ಕನ್ನಡ ಸುದ್ದಿ  /  ಕ್ರಿಕೆಟ್  /  Secrets Of Kkr: ಕ್ರಿಕೆಟ್ ಅಂದ್ರೆ ಒಬ್ಬರ ಆಟವಲ್ಲ, ತಂಡವಾಗಿ ಆಡಿದ್ರೆ ಮಾತ್ರ ಕಪ್ ಗೆಲ್ಲಲು ಸಾಧ್ಯ; ಸ್ಟಾರ್‌ಗಿರಿಯ ಹಂಗಿಲ್ಲದ ಕೆಕೆಆರ್‌

Secrets of KKR: ಕ್ರಿಕೆಟ್ ಅಂದ್ರೆ ಒಬ್ಬರ ಆಟವಲ್ಲ, ತಂಡವಾಗಿ ಆಡಿದ್ರೆ ಮಾತ್ರ ಕಪ್ ಗೆಲ್ಲಲು ಸಾಧ್ಯ; ಸ್ಟಾರ್‌ಗಿರಿಯ ಹಂಗಿಲ್ಲದ ಕೆಕೆಆರ್‌

ಐಪಿಎಲ್‌ 2024ರ ಟ್ರೋಫಿ ಗೆದ್ದ ಕೆಕೆಆರ್‌ ಸಂಭ್ರಮ ತಾರಕ್ಕೇರಿದೆ. ಟೂರ್ನಿಯುದ್ದಕ್ಕೂ ಪ್ರಬಲ ಪ್ರದರ್ಶನ ತೋರಿದ ತಂಡವು, ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಸಾಂಘಿಕ ಹೋರಾಟಕ್ಕೆ ತಕ್ಕ ಫಲಿತಾಂಶ ಸಿಕ್ಕಿದೆ. ಹಾಗಿದ್ದರೆ, ತಂಡದ ಗೆಲುವಿಗೆ ಪ್ರಮುಖ ಕಾರಣಗಳೇನು? ಯಾರ ಕೊಡುಗೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು ಎಂಬುದನ್ನು ನೋಡೋಣ.

ಕ್ರಿಕೆಟ್ ಅಂದ್ರೆ ಒಬ್ಬರ ಆಟವಲ್ಲ, ತಂಡವಾಗಿ ಆಡಿದ್ರೆ ಮಾತ್ರ ಕಪ್ ಗೆಲ್ಲಲು ಸಾಧ್ಯ
ಕ್ರಿಕೆಟ್ ಅಂದ್ರೆ ಒಬ್ಬರ ಆಟವಲ್ಲ, ತಂಡವಾಗಿ ಆಡಿದ್ರೆ ಮಾತ್ರ ಕಪ್ ಗೆಲ್ಲಲು ಸಾಧ್ಯ (AFP)

ಬರೋಬ್ಬರಿ 10 ವರ್ಷಗಳ ನಂತರ ಕೆಕೆಆರ್‌ ತಂಡವು ಮೂರನೇ ಟ್ರೋಫಿ ಗೆದ್ದ ಸಂಭ್ರಮದಲ್ಲಿದೆ. ಹಳದಿ ಬಣ್ಣವೇ ಎದ್ದು ಕಾಣುತ್ತಿದ್ದ ಚೆಪಾಕ್‌ ಮೈದಾನದಲ್ಲಿ ನೇರಳೆ ಬಣ್ಣ ಸದ್ದು ಮಾಡಿದೆ. 2012ರಲ್ಲಿ ಇದೇ ಮೈದಾನದಲ್ಲಿ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಕೋಲ್ಕತಾ ನೈಟ್ ರೈಡರ್ಸ್, ಇದೀಗ ಮತ್ತೆ ಟ್ರೋಫಿ ಗೆದ್ದಿದೆ. ಕಿಂಗ್ ಖಾನ್ ಸೈನ್ಯವು ಮತ್ತೊಂದು ಬಲಿಷ್ಠ ತಂಡ ಸನ್‌ರೈಸರ್ಸ್ ಹೈದರಾಬಾದ್ ಮಣಿಸಿ ಗೆಲುವಿನ ರುಚಿ ಕಂಡಿದೆ. 2014ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ಮಣಿಸಿ ಕೊನೆಯ ಬಾರಿಗೆ ಚಾಂಪಿಯನ್‌ ಆಗಿದ್ದ ಕೋಲ್ಕತಾ, ಮೂರನೇ ಪ್ರಶಸ್ತಿಗಾಗಿ 10 ವರ್ಷಗಳ ಕಾಲ ಕಾಯಬೇಕಾಯ್ತು. ಹಾಗಂತಾ ತಂಡದ ಗೆಲುವು ಸುಲಭವಾಗಿ ಬಂದಿದ್ದಲ್ಲ. ಇದಕ್ಕೆ ತಂಡದ ಒಗ್ಗಟ್ಟಿನ ಹೋರಾಟವೇ ಕಾರಣ.

