ಟಾಸ್‌ ವೇಳೆ ಆಯ್ಕೆ ಹೇಳಲು ಮರೆತ ರಿಷಭ್‌ ಪಂತ್; ರಾಜಸ್ಥಾನ್‌ vs ಲಕ್ನೋ ಪಂದ್ಯದಲ್ಲಿ 2 ಬಾರಿ ಟಾಸ್‌ -Video
ಕನ್ನಡ ಸುದ್ದಿ  /  ಕ್ರಿಕೆಟ್  /  ಟಾಸ್‌ ವೇಳೆ ಆಯ್ಕೆ ಹೇಳಲು ಮರೆತ ರಿಷಭ್‌ ಪಂತ್; ರಾಜಸ್ಥಾನ್‌ Vs ಲಕ್ನೋ ಪಂದ್ಯದಲ್ಲಿ 2 ಬಾರಿ ಟಾಸ್‌ -Video

ಟಾಸ್‌ ವೇಳೆ ಆಯ್ಕೆ ಹೇಳಲು ಮರೆತ ರಿಷಭ್‌ ಪಂತ್; ರಾಜಸ್ಥಾನ್‌ vs ಲಕ್ನೋ ಪಂದ್ಯದಲ್ಲಿ 2 ಬಾರಿ ಟಾಸ್‌ -Video

ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್‌ ರಾಯಲ್ಸ್‌ ನಡುವಿನ ಪಂದ್ಯದ ಟಾಸ್‌ ವೇಳೆ, ರಿಷಭ್ ಪಂತ್ ಹೆಡ್‌ ಅಥವಾ ಟೇಲ್ಸ್‌ ಆಯ್ಕೆ ಮಾಡಲು ಮರೆತಿದ್ದಾರೆ. ಹೀಗಾಗಿ ಪಂದ್ಯದಲ್ಲಿ ಎರಡು ಬಾರಿ ಟಾಸ್ ಪ್ರಕ್ರಿಯೆ ನಡೆಸಲಾಯ್ತು.

ಟಾಸ್‌ ವೇಳೆ ಆಯ್ಕೆ ಹೇಳಲು ಮರೆತ ಪಂತ್; ರಾಜಸ್ಥಾನ್‌ vs ಲಕ್ನೋ ಪಂದ್ಯದಲ್ಲಿ 2 ಬಾರಿ ಟಾಸ್‌
ಟಾಸ್‌ ವೇಳೆ ಆಯ್ಕೆ ಹೇಳಲು ಮರೆತ ಪಂತ್; ರಾಜಸ್ಥಾನ್‌ vs ಲಕ್ನೋ ಪಂದ್ಯದಲ್ಲಿ 2 ಬಾರಿ ಟಾಸ್‌ (IPL)

ಐಪಿಎಲ್‌ ಪಂದ್ಯಗಳ ಸಮಯದಲ್ಲಿ ಆಗಾಗ ಕೆಲವೊಂದು ಅಪರೂಪದ ಸನ್ನಿವೇಶಗಳು ನಡೆಯುತ್ತವೆ. ಶನಿವಾರ (ಏಪ್ರಿಲ್‌ 19) ದಿನದ ಎರಡನೇ ಪಂದ್ಯದ ಆರಂಭದಲ್ಲಿಯೇ ಇಂತಹ ಅಪರೂಪದ ಘಟನೆಯೊಂದು ನಡೆದಿದೆ. ರಾಜಸ್ಥಾನ್‌ ರಾಯಲ್ಸ್‌ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ (Rajasthan Royals vs Lucknow Super Giants) ತಂಡಗಳ ನಡುವಿನ ಪಂದ್ಯದ ಆರಂಭದಲ್ಲಿ ಟಾಸ್‌ ವೇಳೆ ಹಾಸ್ಯಮಯ ಸನ್ನಿವೇಶ ನಡೆದಿದೆ. ಜೈಪುರದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಮತ್ತು ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್, ಪಂದ್ಯವನ್ನು ತಮಾಷೆಯಾಗಿ ಆರಂಭಿಸಿದ್ದಾರೆ.

