ರಿಷಭ್ ಪಂತ್ ಮೊದಲ ಆಯ್ಕೆ, ಕೆಎಲ್ ರಾಹುಲ್ಗಿಲ್ಲ ಅವಕಾಶ; ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನಕ್ಕೆ ಭಾರತದ ಸಂಭಾವ್ಯ 11
ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿರುವ ಭಾರತ ತಂಡ ತನ್ನ ಮೊದಲ ಪಂದ್ಯಕ್ಕೆ ಆಡುವ 11ರ ಬಳಗದಲ್ಲಿ ಯಾರನ್ನೆಲ್ಲಾ ಕಣಕ್ಕಿಳಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟಿ20ಐ ಸ್ವರೂಪದ ಸರಣಿಯನ್ನು 4-1 ಅಂತರದಿಂದ ಗೆದ್ದು ಯಶಸ್ವಿಯಾಗಿ ಮುಗಿಸಿದ ಭಾರತ ತಂಡ (Indian Cricket Team) ಇದೀಗ ಏಕದಿನ ಕ್ರಿಕೆಟ್ನತ್ತ ವಾಲುತ್ತಿದೆ. ಫೆಬ್ರವರಿ 6ರಂದು ನಾಗ್ಪುರದಲ್ಲಿ ಆಂಗ್ಲರ ವಿರುದ್ಧವೇ ಮೊದಲ ಏಕದಿನ ಪಂದ್ಯ (India vs England 1st ODI) ನಡೆಯಲಿದ್ದು, ರೋಹಿತ್ ಶರ್ಮಾ (Rohit sharma) ನೇತೃತ್ವದ ತಂಡ ಅಭ್ಯಾಸ ಶಿಬಿರ ಆರಂಭಿಸಿದೆ. ಯುವಕರ ಆರ್ಭಟದ ಬಳಿಕ ಹಿರಿಯ ಆಟಗಾರರೂ ಬ್ರಿಟಿಷರ ವಿರುದ್ಧ ಬೇಟೆಗೆ ಸಜ್ಜಾಗಿದ್ದು, ಸರಣಿ ಗೆಲುವಿನ ವಿಶ್ವಾಸ ಹೊಂದಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy) ತಯಾರಿಗೆ ಇದು ಪ್ರಮುಖ ಸರಣಿಯೂ ಹೌದು.
ಫೆಬ್ರವರಿ 19ರಿಂದ ಚಾಂಪಿಯನ್ಸ್ ಟ್ರೋಫಿ ಆರಂಭಗೊಳ್ಳಲಿದೆ. ಫೆ.20 ರಿಂದ ಭಾರತ ತನ್ನ ಅಭಿಯಾನ ಆರಂಭಿಸಲಿದೆ. ರೋಹಿತ್ ಪಡೆಯ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಉಳಿದೆಲ್ಲ ತಂಡಗಳು ಪಾಕಿಸ್ತಾನ ಆತಿಥ್ಯದಲ್ಲಿ ಕಣಕ್ಕಿಳಿಯಲಿವೆ. ಹಾಗಾಗಿ, ದುಬೈನಲ್ಲಿ ನಡೆಯುವ ತಮ್ಮ ಪಂದ್ಯಗಳಿಗೆ ಅತ್ಯುತ್ತಮ ಪ್ಲೇಯಿಂಗ್ 11 ಕಂಡುಕೊಳ್ಳಲು ಇಂಗ್ಲೆಂಡ್ ಸರಣಿ ಮಹತ್ವದ ಪಾತ್ರವಹಿಸಲಿದೆ. ಆದ್ದರಿಂದ, 3 ಪಂದ್ಯಗಳಿಗೂ ಭಾರತದ ಆಡುವ 11ರ ಬಳಗದಲ್ಲಿ ಬದಲಾವಣೆ ಕಾಣಬಹುದು. ಅದರಂತೆ ಮೊದಲ ಪಂದ್ಯಕ್ಕೆ ಸಂಯೋಜನೆ ಹೀಗಿರಲಿದೆ.
ಅಗ್ರ-3 ಸ್ಥಾನಗಳು ಖಚಿತ
ಆರಂಭಿಕ ಸ್ಥಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಯಶಸ್ವಿ ಜೈಸ್ವಾಲ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರೂ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸುವುದು ಖಚಿತ. ಗಿಲ್ ಗಾಯಗೊಂಡರೆ ಅಥವಾ ವಿಶ್ರಾಂತಿ ಪಡೆದರೆ ಮಾತ್ರ ಜೈಸ್ವಾಲ್ ಕಣಕ್ಕಿಳಿಯಬಹುದು. 3ನೇ ಕ್ರಮಾಂಕದ ಬ್ಯಾಟಿಂಗ್ ಸ್ಥಾನದ ಬದಲಾವಣೆ ಯಾವುದೇ ಕಾರಣಕ್ಕೂ ಸಲ್ಲದು. ಏಕೆಂದರೆ ಅದು ವಿರಾಟ್ ಕೊಹ್ಲಿ ಶಾಶ್ವತ ಕ್ರಮಾಂಕ. ಒಂದು ವೇಳೆ ಅವರಿಗೆ ವಿಶ್ರಾಂತಿ ನೀಡಿದರಷ್ಟೆ ಆ ಸ್ಥಾನದಲ್ಲಿ ಮತ್ತೊಬ್ಬರನ್ನು ನೋಡಬಹುದು.
