ನಿರ್ಣಾಯಕ ಪಂದ್ಯಕ್ಕೂ ಮುನ್ನ ರಿಷಭ್ ಪಂತ್ ಬ್ಯಾನ್; ಆರ್‌ಸಿಬಿ ಎದುರು ಆಡಲ್ಲ ಡಿಸಿ ಕ್ಯಾಪ್ಟನ್!
Rishabh Pant : ಮೇ 12ರಂದು ನಡೆಯುವ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಅವರು ಒಂದು ಪಂದ್ಯದಿಂದ ಅಮಾನತುಗೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ ನಾಯಕ ರಿಷಭ್ ಪಂತ್ ಅವರು (Rishabh Pant) ಒಂದು ಪಂದ್ಯದಿಂದ ಬ್ಯಾನ್ ಆಗಿದ್ದಾರೆ. ಪ್ಲೇಆಫ್ ದೃಷ್ಟಿಯಿಂದ ಮಹತ್ವ ಪಡೆದಿರುವ ಮೇ 12ರಂದು ನಡೆಯುವ ಐಪಿಎಲ್ನ 62ನೇ ಪಂದ್ಯದಲ್ಲಿ ಡೆಲ್ಲಿ ಗೆಲ್ಲುವುದು ಅನಿವಾರ್ಯ. ಆದರೆ, ಈ ಪಂದ್ಯಕ್ಕೂ ಡಿಸಿ ದೊಡ್ಡ ಆಘಾತಕ್ಕೆ ಒಳಗಾಗಿದೆ.
ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಿಧಾನಗತಿಯ ಓವರ್ ರೇಟ್ ಮಾಡಿದ್ದಕ್ಕಾಗಿ ರಿಷಭ್ ಪಂತ್ ಒಂದು ಪಂದ್ಯಕ್ಕೆ ನಿಷೇಧಕ್ಕೊಳಗಾಗಿದ್ದಾರೆ. ಅಲ್ಲದೆ, 30 ಲಕ್ಷ ದಂಡವನ್ನೂ ವಿಧಿಸಲಾಗಿದೆ. ಅಂತಿಮ ಓವರ್ ಹಾಕುವ ಸಮಯದಲ್ಲಿ ಡೆಲ್ಲಿ 10 ನಿಮಿಷಗಳಷ್ಟು ಹಿಂದಿತ್ತು. ಈ ಆವೃತ್ತಿಯ ಡೆಲ್ಲಿ ಎಸಗಿದ 3ನೇ ಉಲ್ಲಂಘನೆಯಾಗಿದ್ದು, ನಿಷೇಧ ಮತ್ತು ಭಾರಿ ದಂಡ ವಿಧಿಸಲಾಗಿದೆ.
ಮೇಲ್ಮನವಿ ಸಲ್ಲಿಸಿದ ರಿಷಭ್ ಪಂತ್
ರಿಷಭ್ ಪಂತ್ ಮಾತ್ರವಲ್ಲದೆ, ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ 12 ಲಕ್ಷ ರೂಪಾಯಿ ಅಥವಾ ಅವರ ಪಂದ್ಯ ಶುಲ್ಕದ ಶೇ 50ರಷ್ಟು ಎರಡರಲ್ಲಿ 1ಕ್ಕೆ (ಯಾವುದು ಕಡಿಮೆ ಇರುತ್ತದೋ ಅದಕ್ಕೆ) ದಂಡ ವಿಧಿಸಲಾಗುತ್ತದೆ. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 8ರ ಪ್ರಕಾರ ಮ್ಯಾಚ್ ರೆಫರಿಯ ಈ ತೀರ್ಪನ್ನು ಪ್ರಶ್ನಿಸಿ ಡಿಸಿ ಮೇಲ್ಮನವಿ ಸಲ್ಲಿಸಿದ್ದು, ಪರಿಶೀಲನೆಗಾಗಿ ಬಿಸಿಸಿಐ ಒಂಬುಡ್ಸ್‌ಮನ್‌ಗೆ (ದೂರುಗಳನ್ನು ತನಿಖೆ ಮಾಡುವವರು) ಉಲ್ಲೇಖಿಸಲಾಗಿದೆ.
