ಕನ್ನಡ ಸುದ್ದಿ  /  Cricket  /  Rishabh Pant Mukesh Kumar Heroics Help Delhi Capitals Beat Chennai Super Kings Despite Ms Dhoni Late Show Prs

ರಿಷಭ್ ಪಂತ್​ ಕಂಬ್ಯಾಕ್ ಅರ್ಧಶತಕ, ಕೊನೆಯಲ್ಲಿ ರಂಜಿಸಿದ ಧೋನಿ; ಡೆಲ್ಲಿಗೆ ಮೊದಲ ಗೆಲುವು, ಚೆನ್ನೈಗೆ ಮೊದಲ ಸೋಲು

Delhi Capitals vs Chennai Super Kings: ಐಪಿಎಲ್​ನ 13ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು ದಾಖಲಿಸಿದೆ.

ಡೆಲ್ಲಿ ಮೊದಲ ಗೆಲುವು, ಚೆನ್ನೈಗೆ ಮೊದಲ ಸೋಲು
ಡೆಲ್ಲಿ ಮೊದಲ ಗೆಲುವು, ಚೆನ್ನೈಗೆ ಮೊದಲ ಸೋಲು (PTI)

ಸತತ ಎರಡು ಸೋಲುಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್​ ಕೊನೆಗೂ ಜಯಭೇರಿ ಬಾರಿಸಿದೆ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್​ ಬ್ಯಾಕ್​ ಟು ಬ್ಯಾಕ್ ಗೆಲುವುಗಳ ನಂತರ ಮೊದಲ ಸೋಲು ಕಂಡಿದೆ. ಅಲ್ಲದೆ, ಐಪಿಎಲ್​​ನಲ್ಲಿ ತವರಿನ ತಂಡಗಳು ಗೆಲ್ಲುವ ಸಂಪ್ರದಾಯವನ್ನು ಡೆಲ್ಲಿ ಕೂಡ ಮುಂದುವರೆಸಿದೆ. ಹ್ಯಾಟ್ರಿಕ್​ ಗೆಲುವಿಗೆ ಡೆಲ್ಲಿ ತಡೆ ಹಾಕಿದರೂ, ಎಂಎಸ್ ಧೋನಿ ಬ್ಯಾಟಂಗ್​ ಅಭಿಮಾನಿಗಳನ್ನು ರಂಜಿಸಿತು. ಧೋನಿ ಅಬ್ಬರಿಸಿದ ಕಾರಣ ದೊಡ್ಡ ಅಂತರದಿಂದ ಸೋಲು ಕಾಣಬೇಕಿದ್ದ ಸಿಎಸ್​ಕೆ, ಕೇವಲ 20 ರನ್​​ಗಳಿಂದ ಸೋಲುವಂತಾಯಿತು.

ಡಾ ವೈಎಸ್ ರಾಜಶೇಖರರೆಡ್ಡಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ಬೃಹತ್ ಮೊತ್ತ ಕಲೆ ಹಾಕಿತು. ಡೇವಿಡ್ ವಾರ್ನರ್ (52) ಮತ್ತು ರಿಷಭ್ ಪಂತ್ (51) ಅವರ ಅರ್ಧಶತಕಗಳ ನೆರವಿನಿಂದ 20 ಓವರ್​​​ಗಳಲ್ಲಿ 5 ವಿಕೆಟ್​​​ ನಷ್ಟಕ್ಕೆ 191 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಸಿಎಸ್​ಕೆ, ಡೆಲ್ಲಿ ಬೌಲರ್​​ಗಳ ಖಡಕ್ ದಾಳಿಗೆ ತತ್ತರಿಸಿತು. ಪರಿಣಾಮ 20 ಓವರ್​​​ಗಳಲ್ಲಿ 171 ರನ್ ಗಳಿಸಿ 20 ರನ್​ಗಳಿಂದ ಶರಣಾಯಿತು.

