ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್‌ಸಿಬಿ Vs ಸಿಎಸ್‌ಕೆ ಕಾಳಗದಲ್ಲಿ ಯಾರು ಗೆದ್ದರೆ ಏನಾಗುತ್ತೆ; ಗೆಲ್ಲುವ ಸಾಧ್ಯತೆ ಯಾವ ತಂಡಕ್ಕೆ ಹೆಚ್ಚು?

ಆರ್‌ಸಿಬಿ vs ಸಿಎಸ್‌ಕೆ ಕಾಳಗದಲ್ಲಿ ಯಾರು ಗೆದ್ದರೆ ಏನಾಗುತ್ತೆ; ಗೆಲ್ಲುವ ಸಾಧ್ಯತೆ ಯಾವ ತಂಡಕ್ಕೆ ಹೆಚ್ಚು?

ಎಲಿಮನೇಟರ್‌ ಪಂದ್ಯದಷ್ಟೇ ಕುತೂಹಲ ಮೂಡಿಸಿರುವ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಐಪಿಎಲ್‌ ಲೀಗ್‌ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಪಂದ್ಯದಲ್ಲಿ ಯಾವ ತಂಡ ಗೆದ್ದರೆ ಏನಾಗಲಿದೆ? ಇದೇ ವೇಳೆ ಯಾವ ತಂಡ ಪ್ಲೇಆಫ್‌ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ ಎಂಬುದನ್ನು ನೋಡೋಣ.

ಆರ್‌ಸಿಬಿ vs ಸಿಎಸ್‌ಕೆ ಕಾಳಗದಲ್ಲಿ ಯಾರು ಗೆದ್ದರೆ ಏನಾಗುತ್ತೆ
ಆರ್‌ಸಿಬಿ vs ಸಿಎಸ್‌ಕೆ ಕಾಳಗದಲ್ಲಿ ಯಾರು ಗೆದ್ದರೆ ಏನಾಗುತ್ತೆ (ANI)

ಕ್ರಿಕೆಟ್‌ ಅಭಿಮಾನಿಗಳು ಇದೀಗ ಮೇ 18ಕ್ಕಾಗಿ ಕಾಯುತ್ತಿದ್ದಾರೆ. ಐಪಿಎಲ್‌ 2024ರ ಮಹತ್ವದ ಪಂದ್ಯ ಅದಾಗಿದ್ದು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು (RCB vs CSK) ಮುಖಾಮುಖಿಯಾಗುತ್ತಿವೆ. ಪ್ಲೇ ಆಫ್‌ ಹಂತಕ್ಕೆ ಪ್ರವೇಶ ಪಡೆಯಲು ಉಭಯ ತಂಡಗಳಿಗೂ ಈ ಪಂದ್ಯ ನಿರ್ಣಾಯಕವಾಗಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಪಂದ್ಯದಲ್ಲಿ ಗೆಲ್ಲಲು ಉಭಯ ತಂಡಗಳು ತಂತ್ರ ರೂಪಿಸಿವೆ. ಈಗಾಗಲೇ ಈ ತಂಡಗಳು ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಎದುರಾಗಿದ್ದವು. ಅದರಲ್ಲಿ ಸಿಎಸ್‌ಕೆ ಚೇಸಿಂಗ್‌ ಮಾಡಿ ಗೆದ್ದಿತ್ತು. ಹಾಗಿದ್ದರೆ ಈ ಪಂದ್ಯದಲ್ಲಿ ಯಾವ ತಂಡ ಗೆದ್ದರೆ ಏನಾಗಲಿದೆ? ಪ್ಲೇಆಫ್‌ ಪ್ರವೇಶಿಸುವ ಅವಕಾಶ ಯಾವ ತಂಡಕ್ಕೆ ಹೆಚ್ಚಿದೆ. ಗೆಲ್ಲುವ ಸಾಧ್ಯತೆ ಹೇಗಿದೆ ಎಂಬುದನ್ನು ನೋಡೋಣ.

ಟ್ರೆಂಡಿಂಗ್​ ಸುದ್ದಿ

ಪಂದ್ಯದಲ್ಲಿ ಗೆದ್ದರೆ ಉಭಯ ತಂಡಗಳಿಗೂ ಪ್ಲೇಆಫ್‌ ಲಗ್ಗೆ ಹಾಕುವ ಅವಕಾಶಗಳಿವೆ. ಇದರಲ್ಲಿ ಸಿಎಸ್‌ಕೆಗೆ ಹೆಚ್ಚು ಅವಕಾಶವಿದೆ. ಆದರೆ, ಆರ್‌ಸಿಬಿ ತಂಡವು ಉತ್ತಮ ಅಂತರದೊಂದಿಗೆ ಪಂದ್ಯದಲ್ಲಿ ಗೆಲ್ಲಬೇಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದರೆ ಏನಾಗಲಿದೆ?

