ಆಸ್ಟ್ರೇಲಿಯಾ ವಿರುದ್ಧ 37 ರನ್ ಸಿಡಿಸಿ ನೂತನ ಇತಿಹಾಸ ನಿರ್ಮಿಸಿದ ರಿಷಭ್ ಪಂತ್; ಈ ಸಾಧನೆಗೈದ ವಿಶ್ವದ ಮೊದಲ ಆಟಗಾರ!
Rishabh Pant Records: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ನ ಪ್ರಥಮ ಇನ್ನಿಂಗ್ಸ್‌ನಲ್ಲಿ ಭಾರತದ ಪರ 37 ರನ್ ಗಳಿಸಿದ ವಿಕೆಟ್ ಕೀಪರ್ ರಿಷಭ್ ಪಂತ್, ಡಬ್ಲ್ಯುಟಿಸಿಯಲ್ಲಿ ರನ್ ಗಳಿಕೆಯ ಪಟ್ಟಿಯಲ್ಲಿ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿ ಆರಂಭಗೊಂಡಿದೆ. ಐದು ಪಂದ್ಯಗಳ ಮೊದಲ ಟೆಸ್ಟ್ ಪರ್ತ್ನ ಆಪ್ಟಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. ವೇಗಿಗಳ ಸ್ವರ್ಗದಲ್ಲಿ ಒಂದೇ ದಿನದಂದು 17 ವಿಕೆಟ್ಗಳು ಪತನಗೊಂಡಿವೆ. ಮತ್ತೊಂದೆಡೆ ಭಾರತ ತಂಡವು ಆಸೀಸ್ಗೆ ಸಖತ್ ಪ್ರತಿದಾಳಿ ತೋರಿದ್ದು ಎಲ್ಲರನ್ನು ಅಚ್ಚರಿಗೊಳಿಸಿತು. ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ತನ್ನ ಪ್ರಥಮ ಇನ್ನಿಂಗ್ಸ್‌ನಲ್ಲಿ 150 ರನ್ ಗಳಿಸಿ ಆಲೌಟ್ ಆಯಿತು. ಇದಕ್ಕೆ ಪ್ರತ್ಯುತ್ತರವಾಗಿ ಆಸೀಸ್ ಬೃಹತ್ ಮೊತ್ತದ ನಿರೀಕ್ಷೆಯಲ್ಲಿತ್ತು. ಆದರೆ 67ಕ್ಕೆ 7 ವಿಕೆಟ್ ಕಳೆದುಕೊಂಡಿತು.
ಭಾರತದ ಪರ ಟಾಪ್ ಆರ್ಡರ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರೂ ಅಲ್ಪಾವಧಿ ಕ್ರೀಸ್ನಲ್ಲಿ ಉಳಿದುಕೊಂಡು ಉತ್ತಮ ಪ್ರದರ್ಶನ ನೀಡಿದ್ದು ಮಾತ್ರ ರಿಷಭ್ ಪಂತ್ ಮತ್ತು ನಿತೀಶ್ ಕುಮಾರ್ ರೆಡ್ಡಿ. ರಿಷಭ್ 78 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 37 ರನ್ ಗಳಿಸಿ ತಂಡದ ಮೊತ್ತವನ್ನು 100 ರ ಒಳಗೆ ಕುಸಿಯದಂತೆ ರಕ್ಷಣಾತ್ಮಕ ಆಟ ಪ್ರದರ್ಶಿಸಿದರು. ಇದರೊಂದಿಗೆ ವಿಕೆಟ್‌ಕೀಪರ್-ಬ್ಯಾಟರ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಸಾಧನೆಗೈದ ವಿಶ್ವದ ಮೊದಲ ಆಟಗಾರ ಎಂಬ ಇತಿಹಾಸವನ್ನೂ ಸೃಷ್ಟಿಸಿದ್ದಾರೆ. ಇಷ್ಟಕ್ಕೂ ಆ ದಾಖಲೆ ಏನು? ಇಲ್ಲಿದೆ ವಿವರ.
