ಐಪಿಎಲ್ 2025: ನಿರೀಕ್ಷೆಯಂತೆಯೇ ಲಕ್ನೋ ಸೂಪರ್ ಜೈಂಟ್ಸ್ ನಾಯಕನಾಗಿ ನೇಮಕಗೊಂಡ ರಿಷಭ್ ಪಂತ್
ಐಪಿಎಲ್ 2025ರ ಆವೃತ್ತಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ ರಿಷಭ್ ಪಂತ್ ಅವರನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರನಾಗಿರುವ ಪಂತ್, ತಂಡದ ನಾಯಕನಾಗುವ ಎಲ್ಲಾ ರೀತಿಯ ಸುಳಿವು ಸಿಕ್ಕಿತ್ತು.

ಐಪಿಎಲ್ ಹರಾಜು ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆಗೆ ಪಾತ್ರಗಿರುವ ರಿಷಭ್ ಪಂತ್ (Rishabh Pant) ಅವರನ್ನು 2025ರ ಐಪಿಎಲ್ ಆವೃತ್ತಿಗೆ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ಈ ಹಿಂದೆಯೇ ಪಂತ್ ಎಲ್‌ಎಸ್‌ಜಿ ನಾಯಕನಾಗುವ ಸುಳಿವಿತ್ತು. ಅದರಂತೆಯೇ ಜನವರಿ 20ರ ಸೋಮವಾರ ಈ ಘೋಷಣೆ ಮಾಡಲಾಗಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಮೆಗಾ ಹರಾಜಿನಲ್ಲಿ ಪಂತ್ ದಾಖಲೆಯ ಮೊತ್ತಕ್ಕೆ ಹರಾಜಾಗಿದ್ದರು. ಎಲ್‌ಎಸ್‌ಜಿ ತಂಡದ ಸಹ ಮಾಲೀಕ ಸಂಜೀವ್ ಗೋಯೆಂಕಾ, ಬರೋಬ್ಬರಿ 27 ಕೋಟಿ ರೂ.ಗೆ ಪಂತ್ ಅವರನ್ನು ಬಿಡ್ ಮಾಡಿದ್ದರು.
ಪಂತ್ ಅವರ ಖರೀದಿಗೆ ಹೂಡಿಕೆ ಮಾಡಿದ ಮೊತ್ತ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರಿಗಿರುವ ಸ್ಥಾನಮಾನವನ್ನು ನೋಡಿದರೆ, ಪಂತ್ ನಾಯಕತ್ವದ ಜವಾಬ್ದಾರಿ ಪಡೆಯುವುದು ಖಚಿತ ಎಂಬುದು ಗೊತ್ತಾಗಿತ್ತು. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿದ್ದ ಪಂತ್ ಅವರ ಐಪಿಎಲ್ 2024ರ ಅಭಿಯಾನವು ಕಳಪೆಯಾಗಿತ್ತು. ತಂಡ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆದು ಅಭಿಯಾನ ಮುಗಿಸಿತು.
"ನನ್ನ ಪ್ರಕಾರ ರಿಷಭ್ ಪಂತ್ ಐಪಿಎಲ್‌ನ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಲಿದ್ದಾರೆ. ಮುಂದಿನ 10ರಿಂದ 12 ವರ್ಷಗಳಲ್ಲಿ ಅವರ ಹೆಸರು ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಕೇಳಿಬರಲಿದೆ" ಎಂದು ಗೋಯೆಂಕಾ ಹೇಳಿದ್ದಾರೆ.
ಹರಾಜಿಗೂ ಮುನ್ನ ಲಖ್ನೋ ತಂಡವು ಪ್ರಬಲ ಆಟಗಾರರನ್ನು ಉಳಿಸಿಕೊಂಡಿತು. ಈ ಬಾರಿ ನಿಕೋಲಸ್ ಪೂರನ್, ಡೇವಿಡ್ ಮಿಲ್ಲರ್, ಐಡೆನ್ ಮಾರ್ಕ್ರಮ್ ಮತ್ತು ಮಿಚೆಲ್ ಮಾರ್ಷ್ ಅವರಂಥ ಬಲಿಷ್ಠ ಆಟಗಾರರು ತಂಡದಲ್ಲಿದ್ದಾರೆ. ಈ ತಂಡವನ್ನು ಪಂತ್ ಮುನ್ನಡೆಸಲಿದ್ದಾರೆ.
ಪಂತ್ ಐಪಿಎಲ್ ದಾಖಲೆ
2016ರಲ್ಲಿ ಐಪಿಎಲ್ ಪದಾರ್ಪಣೆ ಮಾಡಿದ ಪಂತ್, ಈವರೆಗೆ ಆಡಿದ 111 ಪಂದ್ಯಗಳಲ್ಲಿ 3,284 ರನ್ ಗಳಿಸಿದ್ದಾರೆ. 2018ರ ಆವೃತ್ತಿಯಲ್ಲಿ ಅವರು ಅಮೋಘ ಪ್ರದರ್ಶನ ನೀಡಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧ ಅಜೇಯ 128 ರನ್ ಸೇರಿದಂತೆ 684 ರನ್ ಬಾರಿಸಿದ್ದರು. ಪಂತ್ ಮೂರು ಋತುಗಳಲ್ಲಿ 400ಕ್ಕೂ ಹೆಚ್ಚು ರನ್ ಕಲೆ ಹಾಕಿದ್ದಾರೆ.
ಐಪಿಎಲ್ 2025ಕ್ಕೆ ಎಲ್‌ಎಸ್‌ಜಿ ತಂಡ
ರಿಷಭ್ ಪಂತ್, ನಿಕೋಲಸ್ ಪೂರನ್, ಡೇವಿಡ್ ಮಿಲ್ಲರ್, ಆಯುಷ್ ಬದೋನಿ, ಮ್ಯಾಥ್ಯೂ ಬ್ರೀಟ್ಜ್ಕೆ, ಹಿಮ್ಮತ್ ಸಿಂಗ್, ಆರ್ಯನ್ ಜುಯಲ್, ಅಬ್ದುಲ್ ಸಮದ್, ಮಿಚೆಲ್ ಮಾರ್ಷ್, ಶಹಬಾಜ್ ಅಹ್ಮದ್, ಅರ್ಶಿನ್ ಕುಲಕರ್ಣಿ, ಯುವರಾಜ್ ಚೌಧರಿ, ರಾಜವರ್ಧನ್ ಹಂಗರ್‌ಗೇಕರ್, ಐಡೆನ್ ಮರ್ಕ್ರಾಮ್, ಮಯಾಂಕ್ ಯಾದವ್, ಆವೇಶ್ ಖಾನ್, ಆಕಾಶ್ ದೀಪ್, ಮೊಹ್ಸಿನ್ ಖಾನ್, ಶಮರ್ ಜೋಸೆಫ್, ಆಕಾಶ್ ಸಿಂಗ್, ಪ್ರಿನ್ಸ್ ಯಾದವ್, ರವಿ ಬಿಷ್ಣೋಯ್, ಎಂ ಸಿದ್ಧಾರ್ಥ್, ದಿಗ್ವೇಶ್ ಸಿಂಗ್.