ಟೂರ್ನಿಯಲ್ಲಿ ಆರ್‌ಸಿಬಿ ತಂಡವು ಈವರೆಗೆ ಆಡಿದ 13 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 12 ಅಂಕ ಪಡೆದಿದೆ. ತಂಡದ ನೆಟ್‌ ರನ್‌ ರೇಟ್‌ 0.387 ಇದ್ದು, ಡೆಲ್ಲಿ ಹಾಗೂ ಲಕ್ನೋಗಿಂತ ಉತ್ತಮವಾಗಿದೆ. ಇದು ತಂಡದ ಪ್ಲೇಆಫ್‌ ಸಾಧ್ಯತೆಗೆ ಪುಷ್ಟಿ ನೀಡುತ್ತದೆ. ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆದರೆ, ಬೆಂಗಳೂರು ತಂಡವು ಸಿಎಸ್‌ಕೆ ವಿರುದ್ಧ ಭಾರಿ ಅಂತರದಿಂದ ಗೆಲ್ಲಬೇಕಾದ ಅನಿವಾರ್ಯತೆ ಬರುತ್ತದೆ. ಆಗ ಮಾತ್ರ ಸಿಎಸ್‌ಕೆಗಿಂತ ಹೆಚ್ಚು ರನ್‌ ರೇಟ್‌ ಗಳಿಸಿ ಮುನ್ನುಗ್ಗಬಹುದು.

ಇದನ್ನೂ ಓದಿ | ಅತಿ ಹೆಚ್ಚು ರನ್‌,‌ ಯಶಸ್ವಿ ಚೇಸಿಂಗ್ ಬಳಿಕ ಮತ್ತೊಂದು ರೆಕಾರ್ಡ್;‌ ಐಪಿಎಲ್‌ 2024ರಲ್ಲಿ ಸಿಡಿದವು ದಾಖಲೆಯ ಸಿಕ್ಸರ್‌ಗಳು

ಒಂದು ವೇಳೆ ಸಿಎಸ್‌ಕೆ ಎದುರು ಆರ್‌ಸಿಬಿಯು ಮೊದಲು ಬ್ಯಾಟಿಂಗ್‌ ಮಾಡಿ 200 ರನ್‌ ಗಳಿಸಿದರೆ, ಸಿಎಸ್‌ಕೆ ತಂಡವನ್ನು ಕನಿಷ್ಠ 18 ರನ್‌ಗಳ ಅಂತರದಿಂದ ಸೋಲಿಸಬೇಕಾಗುತ್ತದೆ. ಇದೇ ವೇಳೆ ಆರ್‌ಸಿಬಿಯು 200 ರನ್‌ ಚೇಸಿಂಗ್‌ ಮಾಡುತ್ತಿದೆ ಎಂದಾದಾಗ, 11 ಎಸೆತಗಳನ್ನು ಉಳಿಸಿ ಚೇಸಿಂಗ್‌ ಪೂರ್ಣಗೊಳಿಸಬೇಕಾಗುತ್ತದೆ. ಆಗ ನೆಟ್‌ ರನ್‌ ರೇಟ್‌ ಲೆಕ್ಕಾಚಾರದಲ್ಲಿ ಆರ್‌ಸಿಬಿಯು ಸಿಎಸ್‌ಕೆ ಹಿಂದಿಕ್ಕಿ ಪ್ಲೇಆಫ್‌ ಪ್ರವೇಶಿಸುತ್ತದೆ.

ಚೆನ್ನೈ ಸೂಪರ್ ಕಿಂಗ್ಸ್ ಗೆದ್ದರೆ ಏನಾಗುತ್ತೆ?

