ರಕ್ತ ಕ್ಯಾನ್ಸರ್ನಿಂದ ಬಳಲುತ್ತಿದ್ದ ಭಾರತದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಇನ್ನಿಲ್ಲ - Anshuman Gaekwad
Anshuman Gaekwad Dies: ಕ್ಯಾನ್ಸರ್ನಿಂದ ಬಳಲುತ್ತಿದ್ದ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್ ಅವರು ಜುಲೈ 31ರ ಬುಧವಾರ ನಿಧನರಾದರು.
ದೀರ್ಘಕಾಲದ ರಕ್ತ ಕ್ಯಾನ್ಸರ್ನೊಂದಿಗೆ ಬಳಲುತ್ತಿದ್ದ ಭಾರತದ ಮಾಜಿ ಕ್ರಿಕೆಟಿಗ ಹಾಗೂ ದಿಗ್ಗಜ ಕೋಚ್ ಅಂಶುಮಾನ್ ಗಾಯಕ್ವಾಡ್ (71) ಅವರು ಜುಲೈ 31ರ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಅಭಿಮಾನಿಗಳು ಅಂಶುಮಾನ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಗಾಯಕ್ವಾಡ್ 1975 ರಿಂದ 1987 ರವರೆಗೆ 40 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಟೆಸ್ಟ್ ಕ್ರಿಕೆಟ್ನಲ್ಲಿ 1985 ರನ್ ಗಳಿಸಿದ್ದರು. ದ್ವಿಶತಕ ಸೇರಿ 2 ಶತಕ ಮತ್ತು 10 ಅರ್ಧಶತಕ ಸಿಡಿಸಿದ್ದಾರೆ. ಪಾಕಿಸ್ತಾನ ವಿರುದ್ಧ 11 ಗಂಟೆಗಳ ಮ್ಯಾರಥಾನ್ ಇನ್ನಿಂಗ್ಸ್ನಲ್ಲಿ 201 ರನ್ ಗಳಿಸಿದ್ದೇ ಅವರ ಗರಿಷ್ಠ ಸ್ಕೋರ್ .
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಗಾಯಕ್ವಾಡ್ ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ ಸೂಚಿಸಿದ್ದಾರೆ. ‘ಅಂಶುಮಾನ್ ಗಾಯಕ್ವಾಡ್ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು. ಇಡೀ ಕ್ರಿಕೆಟ್ ಭ್ರಾತೃತ್ವಕ್ಕೆ ಹೃದಯ ವಿದ್ರಾವಕವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಹ ಸಂತಾಪ ಸೂಚಿಸಿದ್ದು, ಅಂಶುಮಾನ್ ಗಾಯಕ್ವಾಡ್ ಅವರು ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆಗಾಗಿ ಸ್ಮರಿಸಲ್ಪಡುತ್ತಾರೆ. ಪ್ರತಿಭಾನ್ವಿತ ಆಟಗಾರ ಮತ್ತು ಅತ್ಯುತ್ತಮ ತರಬೇತುದಾರರಾಗಿದ್ದರು. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
ಕ್ರಿಕೆಟಿಗರಿಂದ ಆರ್ಥಿಕ ನೆರವು
ಅಂಶುಮಾನ್ ಸಾವು ನೋವಿನಿಂದ ಹೋರಾಡುತ್ತಿದ್ದನ್ನು ಕಂಡು ಆರ್ಥಿಕ ನೆರವು ಘೋಷಿಸುವಂತೆ 1983ರ ವಿಶ್ವಕಪ್ ವಿಜೇತ ಕಪಿಲ್ ದೇವ್ ಅವರು ಬಿಸಿಸಿಐಗೆ ಮನವಿ ಮಾಡಿದ್ದರು. ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ ಅವರು 71 ವರ್ಷದ ಗಾಯಕ್ವಾಡ್ ಗಂಭೀರ ಸ್ಥಿತಿಯನ್ನು ಬೆಳಕಿಗೆ ತಂದರು. ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಲಂಡನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಹಿರಂಗಪಡಿಸಿದರು.
