ಉತ್ತರ ಪ್ರದೇಶ ಸಂಸದೆ ಪ್ರಿಯಾ ಸರೋಜ್ ಜತೆಗೆ ರಿಂಕು ಸಿಂಗ್ ನಿಶ್ಚಿತಾರ್ಥ, ಶೀಘ್ರದಲ್ಲೇ ವಿವಾಹ? ಅಸಲಿ ವಿಚಾರ ಇಲ್ಲಿದೆ ನೋಡಿ
Rinku singh: ಟೀಮ್ ಇಂಡಿಯಾ ಬ್ಯಾಟರ್ ರಿಂಕು ಸಿಂಗ್ ಅವರು ಉತ್ತರ ಪ್ರದೇಶ ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಿಂಕು ಮತ್ತು ಪ್ರಿಯಾ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಟೀಮ್ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ (Rinku Singh) ಅವರು ಉತ್ತರ ಪ್ರದೇಶದ ಸಂಸದೆ ಪ್ರಿಯಾ ಸರೋಜ್ (Priya Saroj) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಂತಹ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ. ಪ್ರಿಯಾ ಸರೋಜ್ ಅವರು ಸಮಾಜವಾದಿ ಪಕ್ಷದ ಸಂಸದೆ. ಕಳೆದ 2 ವರ್ಷಗಳಿಂದ ಭಾರತ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಮತ್ತು ಅನೇಕ ಗೆಲುವುಗಳಲ್ಲಿ ಪ್ರಮುಖ ಪಾತ್ರವಹಿಸಿರುವ ಎಡಗೈ ಬ್ಯಾಟರ್, ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ. ಆದರೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಪ್ರಿಯಾ ಸರೋಜ್ ಅವರ ತಂದೆ ಹಾಗೂ ಸಮಾಜವಾದಿ ಪಕ್ಷದ ಮಾಜಿ ಸಂಸದ ತುಫಾನಿ ಸರೋಜ್ ಅವರು ಪ್ರತಿಕ್ರಿಯಿಸಿದ್ದು, ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ಇಂಡಿಯಾ ಟಿವಿ ಡಿಜಿಟಲ್ ಜೊತೆ ಮಾತನಾಡಿದ ಅವರು, ವದಂತಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಎರಡು ಕುಟುಂಬಗಳ ನಡುವೆ ಮಾತುಕತೆ ನಡೆಯುತ್ತಿದೆ. ಆದರೆ ನಿಶ್ಚಿತಾರ್ಥ ನಡೆದಿಲ್ಲ ಎಂದು ಅವರು ಖಚಿತಪಡಿಸಿದ್ದಾರೆ. ತುಫಾನಿ ಸರೋಜ್ 3 ಬಾರಿ ಸಂಸದರಾಗಿದ್ದರು. ಪ್ರಿಯಾ ಅವರು ಕೆಲವು ಕೆಲಸದ ನಿಮಿತ್ತ ತಿರುವನಂತಪುರದಲ್ಲಿದ್ದಾರೆ. ಇಲ್ಲ, ರಿಂಕು ಸಿಂಗ್ ಅವರೊಂದಿಗೆ ಅವರ ನಿಶ್ಚಿತಾರ್ಥ ನಡೆದಿಲ್ಲ. ಕುಟುಂಬಗಳ ನಡುವೆ ಮಾತುಕತೆ ನಡೆಯುತ್ತಿದೆ. ಆದರೆ ನಿಶ್ಚಿತಾರ್ಥದ ಸುದ್ದಿ ಸತ್ಯಕ್ಕೆ ದೂರವಾದುದ್ದು ಎಂದು ತುಫಾನಿ ಇಂಡಿಯಾ ಟಿವಿ ಡಿಜಿಟಲ್‌ಗೆ ತಿಳಿಸಿದ್ದಾರೆ.
ಪ್ರಿಯಾ ಸರೋಜ್ ಯಾರು?
1998ರಲ್ಲಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜನಿಸಿದ ಪ್ರಿಯಾ ಸಿಂಗ್ ಮೂರು ಬಾರಿ ಸಂಸದೆಯಾಗಿರುವ ತುಫಾನಿ ಸರೋಜ್ ಅವರ ಪುತ್ರಿ. ಪ್ರಿಯಾ ಸರೋಜ್ ಅವರು ದೆಹಲಿ ವಿಶ್ವವಿದ್ಯಾನಿಲಯದಿಂದ ತನ್ನ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದರು. ಅಮಿಟಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನೂ ಪಡೆದಿದ್ದಾರೆ. ಪ್ರಿಯಾ ತನ್ನ 25ನೇ ವಯಸ್ಸಿನಲ್ಲಿ ಸರೋಜ್ ಅವರು ಸಮಾಜವಾದಿ ಪಕ್ಷಕ್ಕಾಗಿ ಮಚ್ಲಿಶಹರ್ ಲೋಕಸಭಾ ಸ್ಥಾನದಲ್ಲಿ ಗೆದ್ದು ಬೀಗಿದರು. ಕಿರಿಯ ಸಂಸದರಲ್ಲಿ ಒಬ್ಬರಾದ ಪ್ರಿಯಾ ಅವರು 35 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದಿದ್ದಾರೆ.
ರಿಂಕು ಸಿಂಗ್ ಬಗ್ಗೆ ಇಲ್ಲಿದೆ ಮಾಹಿತಿ
2018ರಲ್ಲಿ ಐಪಿಎಲ್ ಮೂಲಕ ಮುಖ್ಯಭೂಮಿಕೆಗೆ ಬಂದ ರಿಂಕು ಸಿಂಗ್, ತನ್ನ ಅದ್ಭುತ ಪ್ರದರ್ಶನದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೂ ಕಾಲಿಟ್ಟರು. ಕೆಕೆಆರ್ ತಂಡದ ಭಾಗವಾಗಿರುವ ಅವರು 2025ರಲ್ಲೂ ಅದೇ ತಂಡದ ಪರ ಕಣಕ್ಕಿಳಿಯಲಿದ್ದಾರೆ. 45 ಐಪಿಎಲ್ ಪಂದ್ಯಗಳಲ್ಲಿ 893 ರನ್ ಗಳಿಸಿರುವ ಎಡಗೈ ಬ್ಯಾಟರ್ 30.79ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಇನ್ನು 30 ಟಿ20ಐ ಪಂದ್ಯಗಳಲ್ಲಿ ಕಣಕ್ಕಿಳಿದಿರುವ 46.09ರ ಬ್ಯಾಟಿಂಗ್ ಸರಾಸರಿಯಲ್ಲಿ 507 ರನ್ ಬಾರಿಸಿದ್ದಾರೆ. 2 ಏಕದಿನಗಳಲ್ಲಿ 55 ರನ್ ಬಾರಿಸಿದ್ದು, ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ಸಜ್ಜಾಗುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯು ಜನವರಿ 22 ರಿಂದ ಪ್ರಾರಂಭವಾಗಲಿದೆ.
