ಇದಕ್ಕಿದ್ದಂತೆ ಅಂಪೈರ್ ಜೊತೆ ರಿಷಭ್ ಪಂತ್ ವಾಗ್ವಾದ; ತನ್ನ ತಪ್ಪಿದ್ದರೂ ಹೀಗೆ ಮಾಡಿದ್ದೇಕೆ ಡೆಲ್ಲಿ ನಾಯಕ?
Rishabh Pant: ರಿಷಭ್ ಪಂತ್ ಡಿಆರ್‌ಎಸ್ ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿ ಆನ್ಫೀಲ್ಡ್ ಅಂಪೈರ್ ಜತೆ ಜಗಳ ಮಾಡಿರುವ ಪ್ರಸಂಗ ನಡೆದಿದೆ. ಡಿಆರ್‌ಎಸ್ ತೆಗೆದುಕೊಳ್ಳುವ ನಿರ್ಧಾರದ ಗೊಂದಲವಾದ ಹಿನ್ನೆಲೆ ಈ ಘಟನೆ ಜರುಗಿದೆ.
ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2024ರ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ (Rishabh Pant), ಆನ್-ಫೀಲ್ಡ್ ಅಂಪೈರ್‌ಗಳೊಬ್ಬರೊಂದಿಗೆ ಸುದೀರ್ಘ ವಾಗ್ವಾದ ನಡೆಸಿದ್ದಾರೆ. ಅಲ್ಲದೆ, ಅಂಪೈರ್‌ಗಳ ವಿರುದ್ಧ ಸಂಪೂರ್ಣ ಅಸಮಾಧಾನಗೊಂಡರು. ಈ ಘಟನೆಯಿಂದ ಮೈದಾನದಲ್ಲಿ ಭಾರೀ ಗೊಂದಲ ಸೃಷ್ಟಿಯಾಗಿತ್ತು.
15 ತಿಂಗಳ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಿದ ರಿಷಭ್ ಪಂತ್ ಅವರು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ವಿಚಿತ್ರವಾಗಿ ವರ್ತಿಸಿದರು. ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಅಂಪೈರ್ ಜೊತೆ ವಾಗ್ವಾದ ನಡೆಸಿದ್ದಾರೆ ಎಂಬುದು ಕಂಡು ಬಂತು. ಪಂತ್ ಮನವೊಲಿಸಲು ಅಂಪೈರ್, ಸಾಕಷ್ಟು ಪ್ರಯತ್ನಿಸಿದರು. ಆದರೆ ಡೆಲ್ಲಿ ನಾಯಕ, ಅಂಪೈರ್‌ಗಳ ಮನವರಿಕೆಗೆ ಒಪ್ಪಲು ಸಿದ್ಧರಿರಲಿಲ್ಲ. ಕೊನೆಯಲ್ಲಿ ರಿಷಭ್ ಪಂತ್ ತನ್ನ ತಪ್ಪನ್ನು ಅರಿತುಕೊಂಡರು ಎಂಬಂತೆ ಕಾಣುತ್ತದೆ.
ತನ್ನದೇ ತಪ್ಪಿದ್ದರೂ ವಾದಿಸಿದ ಪಂತ್
ರಿಷಭ್ ಪಂತ್ ಡಿಆರ್‌ಎಸ್ ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿ ಆನ್ಫೀಲ್ಡ್ ಅಂಪೈರ್ ಜತೆ ಜಗಳ ಮಾಡಿರುವ ಪ್ರಸಂಗ ನಡೆದಿದೆ. ಡಿಆರ್‌ಎಸ್ ತೆಗೆದುಕೊಳ್ಳುವ ನಿರ್ಧಾರದ ಗೊಂದಲವಾದ ಹಿನ್ನೆಲೆ ಈ ಘಟನೆ ಜರುಗಿದೆ. ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅನುಭವಿ ವೇಗದ ಬೌಲರ್ ಇಶಾಂತ್ ಡೆಲ್ಲಿ ಪರ ಪಂದ್ಯದ 4ನೇ ಓವರ್ ಬೌಲಿಂಗ್ ಮಾಡುತ್ತಿದ್ದರು. ಮೂರು ಎಸೆತಗಳ ನಂತರ ವೈಡ್ ಬೌಲ್ ಮಾಡಿದ ಇಶಾಂತ್, 4ನೇ ಎಸೆತವನ್ನು ಕ್ಲೀನ್ ಬೌಲ್ಡ್ ಮಾಡಿದರು.