ತದನಂತರ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್ಸರ್ಕರ್ ಅವರು ಬಿಸಿಸಿಐ ಖಜಾಂಚಿ ಆಶಿಶ್ ಸೆಲಾರ್ ಅವರನ್ನು ಸಂಪರ್ಕಿಸಿ ಆರ್ಥಿಕ ನೆರವು ಕೋರಿಕೆಯನ್ನು ಪರಿಹರಿಸುವ ಭರವಸೆ ನೀಡಿದರು. ಇದಲ್ಲದೆ, ದಿಗ್ಗಜ ನಾಯಕ ಕಪಿಲ್ ದೇವ್ ಅವರು, ಗಾಯಕ್ವಾಡ್ಗೆ ದೇಣಿಗೆ ಸಂಗ್ರಹ ಮಾಡಿದ್ದರು. ಅಲ್ಲದೆ, ತನ್ನ ಪಿಂಚಣಿಯನ್ನೂ ನೀಡಲು ಮುಂದಾಗಿದ್ದರು.
ಕಪಿಲ್ ದೇವ್ ಜೊತೆಗೆ ಸಹ ಆಟಗಾರರಾದ ಮೊಹಿಂದರ್ ಅಮರನಾಥ್, ಸುನಿಲ್ ಗವಾಸ್ಕರ್, ಸಂದೀಪ್ ಪಾಟೀಲ್, ದಿಲೀಪ್ ವೆಂಗ್ಸರ್ಕರ್, ಮದನ್ ಲಾಲ್, ರವಿ ಶಾಸ್ತ್ರಿ ಮತ್ತು ಕೀರ್ತಿ ಆಜಾದ್ ಅವರಿಂದ ತಮ್ಮ ಆಟಗಾರನಿಗಾಗಿ ನಿಧಿ ಸಂಗ್ರಹಿಸಲು ಸಂಗ್ರಹಿಸಿದರು. ಜೊತೆಗೆ ಬಿಸಿಸಿಐಗೂ ಮನವಿ ಮಾಡಿದರು.
ಬಿಸಿಸಿಐನಿಂದ 1 ಕೋಟಿ ಬಿಡುಗಡೆ
ಕಪಿಲ್ ದೇವ್ ಮನವಿಯ ಬೆನ್ನಲ್ಲೇ ಬಿಸಿಸಿಐ, ಅಂಶುಮಾನ್ ಚಿಕಿತ್ಸೆಗಾಗಿ ಒಂದು ಕೋಟಿ ರೂಪಾಯಿ ನೆರವು ನೀಡಿತು. ಜಯ್ ಶಾ ಈ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದರು. ಗಾಯಕ್ವಾಡ್ ಕುಟುಂಬಕ್ಕೆ ಸಮಗ್ರ ಬೆಂಬಲದ ಭರವಸೆ ನೀಡುವ ಬಗ್ಗೆ ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿತ್ತು. ಅವರು ಚೇತರಿಸಿಕೊಳ್ಳುವ ಬಗ್ಗೆ ಆಶಾವಾದ ವ್ಯಕ್ತಪಡಿಸಿತ್ತು.
ಗಾಯಕ್ವಾಡ್ 1997 ರಿಂದ 1999 ಮತ್ತು 2000 ರಲ್ಲಿ ಎರಡು ಪ್ರತ್ಯೇಕ ಅವಧಿಗಳಲ್ಲಿ ಭಾರತೀಯ ಪುರುಷರ ತಂಡದ ಮುಖ್ಯಕೋಚ್ ಆಗಿದ್ದರು. ಅವರ ಅಧಿಕಾರಾವಧಿಯಲ್ಲಿ ಭಾರತವು 2000ರ ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್ನರ್ ಅಪ್ ಆಗಿತ್ತು. ಗಾಯಕ್ವಾಡ್ ಕೀನ್ಯಾ ತಂಡದೊಂದಿಗೂ ಕೆಲ ಕಾಲ ಸೇವೆ ಸಲ್ಲಿಸಿದ್ದರು. ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿಯ (ಸಿಎಸಿ) ಸದಸ್ಯರೂ ಆಗಿದ್ದರು. 2019 ರಲ್ಲಿ ರಾಜೀನಾಮೆ ನೀಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವರು ಭಾರತೀಯ ಕ್ರಿಕೆಟಿಗರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.