ರಿಷಭ್ ಪಂತ್ ಮೊದಲ ಆಯ್ಕೆ
ಪ್ರಸ್ತುತ ಅಗ್ರ ಕ್ರಮಾಂಕದ ಮೂವರೂ ಕಳಪೆ ಫಾರ್ಮ್ನಲ್ಲಿದ್ದು, ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನದ ಮೂಲಕ ಲಯಕ್ಕೆ ಮರಳಬೇಕಿದೆ. ನಂತರ ವಿಜಯ್ ಹಜಾರೆ ಮತ್ತು ರಣಜಿಯಲ್ಲಿ ಲಯ ಕಂಡುಕೊಂಡಿರುವ ಶ್ರೇಯಸ್ ಅಯ್ಯರ್ 4ನೇ ಸ್ಥಾನದಲ್ಲಿ ಬ್ಯಾಟ್ ಬೀಸಲಿದ್ದಾರೆ. ಆದರೆ ಐದನೇ ಸ್ಥಾನಕ್ಕಾಗಿ ಇಬ್ಬರು ವಿಕೆಟ್ ಕೀಪರ್ಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಇಬ್ಬರ ಪೈಕಿ ಪಂತ್ಗೆ ಮೊದಲ ಆದ್ಯತೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಏಕೆಂದರೆ ತಂಡ ಪ್ರಕಟವಾದಾಗ ಪಂತ್ ಮೊದಲ ಆದ್ಯತೆ ಎಂದು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಹೇಳಿದ್ದರು. ಹೀಗಾಗಿ ರಾಹುಲ್ ಬೆಂಚ್ ಕಾಯುವುದು ಬಹುತೇಕ ಪಕ್ಕ.
ಮಧ್ಯಮ ಕ್ರಮಾಂಕದಲ್ಲಿ ಅಂಕಿ-ಅಂಶಗಳನ್ನು ಗಮನಿಸುವುದಾದರೆ ಪಂತ್ಗೆ ಹೋಲಿಸಿದರೆ ಕೆಎಲ್ ರಾಹುಲ್ ಪ್ರದರ್ಶನ ಉತ್ತಮವಾಗಿದೆ. ಹಾಗಂತ ರಿಷಭ್ರನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವಂತಿಲ್ಲ. ಇನ್ನು ಕಳೆ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಫಿನಿಷಿಂಗ್ ಸ್ಥಾನವನ್ನು ನಿಭಾಯಿಸಲಿದ್ದಾರೆ. ಜತೆಗೆ ವೇಗದ ಆಲ್ರೌಂಡರ್ ಕೂಡ ಆಗಲಿದ್ದಾರೆ. ಇವರಿಗೆ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಸ್ಪಿನ್ ಆಲ್ರೌಂಡರ್ ಆಗಿ ಕಣಕ್ಕಿಳಿಯಬಹುದು. ವಾಷಿಂಗ್ಟನ್ ಸುಂದರ್ ಸಹ ಅವಕಾಶದ ಸ್ಪರ್ಧೆಯಲ್ಲಿದ್ದಾರೆ. ಆದರೆ ಒಂದೆರಡು ಪಂದ್ಯ ಬೆಂಚ್ ಕಾಯಬಹುದು.
ಬೌಲಿಂಗ್ ದಾಳಿ ಮುನ್ನಡೆಸಲಿದ್ದಾರೆ ಶಮಿ
ಇನ್ನು ಸ್ಪಷಲಿಸ್ಟ್ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಸ್ಥಾನಕ್ಕೆನ ಯಾವುದೇ ಕುತ್ತು ಬರುವುದಿಲ್ಲ. ಹಾಗೆಯೇ ವೇಗದ ಬೌಲಿಂಗ್ ದಾಳಿಯನ್ನು ಮೊಹಮ್ಮದ್ ಶಮಿ ಮುನ್ನಡೆಸುವ ನಿರೀಕ್ಷೆ ಇದೆ. ಅವರಿಗೆ ಅರ್ಷದೀಪ್ ಸಿಂಗ್ ಸಾಥ್ ಕೊಡಲಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳದ ಕಾರಣ ಏಕದಿನ ಸರಣಿಗೆ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡಲಾಗಿಲ್ಲ. ಏಕದಿನ ಸರಣಿಯು ಫೆಬ್ರವರಿ 6 ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆರಂಭವಾಗಲಿದ್ದು, ಎರಡು ಮತ್ತು ಮೂರನೇ ಏಕದಿನ ಪಂದ್ಯಗಳು ಕ್ರಮವಾಗಿ ಕಟಕ್ ಮತ್ತು ಅಹಮದಾಬಾದ್‌ನಲ್ಲಿ ಫೆಬ್ರವರಿ 9 ಮತ್ತು 12 ರಂದು ನಡೆಯಲಿವೆ.
ಮೊದಲ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಇಲೆವೆನ್
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.