ಓಂಬುಡ್ಸ್‌ಮನ್ ವರ್ಚುವಲ್ ವಿಚಾರಣೆಯನ್ನು ನಡೆಸಿದ್ದು, ಮ್ಯಾಚ್ ರೆಫರಿಯ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿದೆ ಎಂದು ಹೇಳಿದ್ದಾರೆ. ಪಂತ್ ಇದೀಗ ಭಾನುವಾರ (ಮೇ 12) ಬೆಂಗಳೂರಿನಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಸಂಜೆ ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ. ಡಿಸಿ ಪ್ಲೇಆಫ್ ರೇಸ್‌ನಲ್ಲಿ ಇನ್ನೂ ಜೀವಂತವಾಗಿದೆ. ಹೀಗಾಗಿ ಈ ಪಂದ್ಯವನ್ನು ಗೆಲ್ಲಬೇಕಿದೆ.
ಐಪಿಎಲ್ ನೀತಿ ಸಂಹಿತೆ ಏನು ಹೇಳುತ್ತೆ?
ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ತಂಡದ ನಾಯಕನು ಮೊದಲ ಅಪರಾಧ ಎಸಗಿದರೆ, ಅವರಿಗೆ 12 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ. ಎರಡನೇ ಬಾರಿ ಸ್ಲೋ ಓವರ್ ರೇಟ್ ಅಪರಾಧ ಎಸಗಿದರೆ 24 ಲಕ್ಷ ದಂಡ ವಿಧಿಸಲಾಗುತ್ತದೆ. ಮೂರನೇ ಬಾರಿ ತಪ್ಪು ಮಾಡಿದರೆ ನಾಯಕನಿಗೆ ಒಂದು ಪಂದ್ಯ ನಿಷೇಧ ಹಾಗೂ 30 ಲಕ್ಷ ರೂಪಾಯಿ ದಂಡ ಹಾಕಲಾಗುತ್ತದೆ.
ಡೆಲ್ಲಿ ಇನ್ನೂ ಪ್ಲೇ ಆಫ್ ರೇಸ್‌ನಲ್ಲಿದೆ. ಡೆಲ್ಲಿ 12 ಪಂದ್ಯಗಳಿಂದ 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮುಂದಿನ ಪಂದ್ಯವನ್ನು ಆರ್‌ಸಿಬಿ ವಿರುದ್ಧ ಮೇ 12 ರಂದು ಆಡಲಿದೆ. ಈ ಪಂದ್ಯವನ್ನು ಪಂತ್ ಕಳೆದುಕೊಳ್ಳಲಿದ್ದಾರೆ. ಆದರೆ ಮೇ 14ರಂದು ನಡೆಯುವ ಲಕ್ನೋ ಸೂಪರ್ ಜೈಂಟ್ಸ್ ಪಂದ್ಯಕ್ಕೆ ಅವರು ಮರಳಲಿದ್ದಾರೆ.
ಡೆಲ್ಲಿ ಪ್ಲೇಆಫ್ ಸಾಧ್ಯತೆ
ಡೆಲ್ಲಿ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕು. ಇದರೊಂದಿಗೆ 16 ಅಂಕ ಪಡೆಯಲಿದೆ. ಆದರೆ, ಸಿಎಸ್ಕೆ ಮತ್ತು ಲಕ್ನೋ ತಂಡಗಳು ತಮ್ಮ ಎಲ್ಲಾ ಪಂದ್ಯಗಳನ್ನು ಸೋಲಬೇಕು ಅಥವಾ ಒಂದೊಂದು ಪಂದ್ಯ ಸೋತರೂ ಸಾಕು ಡಿಸಿ ಸುಲಭವಾಗಿ ಪ್ಲೇಆಫ್ಗೆ ಪ್ರವೇಶಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ಸಿಎಸ್ಕೆ ಎರಡಕ್ಕೆ ಎರಡೂ ಗೆದ್ದರೆ, ಡಿಸಿಯಂತೆ 16 ಅಂಕ ಪಡೆಯಲಿದೆ. ಆಗ ಉತ್ತಮ ನೆಟ್ ರನ್ ರೇಟ್ ಕಾಯ್ದುಕೊಂಡ ತಂಡ ಪ್ಲೇಆಫ್ ಪ್ರವೇಶಿಸಲಿದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.