ಟ್ರೆಂಡಿಂಗ್​ ಸುದ್ದಿ

ಹಾಗಿದ್ದರೆ, ಐಪಿಎಲ್‌ 2024ರ ಟ್ರೋಫಿ ಗೆಲುವಿನಲ್ಲಿ ತಂಡದ ಕೈಹಿಡಿದಿದ್ದೇನು? ತಂಡದ ಗೆಲುವುನ ಸೀಕ್ಷೆಟ್‌ ಹಾಗೂ ತಂತ್ರಗಳೇನು ಎಂಬುದನ್ನು ನೋಡೋಣ.

ಸ್ಟಾರ್‌ಗಿರಿಗಿಂತಲೂ ತಂಡವಾಗಿ ಪ್ರದರ್ಶನಕ್ಕೆ ಒತ್ತು

ಕೆಕೆಆರ್‌ ತಂಡದಲ್ಲಿ ಯಾವ ಸ್ಟಾರ್‌ ಗಿರಿಯೂ ಇಲ್ಲ. ಒಬ್ಬನನ್ನೇ ಅತಿಯಾಗಿ ಕೊಂಡಾಡುವ ಪರಿಪಾಠವೂ ಇಲ್ಲ. ಅತಿ ಹೆಚ್ಚು ಬೆಂಬಲಿಗರು ಇರುವಂಥ ಆಟಗಾರರು ತಂಡದಲ್ಲಿಲ್ಲ. ಆದರೆ, ಪ್ರದರ್ಶನದ ವಿಚಾರವಾಗಿ ಎಲ್ಲರೂ ಬಲಿಷ್ಠರು. ಸ್ಟಾರ್‌ಗಿರಿಗಿಂತ ಈ ತಂಡದಲ್ಲಿ ಎಲ್ಲರ ಪ್ರದರ್ಶನಕ್ಕೆ ಒತ್ತು ಸಿಕ್ಕಿದೆ. ಅಭಿಮಾನಿಗಳು ಕೂಡಾ ಯಾವುದೋ ಒಬ್ಬ ಆಟಗಾರನ ಸಲುವಾಗಿ ಪಂದ್ಯ ನೋಡದೆ, ತಂಡದ ಗೆಲುವನ್ನೇ ಸಂಭ್ರಮಿಸಿದ್ದಾರೆ. ಇದು ತಂಡವನ್ನು ಫೈನಲ್‌ವರೆಗೆ ತಂದು ನಿಲ್ಲಿಸಿದೆ.

ಅನ್‌ಕ್ಯಾಪ್ಟ್‌ ಆಟಗಾರರ ಅಬ್ಬರದಾಟ

ಕೆಕೆಆರ್‌ ತಂಡದ ಯಶಸ್ಸಿನಲ್ಲಿಅನ್‌ಕ್ಯಾಪ್ಡ್‌ ಆಟಗಾರರ ಕೊಡುಗೆ ಕೂಡಾ ದೊಡ್ಡದು. ರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸಿದ ಆಟಗಾರರ ನಡುವೆ, ಮೂವರು ಭಾರತೀಯ ಅನ್‌ಕ್ಯಾಪ್ಡ್ ಆಟಗಾರರು ತಂಡದಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು. ಅವರೇ ರಮಣ್‌ದೀಪ್ ಸಿಂಗ್, ಹರ್ಷಿತ್ ರಾಣಾ ಮತ್ತು ವೈಭವ್ ಅರೋರಾ. ಹರ್ಷಿತ್ ಮತ್ತು ವೈಭವ್ ಫೈನಲ್‌ ಪಂದ್ಯದಲ್ಲೂ ವಿಕೆಟ್‌ ಕಬಳಿಸಿದರು. ರಾಣಾ ಟೂರ್ನಿಯಲ್ಲಿ 17 ವಿಕೆಟ್‌ ಕಬಳಿಸಿದ್ದಾರೆ. ಇದು ಈ ಆವೃತ್ತಿಯಲ್ಲಿ ಅನ್‌ಕ್ಯಾಪ್ಡ್‌ ಆಟಗಾರನೊಬ್ಬ ಪಡೆದ ಅತಿ ಹೆಚ್ಚು ವಿಕೆಟ್‌. ಮಧ್ಯಮ ಓವರ್‌ಗಳಲ್ಲಿ ಇವರ ವಿಕೆಟ್ ಟೇಕಿಂಗ್‌ ಸಾಮರ್ಥ್ಯ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಗೌತಮ್‌ ಗಂಭೀರ್‌ ಆಕ್ರಮಣಕಾರಿ ಆಟದ ತಂತ್ರ