ಮ್ಯಾಚ್‌ ರೆಫ್ರಿ ತವರು ತಂಡದ ನಾಯಕ ಪರಾಗ್ ಕೈಗೆ ಟಾಸ್‌ ಪ್ರಕ್ರಿಯೆಗೆ ನಾಣ್ಯವನ್ನು ಕೊಟ್ಟರು. ಆ ತಕ್ಷಣವೇ ಪರಾಗ್‌ ನಾಣ್ಯವನ್ನು ಗಾಳಿಯಲ್ಲಿ ಚಿಮ್ಮಿಸಿದರು. ಎದುರಾಳಿ ತಂಡದ ನಾಯಕ ಆ ಸಮಯದಲ್ಲಿ ತಮ್ಮ ಆಯ್ಕೆಯನ್ನು ಜೋರಾಗಿ ಹೇಳಬೇಕು. ಆದರೆ ಪಂತ್ ತಮ್ಮ ಆಯ್ಕೆಯನ್ನು ಹೇಳಲು ಮರೆತರು. ನಾಣ್ಯ ಕೆಳಗೆ ಬಿದ್ದರೂ, ಪಂತ್‌ ಆಯ್ಕೆ ಬರಲಿಲ್ಲ. ಹೀಗಾಗಿ ಎರಡೂ ತಂಡಗಳ ನಾಯಕರು, ಮ್ಯಾಚ್ ರೆಫರಿ ಹಾಗೂ ಟಾಸ್‌ ಪ್ರಕ್ರಿಯೆ ನಡೆಸಿಕೊಟ್ಟ ಸೈಮನ್ ಡೌಲ್ ಗೊಂದಲಕ್ಕೊಳಗಾದರು. ನಗುತ್ತಾ ಸನ್ನಿವೇಶ ನಿಭಾಯಿಸಿದ ಡೌಲ್‌, ಪರಾಗ್ ಅವರನ್ನು ನಾಣ್ಯವನ್ನು ಮತ್ತೊಮ್ಮೆ ಚಿಮ್ಮಿಸಲು ಹೇಳಿದರು.

ಈ ವೇಳೆ ಪಂತ್‌ ಕಡೆಗೆ ತಿರುಗಿದ ಪರಾಗ್‌, ಏನಾಯ್ತು ಎಂದು ಸನ್ನೆ ಮಾಡಿದರು. ಆಗ ಪಂತ್ ನಸುನಗುತ್ತಾ, "ತೂನೆ ಐಸೆ ಹಿ ಫೆಕ್ ದಿಯಾ?" ಎಂದು ಹೇಳಿದರು. ಅಂದರೆ ನೀನು ಹಾಗೆಯೇ ಬೇಗನೇ ಎಸೆದುಬಿಟ್ಟೆ ಎಂದು ಪಂತ್‌ ಹೇಳ್ತಾರೆ. ಈ ವೇಳೆ ಡೌಲ್‌ ಎರಡನೇ ಬಾರಿ ಟಾಸ್‌ ನಡೆಸಿದರು. ಅಲದೆ ಹಾಸ್ಯಮಯವಾಗಿ ಟೇಕ್‌ 2 (ಎರಡನೇ ಟೇಕ್) ಎಂದರು. ಎರಡನೇ ಪ್ರಯತ್ನದಲ್ಲಿ ಸರಿಯಾಗಿ ಟಾಸ್‌ ಮಾಡಲಾಯ್ತು. ಪಂತ್‌ ಸರಿಯಾದ ಆಯ್ಕೆ ಮಾಡಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು.

ಇಂದಿನ ಪಂದ್ಯಕ್ಕೆ ರಾಜಸ್ಥಾನ ತಂಡದಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಸ್ಥಾನ ಪಡೆದಿದ್ದಾರೆ. ಆ ಮೂಲಕ 14 ವರ್ಷ 23 ದಿನಗಳ ವಯಸ್ಸಿನ ಐಪಿಎಲ್‌ ಆಡುತ್ತಿರುವ ಅತ್ಯಂತ ಕಿರಿಯ ಆಟಗಾರ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಅವರನ್ನು ಇಂಪ್ಯಾಕ್ಟ್ ಸಬ್ ಎಂದು ಆಯ್ಕೆ ಮಾಡಲಾಗಿದೆ.

ಇಲ್ಲಿದೆ ವಿಡಿಯೋ

ಎಲ್‌ಎಸ್‌ಜಿ ಆಡುವ ಬಳಗ

ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್‌ ಕೀಪರ್), ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ರವಿ ಬಿಷ್ಣೋಯ್, ಶಾರ್ದೂಲ್ ಠಾಕೂರ್, ಪ್ರಿನ್ಸ್ ಯಾದವ್, ದಿಗ್ವೇಶ್ ಸಿಂಗ್ ರಾಠಿ, ಆವೇಶ್ ಖಾನ್.

ರಾಜಸ್ಥಾನ್‌ ರಾಯಲ್ಸ್‌ ಆಡುವ ಬಳಗ

ಯಶಸ್ವಿ ಜೈಸ್ವಾಲ್, ಶುಭಂ ದುಬೆ, ರಿಯಾನ್ ಪರಾಗ್ (ನಾಯಕ), ನಿತೀಶ್ ರಾಣಾ, ಧ್ರುವ್ ಜುರೆಲ್ (ವಿಕೆಟ್‌ ಕೀಪರ್), ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.