ನೀರಜ್ ಚೋಪ್ರಾ ಚಿನ್ನ ಗೆದ್ದರೆ ಅಭಿಮಾನಿಗಳಿಗೆ ನಗದು ಬಹುಮಾನ ಘೋಷಿಸಿದ ರಿಷಬ್ ಪಂತ್; ಆದರೆ ಷರತ್ತುಗಳು ಅನ್ವಯ
ಕನ್ನಡ ಸುದ್ದಿ  /  ಕ್ರಿಕೆಟ್  /  ನೀರಜ್ ಚೋಪ್ರಾ ಚಿನ್ನ ಗೆದ್ದರೆ ಅಭಿಮಾನಿಗಳಿಗೆ ನಗದು ಬಹುಮಾನ ಘೋಷಿಸಿದ ರಿಷಬ್ ಪಂತ್; ಆದರೆ ಷರತ್ತುಗಳು ಅನ್ವಯ

ನೀರಜ್ ಚೋಪ್ರಾ ಚಿನ್ನ ಗೆದ್ದರೆ ಅಭಿಮಾನಿಗಳಿಗೆ ನಗದು ಬಹುಮಾನ ಘೋಷಿಸಿದ ರಿಷಬ್ ಪಂತ್; ಆದರೆ ಷರತ್ತುಗಳು ಅನ್ವಯ

ಭಾರತೀಯರ ಚಿತ್ತವೀಗ ನೀರಜ್‌ ಚೋಪ್ರಾ ಮೇಲಿದೆ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆಲ್ಲುವ ನಿರೀಕ್ಷೆ ಮೂಡಿಸಿರುವ ಚಿನ್ನದ ಹುಡುಗ, ಇಂದು ತಡರಾತ್ರಿ ಜಾವೆಲಿನ್‌ ಥ್ರೋ ಫೈನಲ್‌ ಆಡುತ್ತಿದ್ದಾರೆ. ಒಂದು ವೇಳೆ ನೀರಜ್ ಚಿನ್ನ ಗೆದ್ದರೆ ಕ್ರಿಕೆಟಿಗ ರಿಷಬ್‌ ಪಂತ್‌ ವಿಶೇಷ ಬಹುಮಾನ ಘೋಷಿಸಿದ್ದಾರೆ.

ನೀರಜ್ ಚೋಪ್ರಾ ಚಿನ್ನ ಗೆದ್ದರೆ ಅಭಿಮಾನಿಗಳಿಗೆ ನಗದು ಬಹುಮಾನ ಘೋಷಿಸಿದ ರಿಷಬ್ ಪಂತ್
ನೀರಜ್ ಚೋಪ್ರಾ ಚಿನ್ನ ಗೆದ್ದರೆ ಅಭಿಮಾನಿಗಳಿಗೆ ನಗದು ಬಹುಮಾನ ಘೋಷಿಸಿದ ರಿಷಬ್ ಪಂತ್ (X, PTI)

ಟೋಕಿಯೋ ಒಲಿಂಪಿಕ್ಸ್‌ ಚಿನ್ನದ ಹುಡುಗ ನೀರಜ್‌ ಚೋಪ್ರಾ, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲೂ ಬಂಗಾರದ ಸಾಧನೆ ಮಾಡಲು ಸಜ್ಜಾಗಿ ನಿಂತಿದ್ದಾರೆ. ಈವರೆಗೆ ಕ್ರೀಡಾಕೂಟದಲ್ಲಿ ಭಾರತಕ್ಕೆ ನಿರೀಕ್ಷಿತ ಪದಕಗಳು ಬಂದಿಲ್ಲ. ಆಗಸ್ಟ್‌ 8ರ ಗುರುವಾರವಾದ ಇಂದು ಅತಿ ದೊಡ್ಡ ನಿರೀಕ್ಷೆಯ ಬಂಗಾರ ಒಲಿಯುವ ಸಾಧ್ಯತೆ ಇದೆ. ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ, ಅರ್ಹತಾ ಸುತ್ತಿನಲ್ಲಿ 89.34 ಮೀಟರ್‌ ದೂರ ಜಾವೆಲಿನ್ ಎಸೆದು ಫೈನಲ್‌ ಪ್ರವೇಶಿಸಿದ್ದರು. ಇದೀಗ ಗುರುವಾರ ನಡೆಯುತ್ತಿರುವ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್ ಬಂಗಾರಕ್ಕೆ ಗುರಿ ಇಟ್ಟಿದ್ದಾರೆ. ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಚಿನ್ನಕ್ಕಾಗಿ ಅಖಾಡಕ್ಕಿಳಿಯುತ್ತಿದ್ದಾರೆ. ಈವೆಂಟ್‌ ನಡೆಯುವುದಕ್ಕೂ ಮುನ್ನ ನೀರಜ್‌ಗೆ ಹಲವು ಆಫರ್‌ಗಳು ಬರುತ್ತಿವೆ. ಇದೇ ವೇಳೆ ಟೀಮ್‌ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್, ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳಿಗೆ ಆಫರ್‌ ಒಂದನ್ನು ನೀಡಿದ್ದಾರೆ.

