IPL 2025: ಉದ್ಘಾಟನಾ ಸಮಾರಂಭದ ಕಳೆ ಹೆಚ್ಚಿಸಿದ ದಿಶಾ ಪಟಾನಿ ಡಾನ್ಸ್; ದಿಶಾ ಕಂಡು ಜಯ್ ಶಾ ಹರ್ಷೋದ್ಗಾರದ ಚಿತ್ರ ವೈರಲ್
ಐಪಿಎಲ್ 2025ರ ಉದ್ಘಾಟನಾ ಸಮಾರಂಭ ಕೋಲ್ಕತ್ತಾದಲ್ಲಿ ನಡೆಯಿತು. ಶಾರುಖ್ ಖಾನ್ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಶ್ರೇಯಾ ಘೋಷಾಲ್ ಹಾಡು ಗಮನ ಸೆಳೆಯಿತು. ದಿಶಾ ಪಟಾನಿ ಡಾನ್ಸ್ ಅಭಿಮಾನಿಗಳ ಜೋಶ್ ಇಮ್ಮಡಿಗೊಳಿಸಿತು. ಈ ವೇಳೆ ಜಯ್ ಶಾ ನೀಡಿದ ಪ್ರತಿಕ್ರಿಯೆ ವೈರಲ್ ಆಗಿದೆ.

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಐಪಿಎಲ್ 2025ರ (IPL Opening Ceremony 2025) ಆವೃತ್ತಿಗೆ ಅದ್ಧೂರಿ ಚಾಲನೆ ಸಿಕ್ಕಿತು. ಕೆಕೆಆರ್ ಮತ್ತು ಆರ್‌ಸಿಬಿ (Kolkata Knight Riders vs Royal Challengers Bengaluru) ತಂಡಗಳ ನಡುವೆ ಮೊದಲ ಪಂದ್ಯ ಆರಂಭವಾಗುವ ಮುನ್ನ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಿತು. ಹಲವು ಸ್ಟಾರ್ ಸೆಲೆಬ್ರಿಟಿಗಳು ಉದ್ಘಾಟನಾ ಸಮಾರಂಭದ ಜೋಶ್ ಹೆಚ್ಚಿಸಿದರು. ಈ ವೇಳೆ ಬಾಲಿವುಡ್ ನಟಿ ದಿಶಾ ಪಟಾನಿ (Disha Patani) ತಮ್ಮ ಆಕರ್ಷಕ ಡಾನ್ಸ್‌ನಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನೆರೆದಿದ್ದ ಫ್ಯಾನ್ಸ್ ಖುಷಿಪಟ್ಟರು.
ದಿಶಾ ಡಾನ್ಸ್‌ಗೆ ಐಸಿಸಿ ಅಧ್ಯಕ್ಷ ಹಾಗೂ ಬಿಸಿಸಿಐ ಮಾಜಿ ಕಾರ್ಯದರ್ಶಿ ಜಯ್ ಶಾ ಖುಷಿಯಿಂದ ಹರ್ಷೋದ್ಘಾರ ಮಾಡಿದ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದಿಶಾ ಡಾನ್ಸ್ ನೋಡಿ ಜಯ್ ಶಾ ಹರ್ಷೋದ್ಗಾರದ ವ್ಯಕ್ತಪಡಿಸಿದ್ದಾರೆ ಎಂದು ನೆಟ್ಟಿಗರು ಫೋಟೋಸ್ ಹಂಚಿಕೊಳ್ಳುತ್ತಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ದಿಶಾ ಪಟಾನಿ ಅವರ ಪ್ರದರ್ಶನ ವೀಕ್ಷಿಸಿದ ಐಸಿಸಿ ಅಧ್ಯಕ್ಷ ಜಯ್ ಶಾ ಅವರ ಪ್ರತಿಕ್ರಿಯೆ ಹೀಗಿತ್ತು ಎಂದು ಸೋಷಿಯಲ್ ಮೀಡಿಯಾ ಬಳಕೆದಾರರು ಫೋಟೋ ಹಂಚಿಕೊಂಡಿದ್ದಾರೆ.
ದಿಶಾ ಡಾನ್ಸ್ ನಡುವೆ ಮಧ್ಯದಲ್ಲಿ ಒಮ್ಮೆ ನೇರಪ್ರಸಾರದಲ್ಲಿ ತೊಡಕು ಉಂಟಾಯಿತು. ವೀಕ್ಷಕವಿವರಣೆಕಾರರು ಇದ್ದಕ್ಕಿದ್ದಂತೆ ಆರಂಭಿಕ ಪಂದ್ಯದ ಬಗ್ಗೆ ಚರ್ಚೆ ನಡೆಸುವ ದೃಶ್ಯಗಳು ಪ್ರಸಾರವಾದವು. ಇದು ನೇರಪ್ರಸಾರ ವೀಕ್ಷಿಸುತ್ತಿದ್ದ ಅಭಿಮಾನಿಗಳ ಅಸಮಾಧಾನಕ್ಕೂ ಕಾರಣವಾಯ್ತು. ಈ ಕುರಿತು ಕೆಲವು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಶ್ವೇತವಸ್ತ್ರ ಧರಿಸಿ ದಿಶಾ ಡಾನ್ಸ್ ಮಾಡಿದರೆ, ಅವರಿಗೆ ಒಂದಷ್ಟು ನೃತ್ಯಕಲಾವಿದರು ಸಾಥ್ ನೀಡಿದರು. ಆ ನಂತರ ದಿಶಾ ಅವರು ಕರಣ್ ಔಜ್ಲಾ ಅವರೊಂದಿಗೆ ಪ್ರದರ್ಶನಕ್ಕಾಗಿ ವೇದಿಕೆಯಲ್ಲಿ ಸೇರಿಕೊಂಡರು. ದಿಶಾ ಅವರಿಗೂ ಮುನ್ನ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಶ್ರೇಯಾ ಘೋಷಾಲ್ ಪ್ರದರ್ಶನ ನೀಡಿದರು. ನಟ ಹಾಗೂ ಕೆಕೆಆರ್ ತಂಡದ ಮಾಲೀಕ್ ಶಾರುಖ್ ಖಾನ್ ಉದ್ಘಾಟನಾ ಸಮಾರಂಭವನ್ನು ನಡೆಸಿಕೊಟ್ಟರು.
18ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಯ ಫೈನಲ್ ಪಂದ್ಯ ಮೇ 25ರಂದು ನಡೆಯಲಿದೆ. ಭಾರತದ ಒಟ್ಟು 13 ಕ್ರೀಡಾಂಗಣದಲ್ಲಿ 74 ಪಂದ್ಯಗಳು ನಡೆಯಲಿದ್ದು, ಇದರಲ್ಲಿ 12 ಡಬಲ್ ಹೆಡರ್ ಪಂದ್ಯಗಳು ಸೇರಿವೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿವೆ.