ನೀರಸ ಆರಂಭ ಪಡೆದ ಸಿಎಸ್​ಕೆ

ಡೆಲ್ಲಿ ನೀಡಿದ್ದ ಬೃಹತ್ ಗುರಿ ಬೆನ್ನಟ್ಟಿದ ಚೆನ್ನೈ ನೀರಸ ಆರಂಭ ಪಡೆಯಿತು. ಕಳೆದ 2 ಪಂದ್ಯಗಳಲ್ಲಿ ಭರ್ಜರಿ ಓಪನಿಂಗ್ ಪಡೆದಿದ್ದ ಸಿಎಸ್​ಕೆ, 7 ರನ್​ಗೆ ಆರಂಭಿಕರಾದ ಋತುರಾಜ್ ಗಾಯಕ್ವಾಡ್ (1) ಮತ್ತು ರಚಿನ್ ರವೀಂದ್ರ (2) ಅವರು ಖಲೀಲ್​ ಅಹ್ಮದ್ ಬೌಲಿಂಗ್​ನಲ್ಲಿ ಔಟಾದರು. ಬಳಿಕ ಅಜಿಂಕ್ಯ ರಹಾನೆ ಕೆಲವೊತ್ತು ಹೋರಾಟ ನಡೆಸಿದರು. ರಹಾನೆಗೆ ಡ್ಯಾರಿಲ್ ಮಿಚೆಲ್ ಸಾಥ್ ನೀಡಿದರು.

ಈ ಜೋಡಿ 3ನೇ ವಿಕೆಟ್​ಗೆ 68 ರನ್​ಗಳ ಪಾಲುದಾರಿಕೆ ನೀಡಿತು. ಈ ವೇಳೆ ದಾಳಿ ನಡೆಸಿದ ಅಕ್ಷರ್​ ಪಟೇಲ್, 26 ಎಸೆತಗಳಲ್ಲಿ 34 ರನ್ ಗಳಿಸಿ ಕ್ರೀಸ್​​ ಕಚ್ಚಿ ನಿಂತಿದ್ದ ಮಿಚೆಲ್​ಗೆ ಗೇಟ್​ಪಾಸ್ ನೀಡಿದರು. ಇವರ ಹಿಂದೆಯೇ 45 ರನ್ ಗಳಿಸಿದ್ದ ರಹಾನೆ ಕೂಡ ಹೊರ ನಡೆದರು. ಯಂಗ್ ಸೆನ್​ಸೇಷನ್ ಸಮೀರ್ ರಿಜ್ವಿ ಡಕೌಟ್​ಗೆ ಬಲಿಯಾದರು. ಈ ಇಬ್ಬರನ್ನು ಮುಕೇಶ್ ಕುಮಾರ್​ ಹಿಂದಿದೆಯೇ ಔಟ್ ಮಾಡಿದರು. ಮತ್ತೆ ಅಟ್ಯಾಕ್ ಮಾಡಿದ ಮುಕೇಶ್​, ಅಬ್ಬರಿಸಲು ಯತ್ನಿಸಿದ ಶಿವಂ ದುಬೆಗೆ ಪೆವಿಲಿಯನ್ ದಾರಿ ತೋರಿಸಿದರು.

ವಿಂಟೇಜ್ ಧೋನಿ

ಕೊನೆಯ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್​​ಗೆ ಬಾರದ ಧೋನಿ, ಈ ಪಂದ್ಯದಲ್ಲಿ ಕಣಕ್ಕಿಳಿದು ಬೌಂಡರಿ, ಸಿಕ್ಸರ್​​ ಸುರಿಮಳೆಗೈದು ಅಭಿಮಾನಿಗಳನ್ನು ರಂಜಿಸಿದರು. ಸೋತರೂ ಧೋನಿ ಆಟ ಎಲ್ಲರಿಗೂ ಖುಷಿ ನೀಡಿತು. ಕೇವಲ 16 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್​ ಸಹಿತ ಅಜೇಯ 37 ರನ್ ಬಾರಿಸಿದರು. ಜಡೇಜಾ ಅಜೇಯ 21 ರನ್ ಗಳಿಸಿದರು. ಇಬ್ಬರ ಹೋರಾಟದ ನಡುವೆಯೂ ಸಿಎಸ್​ಕೆ ಸೋಲೊಪ್ಪಿಕೊಂಡಿತು. ಮುಕೇಶ್ ಮೂರು ವಿಕೆಟ್ ಪಡೆದು ಮಿಂಚಿದರು.

