ಸಿಡ್ನಿ ಟೆಸ್ಟ್‌ನಲ್ಲಿ ಬೌಲರ್‌ಗಳದ್ದೇ ಆಟ, ಎರಡನೇ ದಿನ 15 ವಿಕೆಟ್‌ ಪತನ; 145 ರನ್‌ ಮುನ್ನಡೆ ಪಡೆದ ಭಾರತಕ್ಕಿದೆ ಗೆಲ್ಲುವ ಅವಕಾಶ
ಕನ್ನಡ ಸುದ್ದಿ  /  ಕ್ರಿಕೆಟ್  /  ಸಿಡ್ನಿ ಟೆಸ್ಟ್‌ನಲ್ಲಿ ಬೌಲರ್‌ಗಳದ್ದೇ ಆಟ, ಎರಡನೇ ದಿನ 15 ವಿಕೆಟ್‌ ಪತನ; 145 ರನ್‌ ಮುನ್ನಡೆ ಪಡೆದ ಭಾರತಕ್ಕಿದೆ ಗೆಲ್ಲುವ ಅವಕಾಶ

ಸಿಡ್ನಿ ಟೆಸ್ಟ್‌ನಲ್ಲಿ ಬೌಲರ್‌ಗಳದ್ದೇ ಆಟ, ಎರಡನೇ ದಿನ 15 ವಿಕೆಟ್‌ ಪತನ; 145 ರನ್‌ ಮುನ್ನಡೆ ಪಡೆದ ಭಾರತಕ್ಕಿದೆ ಗೆಲ್ಲುವ ಅವಕಾಶ

ಭಾರತ ಕ್ರಿಕೆಟ್‌ ತಂಡವು ಬಾರ್ಡರ್-ಗವಾಸ್ಕರ್‌ ಟ್ರೋಫಿಯನ್ನು ಉಳಿಸಿಕೊಳ್ಳುವ ಆಸೆಯನ್ನು ಜೀವಂತವಾಗಿ ಇರಿಸಿಕೊಂಡಿದೆ. ಸಿಡ್ನಿ ಟೆಸ್ಟ್‌ನ ಎರಡನೇ ದಿನದಾಟದ ಬಳಿಕ ಜಸ್ಪ್ರೀತ್‌ ಬುಮ್ರಾ ಬಳಗವು 145 ರನ್‌ ಮುನ್ನಡೆಯಲ್ಲಿದ್ದು, ಗೆಲ್ಲುವ ಅವಕಾಶ ತಂಡಕ್ಕಿದೆ.

ಸಿಡ್ನಿ ಟೆಸ್ಟ್‌ನಲ್ಲಿ 145 ರನ್‌ ಮುನ್ನಡೆ ಪಡೆದ ಭಾರತಕ್ಕಿದೆ ಗೆಲ್ಲುವ ಅವಕಾಶ
ಸಿಡ್ನಿ ಟೆಸ್ಟ್‌ನಲ್ಲಿ 145 ರನ್‌ ಮುನ್ನಡೆ ಪಡೆದ ಭಾರತಕ್ಕಿದೆ ಗೆಲ್ಲುವ ಅವಕಾಶ (AP)

ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಬೌಲರ್‌ಗಳದ್ದೇ ಆಟ ನಡೆದಿದೆ. ಮೊದಲ ದಿನದಂತೆ ಎರಡನೇ ದಿನವೂ ವಿಕೆಟ್‌ಗಳು ಉದುರಿವೆ. 2ನೇ ದಿನದಂದು ಬ್ಯಾಟಿಂಗ್‌ ಮುಂದುವರೆಸಿದ ಆಸ್ಟ್ರೇಲಿಯಾ 181 ರನ್‌ಗಳಿಗೆ ಆಲೌಟ್ ಆಯ್ತು. ಇದರೊಂದಿಗೆ ಭಾರತ ತಂಡ 4 ರನ್‌ಗಳ ಮುನ್ನಡೆಯೊಂದಿಗೆ ತನ್ನ ಪಾಲಿನ ಎರಡನೇ ಇನ್ನಿಂಗ್ಸ್‌ ಆರಂಭಿಸಿತು. ದಿನದಾಟದ ಉದ್ದಕ್ಕೂ ವಿಕೆಟ್‌ ಕಳೆದುಕೊಳ್ಳುತ್ತಾ ಆಡಿದ ತಂಡವು, ಎರಡನೇ ದಿನದ ಅಂತ್ಯಕ್ಕೆ 6 ವಿಕೆಟ್‌ ಕಳೆದುಕೊಂಡು 141 ರನ್‌ ಗಳಿಸಿದೆ. ಸದ್ಯ ಭಾರತದ ಮುನ್ನಡೆ 145 ರನ್‌ ಮಾತ್ರ. ಮೂರನೇ ದಿನದಾಟದಲ್ಲಿ ಮತ್ತೊಂದಷ್ಟು ರನ್‌ ಪೇರಿಸಿದರೆ, ಭಾರತಕ್ಕೆ ಗೆಲುವಿನ ಅವಕಾಶಗಳಿವೆ.

