ವಿರಾಟ್ ಕೊಹ್ಲಿ ಆರ್‌ಸಿಬಿಗೆ, ರಿಷಭ್ ಪಂತ್ ಎಲ್‌ಎಸ್‌ಜಿ ಕ್ಯಾಪ್ಟನ್; 2025ರ ಐಪಿಎಲ್ 10 ತಂಡಗಳ ಸಂಭಾವ್ಯ ನಾಯಕರ ಪಟ್ಟಿ
Captains Of All 10 Teams: ಹರಾಜಿನಲ್ಲಿ ಯಾವ ತಂಡವು ಭವಿಷ್ಯದ ನಾಯಕನಿಗೆ ಮಣೆ ಹಾಕಿವೆ. ಐಪಿಎಲ್ 2025ರಲ್ಲಿ ಎಲ್ಲಾ 10 ತಂಡಗಳ ಸಂಭಾವ್ಯ ನಾಯಕರ ಪಟ್ಟಿ ಇಲ್ಲಿದೆ.
ಐಪಿಎಲ್ 2025 ಮೆಗಾ ಹರಾಜು ಮುಕ್ತಾಯಗೊಂಡಿದೆ. ಎಲ್ಲಾ 10 ತಂಡಗಳು ತಮ್ಮ ನೆಚ್ಚಿನ ಆಟಗಾರರನ್ನು ಖರೀದಿಸುವ ಮೂಲಕ ನೂತನ ಮತ್ತು ಬಲಿಷ್ಠ ತಂಡವನ್ನು ನಿರ್ಮಿಸಿವೆ. ಕೆಲವು ತಂಡಗಳು ನೂತನ ನಾಯಕನನ್ನೂ ಹುಡುಕಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫಾಫ್ ಡು ಪ್ಲೆಸಿಸ್ ಅವರನ್ನು ಬಿಡುಗಡೆ ಮಾಡಿತ್ತು. ಅದೇ ರೀತಿ ಎಲ್‌ಎಸ್‌ಜಿ, ಡೆಲ್ಲಿ ಕ್ಯಾಪಿಟಲ್ಸ್, ಕೆಕೆಆರ್, ಪಂಜಾಬ್ ಕಿಂಗ್ಸ್ ತಂಡಗಳು ತಮ್ಮ ನಾಯಕರನ್ನು ಬಿಡುಗಡೆ ಮಾಡಿದ್ದವು. ಇದೀಗ ಹರಾಜಿನಲ್ಲಿ ಯಾವ ತಂಡವು ಭವಿಷ್ಯದ ನಾಯಕನಿಗೆ ಮಣೆ ಹಾಕಿವೆ ಎಂಬುದರ ವಿವರವನ್ನು ಈ ಮುಂದೆ ನೋಡೋಣ. ಐಪಿಎಲ್ 2025ರಲ್ಲಿ ಎಲ್ಲಾ 10 ತಂಡಗಳ ಸಂಭಾವ್ಯ ನಾಯಕರ ಪಟ್ಟಿ ಇಲ್ಲಿದೆ.
ಕೋಲ್ಕತ್ತಾ ನೈಟ್ ರೈಡರ್ಸ್
ಹಾಲಿ ಚಾಂಪಿಯನ್ ಕೆಕೆಆರ್ ಶ್ರೇಯಸ್ ಅಯ್ಯರ್ ಅವರನ್ನು ಮತ್ತೆ ಖರೀದಿಸಲು ವಿಫಲವಾಯಿತು. ವೆಂಕಟೇಶ್ ಅಯ್ಯರ್ಗೆ 23.75 ಕೋಟಿ ನೀಡಿ ಖರೀದಿಸಿತು. ಶ್ರೇಯಸ್ 2023ರಲ್ಲಿ ಗಾಯಗೊಂಡಿದ್ದ ವೇಳೆ ನಿತೀಶ್ ರಾಣಾಗೆ ವೆಂಕಟೇಶ್ ಉಪನಾಯಕರಾಗಿದ್ದರು. ವೆಂಕಿ ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ತಂಡದ ನಾಯಕರಾಗಿದ್ದಾರೆ. ಇದೀಗ ಕೆಕೆಆರ್ ನಾಯಕತ್ವ ನಿರೀಕ್ಷಿಯಲ್ಲಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್
ಡೆಲ್ಲಿ ಕ್ಯಾಪಿಟಲ್ಸ್ ರಿಷಭ್ ಪಂತ್ ಅವರನ್ನು ಬಿಡುಗಡೆ ಮಾಡಿದ್ದು ಅಚ್ಚರಿ ಮೂಡಿಸಿತು. ಡಿಸಿ ಹರಾಜಿನಲ್ಲಿ ಪಂತ್‌ಗೆ ಬಿಡ್ ಮಾಡಿದರೂ ಎಲ್‌ಎಸ್‌ಜಿ ಟಾರ್ಗೆಟ್ ಮಾಡಿ 27 ಕೋಟಿಗೆ ಖರೀದಿಸಿತು. ಇದೀಗ ಎಲ್ಎಸ್ಜಿಗೆ ಪಂತ್ ನಾಯಕನಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಈ ಮೊದಲು ಕೆಎಲ್ ರಾಹುಲ್ ಕ್ಯಾಪ್ಟನ್ ಆಗಿದ್ದರು. ಅವರೀಗ ಡೆಲ್ಲಿ ತಂಡಕ್ಕೆ 14 ಕೋಟಿಗೆ ಸೇರ್ಪಡೆಯಾಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್
ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಬೇರ್ಪಟ್ಟ ನಂತರ ಡೆಲ್ಲಿ ಸೇರಿರುವ ಕೆಎಲ್ ರಾಹುಲ್ ಮುಂದಿನ ನಾಯಕನಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮುನ್ನ ಪಂತ್ ಡೆಲ್ಲಿ ಕ್ಯಾಪ್ಟನ್ ಆಗಿದ್ದರು. ಪ್ರಸ್ತುತ ರಾಹುಲ್ಗೆ ಅಕ್ಷರ್ ಪಟೇಲ್ ಪ್ರಬಲ ಪೈಪೋಟಿಯಾಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಫಾಫ್ ಡು ಪ್ಲೆಸಿಸ್ ಬಿಡುಗಡೆ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮತ್ತೆ ವಿರಾಟ್ ಕೊಹ್ಲಿಯೇ ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿ ಆರ್ಸಿಬಿ ಸುಳಿವು ಕೂಡ ಬಿಟ್ಟುಕೊಟ್ಟಿದೆ. ಹರಾಜಿನಲ್ಲಿ ಕ್ಯಾಪ್ಟನ್ ಆಗುವ ಯಾವೊಬ್ಬ ಆಟಗಾರನನ್ನು ಖರೀದಿಸಿಲ್ಲ. 2025ರಲ್ಲಿ ಕೊಹ್ಲಿಯೇ ನಾಯಕನಾಗಲಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ.
