Shoaib Akhtar: ಬಿಸಿಸಿಐ ಹಣದಿಂದ ಪಾಕಿಸ್ತಾನ ಕ್ರಿಕೆಟಿಗರು ಜೀವನ ಸಾಗಿಸುತ್ತಿದ್ದಾರೆ; ಶೋಯೆಬ್ ಅಖ್ತರ್ ಅಚ್ಚರಿ ಹೇಳಿಕೆ
Shoaib Akhtar: ಯಾವುದೇ ಹಿಂಜರಿಕೆ ಇಲ್ಲದೆ ಹೇಳುತ್ತೇನೆ, ಬಿಸಿಸಿಐ ನೀಡುತ್ತಿರುವ ಹಣದಿಂದಲೇ ಪಾಕಿಸ್ತಾನದ ದೇಶೀಯ ಕ್ರಿಕೆಟಿಗರಿಗೆ ಪಂದ್ಯದ ಶುಲ್ಕವಾಗಿ ಸಿಗುತ್ತಿದೆ ಎಂದು ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಏಷ್ಯಾಕಪ್ (Asia Cup 2023) ಮತ್ತು ಏಕದಿನ ವಿಶ್ವಕಪ್ ಟೂರ್ನಿಗೆ (ODI World Cup 2023) ಪಾಕಿಸ್ತಾನ ಭರ್ಜರಿ ಸಿದ್ಧತೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಮಾಜಿ ದಿಗ್ಗಜ ಕ್ರಿಕೆಟಿಗ ಶೋಯೆಬ್ ಅಖ್ತರ್ (Shoaib Akhtar) ಅಚ್ಚರಿ ಹೇಳಿಕೆ ನೀಡಿದ್ದಾರೆ. ಭಾರತದ ಹಣದಿಂದಲೇ ಪಾಕಿಸ್ತಾನದ ಆಟಗಾರರು ಜೀವನ ನಡೆಸುತ್ತಿದ್ದಾರೆ. ಬದುಕುತ್ತಿದ್ದಾರೆ ಎಂದು ಸಂಚಲನ ಹೇಳಿಕೆ ನೀಡಿದ್ದಾರೆ. ಆ ಮೂಲಕ ಚರ್ಚೆ ಹುಟ್ಟು ಹಾಕಿದ್ದಾರೆ. ಈ ಆಘಾತಕಾರಿ ಹೇಳಿಕೆ ಪಾಕಿಸ್ತಾನ ಕ್ರಿಕೆಟ್ (Pakistan Cricket) ವಲಯದಲ್ಲಿ ಹೊಸ ವಿವಾದವನ್ನೂ ಸೃಷ್ಟಿಸಿದೆ.
ಭಾರತದ ಹಿರಿಯ ಪತ್ರಕರ್ತ ಬೋರಿಯಾ ಮಜುಂದಾರ್ ನಡೆಸಿರುವ ವಿಶೇಷ ಸಂವಾದದಲ್ಲಿ ಪಾಕ್ ಮಾಜಿ ಬೌಲರ್ ಶೋಯೆಬ್ ಅಖ್ತರ್ ಈ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಕ್ರಿಕೆಟ್ ಜಗತ್ತಿನಲ್ಲಿ ಬಿಸಿಸಿಐ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎನ್ನುವ ಪ್ರಶ್ನೆ, ಅಖ್ತರ್ಗೆ ಎದುರಾಯಿತು. ಬಿಸಿಸಿಐ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ. ಐಸಿಸಿಗೆ ಬರುವ ಆದಾಯದಲ್ಲಿ ಬಿಸಿಸಿಐನದ್ದೇ ಸಿಂಹಪಾಲು ಎಂದು ಹೇಳಿದ್ದಾರೆ.