ಭಾರತಕ್ಕೆ ಕೆಎಲ್‌ ರಾಹುಲ್‌ ಹಾಗೂ ಯಶಸ್ವಿ ಜೈಸ್ವಾಲ್‌ ಉತ್ತಮ ಆರಂಭ ಕೊಟ್ಟರು. ಸ್ಟಾರ್ಕ್‌ ಎಸೆದ ಮೊದಲ ಓವರ್‌ನಲ್ಲೇ ಜೈಸ್ವಾಲ್‌ 16 ರನ್‌ ಸಿಡಿಸಿದರು. ಆರಂಭಿಕರು ಇಬ್ಬರ ನಡುವೆ ಮೊದಲ ವಿಕೆಟ್‌ಗೆ 42 ರನ್‌ಗಳ ಜೊತೆಯಾಟ ಬಂತು. ಇವರಿಬ್ಬರೂ ಬೋಲ್ಯಾಂಡ್‌ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು. ಆ ನಂತರ ಕ್ರೀಸ್‌ಕಚ್ಚಿ ಆಡಲು ಸಾಧ್ಯವಾಗಲಿಲ್ಲ. ಶುಭ್ಮನ್‌ ಗಿಲ್‌ 13 ರನ್‌ ಗಳಿಸಿದರೆ, ಮತ್ತೆ ಅಲ್ಪ ಮೊತ್ತಕ್ಕೆ ಔಟಗುವ ಮೂಲಕ ವಿರಾಟ್‌ ಕೊಹ್ಲಿ (6) ನಿರಾಶೆ ಮೂಡಿಸಿದರು.

ಭಾರತದ ಪರ ವೇಗದ ಆಟಕ್ಕೆ ಮಣೆ ಹಾಕಿದ ರಿಷಭ್ ಪಂತ್, 32 ಎಸೆತಗಳಲ್ಲಿ 61 ರನ್‌ ಗಳಿಸಿದರು. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಎರಡನೇ ವೇಗದ ಅರ್ಧಶತಕ ಗಳಿಸಿದ ದಾಖಲೆ ಮಾಡಿದರು. ಇವರ ಆಕರ್ಷಕ ಅರ್ಧಶತಕ ತಂಡದ ಮೊತ್ತ ಹೆಚ್ಚಿಸಿತು. ಕೇವಲ 29 ಎಸೆತಗಳಲ್ಲಿ ಅವರು ಫಿಫ್ಟಿ ಬಾರಿಸಿದ್ದಾರೆ. ದಿನದಾಟದ ಅಂತ್ಯಕ್ಕೆ ರವೀಂದ್ರ ಜಡೇಜಾ (8) ಮತ್ತು ವಾಷಿಂಗ್ಟನ್ ಸುಂದರ್ (6) ಕ್ರೀಸ್‌ನಲ್ಲಿದ್ದು, ಮೂರನೇ ದಿನದಾಟದಲ್ಲಿ ಬ್ಯಾಟಿಂಗ್‌ ಮುಂದುವರೆಸಲಿದ್ದಾರೆ.

ಆಸೀಸ್‌ ಮೊದಲ ಇನ್ನಿಂಗ್ಸ್

9/1ರಲ್ಲಿ ಎರಡನೇ ದಿನ ಇನ್ನಿಂಗ್ಸ್ ಪುನರಾರಂಭಿಸಿದ ಆಸೀಸ್‌ ಪರ‌, ಆರಂಭಿಕ ಆಟಗಾರ ಸ್ಯಾಮ್ ಕಾನ್ಸ್ಟಾಸ್, 7 ರನ್‌ಗಳೊಂದಿಗೆ ಇನ್ನಿಂಗ್ಸ್‌ ಮುಂದುವರೆಸಿದರು. ಬಲಗೈ ಬ್ಯಾಟರ್ ಮಾರ್ನಸ್ ಲಬುಶೇನ್ ಹಾಗೂ ಕಾನ್ಸ್ಟಾಸ್ ಮೇಲೆ ಭಾರತೀಯ ಬೌಲರ್‌ಗಳು ನಿರಂತರ ಒತ್ತಡ ಹೇರಿದರು. ನಾಲ್ಕನೇ ಓವರ್‌ನಲ್ಲಿ ಲಬುಶೇನ್ ಕೇವಲ ಎರಡು ರನ್‌ಗಳಿಗೆ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಮೊದಲ ವಿಕೆಟ್‌ ಕಬಳಿಸುವ ಮೂಲಕ, ವಿದೇಶಿ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ದಾಖಲೆ ನಿರ್ಮಿಸಿದರು. ಈ ಹಾದಿಯಲ್ಲಿ ದಿಗ್ಗಜ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ಅವರ ದಾಖಲೆ ಮುರಿದರು.

