ವಿರಾಟ್ ಕೊಹ್ಲಿ ಕೈಕೊಟ್ಟರೂ ಕೈಕುಲುಕದೆ ನಿರ್ಲಕ್ಷಿಸಿದ ರಿಂಕು ಸಿಂಗ್, ಫ್ಯಾನ್ಸ್ ತರಾಟೆ; ವಿಡಿಯೋ ವೈರಲ್
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿ ಕೈಕೊಟ್ಟರೂ ಕೈಕುಲುಕದೆ ನಿರ್ಲಕ್ಷಿಸಿದ ರಿಂಕು ಸಿಂಗ್, ಫ್ಯಾನ್ಸ್ ತರಾಟೆ; ವಿಡಿಯೋ ವೈರಲ್

ವಿರಾಟ್ ಕೊಹ್ಲಿ ಕೈಕೊಟ್ಟರೂ ಕೈಕುಲುಕದೆ ನಿರ್ಲಕ್ಷಿಸಿದ ರಿಂಕು ಸಿಂಗ್, ಫ್ಯಾನ್ಸ್ ತರಾಟೆ; ವಿಡಿಯೋ ವೈರಲ್

ಐಪಿಎಲ್ ಉದ್ಘಾಟನಾ ಪಂದ್ಯದ ಅವಧಿಯಲ್ಲಿ ವಿರಾಟ್ ಕೊಹ್ಲಿ ಕೈಕೊಟ್ಟರೂ ಕೈಕುಲುಕದೆ ರಿಂಕು ಸಿಂಗ್​ ನಿರ್ಲಕ್ಷಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಕೈಕೊಟ್ಟರೂ ಕೈಕುಲುಕದೆ ನಿರ್ಲಕ್ಷಿಸಿದ ರಿಂಕು ಸಿಂಗ್, ಫ್ಯಾನ್ಸ್ ತರಾಟೆ; ವಿಡಿಯೋ ವೈರಲ್
ವಿರಾಟ್ ಕೊಹ್ಲಿ ಕೈಕೊಟ್ಟರೂ ಕೈಕುಲುಕದೆ ನಿರ್ಲಕ್ಷಿಸಿದ ರಿಂಕು ಸಿಂಗ್, ಫ್ಯಾನ್ಸ್ ತರಾಟೆ; ವಿಡಿಯೋ ವೈರಲ್

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​​ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ‘ರಾಯಲ್’ ಗೆಲುವು ದಾಖಲಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ಜರುಗಿದ ಪಂದ್ಯದಲ್ಲಿ 7 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿ ಅಭಿಯಾನ ಆರಂಭಿಸಿತು. ಕೆಕೆಆರ್​ ನೀಡಿದ್ದ 175 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ 16.2 ಓವರ್​​ಗಳಲ್ಲೇ ಗುರಿ ಮುಟ್ಟಿತು. ಪಂದ್ಯಕ್ಕೂ ಮುನ್ನ ನಡೆದ ಸಮಾರಂಭದ ವೇಳೆ ವಿರಾಟ್ ಕೊಹ್ಲಿಗೆ ಶೇಕ್ ಹ್ಯಾಂಡ್ ಮಾಡದ ರಿಂಕು ಸಿಂಗು ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಪಂದ್ಯದ ಆರಂಭಕ್ಕೂ ಮುನ್ನ ಒಂದು ಗಂಟೆಗಳ ಕಾಲ ಮನರಂಜನಾ ಕಾರ್ಯಕ್ರಮ ನಡೆಯಿತು. ಬಾಲಿವುಡ್ ನಟಿ ದಿಶಾ ಪಟಾನಿ, ಗಾಯಕರಾದ ಶ್ರೇಯಾ ಘೋಷಾಲ್, ಕರಣ್, ಔಜ್ಲಾ ಅವರು ತಮ್ಮ ಅದ್ಭುತ ಪ್ರದರ್ಶನದೊಂದಿಗೆ ಮೈದಾನದಲ್ಲಿ ನೆರದಿದ್ದ ಕ್ರಿಕೆಟ್ ಪ್ರಿಯರನ್ನು ರಂಜಿಸಿದರು. ಈ ಅದ್ಧೂರಿ ಸಂಭ್ರಮಾಚರಣೆಯ ಸಂಗೀತ ವೈಭವದ ನಂತರ ನಿರೂಪಣೆ ಮಾಡಿದ ಬಾಲಿವುಡ್ ಸೂಪರ್ ಸ್ಟಾರ್ ಹಾಗೂ ಕೆಕೆಆರ್ ಸಹ ಮಾಲೀಕ ಶಾರುಖ್ ಖಾನ್ ಅವರು ಕಾರ್ಯಕ್ರಮದ ವೇದಿಕೆಗೆ ಆರ್​ಸಿಬಿ ಲೆಜೆಂಡ್ ವಿರಾಟ್ ಕೊಹ್ಲಿ ಮತ್ತು ಕೆಕೆಆರ್​​ನ ಉದಯೋನ್ಮುಖ ತಾರೆ ರಿಂಕು ಸಿಂಗ್ ಅವರನ್ನು ವೇದಿಕೆಗೆ ಆಹ್ವಾನಿಸಿದರು.