ಕೆಕೆಆರ್ ಗೆಲುವಿನಲ್ಲಿ ಮೆಂಟರ್‌ ಆಗಿರುವ ಗೌತಮ್ ಗಂಭೀರ್ ಪಾತ್ರ ತುಂಬಾ ದೊಡ್ಡದು. ಪಂದ್ಯದ ಬಳಿಕ, ಶಾರುಖ್‌ ಖಾನ್‌ ಕೂಡಾ ಖುಷಿಯಿಂದ ಗಂಭೀರ್‌ ಹಣೆಗೆ ಮುತ್ತಿಟ್ಟಿದ್ದನ್ನು ನೀವು ನೋಡಿರಬಹುದು. ತಂಡದ ಗೆಲುವಿನಲ್ಲಿ ಅವರ ಪಾತ್ರ ಎಂಥದ್ದು ಎಂಬುದಕ್ಕೆ ಬೇರೆ ಉದಾಹರಣೆ ಬೇಕಿಲ್ಲ. ಪ್ರಸಕ್ತ ಆವೃತ್ತಿಗೂ ಮುಂಚಿತವಾಗಿ ತಂಡದ ಮೆಂಟರ್‌ ಆಗಿ ಗೌತಿ ಮರಳಿದ ಕೂಡಲೇ, ಕೆಕೆಆರ್‌ ಅದೃಷ್ಟ ಬದಲಾಯಿತು. ಸಂಪೂರ್ಣ ತಂಡವನ್ನು ಒಂದೇ ದಾರದಲ್ಲಿ ಕಟ್ಟಿ ಹಾರಿಸಿದರು. ಆ ಗಾಳಿಪಟ ಇಂದು ಎಷ್ಟು ಎತ್ತರದಲ್ಲಿ ಹಾರುತ್ತಿದೆ ಎಂಬುದು ನಮ್ಮ ಕಣ್ಣ ಮುಂದಿದೆ. ಮೆಂಟರ್‌ ಆಗಿ ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳು ತಂಡದ ಕೈ ಹಿಡಿದವು. ಸುನಿಲ್ ನರೈನ್ ಆರಂಭಿಕರಾಗಿ ಕಣಕ್ಕಿಳಿಯುವುದು ಇದರಲ್ಲಿ ಮಹತ್ವದ್ದು. ಅಲ್ಲದೆ ಆಕ್ರಮಣಕಾರಿ ಆಟವನ್ನೇ ತಂಡ ಗೆಲುವಿನ ಮಂತ್ರವಾಗಿಸಿದ್ದು ವಿಶೇಷ.

ಸರಣಿ ಆರಂಭದಿಂದಲೂ ಹೊಂದಾಣಿಕೆ ಆಟ

ಈ ಬಾರಿ ತಂಡದಲ್ಲಿ ವಿಶೇಷ ಒಗ್ಗಟ್ಟು ಕಂಡುಬಂದಿದೆ. ಆಟಗಾರರು ಮಾತ್ರವಲ್ಲದೆ ಗಂಭೀರ್ ಅವರ ಮಂತ್ರ-ತಂತ್ರಗಳು ಕೆಕೆಆರ್‌ಗೆ ಸ್ಫೂರ್ತಿ ನೀಡಿದೆ. ಪ್ರತಿಯೊಬ್ಬ ಆಟಗಾರ ಕೂಡಾ ಪ್ರತಿ ಪಂದ್ಯದಲ್ಲೂ ಗೆಲುವಿಗಾಗಿ ಕೊಡುಗೆ ನೀಡಿದ್ದಾರೆ. ತಂಡವು ಯಾವುದೇ ಒಬ್ಬ ಆಟಗಾರನನ್ನು ನೆಚ್ಚಿಕೊಂಡಿಲ್ಲ. ಎಲ್ಲರೂ ಸಮನಾಗಿ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನ ಪಡೆದು ತಂಡವು ಲೀಗ್ ಹಂತವನ್ನು ಮುಗಿಸಿತು. ನಂತರ, ಫೈನಲ್‌ನಲ್ಲೂ ಗೆದ್ದು ಬೀಗಿತು.

