ ವರುಣ ಅವಕೃಪೆ ತೋರುವ ಸಾಧ್ಯತೆ ದಟ್ಟವಾಗಿದೆ. ಪಂದ್ಯದ ದಿನ ಉದ್ಯಾನ ನಗರಿ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯಾದ್ಯಂತ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಮಳೆಯ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಐಪಿಎಲ್ ಇತಿಹಾಸದಲ್ಲೇ ಅತಿ ರೋಚಕ ಪಂದ್ಯ ಎನಿಸಿರುವ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಬಹುನಿರೀಕ್ಷಿತ ಹಣಾಹಣಿಯು ಮಳೆಯಿಂದಾಗಿ ರದ್ದಾಗುವ ಅಪಾಯದಲ್ಲಿದೆ. ಇದು ಬೆಂಗಳೂರು ಅಭಿಮಾನಿಗಳ ನಿದ್ದೆಗೆಡಿಸಿದೆ. ಮೇ 17ರ ಶುಕ್ರವಾರದಿಂದ ಮೇ 21ರ ಮಂಗಳವಾರದವರೆಗೆ ಒಟ್ಟು ಐದು ದಿನಗಳ ಕಾಲ ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಪಂದ್ಯದ ದಿನವೂ ಸಿಲಿಕಾನ್ ಸಿಟಿಯಲ್ಲಿ ವರುಣ ಧರೆಗಿಳಿಯಲಿದ್ದಾನೆ. ಇದರಿಂದ ಪಂದ್ಯ ರದ್ದಾಗುವ ಭೀತಿ ಹೆಚ್ಚಿದೆ.
ಪಂದ್ಯ ರದ್ದಾದರೆ ಏನಾಗುತ್ತದೆ?
ಒಂದು ವೇಳೆ ಮಳೆ ಬಂದು, ಮೇ 18ರ ರಾತ್ರಿ 10:56ರ ಒಳಗೆ ಪಂದ್ಯ ಆರಂಭಿಸಲು ಸಾಧ್ಯವಾಗದಿದ್ದರೆ ಆಗ ಅಧಿಕೃತವಾಗಿ ಪಂದ್ಯವನ್ನು ರದ್ದು ಮಾಡಲಾಗುತ್ತದೆ. ಅಂಥಾ ಸಂದರ್ಭದಲ್ಲಿ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗುತ್ತದೆ.
ಇದನ್ನೂ ಓದಿ | ಮಳೆಯಿಂದ ಪಂದ್ಯ ರದ್ದು; ಪ್ಲೇಆಫ್‌ಗೆ ಲಗ್ಗೆಯಿಟ್ಟ ಎಸ್ಆರ್ಹೆಚ್, ಗುಜರಾತ್ಗೆ ನಿರಾಸೆ, ಡೆಲ್ಲಿ ಕ್ಯಾಪಿಟಲ್ಸ್ ಹೊರಕ್ಕೆ
ಆಕ್ಯುವೆದರ್ ಪ್ರಕಾರ, ಪಂದ್ಯದ ದಿನ ಕ್ರೀಡಾಂಗಣದ ಸುತ್ತಲೂ 99 ಪ್ರತಿಶತದಷ್ಟು ಮೋಡ ಕವಿದ ವಾತಾವರಣವಿರುತ್ತದೆ. ಜೊತೆಗೆ ಮಧ್ಯಾಹ್ನದ ವೇಳೆ ಗುಡುಗು ಸಹಿತ ತುಂತುರು ಮಳೆಯಾಗಲಿದೆ. ಸಂಜೆ ವೇಳೆಗೆ ಶೇ.74 ರಷ್ಟು ಮಳೆಯಾಗುವ ಸಾಧ್ಯತೆಯಿದ್ದು, ತಾಪಮಾನದಲ್ಲಿ ಏರುಪೇರಾಗಲಿದೆ ಎಂದು ವರದಿ ಹೇಳಿದೆ. ರಾತ್ರಿಯಲ್ಲಿ ವೇಳೆ ಸಂಪೂರ್ಣ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಸಂಭವ ಶೇಕಡಾ 62 ರಷ್ಟಿದೆ.
ಪಂದ್ಯ ರದ್ದಾದರೆ ಆರ್‌ಸಿಬಿ ಕತೆ ಏನು?
ಒಂದು ವೇಳೆ ಪಂದ್ಯವು ಮಳೆಯಿಂದಾಗಿ ರದ್ದಾದರೆ ಯಾವುದೇ ಲೆಕ್ಕಾಚಾರಗಳಿಲ್ಲದೆ ಆರ್‌ಸಿಬಿಯು ಪಂದ್ಯಾವಳಿಯಿಂದ ಹೊರಬೀಳುತ್ತದೆ. ಅತ್ತ ಸಿಎಸ್‌ಕೆ ನಾಲ್ಕನೇ ತಂಡವಾಗಿ ಪ್ಲೇಆಫ್‌ಗೆ ಲಗ್ಗೆ ಹಾಕುತ್ತದೆ. ಏಕೆಂದರೆ ಚೆನ್ನೈ ತಂಡದ ರನ್ ರೇಟ್ ಹೆಚ್ಚಿದೆ. ಇತ್ತ ಆರ್‌ಸಿಬಿ ಕೈಯಲ್ಲಿ 13 ಅಂಕ ಮಾತ್ರ ಉಳಿಯಲಿದ್ದು, ಮೂರು ಅಂಕದ ವ್ಯತ್ಯಾಸದೊಂದಿಗೆ ಟೂರ್ನಿಯಿಂದ ಎಲಿಮನೇಟ್ ಆಗಲಿದೆ.
