ಮಾಹಿಯಂತೆ ನಿವೃತ್ತಿ ಬಯಸಿದ್ದರಂತೆ ರೋಹಿತ್ ಶರ್ಮಾ; ಬಿಸಿಸಿಐ ತಿರಸ್ಕರಿಸಿದ ಬೆನ್ನಲ್ಲೇ ಟೆಸ್ಟ್‌ಗೆ ವಿದಾಯ ಘೋಷಣೆ!
ಇಂಗ್ಲೆಂಡ್ ಪ್ರವಾಸ ಮಾಡಿ ಸರಣಿಯ ಮಧ್ಯಭಾಗದಲ್ಲಿ ನಿವೃತ್ತಿ ಘೋಷಿಸುವ ಬಯಕೆಯನ್ನು ರೋಹಿತ್ ಶರ್ಮಾ ವ್ಯಕ್ತಪಡಿಸಿದ್ದರು. ಆದರೆ, ನಾಯಕತ್ವದಲ್ಲಿ ಸ್ಥಿರತೆಯ ಅಗತ್ಯವನ್ನು ಉಲ್ಲೇಖಿಸಿದ ಬಿಸಿಸಿಐ, ಹಿಟ್‌ಮ್ಯಾನ್ ಪ್ರಸ್ತಾಪವನ್ನು ತಿರಸ್ಕರಿಸಿತು ಎಂದು ವರದಿಯಾಗಿದೆ.

ಮೇ 7ರಂದು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಇದು ಅಭಿಮಾನಿಗಳನ್ನು ಅಚ್ಚರಿಗೆ ದೂಡಿತು. ಜೂನ್ 20ರಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುಂಚಿತವಾಗಿ ಭಾರತದ ಮಾಜಿ ನಾಯಕನ ಹಠಾತ್ ನಿರ್ಧಾರವು ಹಲವು ಗೊಂದಲಗಳಿಗೆ ಕಾರಣವಾಗಿದ್ದು ಸುಳ್ಳಲ್ಲ. ಮಹತ್ವದ ಸರಣಿಯಿದ್ದರೂ, ಅದಕ್ಕೂ ಮುನ್ನ ದಿಢೀರನೆ ಹಿಟ್‌ಮ್ಯಾನ್ ಇಂಥಾ ನಿರ್ಧಾರ ತೆಗೆದುಕೊಂಡಿದ್ದೇಕೆ ಎಂಬುದೇ ಹಲವರ ಪ್ರಶ್ನೆ. ವರದಿಯ ಪ್ರಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರೋಹಿತ್ ಅವರ ಪ್ರಸ್ತಾಪವನ್ನು ತಿರಸ್ಕರಿಸಿದ್ದೇ, ರೋಹಿತ್ ಟೆಸ್ಟ್ ಕ್ರಿಕೆಟ್‌ನಿಂದ ದೂರವಿರಲು ಕಾರಣವಾಯಿತಂತೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರು 2014ರಲ್ಲಿ ನಿವೃತ್ತಿ ಘೋಷಿಸಿದಂತೆ, ಅದೇ ರೀತಿ ತಮ್ಮ ವಿದಾಯಕ್ಕೆ ಸಂಬಂಧಿಸಿದ ಪ್ರಸ್ತಾಪವನ್ನು ರೋಹಿತ್ ಶರ್ಮಾ ಬಿಸಿಸಿಐಗೆ ಮಾಡಿದ್ದರು. ಆದರೆ ಬಿಸಿಸಿಐ ಅದನ್ನು ತಿರಸ್ಕರಿಸಿತು ಎಂದು ಸ್ಕೈ ಸ್ಪೋರ್ಟ್ಸ್ ನ್ಯೂಸ್ ವರದಿ ಮಾಡಿದೆ. ಭಾರತದ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಧೋನಿ ಸರಣಿಯ ಮಧ್ಯದಲ್ಲಿ ನಿವೃತ್ತರಾದರು. ಅದೇ ರೀತಿ ವಿದಾಯಕ್ಕೆ ರೋಹಿತ್‌ಗೆ ಬಿಸಿಸಿಐ ಅವಕಾಶ ಕೊಟ್ಟಿಲ್ಲ ಎಂಬ ವರದಿ ಇದೆ.