ಮೊದಲಿಗೆ, ಶಾರುಖ್ ಅವರು ಕೊಹ್ಲಿ ಅವರ ಸಾಧನೆ ಕುರಿತು ಶ್ಲಾಘಿಸುವುದರ ಜೊತೆಗೆ ಅವರನ್ನು ಪರಿಚಯಿಸಿದರು. ರಿಂಕು ಅವರನ್ನು ತಮ್ಮೊಂದಿಗೆ ಸೇರಲು ಕರೆಯುವ ಮೊದಲು 'ಕೊಹ್ಲಿ ಕೊಹ್ಲಿ' ಎಂದು ಕೂಗುವಂತೆ ಪ್ರೇಕ್ಷಕರನ್ನು ಉತ್ತೇಜಿಸಿದರು. ರಿಂಕು ವೇದಿಕೆಗೆ ಬರುತ್ತಿದ್ದಂತೆ, ಶಾರುಖ್ ಖಾನ್ ಅವರೊಂದಿಗೆ ರಿಂಕು ಕೈಕುಲುಕಿದರು. ಆದರೆ ಕೊಹ್ಲಿ ಸ್ವಾಗತಿಸಲು ಪ್ರಯತ್ನಿಸಿದರೂ ಅವರನ್ನು ಕೈಕುಲುಕದೆಯೇ ನಡೆದರು. ಇದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕೊಹ್ಲಿ ಶೇಕ್ ಹ್ಯಾಂಡ್ ಮಾಡಲು ಮುಂದಾದರೂ ನಿರ್ಲಕ್ಷಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಶಾರುಖ್ ಜೊತೆಗೆ ಕೊಹ್ಲಿ, ರಿಂಕು ಡ್ಯಾನ್ಸ್

ವೇದಿಕೆ ಮೇಲೆ ವಿರಾಟ್ ಮತ್ತು ರಿಂಕು ಜೊತೆಗೆ ಪ್ರತ್ಯೇಕವಾಗಿ ಮಾತನಾಡಿದ ಶಾರುಖ್ ತಮ್ಮೊಂದಿಗೆ ಡ್ಯಾನ್ಸ್ ಮಾಡುವಂತೆ ಕೋರಿದರು. ಈ ಪ್ರದರ್ಶನ ಅಭಿಮಾನಿಗಳ ಹೃದಯ ಗೆದ್ದಿತು. ರಿಂಕು ಸಿಂಗ್ 'ಡಂಕಿ' ಚಿತ್ರದ 'ಲುಟ್ ಪುಟ್ ಗಯಾ' ಹಾಡಿಗೆ ಕಿಂಗ್ ಖಾನ್ ಜೊತೆಗೆ ನೃತ್ಯ ಮಾಡಿದರೆ, ಕೊಹ್ಲಿ ಬ್ಲಾಕ್‌ಬಸ್ಟರ್ 'ಪಠಾಣ್' ಚಿತ್ರದ 'ಜೊಮೆ ಜೋ ಪಠಾಣ್' ಹಾಡಿಗೆ ತಮ್ಮ ನೃತ್ಯ ಪ್ರದರ್ಶನ ನೀಡಿದರು. ಆದರೆ ರಿಂಕು ನೃತ್ಯ ಮಾಡುತ್ತಿದ್ದ ಅವಧಿಯಲ್ಲಿ ಪಕ್ಕದಲ್ಲಿದ್ದ ಕೊಹ್ಲಿ ಬಿದ್ದು ಬಿದ್ದು ನಗುತ್ತಿದ್ದರು.

ರಿಂಕು-ಕೊಹ್ಲಿ ಪ್ರದರ್ಶನ

ಪಂದ್ಯದಲ್ಲಿ ರಿಂಕು ಸಿಂಗ್ ಕಳಪೆ ಪ್ರದರ್ಶನ ನೀಡಿದರು. 10 ಎಸೆತಗಳಲ್ಲಿ 1 ಬೌಂಡರಿ ಸಹಿತ ಕೇವಲ 12 ರನ್ ಗಳಿಸಿ ನಿರಾಸೆ ಮೂಡಿಸಿದರು. ಅವರು ಕೃನಾಲ್ ಪಾಂಡ್ಯ ಬೌಲಿಂಗ್​ನಲ್ಲಿ ಕ್ಲೀನ್ ಬೋಲ್ಡ್ ಆದರು. ಮತ್ತೊಂದೆಡೆ ವಿರಾಟ್ ಕೊಹ್ಲಿ ಅದ್ಬುತ ಪ್ರದರ್ಶನ ನೀಡಿದರು. ಆಡಿದ 36 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಿತ ಅಜೇಯ 59 ರನ್ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಪಂದ್ಯದ ಸ್ಕೋರ್​ ವಿವರ

ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್, ಅಜಿಂಕ್ಯ ರಹಾನೆ ಅವರ ಸ್ಫೋಟಕ ಅರ್ಧಶತಕದ ಸಹಾಯದಿಂದ 8 ವಿಕೆಟ್ ನಷ್ಟಕ್ಕೆ 174 ರನ್​​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಕೃನಾಲ್ ಪಾಂಡ್ಯ 3, ಜೋಶ್ ಹೇಜಲ್​ವುಡ್ 2 ವಿಕೆಟ್ ಕಿತ್ತರು. 175 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ, 3 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿ ಇನ್ನೂ 22 ಎಸೆತಗಳನ್ನು ಬಾಕಿ ಉಳಿಸಿ ಗೆಲುವಿನ ದಡ ಸೇರಿತು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner