ನೆನಪಿದೆಯಾ 2021ರ ಗಬ್ಬಾ ಟೆಸ್ಟ್; ಆಸ್ಟ್ರೇಲಿಯಾ ಭದ್ರಕೋಟೆ ಭೇದಿಸಿತ್ತು ಭಾರತ, ಈ ಬಾರಿ ಮರುಕಳಿಸುತ್ತಾ ಇತಿಹಾಸ?
2021ರ ಐತಿಹಾಸಿಕ ಗಬ್ಬಾ ಟೆಸ್ಟ್ ಪಂದ್ಯ ಭಾರತ ತಂಡದ ಪಾಲಿಗೆ ಸದಾ ಹಸಿರು. ಆಸ್ಟ್ರೇಲಿಯಾ ಅಜೇಯ ಗೆಲುವಿನ ದಾಖಲೆ ಹೊಂದಿದ್ದ ಮೈದಾನದಲ್ಲಿ ಪಂದ್ಯದ ಜೊತೆಗೆ ಭಾರತ ಸರಣಿಯನ್ನೂ ವಶಪಡಿಸಿಕೊಂಡಿತು. 2021ರ ಆ ಗಬ್ಬಾ ಗೆಲುವು ಈ ಬಾರಿಯ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಮತ್ತೆ ಪುನರಾವರ್ತನೆಯಾಗುತ್ತಾ ಎಂಬ ನಿರೀಕ್ಷೆ ಟೀಮ್ ಇಂಡಿಯಾದ್ದು.
ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯವು ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆಯಲಿದೆ. ಗಬ್ಬಾ ಎಂದಾಗ ನೆನಪಿಗೆ ಬರುವುದೇ 2021ರ ಆ ಐತಿಹಾಸಿಕ ಟೆಸ್ಟ್ ಪಂದ್ಯ. ಭಾರತ ಗೆಲ್ಲುವುದೇ ಇಲ್ಲ ಎಂಬಂತಿದ್ದ ಪಂದ್ಯವು, ಯುವ ಆಟಗಾರರ ಬಿಡದ ಛಲ ಹಾಗೂ ಸಾಂಘಿಕ ಹೋರಾಟದಿಂದಾಗಿ ಗೆಲುವು ಟೀಮ್ ಇಂಡಿಯಾ ಪಾಲಾಯಿತು. ಅದರೊಂದಿಗೆ 2-1 ಅಂತರದಿಂದ ಆಸೀಸ್ ನೆಲದಲ್ಲಿ ಸರಣಿ ಭಾರತದ ವಶವಾಯ್ತು. ಈ ಬಾರಿ ಈವರೆಗೂ ಸರಣಿಯು 1-1 ಅಂತರದಿಂದ ಸಮಬಲಗೊಂಡಿದೆ. 2021ರ ಆ ಸನ್ನಿವೇಶ ಗಬ್ಬಾದಲ್ಲಿ ಮತ್ತೆ ಪುನರಾವರ್ತನೆಯಾಗುತ್ತಾ ಎಂಬ ನಿರೀಕ್ಷೆ ಅಭಿಮಾನಿಗಳದ್ದು.
ಈ ಬಾರಿಯ ಸರಣಿಯಲ್ಲಿ ಭಾರತದ ಪರ್ತ್‌ನಲ್ಲಿ ಶುಭಾರಂಭ ಮಾಡಿತು. ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ 295 ರನ್‌ಗಳ ಗೆಲುವು ದಾಖಲಿಸಿತು. ಆದರೆ, ಅಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಆತಿಥೇಯ ಆಸೀಸ್ ಪುಟಿದೆದ್ದಿತು. ಪಿಂಕ್ ಬಾಲ್ ಟೆಸ್ಟ್ ದಾಖಲೆ ಮುಂದುವರೆಸಿದ ಕಾಂಗರೂಗಳು 10 ವಿಕೆಟ್‌ಗಳಿಂದ ಗೆದ್ದರು. ಈಗ ಮೂರನೇ ಟೆಸ್ಟ್‌ಗಾಗಿ ತಂಡವು ಬ್ರಿಸ್ಬೇನ್‌ನ ಗಬ್ಬಾಕ್ಕೆ ತೆರಳಿದೆ. 2021ರ ಐತಿಹಾಸಿಕ ವಿಜಯದ ನೆನಪು ಆಟಗಾರ ಆತ್ಮವಿಶ್ವಾಸ ಹೆಚ್ಚಿಸಿದೆ.
2021ರಲ್ಲಿ ಗಬ್ಬಾದಲ್ಲಿ ಏನಾಗಿತ್ತು?
ಅದು ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಕೊನೆಯ, ಅಂದರೆ ನಾಲ್ಕನೇ ಪಂದ್ಯ. ಅದುವರೆಗಿನ ಮೂರು ಪಂದ್ಯಗಳಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಲಾ ಒಂದು ಪಂದ್ಯಗಳನ್ನು ಗೆದ್ದರೆ, ಇನ್ನೊಂದು ಪಂದ್ಯ ಡ್ರಾ ಆಗಿತ್ತು. ಸರಣಿ ಸಮಬಲವಾಗಿದ್ದರಿಂದ, ಗಬ್ಬಾ ಟೆಸ್ಟ್ ನಿರ್ಣಾಯಕವಾಗಿತ್ತು. ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕತ್ವ ವಹಿಸಿದ್ದ ವಿರಾಟ್ ಕೊಹ್ಲಿ, ನಂತರದ ಪಂದ್ಯಗಳಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಜಿಂಕ್ಯಾ ರಹಾನೆ ನಾಯಕತ್ವದಲ್ಲಿ ಯುವ ಆಟಗಾರರೇ ಟೀಮ್ ಇಂಡಿಯಾದಲ್ಲಿದ್ದರು. ಆದರೆ, ಆಟಗಾರರ ಛಲ, ತಂಡದ ಮನೋಭಾವ ಪಂದ್ಯದ ದಿಕ್ಕನ್ನೇ ಬದಲಿಸಿತು.
ಪಂದ್ಯದ ಅಂತಿಮ ಹಾಗೂ ನಿರ್ಣಾಯಕ ದಿನದಂದು ಭಾರತದ ಮುಂದೆ 328 ರನ್‌ಗಳ ಬೆಟ್ಟದಂಥಾ ಗುರಿ ಇತ್ತು. ಆದರೆ, ತಂಡದ ಸಾಂಘಿಕ ಹೋರಾಟ ಗೆಲುವನ್ನು ಸನಿಹ ತಂದಿತು. 3 ವಿಕೆಟ್‌ಗಳ ರೋಚಕ ಜಯ ಸಾಧಿಸುವುದರೊಂದಿಗೆ ಭಾರತ 2-1 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿತು. ಪ್ರಮುಖ ಆಟಗಾರರನ್ನು ಗಾಯಗಳಿಂದ ಕಳೆದುಕೊಂಡರೂ, ನಿಯಮಿತ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯ ಹೊರತಾಗಿಯೂ, ತಂಡದ ಪ್ರಬುದ್ಧ ಆಟ ಕ್ರಿಕೆಟ್ ಲೋಕದ ಮನಗೆದ್ದಿತು.
ಆರಂಭದಲ್ಲೇ ಶುಭ್ಮನ್ ಗಿಲ್ ಅವರ ಆಕರ್ಷಕ 91 ರನ್, ಚೇತೇಶ್ವರ ಪೂಜಾರ ಅವರ 56 ರನ್‌ಗಳು ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿತು. ಸುದೀರ್ಘ ಇನ್ನಿಂಗ್ಸ್‌ನಲ್ಲಿ ಪೂಜಾರ ಆಗಾಗ ಸಣ್ಣ ಸಣ್ಣ ಗಾಯ ಅನುಭವಿಸಿದರು. ಆದರೂ ಬೆಟ್ಟದಂತೆ ಗಟ್ಟಿಯಾಗಿ ನಿಂತು ಆಸೀಸ್ ವೇಗಿಗಳ ಬೆಂಕಿ ದಾಳಿಯನ್ನು ಎದುರಿಸಿದರು. ತಂಡದ ಪರ ನಿರ್ಣಾಯಕ ಆಟವಾಡಿದವರು ರಿಷಬ್ ಪಂತ್. ತನ್ನ ವೃತ್ತಿಬದುಕಿನ ಉದ್ದಕ್ಕೂ ನೆನಪಿನಲ್ಲಿ ಇಟ್ಟುಕೊಳ್ಳುವ ಇನ್ನಿಂಗ್ಸ್ ಎಂದು ತಮ್ಮ ಪ್ರದರ್ಶನದ ಬಗ್ಗೆ ಪಂತ್ ಖುದ್ದು ಹೇಳಿಕೊಂಡಿದ್ದರು. ಅಜೇಯ 89 ರನ್ ಗಳಿಸುವುದರೊಂದಿಗೆ ಭಾರತ ತಂಡವನ್ನು ಐತಿಹಾಸಿಕ ಗೆಲುವಿನತ್ತ ಮುನ್ನಡೆಸಿದರು.
ಆಸೀಸ್ ಭದ್ರಕೋಟೆಯಲ್ಲಿ ಮೆರೆದ ಭಾರತ
ಈ ಗೆಲುವು ಭಾರತಕ್ಕೆ ಅಷ್ಟೊಂದು ವಿಶೇಷವಾಗಲು ಕಾರಣವಿದೆ. ಹೇಳಿಕೇಳಿ ಗಬ್ಬಾ ಮೈದಾನ, ಆಸ್ಟ್ರೇಲಿಯಾದ ಭದ್ರಕೋಟೆ. 1988ರಿಂದ ಗಬ್ಬಾ ಮೈದಾನದಲ್ಲಿ ಆಸ್ಟ್ರೇಲಿಯಾ ಸೋತ ಇತಿಹಾಸವೇ ಇರಲಿಲ್ಲ. ಅಂದರೆ ಅದುವರೆಗೂ ಸತತ 31 ಪಂದ್ಯಗಳ ಅಜೇಯ ದಾಖಲೆಯನ್ನು ಬ್ರಿಸ್ಬೇನ್ ಅಂಗಳದಲ್ಲಿ ಆಸೀಸ್ ಬರೆದಿತ್ತು. ಸವಾಲಿನ ಪಿಚ್‌ನಲ್ಲಿ ಬೆಂಕಿಯಾಟ ಆಡಿದ್ದು ಮಾತ್ರ ಭಾರತ. ಕಾಂಗರೂಗಳನ್ನು ಅವರದ್ದೇ ನೆಲಕ್ಕೆ ನುಗ್ಗಿ ಗಬ್ಬಾ ಭದ್ರಕೋಟೆಯನ್ನು ಭೇದಿಸಿದ ಅಮೋಘ ಚೇಸಿಂಗ್ ಇತಿಹಾಸದ ಪುಟ ಸೇರಿತು.
ಈ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್‌ನ ಆಳ ಗಮನ ಸೆಳೆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ತಲಾ ಅರ್ಶತಕ ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದ್ದರು. ರಹಾನೆ ತಮ್ಮ ನಾಯಕತ್ವದ ಪ್ರಬುದ್ಧತೆ ತೋರಿಸಿದರು. ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದರು. ಅನುಭವಿ ಆಟಗಾರರೊಂದಿಗೆ ಪಂತ್ ಹಾಗೂ ಗಿಲ್ ನಿರ್ಣಾಯಕ ಕೊಡುಗೆ ನೀಡಿದರು. ಪಂದ್ಯದ ಕೊನೆಗೆ ಪಂತ್ ಮಾಸ್ಟರ್‌ಕ್ಲಾಸ್ ಚೇಸಿಂಗ್ ಗಮನ ಸೆಳೆದರೂ, ತಂಡದ ಸಾಮೂಹಿಕ ಪ್ರಯತ್ನ ಎದ್ದು ಕಾಣುತ್ತಿತ್ತು.
ಗಬ್ಬಾದಲ್ಲಿ ಭಾರತ ತಂಡವು ಇದುವರೆಗೆ ಏಳು ಪಂದ್ಯಗಳನ್ನು ಆಡಿದೆ. ಆದರೆ ಕೇವಲ ಆ ಒಂದು ಗೆಲುವು ಮಾತ್ರ ಕಂಡಿದೆ. ಹೀಗಾಗಿ ಕೊನೆಯದಾಗಿ ಗಬ್ಬಾದಲ್ಲಿ ಆಡಿದ ಪಂದ್ಯ ಹಾಗೂ ಗೆಲುವಿನ ನೆನಪು ಟೀಮ್ ಇಂಡಿಯಾ ಆತ್ಮವಿಶ್ವಾಸ ಹೆಚ್ಚಿಸಲಿದೆ. ಮತ್ತೆ 2021ರ ವಿಜಯೋತ್ವ ಮರುಕಳಿಸುತ್ತಾ ಎಂಬುದನ್ನು ಕಾದು ನೋಡೋಣ.