ತಮ್ಮ ಆಫರ್‌ ಕುರಿತು ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ ಪಂತ್, ಒಂದು ವೇಳೆ ನೀರಜ್ ಗುರುವಾರ ಚಿನ್ನ ಗೆದ್ದರೆ, ತಮ್ಮ ಪೋಸ್ಟ್ ಅನ್ನು ಲೈಕ್‌ ಮಾಡುವ ಮತ್ತು ಕಾಮೆಂಟ್ ಮಾಡುವ ಜನರಲ್ಲಿ ಒಬ್ಬ ಅದೃಷ್ಟಶಾಲಿ ವಿಜೇತರಿಗೆ ಬರೋಬ್ಬರಿ 1,00,089 ರೂಪಾಯಿಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.

“ಒಂದು ವೇಳೆ ಗುರುವಾರ ನೀರಜ್ ಚೋಪ್ರಾ ಅವರು ಚಿನ್ನದ ಪದಕ ಗೆದ್ದರೆ, ಟ್ವೀಟ್ ಅನ್ನು ಹೆಚ್ಚು ಲೈಕ್‌ ಮಾಡುವ ಮತ್ತು ಕಾಮೆಂಟ್ ಮಾಡುವ ಅದೃಷ್ಟಶಾಲಿ ವಿಜೇತರಿಗೆ ನಾನು 100089 ರೂಪಾಯಿ ನೀಡುತ್ತೇನೆ. ಇದೇ ವೇಳೆ ಗಮನ ಸೆಳೆಯುವ ಇತರ ಅಗ್ರ 10 ಜನರಿಗೆ ವಿಮಾನ ಟಿಕೆಟ್‌ಗಳು ಸಿಗುತ್ತವೆ. ಭಾರತ ಮಾತ್ರವಲ್ಲದೆ ಹೊರಗಿನಿಂದಲೂ ನನ್ನ ಸಹೋದರ ನೀರಜ್‌ಗಾಗಿ ಬೆಂಬಲ ಸಿಗಲಿ” ಎಂದು ಪಂತ್ ಬುಧವಾರ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಮೂಲಕ ಭರ್ಜರಿ ಘೋಷಣೆ ಮಾಡಿದ್ದಾರೆ.‌

ಗುರುವಾರ ರಾತ್ರಿ 11:55ರ ನಂತರ ಪುರುಷರ ಜಾವೆಲಿನ್ ಥ್ರೋ ಫೈನಲ್‌ ನಡೆಯಲಿದೆ. ನೀರಜ್ ಚೋಪ್ರಾ ಪದಕ ಸುತ್ತಿನಲ್ಲಿ ಕಣಕ್ಕಿಳಿಯಲಿದ್ದಾರೆ. ತಡರಾತ್ರಿ ಫಲಿತಾಂಶ ಲಭ್ಯವಾಗಲಿದೆ.

ಅತ್ತ ರಿಷಬ್‌ ಪಂತ್ ಬಹುಮಾನದ ಪ್ರಕಟಣೆ ಮಾಡುತ್ತಿದ್ದಂತೆಯೇ, ಅಭಿಮಾನಿಗಳು ಪಂತ್‌ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಲು ಶುರು ಮಾಡಿದ್ದಾರೆ. ಹಲವು ಬಳಕೆದಾರರು ಕೂಡಾ ಇಂಥಾ ಘೋಷಣೆ ಮಾಡಿದ್ದಾರೆ.

ಅರ್ಹತಾ ಸುತ್ತಿನಲ್ಲಿ 89.34 ದೂರ ಎಸೆದು ಅಗ್ರಸ್ಥಾನದೊಂದಿಗೆ ನೀರಜ್‌ ಫೈನಲ್‌ ಪ್ರವೇಶಿಸಿದ್ದರು. ಇದು ಅವರ ವೃತ್ತಿಜೀವನದ ಎರಡನೇ ಅತ್ಯುತ್ತಮ ಎಸೆತ. ಇದರೊಂದಿಗೆ ಚೋಪ್ರಾ ಅವರ ಫಿಟ್‌ನೆಸ್‌ನ ಸುತ್ತಲಿನ ಎಲ್ಲಾ ಆತಂಕ ಹಾಗೂ ಕಳವಳಗಳು ದೂರವಾಗಿವೆ. ಚಿನ್ನದ ಹುಡುಗನ ವೈಯಕ್ತಿಕ ಗರಿಷ್ಠ ಎಸೆತ 2022ರಲ್ಲಿ ಬಂದಿತ್ತು. ಅದು 89.94 ಮೀಟರ್‌ ದೂರ ಸಾಧನೆ.

Whats_app_banner