10:56ರ ಒಳಗೆ ಪಂದ್ಯ ಆರಂಭವಾಗಲೇಬೇಕು
ಒಂದು ವೇಳೆ ಮಳೆ ಬೇಗ ನಿಂತರೆ, ಓವರ್ ಕಡಿತ ಮಾಡಿ ಪಂದ್ಯ ನಡೆಸುವ ಅವಕಾಶವಿದೆ. ಅಂತಿಮವಾಗಿ ಐದು ಓವರ್‌ಗಳ ಪಂದ್ಯ ನಡೆಸಲು ರಾತ್ರಿ 10:56ರವರೆಗೆ ಅವಕಾಶವಿದೆ. ಅಂದರೆ ರಾತ್ರಿ 10.45ರ ವೇಳೆಗೆ ಟಾಸ್ ಪ್ರಕ್ರಿಯೆ ನಡೆಸಲು ಮೈದಾನ ಸಿದ್ಧವಾಗಿರಬೇಕು. ಅದಕ್ಕೂ ಮುನ್ನ ಮಳೆ ನಿಂತು ಮೈದಾನವನ್ನು ಅಣಿಗೊಳಿಸಬೇಕು. ಚಿನ್ನಸ್ವಾಮಿ ಮೈದಾನದಲ್ಲಿ ಅತ್ಯಾಧುನಿಕ ಸೌಲಭ್ಯಗಳಿದ್ದು, ಮಳೆ ನಿಂತ 15 ನಿಮಿಷಗಳೊಳಗೆ ಮೈದಾನದಲ್ಲಿ ಪಂದ್ಯ ನಡೆಸಬಹುದಾಗಿದೆ. ಏಕೆಂದರೆ ಇಲ್ಲಿರುವ ಸಬ್‌ಏರ್ ವ್ಯವಸ್ಥೆಯಿಂದ ನೀರು ಒಳಚರಂಡಿ ಕೊಳವೆಗಳ ಮೂಲಕ ಬೇಗನೆ ಹೊರಹಾಕಲಾಗುತ್ತದೆ.
5 ಓವರ್‌ಗಳ ಪಂದ್ಯ ನಡೆದರೆ ಆರ್‌ಸಿಬಿ ಕ್ವಾಲಿಫಿಕೇಶನ್ ಲೆಕ್ಕಾಚಾರ ಹೇಗೆ?
ಒಂದು ವೇಳೆ 20 ಓವರ್‌ಗಳ ಪಂದ್ಯ ನಡೆದು ಆರ್‌ಸಿಬಿಯು ಪ್ಲೇಆಫ್‌ಗೆ ಲಗ್ಗೆ ಹಾಕಬೇಕೆಂದರೆ, ಒಂದಾ 18ಕ್ಕೂ ಅಧಿಕ ರನ್‌ಗಳಿಂದ ಅಥವಾ 11 ಬಾಲ್‌ಗಳನ್ನು ಉಳಿಸಿ ಬೆಂಗಳೂರು ಗೆಲ್ಲಬೇಕು. ಹಾಗಿದ್ದರೆ 5 ಓವರ್‌ಗಳ ಪಂದ್ಯ ನಡೆದಾಗ ಏನಾಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಈ ಸಂದರ್ಭದಲ್ಲೂ ಆರ್‌ಸಿಬಿಯು 18ಕ್ಕೂ ಅಧಿಕ ರನ್‌ಗಳಿಂದ ಅಥವಾ 11 ಬಾಲ್‌ಗಳನ್ನು ಉಳಿಸಿ ಪಂದ್ಯ ಗೆದ್ದರೆ ಮಾತ್ರ ಕ್ವಾಲಿಫೈ ಆಗಲಿದೆ. ಚೇಸಿಂಗ್ ಮಾಡುತ್ತಿದೆ ಎಂದಾದರೆ, 3.1 ಓವರ್‌ಗಳಲ್ಲಿ ಸಿಎಸ್‌ಕೆ ನೀಡಿದ ಗುರಿ ತಲುಪಬೇಕು. ಇಲ್ಲವಾದರೆ ಟೂರ್ನಿಯಿಂದ ಹೊರಬೀಳುವುದು ಖಚಿತ.
ಇದನ್ನೂ ಓದಿ | ಪ್ಲೇಆಫ್‌ಗೆ 3 ತಂಡಗಳು ಅಂತಿಮ; ಉಳಿದೊಂದು ಸ್ಥಾನಕ್ಕೆ ಆರ್ಸಿಬಿ-ಸಿಎಸ್‌ಕೆ ಪೈಪೋಟಿ, ಹೇಗಿದೆ ಅಂತಿಮ ಲೆಕ್ಕಾಚಾರ?
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)