ಕನ್ನಡ ಸುದ್ದಿ  /  Cricket  /  Rishabh Pant Nearing Ipl Ban As Bcci Impose Heavy Penalty For Code Of Conduct Breach 24 Lakh Fine For Slow Over-rate Prs

ರಿಷಭ್ ಪಂತ್​ಗೆ 24 ಲಕ್ಷ ದಂಡ; ಇನ್ನೊಂದು ಪಂದ್ಯದಲ್ಲಿ ಹೀಗೆ ಮಾಡಿದ್ರೆ, ಡೆಲ್ಲಿ ಕ್ಯಾಪ್ಟನ್​ಗೆ ನಿಷೇಧ ಗ್ಯಾರಂಟಿ

Rishabh Pant: ಕೆಕೆಆರ್ ವಿರುದ್ಧ ನಿಗದಿತ ವೇಳೆಗೆ ಬೌಲಿಂಗ್​​ ಕೋಟಾ ಪೂರ್ಣಗೊಳಿಸದ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅವರಿಗೆ 24 ಲಕ್ಷ ದಂಡ ವಿಧಿಸಲಾಗಿದೆ. ಅದಲ್ಲದೆ, ನಿಷೇಧದ ಭೀತಿಗೂ ಸಿಲುಕಿದ್ದಾರೆ.

ರಿಷಭ್ ಪಂತ್​ಗೆ 24 ಲಕ್ಷ ದಂಡ
ರಿಷಭ್ ಪಂತ್​ಗೆ 24 ಲಕ್ಷ ದಂಡ

ಐಪಿಎಲ್​ನ 16ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (Delhi Capitals vs Kolkata Knight Riders) ಹೀನಾಯ ಸೋಲನುಭವಿಸಿತು. ವೈಜಾಗ್​​ನ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್​ ನೀಡಿದ್ದ 273 ರನ್​​ಗಳ ಬೃಹತ್ ಗುರಿ ಬೆನ್ನಟ್ಟಿದ ಡೆಲ್ಲಿ, 106 ರನ್​ಗಳ ಅಂತರದಿಂದ ಶರಣಾಯಿತು. ಈ ಪರಾಭವದ ಬೆನ್ನಲ್ಲೇ ನಾಯಕ ರಿಷಭ್ ಪಂತ್ (Rishabh)​ ಅವರು ಸಮಸ್ಯೆಗೆ ಸಿಲುಕಿದ್ದಾರೆ.

ರಿಷಭ್ ಪಂತ್​ಗೆ ಬಿತ್ತು ದಂಡ

ಕೋಲ್ಕತ್ತಾ ವಿರುದ್ಧ ಅರ್ಧಶತಕ ಬಾರಿಸಿ ಹೋರಾಟ ನಡೆಸಿದರೂ ದೊಡ್ಡ ಸ್ಕೋರ್ ಬೆನ್ನತ್ತಲು ಸಾಧ್ಯವಾಗಿಲ್ಲ. ಇದರ ನಡುವೆ ಡಿಸಿ ಆಟಗಾರರು ಶಿಕ್ಷೆಗೆ ಗುರಿಯಾಗಿದ್ದಾರೆ. ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ತಂಡಕ್ಕೆ ಭಾರಿ ದಂಡ ವಿಧಿಸಲಾಗಿದೆ. ನಾಯಕ ರಿಷಭ್ ಪಂತ್‌ಗೆ 24 ಲಕ್ಷ ದಂಡ, ಇಂಪ್ಯಾಕ್ಟ್ ಪ್ಲೇಯರ್​ ಅಭಿಷೇಕ್ ಪೊರೆಲ್ ಸೇರಿದಂತೆ ಉಳಿದ ಆಟಗಾರರಿಗೆ 6 ಲಕ್ಷ ಅಥವಾ ಪಂದ್ಯ ಶುಲ್ಕದ ಶೇಕಡಾ 25ರಷ್ಟು ದಂಡ ವಿಧಿಸಲಾಗಿದೆ. ಈ ಬಗ್ಗೆ ಐಪಿಎಲ್ ಪ್ರಕಟಣೆ ಹೊರಡಿಸಿದೆ.

ಕೆಕೆಆರ್ ವಿರುದ್ಧ ನಿಗದಿತ ವೇಳೆಗೆ ತನ್ನ ಇನ್ನಿಂಗ್ಸ್​ನ ಬೌಲಿಂಗ್​​ ಕೋಟಾ ಪೂರ್ಣಗೊಳಿಸದ ಕಾರಣ ದಂಡ ವಿಧಿಸಲಾಗಿದೆ. ನಿಗದಿತ ಸಮಯದಲ್ಲಿ ತಮ್ಮ ಓವರ್‌ಗಳನ್ನು ಪೂರ್ಣಗೊಳಿಸಲು ಡಿಸಿ ಎರಡನೇ ಬಾರಿಗೆ ವಿಫಲವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ ನಿಧಾನಗತಿಯ ಓವರ್​ರೇಟ್​​ಗೆ ಸಿಲುಕಿ ದಂಡ ಬಿದ್ದಿತ್ತು. ಮೊದಲ ಬಾರಿಗೆ ತಪ್ಪು ಮಾಡಿದ್ದ ವೇಳೆ 12 ಲಕ್ಷ ದಂಡ ಬಿದ್ದಿತ್ತು. ಈಗ ಅದರ ಮೊತ್ತ ಡಬಲ್ ಆಗಿದೆ.