ವಾರ್ನರ್, ರಿಷಭ್ ಭರ್ಜರಿ ಆಟ

ಮೊದಲು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ, ಈ ಐಪಿಎಲ್​ನಲ್ಲಿ ಭರ್ಜರಿ ಆರಂಭ ಪಡೆಯಿತು. ಕಳೆದ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ಆರಂಭ ಪಡೆದಿರಲಿಲ್ಲ. 3ನೇ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಪೃಥ್ವಿ ಶಾ ಸ್ಫೋಟಕ ಆರಂಭ ಒದಗಿಸಿದರು. ಅದೇ ರೀತಿ ಡೇವಿಡ್ ವಾರ್ನರ್ ಸಹ ಬಿರುಸಿನ ಬ್ಯಾಟಿಂಗ್ ಮೂಲಕ ಪೃಥ್ವಿಗೆ ಸಾಥ್ ನೀಡಿದರು. ಮೊದಲ ವಿಕೆಟ್​ಗೆ 93 ರನ್​ಗಳು ಹರಿದು ಬಂದವು. ಆಕ್ರಮಣಕಾರಿ ಆಟವಾಡಿದ ವಾರ್ನರ್​ ಐಪಿಎಲ್​ನಲ್ಲಿ 62ನೇ ಅರ್ಧಶತಕ ಬಾರಿಸಿದರು.

ವಾರ್ನರ್ (35 ಎಸೆತ, 5 ಬೌಂಡರಿ, 3 ಸಿಕ್ಸರ್​ ಸಹಿತ 52 ರನ್) ಅರ್ಧಶತಕದ ಬಳಿಕ ಮುಸ್ತಫಿಜುರ್ ರೆಹಮಾನ್ ಬೌಲಿಂಗ್​ನಲ್ಲಿ ಮತೀಶ ಪತಿರಾಣ ಹಿಡಿದ ಅದ್ಭುತ ಕ್ಯಾಚ್​​ಗೆ ಬಲಿಯಾದರು. ಇವರ ಹಿಂದೆಯೇ 43 ರನ್ ಗಳಿಸಿದ್ದ ಪೃಥ್ವಿ ಶಾ, ಜಡೇಜಾಗೆ ವಿಕೆಟ್​ ಒಪ್ಪಿಸಿದರು. ಬಳಿಕ ಅಬ್ಬರಿಸಿದ ರಿಷಭ್ ಪಂತ್​, ತಂಡದ ಸ್ಕೋರ್ ಹೆಚ್ಚಿಸಿದರ ಜೊತೆಗೆ ಅಪಘಾತದಿಂದ ಚೇತರಿಸಿಕೊಂಡ ನಂತರ ಮೊದಲ ಹಾಫ್ ಸೆಂಚುರಿ ಬಾರಿಸಿದರು.

ಪಂತ್​ ಫಿಫ್ಟಿ ಬಳಿಕ ಮತೀಶಾ ಪತಿರಾಣ ಬೌಲಿಂಗ್​​ನಲ್ಲಿ ಡೆಲ್ಲಿ ಮೂರು ವಿಕೆಟ್​ ಕಳೆದುಕೊಂಡಿತು. 32 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್​ ಸಹಿತ 51 ರನ್ ಗಳಿಸಿ ಪಂತ್ ಔಟಾದರು. ಬಳಿಕ ಮಿಚೆಲ್ ಮಾರ್ಷ್ (18), ಟ್ರಿಸ್ಟಾನ್ ಸ್ಟಬ್ಸ್ (0) ಔಟಾದರು. ಕೊನೆಯಲ್ಲಿ ಅಕ್ಷರ್ ಪಟೇಲ್ (7), ಅಭಿಷೇಕ್ ಪೊರೆಲ್ (9) ಅಜೇಯರಾಗಿ ಉಳಿದರು. ಡೆಲ್ಲಿ 20 ಓವರ್​​ಗೆ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ಸಿಎಸ್​ಕೆ ಪರ ಪತಿರಾಣ 3 ವಿಕೆಟ್ ಪಡೆದು ಮಿಂಚಿದರು.

IPL_Entry_Point