ನಾಯಕತ್ವದ ಜವಾಬ್ದಾರಿ ಚುರುಕಾಗಿ ನಿಭಾಯಿಸಿದ ಶ್ರೇಯಸ್‌ ಅಯ್ಯರ್‌

ಪಂದ್ಯಾವಳಿಯುದ್ದಕ್ಕೂ ಶ್ರೇಯಸ್ ಅಯ್ಯರ್ ನಾಯಕತ್ವ ಮೆಚ್ಚಲೇಬೇಕು. ಫೈನಲ್‌ನಲ್ಲಿಯೂ ಶ್ರೇಯಸ್ ಉತ್ತಮ ನಾಯಕತ್ವ ವಹಿಸಿದ್ದಾರೆ. ಟಾಸ್ ಸೋಲು ಹೊರತುಪಡಿಸಿದರೆ, ಅವರು ಯಾವುದೇ ತಪ್ಪು ಮಾಡಿಲ್ಲ. ಬೌಲರ್‌ಗಳನ್ನು ಸಮರ್ಥವಾಗಿ ಬಳಸಿಕೊಂಡ ಅವರು, ಸಂದರ್ಭಕ್ಕೆ ತಕ್ಕನಾಗಿ ಬದಲಾವಣೆ ಮಾಡಿದರು. ತಂಡದ ಅಗತ್ಯಗಳಿಗಾಗಿ ತಕ್ಕನಾಗಿ ನಿರ್ಧಾರ ತೆಗೆದುಕೊಂಡರು. ತಂಡಕ್ಕೆ ಅಗತ್ಯಬಿದ್ದಾಗ ಬ್ಯಾಟ್‌ನೊಂದಿಗೆ ನಾಯಕನ ಇನ್ನಿಂಗ್ಸ್ ಆಡಿದರು.

ಎದುರಾಳಿಯ ದೌರ್ಬಲ್ಯ ಗುರುತಿಸಿ ಲಾಭ ಪಡೆದುಕೊಂಡ ಕೆಕೆಆರ್

ಚೆನ್ನೈ ಪಿಚ್‌ ಮಹಿಮೆಯನ್ನು ಕೆಕೆಆರ್‌ ಸರಿಯಾಗಿ ಅರ್ಥಮಾಡಿಕೊಂಡಿತ್ತು. ಇಲ್ಲಿ ಚೇಸಿಂಗ್‌ ಮಾಡುವುದು ಸೂಕ್ತ ಎಂಬುದನ್ನು ಅರಿತುಕೊಂಡಿತು. ಹೀಗಾಗಿ ಟಾಸ್‌ ಸೋತರೂ, ನಮಗೆ ಚೇಸಿಂಗೇ ಬೇಕಿತ್ತು ಎಂದು ಅಯ್ಯರ್ ಹೇಳಿದರು. ಪವರ್‌ಪ್ಲೇನಲ್ಲಿ ಎದುರಾಳಿಯನ್ನು ಕಟ್ಟಿಹಾಕಿದರೆ ತಂದ ಗೆಲುವು ಖಚಿತ ಎಂಬುದು ಕೆಕೆಆರ್‌ಗೆ ಗೊತ್ತಿತ್ತು. ಅದರಂತೆ ಮಿಚೆಲ್ ಸ್ಟಾರ್ಕ್ ಎಂಬ ಅಸ್ತ್ರ ಪ್ರಯೋಗಿಸಿ‌ ತಂಡ ಮೇಲುಗೈ ಸಾಧಿಸಿತು. ಎಸ್‌ಆರ್‌ಎಚ್‌ ತಂಡಕ್ಕೆ ಆರಂಭಿಕರಾದ ಹೆಡ್‌ ಹಾಗೂ ಅಭಿಷೇಕ್‌ ಜೋಡಿಯೇ ದೊಡ್ಡ ಸಾಮರ್ಥ್ಯವಾಗಿತ್ತು. ಇವರಿಬ್ಬರನ್ನೂ ಬಲು ಬೇಗನೆ ಔಟ್‌ ಮಾಡಿ ದೊಡ್ಡ ಮುನ್ನಡೆ ಸಾಧಿಸಿತು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024