ಐಪಿಎಲ್ ನಿಯಮ ಹೇಳುವುದೇನು?

ಐಪಿಎಲ್ ನಿಯಮದಂತೆ ಪ್ರತಿ ತಂಡಗಳು 20 ಓವರ್​ಗಳ ಕೋಟಾವನ್ನು 90 ನಿಮಿಷದಲ್ಲಿ ಪೂರ್ಣಗೊಳಿಸಬೇಕು. ಆದರೆ ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ, ಒಬ್ಬರ ಫೀಲ್ಡರ್​ ಕಡಿತ ಮಾಡಲಾಗುತ್ತದೆ. ನಾಯಕನಿಗೆ 12 ಲಕ್ಷ ದಂಡ ವಿಧಿಸಲಾಗುತ್ತದೆ. ಈ ತಪ್ಪನ್ನು ಪುನರಾವರ್ತಿಸಿದರೆ ಆ ತಂಡದ ಕ್ಯಾಪ್ಟನ್​ಗೆ 24 ಲಕ್ಷ, ಉಳಿದ ಆಟಗಾರರಿಗೆ 6 ಲಕ್ಷ ಅಥವಾ ಪಂದ್ಯದ ಶುಲ್ಕದ ಶೇಕಡಾ 25ರಷ್ಟು ದಂಡ ವಿಧಿಸಲಾಗುತ್ತದೆ.

ಆದರೆ ಇದೇ ತಪ್ಪನ್ನು ಮೂರನೇ ಬಾರಿಯೂ ಪುನರಾವರ್ತಿಸಿದರೆ ನಾಯಕನಿಗೆ ಒಂದು ಪಂದ್ಯದಿಂದ ನಿಷೇಧ ಹೇರಲಾಗುತ್ತದೆ. ಅಲ್ಲದೆ, 30 ಲಕ್ಷ ದಂಡವನ್ನೂ ವಿಧಸಲಾಗುತ್ತದೆ. ಪ್ಲೇಯಿಂಗ್​ ಇಲೆವೆನ್​ನಲ್ಲಿ ಆಡುವ 10 ಆಟಗಾರರಿಗೆ ತಲಾ 12 ಲಕ್ಷ ರೂಪಾಯಿ ಅಥವಾ ಪಂದ್ಯದ ಶುಲ್ಕ ಶೇಕಡಾ 50ರಷ್ಟು ದಂಡ ಪಾವತಿಸಬೇಕಾಗುತ್ತದೆ. ಮುಂಬರುವ ಪಂದ್ಯಗಳಲ್ಲಿ ಈ ತಪ್ಪು ಮಾಡಿದರೆ ಪಂತ್ ಒಂದು ಪಂದ್ಯದಿಂದ ನಿಷೇಧಕ್ಕೆ ಒಳಗಾಗಲಿದ್ದಾರೆ.

ಕೆಕೆಆರ್ ಪರ ಸುನಿಲ್ ನರೈನ್ (39 ಎಸೆತಗಳಲ್ಲಿ 7 ಬೌಂಡರಿ, 7 ಸಿಕ್ಸರ್ ಸಹಿತ 85 ರನ್), ಆಂಗ್ರಿಶ್ ರಘುವಂಶಿ (27 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಿತ 54 ರನ್) ಮತ್ತು ಆಂಡ್ರೆ ರಸೆಲ್ (19 ಎಸೆತಗಳಲ್ಲಿ 41) ಅವರು ಡೆಲ್ಲಿ ಬೌಲರ್​​ಗಳಿಗೆ ಬೆಂಡೆತ್ತಿದರು. ಚೇಸ್‌ನಲ್ಲಿ ರಿಷಭ್ ಪಂತ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಕ್ರಮವಾಗಿ 55 ಮತ್ತು 54 ರನ್ ಗಳಿಸಿದರು ಆದರೆ, ತಂಡವು ಕೆಕೆಆರ್​ ಅನ್ನು ಯಾವುದೇ ರೀತಿಯ ತೊಂದರೆಗೆ ಸಿಲುಕಿಸಲು ವಿಫಲವಾಯಿತು. ಡೆಲ್ಲಿ ಸೋಲಿನ ಬಳಿಕ ಪ್ರತಿಕ್ರಿಯಿಸಿದ ಪಂತ್, ಬೌಲರ್​​ಗಳನ್ನು ದೂಷಿಸಿದ್ದಾರೆ. ದೊಡ್ಡ ಸೋಲಿನ ಬಳಿಕ ಡೆಲ್ಲಿ ನೆಟ್​ ರನ್-ರೇಟ್ ದೊಡ್ಡ ಮಟ್ಟದಲ್ಲಿ ಕುಸಿಯಿತು.

IPL_Entry_Point