ವಿಶ್ವದ ಮೊದಲ ವಿಕೆಟ್ ಕೀಪರ್ ರಿಷಭ್ ಪಂತ್
ಆಸ್ಟ್ರೇಲಿಯಾ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ 37 ರನ್ ಗಳಿಸಿದ ರಿಷಭ್ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 2000 ರನ್ (2034 ರನ್) ಪೂರೈಸಿ ದಾಖಲೆ ನಿರ್ಮಿಸಿದ್ದಾರೆ. ಅವರು ಡಬ್ಲ್ಯುಟಿಸಿಯಲ್ಲಿ ವಿಕೆಟ್ ಕೀಪರ್ ಆಗಿ 2000 ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಇಂಗ್ಲೆಂಡ್‌ನ ಒಲಿ ಪೋಪ್ ಮತ್ತು ನ್ಯೂಜಿಲೆಂಡ್‌ನ ಟಾಮ್ ಲ್ಯಾಥಮ್ ಕೂಡ ಡಬ್ಲ್ಯುಟಿಸಿಯಲ್ಲಿ 2000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆದರೆ ತಮ್ಮ ದೇಶಗಳಿಗೆ ಗೊತ್ತುಪಡಿಸಿದ ವಿಕೆಟ್‌ಕೀಪರ್ ಆಗಿ ಕ್ರಮವಾಗಿ 4 ಮತ್ತು 1 ಇನ್ನಿಂಗ್ಸ್ ಆಡಿದ್ದಾರೆ.
ರೋಹಿತ್-ಕೊಹ್ಲಿ ಬಳಿಕ ಪಂತ್ ಸಾಧನೆ
ರಿಷಭ್ ಪಂತ್ ಅವರು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ 2000 ರನ್ ಗಳಿಸಿದ ಮೂರನೇ ಭಾರತೀಯ ಆಟಗಾರರಾಗಿದ್ದಾರೆ. ಮೊದಲು ಈ ಸಾಧನೆ ಮಾಡಿದ್ದು ರೋಹಿತ್.
ಡಬ್ಲ್ಯುಟಿಸಿಯಲ್ಲಿ ಭಾರತದ ಪರ ಅತ್ಯಧಿಕ ರನ್ ಗಳಿಸಿದವರು!
ರೋಹಿತ್ ಶರ್ಮಾ - 2685 ರನ್
ವಿರಾಟ್ ಕೊಹ್ಲಿ - 2432 ರನ್
ರಿಷಭ್ ಪಂತ್ - 2034 ರನ್
ಶುಭ್ಮನ್ ಗಿಲ್ - 1800 ರನ್
ಚೇತೇಶ್ವರ್ ಪೂಜಾರ – 1769 ರನ್
ಮೊದಲ ದಿನ ಬೌಲರ್ಗಳದ್ದೇ ದರ್ಬಾರ್
ಟಾಸ್ ಗೆದ್ದ ನಂತರ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, 150 ರನ್‌ಗಳಿಗೆ ಆಲೌಟ್ ಆಯಿತು. ಪದಾರ್ಪಣೆ ಪಂದ್ಯ ಆಡಿದ ನಿತೀಶ್ ಕುಮಾರ್ ರೆಡ್ಡಿ 41 ರನ್‌ಗಳ ಇನ್ನಿಂಗ್ಸ್‌ನೊಂದಿಗೆ ಗರಿಷ್ಠ ಸ್ಕೋರರ್ ಆದರು. ಆದಾಗ್ಯೂ, ಆಸ್ಟ್ರೇಲಿಯಾ ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ವಿಶೇಷವಾಗಿ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಪಡೆದು ಆಸೀಸ್ ತಂಡವನ್ನು ಕಟ್ಟಿ ಹಾಕಿದರು. ಮೊಹಮ್ಮದ್ ಸಿರಾಜ್ ಮತ್ತು ಹರ್ಷಿತ್ ರಾಣಾ ಕ್ರಮವಾಗಿ 2 ಮತ್ತು 1 ವಿಕೆಟ್ ಪಡೆಯುವ ಮೂಲಕ ಬುಮ್ರಾಗೆ ಸಾಥ್ ನೀಡಿದರು.