ಕನ್ನಡ ಸುದ್ದಿ  /  Cricket  /  Relieve Me Of My Political Duties Gautam Gambhir Request Bjp President Jp Nadda His Post Takes Social Media By Storm Prs

ಲೋಕಸಭಾ ಚುನಾವಣೆಗೂ ಮೊದಲೇ ಗೌತಮ್ ಗಂಭೀರ್​​ ರಾಜಕೀಯ ನಿವೃತ್ತಿ​; ಕಾರಣ ಮತ್ತು ಮುಂದಿನ ನಡೆ ಏನು?

ಲೋಕಸಭೆ ಚುನಾವಣೆಯ ಸಮೀಪದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ದೆಹಲಿ ಸಂಸದ ಗೌತಮ್ ಗಂಭೀರ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇದು ಪಕ್ಷದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ

ಲೋಕಸಭಾ ಚುನಾವಣೆಗೂ ಮೊದಲೇ ಗೌತಮ್ ಗಂಭೀರ್​​ ರಾಜಕೀಯ ನಿವೃತ್ತಿ
ಲೋಕಸಭಾ ಚುನಾವಣೆಗೂ ಮೊದಲೇ ಗೌತಮ್ ಗಂಭೀರ್​​ ರಾಜಕೀಯ ನಿವೃತ್ತಿ

ಭಾರತದ ಮಾಜಿ ಕ್ರಿಕೆಟಿಗ ಹಾಗೂ ದೆಹಲಿ ಸಂಸದ ಗೌತಮ್ ಗಂಭೀರ್ (Gautam Gambhir) ಅವರು ತಮ್ಮನ್ನು ರಾಜಕೀಯ ಕರ್ತವ್ಯದಿಂದ ಮುಕ್ತಗೊಳಿಸುವಂತೆ ಕೋರಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ (JP Nadda) ಅವರಿಗೆ ಶನಿವಾರ ಮನವಿ ಮಾಡಿದ್ದಾರೆ. ಲೋಕಸಭೆ ಚುನಾವಣೆಯ ಸಮೀಪದಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಪಕ್ಷದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಸಕ್ರಿಯ ರಾಜಕೀಯದಿಂದ ಹಿಂದೆ ಸರಿಯುವ ಕುರಿತು ಮಾಹಿತಿ ನೀಡಿದ್ದಾರೆ.

2019ರ ಮಾರ್ಚ್​​ನಲ್ಲಿ ಕೇಂದ್ರ ಸಚಿವರಾದ ದಿವಂಗತ ಅರುಣ್ ಜೇಟ್ಲಿ ಮತ್ತು ರವಿಶಂಕರ್​ ಪ್ರಸಾದ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದ ಗಂಭೀರ್, 2019ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಪೂರ್ವ ದೆಹಲಿಯಿಂದ ಬಿಜೆಪಿ ಪರ ಕಣಕ್ಕಿಳಿದಿದ್ದರು. ಅತಿಶಿ ಮರ್ಲೆನಾ ಮತ್ತು ಅರವಿಂದರ್ ಸಿಂಗ್ ಲವ್ಲಿ ವಿರುದ್ಧ ಗೆದ್ದು ಸಂಸತ್ತಿಗೆ ಪ್ರವೇಶಿಸಿದ್ದರು. ಈಗ ರಾಜಕೀಯ ನಿವೃತ್ತಿಯ ನಿರ್ಧಾರ ಕೈಗೊಂಡಿರುವ ಗಂಭೀರ್, ಜನರ ಸೇವೆಗೆ ಅವಕಾಶ ಮಾಡಿಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.

ಗಂಭೀರ್​ ಪೋಸ್ಟ್​ನಲ್ಲಿ ಏನಿದೆ?