‘ಬಿಸಿಸಿಐ ಬೊಕ್ಕಸಕ್ಕೆ ಹಣ ಹರಿದು ಬರಲಿ’
ಬಿಸಿಸಿಐ ನೀಡುತ್ತಿರುವ ಬಹುಪಾಲು ಹಣವು ಪಾಕಿಸ್ತಾನ ಮಾತ್ರವಲ್ಲದೆ ಸಾಕಷ್ಟು ಕ್ರಿಕೆಟ್ ಮಂಡಳಿಗಳಿಗೆ ಹೆಚ್ಚಿನ ನೆರವು ಸಿಗುತ್ತಿದೆ. ಯಾವುದೇ ಹಿಂಜರಿಕೆ ಇಲ್ಲದೆ ಹೇಳುತ್ತೇನೆ, ಬಿಸಿಸಿಐ ನೀಡುತ್ತಿರುವ ಹಣದಿಂದಲೇ ಪಾಕಿಸ್ತಾನದ ದೇಶೀಯ ಕ್ರಿಕೆಟಿಗರಿಗೆ ಪಂದ್ಯದ ಶುಲ್ಕವಾಗಿ ಸಿಗುತ್ತಿದೆ. ಅಕ್ಟೋಬರ್ 5ರಿಂದ ಶುರುವಾಗುವ ವಿಶ್ವಕಪ್ ಅತ್ಯಂತ ಯಶಸ್ಸು ಕಾಣಲಿದೆ. ಇದರಿಂದ ಬಿಸಿಸಿಐ ಬೊಕ್ಕಸಕ್ಕೆ ಹಣ ಹರಿದು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಶ್ವಕಪ್ ಯಶಸ್ಸುಗೊಂಡರೆ ಹಣದ ಹೊಳೆ ಹರಿದು ಬರಲಿದೆ. ಇದು ಐಸಿಸಿಗೂ ಸಾಕಷ್ಟು ಆದಾಯವನ್ನು ತಂದುಕೊಡುತ್ತದೆ ಎಂದು ಹೇಳಿದ ಅಖ್ತರ್, ಈ ಬಾರಿಯ ವಿಶ್ವಕಪ್ ಅತ್ಯಂತ ರೋಚಕವಾಗಿರಲಿದೆ. ಅದ್ಭುತವಾಗಿ ನಡೆಯಲಿದೆ. ಯಶಸ್ಸು ಗಳಿಸಲಿದೆ. ಇದರೊಂದಿಗೆ ಸಾಕಷ್ಟು ಆದಾಯ ಗಳಿಸಬೇಕು ಎಂದು ನಾನು ಕೂಡ ಬಯಸುತ್ತೇನೆ ಎಂದಿದ್ದಾರೆ ಪಾಕಿಸ್ತಾನದ ಲೆಜೆಂಡರಿ ಕ್ರಿಕೆಟಿಗ.
ನಿಜ ಹೇಳಬೇಕು ಅಂದರೆ, ಬಿಸಿಸಿಐನಿಂದ ಐಸಿಸಿಗೆ ಬಹುಪಾಲು ಹೋಗುತ್ತದೆ. ಇದೇ ಹಣ ಪಾಕಿಸ್ತಾನಕ್ಕೂ ಸಿಗುತ್ತದೆ. ಪಾಕಿಸ್ತಾನಕ್ಕೆ ಸಿಗುವ ಈ ಹಣವೇ ನಮ್ಮ ದೇಶೀಯ ಕ್ರಿಕೆಟಿಗರಿಗೆ ಪಂದ್ಯದ ಶುಲ್ಕದ ರೀತಿ ನೀಡಲಾಗುತ್ತಿದೆ. ಇದೇ ಹಣದಿಂದಲೇ ನಮ್ಮ ಕ್ರಿಕೆಟಿಗರು ಬದುಕು ಕಟ್ಟಿಕೊಂಡಿದ್ದಾರೆ. ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ವಿಶ್ವಕಪ್ ಗೆಲ್ಲುವ ತಂಡವಲ್ಲ ಭಾರತ
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ, ನನ್ನ ಪ್ರಕಾರ ಭಾರತ ತಂಡವು ಟ್ರೋಫಿ ಗೆಲ್ಲುವ ನೆಚ್ಚಿನದ್ದಲ್ಲ ಎಂದಿದ್ದಾರೆ. ರೋಹಿತ್ ಕುರಿತು ಅಚ್ಚರಿ ಹೇಳಿಕೆ ನೀಡಿ, ವಿಶ್ವಕಪ್ ಗೆಲ್ಲುವಂತಹ ತಂಡವನ್ನು ರೋಹಿತ್ ಹೊಂದಿಲ್ಲ ಎಂದು ಹೇಳಿದ್ದಾರೆ.