ಇಂಗ್ಲೆಂಡ್ ಪ್ರವಾಸ ಮಾಡಿ ಅಲ್ಲಿ ಟೆಸ್ಟ್ ಸರಣಿಯ ಆರಂಭಿಕ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ, ನಂತರ ಸರಣಿಯ ನಡುವೆ ನಿವೃತ್ತಿ ಘೋಷಿಸುವ ಬಯಕೆಯನ್ನು ರೋಹಿತ್ ವ್ಯಕ್ತಪಡಿಸಿದ್ದರು. ಆದರೆ, ನಾಯಕತ್ವದಲ್ಲಿ ಸ್ಥಿರತೆಯ ಅಗತ್ಯವನ್ನು ಉಲ್ಲೇಖಿಸಿದ ಬಿಸಿಸಿಐ, ಈ ಪ್ರಸ್ತಾಪವನ್ನು ತಿರಸ್ಕರಿಸಿದೆ. ವರದಿಯ ಪ್ರಕಾರ, ಮಂಡಳಿಯು ರೋಹಿತ್‌ಗೆ ಸರಣಿಯಲ್ಲಿ ಆಡಲು ಅವಕಾಶ ನೀಡಿತ್ತು.
ತಂಡದಲ್ಲಿ ಸ್ಥಿರತೆ
“ಆಯ್ಕೆದಾರರು ಸರಣಿಯಲ್ಲಿ ಸ್ಥಿರತೆ ಕಾಪಾಡಲು ಬಯಸಿದ್ದರು. ರೋಹಿತ್‌ಗೆ ಸರಣಿಯಲ್ಲಿ ಆಡಲು ಅವಕಾಶ ನೀಡಿದರು. ಆದರೆ ನಾಯಕನಾಗಿ ಅಲ್ಲ. ಹೀಗಾಗಿ ರೋಹಿತ್ ನಿವೃತ್ತಿಗೆ ನಿರ್ಧರಿಸಿದರು” ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ನಿರ್ಧಾರದಿಂದಾಗಿ ಸರಣಿಗೆ ಭಾರತ ತಂಡವನ್ನು ಘೋಷಿಸುವ ಕೆಲವೇ ವಾರಗಳ ಮೊದಲು ರೋಹಿತ್ ಶರ್ಮಾ ರೆಡ್-ಬಾಲ್ ವೃತ್ತಿಜೀವನಕ್ಕೆ ವಿದಾಯ ಹೇಳಲು ಪ್ರೇರೇಪಿಸಿತು. ಕೊನೆಯ ಟೆಸ್ಟ್ ಪಂದ್ಯದ ಸವಾಲನ್ನು ಸ್ವೀಕರಿಸಲು ರೋಹಿತ್ ಮಾನಸಿಕವಾಗಿ ಸಿದ್ಧವಾಗಿದ್ದರೂ, ಅವರದ್ದೇ ಆದ ಆಲೋಚನೆಯನ್ನು ಬಿಸಿಸಿಐ ಪರಿಗಣಿಸಿಲ್ಲ ಎಂದು ಭಾರತೀಯ ಕ್ರಿಕೆಟ್‌ಗೆ ಹತ್ತಿರದ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿದೆ.
ಭಾರತದ ಮುಂದಿನ ನಾಯಕ ಯಾರು?
ರೋಹಿತ್ ಶರ್ಮಾ ನಿವೃತ್ತಿ ಬೆನ್ನಲ್ಲೇ, ಭಾರತ ಟೆಸ್ಟ್ ತಂಡದ ಮುಂದಿನ ನಾಯಕನ ಆಯ್ಕೆ ಬಗ್ಗೆ ಕುತೂಹಲ ಮೂಡಿಸಿದೆ. ಜಸ್ಪ್ರೀತ್ ಬುಮ್ರಾ ನಾಯಕತ್ವದ ರೇಸ್‌ನಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಈಗ ರಿಷಭ್ ಪಂತ್ ಮತ್ತು ಶುಭ್ಮನ್ ಗಿಲ್ ಅವರನ್ನು ಟೆಸ್ಟ್ ನಾಯಕತ್ವ ನೀಡಲು ಎದುರು ನೋಡುತ್ತಿದೆ. ವರದಿಯ ಪ್ರಕಾರ, ಆಯ್ಕೆದಾರರು ಇಬ್ಬರೂ ಆಟಗಾರರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದ್ದಾರೆ. ಆದರೆ ಅಂತಿಮ ನಿರ್ಧಾರ ಇನ್ನೂ ಬಾಕಿ ಇದೆ. ಬಹುತೇಕ ಇದು ಮೇ 24ರ ಸಭೆಯ ಬಳಿಕ ಹೊರಬೀಳಲಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ 61 ಪಂದ್ಯಗಳನ್ನು ಆಡಿದ್ದಾರೆ. 40.57ರ ಸರಾಸರಿಯಲ್ಲಿ 4,301 ರನ್ ಗಳಿಸಿದ್ದಾರೆ. ಇದರಲ್ಲಿ 12 ಶತಕಗಳು ಮತ್ತು 18 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 212 ರನ್ ಆಗಿದೆ.