ಮುಂಬರುವ ದಿನಗಳಲ್ಲಿ ಕ್ರಿಕೆಟ್​ ಬದ್ಧತೆಗಳ ಮೇಲೆ ಗಮನ ಹರಿಸಬೇಕಾದ ಕಾರಣ ನನ್ನನ್ನು ರಾಜಕೀಯ ಕರ್ತವ್ಯದಿಂದ ಮುಕ್ತಿಗೊಳಿಸುವಂತೆ ನಾನು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಮನವಿ ಮಾಡಿದ್ದೇನೆ. ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಅತ್ಯಂತ ಪ್ರಾಮಾಣಿಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಜೈ ಹಿಂದ್ ಎಂದು ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಐಪಿಎಲ್​ನಲ್ಲಿ ಸೇವೆ ಸಲ್ಲಿಸಲು ಸಜ್ಜಾದ ಗಂಭೀರ್

ಲೋಕಸಭಾ ಚುನಾವಣೆ ಅವಧಿಯಲ್ಲಿ 17ನೇ ಆವೃತ್ತಿಯ ಐಪಿಎಲ್ ಸಹ ನಡೆಯಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿರುವ ಗಂಭೀರ್​, ಮತ್ತೊಮ್ಮೆ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಆ ಕಡೆ ರಾಜಕೀಯ ಪ್ರಚಾರ, ಈ ಕಡೆ ಐಪಿಎಲ್ ಸೇವೆ ಎರಡನ್ನೂ ಒಟ್ಟಿಗೆ ಮಾಡಲು ಸಾಧ್ಯವಿಲ್ಲದ ಕಾರಣ​ ಈ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್​ಗೆ ಸೇವೆ ಸಲ್ಲಿಸಿದ್ದರು.

ರಾಜಕಾರಣಿಯಾಗಿಯೂ ಗಂಭೀರ್​ ಉತ್ತಮ ಸೇವೆ ಸಲ್ಲಿಸಿದ್ದಾರೆ. ಗಂಭೀರ್ ಅವರು ತಮ್ಮ ಗೌತಮ್ ಗಂಭೀರ್ ಫೌಂಡೇಶನ್ ಮೂಲಕ ತಮ್ಮ ಕ್ಷೇತ್ರದಲ್ಲಿ ಕೋವಿಡ್-19 ಲಸಿಕೆ ಶಿಬಿರ ಪ್ರಾರಂಭಿಸಿದ್ದರು. ಅವರ ಕ್ಷೇತ್ರದಲ್ಲಿ ಬಿಜೆಪಿ 2020ರ ದೆಹಲಿ ಶಾಸಕಾಂಗ ಚುನಾವಣೆ ಮತ್ತು 2022 ದೆಹಲಿ ಎಂಸಿಡಿ ಚುನಾವಣೆಗಳಲ್ಲಿ ಉತ್ತಮ ಪ್ರದರ್ಶನ ನೀಡಿತು. ಅವರು ನಾಯಕನಾಗಿ 2012 ಮತ್ತು 2014 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಮಾಡಿದ್ದರು.

ಗಂಭೀರ್, ಭಾರತವನ್ನು ಟಿ20 (2007) ಮತ್ತು ಏಕದಿನ (2011) ವಿಶ್ವಕಪ್ ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದರು. 2011ರಲ್ಲಿ ಕೆಕೆಆರ್​​ಗೆ ಸೇರಿಕೊಂಡು 2017 ರವರೆಗೆ ತಂಡದಲ್ಲಿದ್ದರು. ಈ ಅವಧಿಯಲ್ಲಿ ಕೋಲ್ಕತ್ತಾ ಐದು ಬಾರಿ ಐಪಿಎಲ್ ಪ್ಲೇಆಫ್‌ಗಳಿಗೆ ಅರ್ಹತೆ ಪಡೆಯಿತು. ಇನ್ನು ಒಂದು ತಿಂಗಳಲ್ಲಿ ಚುನಾವಣೆ ಬರಲಿದ್ದು, ಬಿಜೆಪಿ ಅವರನ್ನು ರಾಜಕೀಯ ಕರ್ತವ್ಯಗಳಿಂದ ಮುಕ್ತಗೊಳಿಸುತ್ತಾರೋ ಅಥವಾ ಉಳಿಯುವಂತೆ ಪ್ರೇರೇಪಿಸುತ್ತಾರೋ ಕಾದು ನೋಡಬೇಕಾಗಿದೆ.

ಇನ್ನು ಭಾರತ ತಂಡದ ಪರ 147 ಏಕದಿನ, 58 ಟೆಸ್ಟ್, 37 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅವರು ಕ್ರಮವಾಗಿ 5238 ರನ್, 4154 ರನ್, 932 ರನ್ ಕಲೆ ಹಾಕಿದ್ದಾರೆ. ಐಪಿಎಲ್​ನಲ್ಲಿ 154 ಪಂದ್ಯಗಳಿಂದ 4218 ರನ್ ಗಳಿಸಿದ್ದಾರೆ.