ಒಂದೇ ಕಲ್ಲಿಗೆ ಎರಡು ಹಕ್ಕಿ

12ನೇ ಓವರ್‌ನಲ್ಲಿ ಸಿರಾಜ್ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದರು. ಎರಡನೇ ಎಸೆತದಲ್ಲಿ ಕಾನ್ಸ್ಟಾಸ್ ಅವರನ್ನು 23 ರನ್‌ಗಳಿಗೆ ಔಟ್ ಮಾಡಿದ ಸಿರಾಜ್‌, ಆ ನಂತರ ಸರಣಿಯ ಅತಿ ಹೆಚ್ಚು ರನ್‌ ಸ್ಕೋರರ್ ಟ್ರಾವಿಸ್ ಹೆಡ್ ಅವರನ್ನು ಐದನೇ ಎಸೆತದಲ್ಲಿ ಔಟ್‌ ಮಾಡಿದರು. ಡೇಂಜರಸ್‌ ಬ್ಯಾಟರ್‌ ಕೇವಲ 4 ರನ್‌ಗಳಿಗೆ ಔಟಾಗಿ ಮತ್ತೊಮ್ಮೆ ಒಂದಂಕಿ ಮೊತ್ತಕ್ಕೆ ತೃಪ್ತಿಪಟ್ಟರು.

ವೆಬ್‌ಸ್ಟರ್ ತಂಡದ ಇನ್ನಿಂಗ್ಸ್ ಸ್ಥಿರಗೊಳಿಸಲು ಸ್ಮಿತ್‌ಗೆ ನೆರವಾದರು. 33 ರನ್‌ ಗಳಿಸಿದ್ದ ಸ್ಮಿತ್, 28ನೇ ಓವರ್‌ನಲ್ಲಿ ಪ್ರಸಿದ್ಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದರು. ವಿಕೆಟ್ ಕೀಪರ್-ಬ್ಯಾಟರ್‌ ಅಲೆಕ್ಸ್ ಕ್ಯಾರಿ 21 ರನ್‌ ಗಳಿಸಿದರು.

ಕೇವಲ 1 ರನ್ ಗಳಿಸಿದ್ದ ಎಡಗೈ ಬ್ಯಾಟರ್ ಮಿಚೆಲ್ ಸ್ಟಾರ್ಕ್ ಅವರನ್ನು ನಿತೀಶ್ ಕುಮಾರ್ ರೆಡ್ಡಿ ಔಟ್ ಮಾಡಿದರು. ಆಸೀಸ್‌ ಪರ 57 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ವೆಬ್ಸ್ಟರ್ ಒಂಬತ್ತನೆಯವರಾಗಿ ವಿಕೆಟ್ ಒಪ್ಪಿಸಿದರು. 51ನೇ ಓವರ್‌ನಲ್ಲಿ ಸ್ಕಾಟ್ ಬೋಲ್ಯಾಂಡ್ ವಿಕೆಟ್ ಕಬಳಿಸುವ ಮೂಲಕ ಸಿರಾಜ್ ಆಸ್ಟ್ರೇಲಿಯಾ ಇನ್ನಿಂಗ್ಸ್‌ಗೆ ಅಂತ್ಯ ಹಾಕಿದರು.

ಭಾರತದ ಪರ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ 3 ವಿಕೆಟ್ ಪಡೆದರೆ, ಪಂದ್ಯದ ಮಧ್ಯದಲ್ಲೇ ಗಾಯದಿಂದ ಹೊರನಡೆದ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು. ಇವರಿಗೆ ಸಾಥ್‌ ಕೊಟ್ಟ ನಿತೀಶ್ ಕುಮಾರ್ ರೆಡ್ಡಿ ಕೂಡಾ 2 ವಿಕೆಟ್‌ ಪಡೆದರು.

ಎರಡನೇ ದಿನದಾಟದಲ್ಲಿ ದಾಖಲೆಯ 15 ವಿಕೆಟ್‌ಗಳು ಪತನವಾಗಿವೆ. ಹೀಗಾಗಿ ಭಾರತವು ಎರಡನೇ ಇನ್ನಿಂಗ್ಸ್‌ನಲ್ಲಿ ಆಸೀಸ್‌ಗೆ 200 ರನ್‌ಗಳ ಟಾರ್ಗೆಟ್‌ ಕೊಟ್ಟರೆ, ಪಂದ್ಯದಲ್ಲಿ ಗೆಲ್ಲುವ ಅವಕಾಶಗಳಿವೆ.

Whats_app_banner