ಈಗಾಗಲೇ ಸಿಎಸ್‌ಕೆ ಆಡಿದ 13 ಪಂದ್ಯಗಳಲ್ಲಿ 7ರಲ್ಲಿ ಗೆದ್ದು 14 ಅಂಕ ಸಂಪಾದಿಸಿದೆ. ತಂಡದ ನೆಟ್‌ ರನ್‌ ರೇಟ್‌ 0.528 ಆಗಿದ್ದು, ಆರ್‌ಸಿಬಿ ವಿರುದ್ಧ ಗೆದ್ದರೆ, ಪ್ಲೇಆಫ್ ಅರ್ಹತೆ ಪಡೆಯುತ್ತದೆ. ತಂಡಕ್ಕೆ ಗೆಲುವು ಮಾತ್ರ ಅಗತ್ಯ. ಒಂದು ವೇಳೆ ತಂಡವು ಬೃಹತ್‌ ಅಂತರದಿಂದ ಸೋತು ನೆಟ್‌ ರನ್‌ರೇಟ್‌ನಲ್ಲಿ ಆರ್‌ಸಿಬಿಗಿಂತ ಕೆಳಗುಳಿದರೆ, ಪ್ಲೇಆಫ್‌ನಿಂದ ಬಹುತೇಕ ಹಿಂದೆ ಬೀಳುತ್ತದೆ. ಆಗ, ಎಸ್‌ಆರ್‌ಎಚ್‌ ತಂಡ ಅದರ ಎರಡೂ ಪಂದ್ಯಗಳಲ್ಲಿ ಸೋತರೆ ಮಾತ್ರ ಚೆನ್ನೈಗೆ ಅವಕಾಶ ಸಿಗುತ್ತದೆ.

ಗೆಲ್ಲುವ ಸಾಧ್ಯತೆ ಯಾವ ತಂಡಕ್ಕೆ ಹೆಚ್ಚು?

ವಿವಿಧ ಲೆಕ್ಕಾಚಾರಗಳ ಪ್ರಕಾರ ಎರಡೂ ತಂಡಗಳಿಗೂ ಗೆಲ್ಲುವ ಸಮಾನ ಅವಕಾಶಗಳಿವೆ. ಪ್ರಸ್ತುತ ತಂಡಗಳ ಫಾರ್ಮ್‌ ಆಧಾರದಲ್ಲಿ ಆರ್‌ಸಿಬಿಗೆ ಈ ಸಾಧ್ಯತೆ ಹೆಚ್ಚು. ಏಕೆಂದರೆ, ಕಳೆದ ಐದು ಪಂದ್ಯಗಳಲ್ಲಿ ಬೆಂಗಳೂರು ತಂಡವು ಸತತವಾಗಿ ಗೆಲ್ಲುತ್ತಾ ಬಂದಿದೆ. ಈ ಗೆಲುವಿನ ನಾಗಾಲೋಟ ಮುಂದುವರೆದರೂ ಅಚ್ಚರಿಯಿಲ್ಲ. ಮತ್ತೊಂದೆಡೆ ತಂಡವು ತವರು ಮೈದಾನ ಚಿನ್ನಸ್ವಾಮಿ ಅಂಗಳದಲ್ಲಿ ಆಡುತ್ತಿರುವುದು ಮತ್ತಷ್ಟು ಅನುಕೂಲವಾಗಿದೆ. ಅತ್ತ ಚೆನ್ನೈ ತಂಡವು ಕೊನೆಯ ಐದರಲ್ಲಿ ಎರಡು ಪಂದ್ಯ ಸೋತಿದೆ.

ಮುಖಾಮುಖಿ ದಾಖಲೆಯ ಇತಿಹಾಸ ಏನು ಹೇಳುತ್ತೆ?

ಐಪಿಎಲ್‌ನಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳು ಈವರೆಗೆ 32 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್‌ಸಿಬಿ ತಂಡವು 10 ಪಂದ್ಯಗಳಲ್ಲಿ ಗೆದ್ದಿದ್ದರೆ, ಚೆನ್ನೈ ದಾಖಲೆಯ 21 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಈ ಫಲಿತಾಂಶ ಸಿಎಸ್‌ಕೆ ಪರವಾಗಿದೆ. ಚಿನ್ನಸ್ವಾಮಿ ಮೈದಾನದಲ್ಲಿ ಉಭಯ ತಂಡಗಳು 10 ಬಾರಿ ಮುಖಾಮುಖಿಯಾಗಿದ್ದು, ಇಲ್ಲಿ ಕೂಡಾ ಆತಿಥೇಯ ತಂಡಕ್ಕಿಂದ ಸಿಎಸ್‌ಕೆ ಒಂದು ಪಂದ್ಯ ಹೆಚ್ಚು ಗೆದ್ದಿದೆ. ಚೆನ್ನೈ 5 ಪಂದ್ಯಗಳಲ್ಲಿ ಗೆದ್ದರೆ ಆರ್‌ಸಿಬಿ 4ರಲ್ಲಿ ಗೆದ್ದಿದೆ.‌

IPL_Entry_Point