ಆದರೆ ಮೂರನೇ ಎಸೆತದಲ್ಲಿ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಚೆಂಡನ್ನು ಬ್ಯಾಟ್ಗೆ ತಾಗಿಸಲು ವಿಫಲರಾದರು. ಆಗ ಅಂಪೈರ್ ವೈಡ್ ಸಿಗ್ನಲ್ ಕೊಟ್ಟರು. ಅಂಪೈರ್ ನಿರ್ಧಾರಕ್ಕೆ ಸವಾಲೆಸೆದ ಪಂತ್, ತನ್ನ ಸಹ ಆಟಗಾರರೊಂದಿಗೆ ಮಾತನಾಡುತ್ತಾ, ಡಿಆರ್‌ಎಸ್ ತೆಗೆದುಕೊಳ್ಳುವಂತೆ ಎರಡೂ ಕೈಗಳಿಂದ ಸನ್ನೆ ಮಾಡಿದ್ದು, ಇಡೀ ವಿವಾದಕ್ಕೆ ಮೂಲವಾಗಿದೆ. ಡೆಲ್ಲಿ ಕಡೆಯಿಂದ ಒಂದು ಡಿಆರ್‌ಎಸ್ ತೆಗೆದುಕೊಂಡರೂ 3ನೇ ಅಂಪೈರ್ ಕೂಡ ವೈಡ್ ಡೆಲಿವರಿ ಎಂದು ತೀರ್ಪು ಪ್ರಕಟಿಸಿತು. ಹೀಗಾಗಿ ಡೆಲ್ಲಿ ಡಿಆರ್‌ಎಸ್ ಕಳೆದುಕೊಂಡಿತು.
ಇದರ ಬೆನ್ನಲ್ಲೇ ರಿಷಭ್ ಪಂತ್ ಅವರು ಅಂಪೈರ್ ಬಳಿಗೆ ಹೋಗಿ ರಿವ್ಯೂ ತೆಗೆದುಕೊಳ್ಳುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ತಮ್ಮ ಸಂಕೇತವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ ಎಂದು ಬಹಳ ಹೊತ್ತು ಚರ್ಚೆ ನಡೆಸಿದ್ದರು. ಆದರೆ, ಪಂತ್ ಡಿಆರ್‌ಎಸ್ ಮನವಿ ಮಾಡಿರುವುದು ರಿಪ್ಲೇ ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡು ಬಂತು. ಇದರ ನಡುವೆಯೂ ಡಿಆರ್‌ಎಸ್ ತೆಗೆದುಕೊಂಡಿಲ್ಲ ಎಂದು ವಾದ ಮಂಡಿಸಿದ್ದಾರೆ. ಒಮ್ಮೆ ನಿರ್ಧಾರ ತೆಗೆದುಕೊಂಡರೆ, ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಈ ಘಟನೆಯಿಂದ ಪಂತ್ ತುಂಬಾ ಕೋಪಗೊಂಡು ಮತ್ತೆ ಫೀಲ್ಡಿಂಗ್ ಮಾಡಲು ಹೋದರು. ಈ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿವೆ.
ಅಂಪೈರ್ ಜೊತೆ ಪಂತ್ ವಾಗ್ವಾದ ಇದೇ ಮೊದಲಲ್ಲ
ಇದೇ ಮೊದಲಲ್ಲವಾದರೂ ಇದಕ್ಕೂ ಮೊದಲು ಅಂಪೈರ್‌ಗಳ ಜೊತೆ ಅನೇಕ ಬಾರಿ ಪಂತ್ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಐಪಿಎಲ್ 2022ರ ಪಂದ್ಯವೊಂದರಲ್ಲಿ ಪಂತ್ ವಿವಾದವನ್ನೇ ಸೃಷ್ಟಿಸಿದ್ದರು. ಈ ಘಟನೆ ಯಾರು ಮರೆಯಲು ಸಾಧ್ಯವಿಲ್ಲ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೊನೆಯ ಓವರ್‌ನಲ್ಲಿ ನೋ ಬಾಲ್ ನೀಡಿದ ನಂತರ, ಅವರು ಬೌಂಡರಿ ಹೊರಗೆ ನಿಂತು ತಮ್ಮ ಬ್ಯಾಟ್ಸ್‌ಮನ್‌ಗಳಾದ ರೋವ್‌ಮನ್ ಪೊವೆಲ್ ಮತ್ತು ಕುಲ್ದೀಪ್ ಯಾದವ್ ಇಬ್ಬರಿಗೂ ಮೈದಾನ ತೊರೆಯುವಂತೆ ಸೂಚಿಸಿದ್ದರು.