ಪಂಜಾಬ್ ಕಿಂಗ್ಸ್
ಪಂಜಾಬ್ ಕಿಂಗ್ಸ್ ತಂಡವನ್ನು ಐಪಿಎಲ್ ವಿಜೇತ ನಾಯಕ ಶ್ರೇಯಸ್ ಅಯ್ಯರ್ ಮುನ್ನಡೆಸುವುದು ಬಹುತೇಕ ಖಚಿತ. ಅವರಿಗೆ 26.75 ಕೋಟಿ ಪಾವತಿಸಿದೆ. ಕಳೆದ ಐಪಿಎಲ್ನಲ್ಲಿ ಕೆಕೆಆರ್ ನಾಯಕನಾಗಿದ್ದ ಅಯ್ಯರ್, ತಂಡವನ್ನು ಮೂರನೇ ಬಾರಿಗೆ ಚಾಂಪಿಯನ್ ಮಾಡುವಲ್ಲಿ ಯಶಸ್ಸು ಕಂಡಿದ್ದರು.
ಚೆನ್ನೈ ಸೂಪರ್ ಕಿಂಗ್ಸ್
ಐಪಿಎಲ್ 2024ರಲ್ಲಿ ಎಂಎಸ್ ಧೋನಿ ಕೆಳಗಿಳಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಋತುರಾಜ್ ಗಾಯಕ್ವಾಡ್ ಮುನ್ನಡೆಸಿದರು. ಗಾಯಕ್ವಾಡ್ ಅವರೇ ಐಪಿಎಲ್ 2025ರಲ್ಲಿ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.
ಮುಂಬೈ ಇಂಡಿಯನ್ಸ್
ಐಪಿಎಲ್ 2024ರ ಮೊದಲು ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಹಸ್ತಾಂತರಿಸಿತ್ತು. ಇದೀಗ ಮುಂಬರುವ ವರ್ಷವೂ ಅವರೇ ಮುಂಬೈ ಇಂಡಿಯನ್ಸ್ ಮುನ್ನಡೆಸಲಿದ್ದಾರೆ.
ರಾಜಸ್ಥಾನ್ ರಾಯಲ್ಸ್
ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸುವುದು ಖಚಿತ. ಇತ್ತೀಚಿನ ವರ್ಷಗಳಲ್ಲಿ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದಾರೆ. ಅವರು ಐಪಿಎಲ್ 2025 ರಲ್ಲೂ ತಂಡವನ್ನು ಮುನ್ನಡೆಸಲಿದ್ದಾರೆ.
ಗುಜರಾತ್ ಟೈಟಾನ್ಸ್
ಹಾರ್ದಿಕ್ ಪಾಂಡ್ಯ ಎಂಐಗೆ ತೆರಳಿದ ನಂತರ ಗುಜರಾತ್ ಟೈಟಾನ್ಸ್ ಜವಾಬ್ದಾರಿ ಶುಭ್ಮನ್ ಗಿಲ್‌ಗೆ ಬಂದಿತ್ತು. ಪ್ರಸ್ತುತ ರಶೀದ್ ಖಾನ್ ಮತ್ತು ಜೋಸ್ ಬಟ್ಲರ್ ಅವರಂತಹ ಅನುಭವಿ ಆಟಗಾರರನ್ನು ಹೊಂದಿದ್ದರೂ ಗಿಲ್ ಅವರೇ ಐಪಿಎಲ್ 2025ರಲ್ಲಿ ತಂಡವನ್ನು ಮುನ್ನಡೆಸುವ ನಿರೀಕ್ಷೆ ಇದೆ.
ಸನ್ರೈಸರ್ಸ್ ಹೈದರಾಬಾದ್
ಸನ್ರೈಸರ್ಸ್ ಹೈದರಾಬಾದ್ ಹರಾಜಿಗೂ ಮುನ್ನ ತಮ್ಮ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಉಳಿಸಿಕೊಂಡಿತ್ತು. ಅವರ ನಾಯಕತ್ವದಲ್ಲಿ ಎಸ್ಆರ್ಹೆಚ್ ಉತ್ತಮ ಪ್ರದರ್ಶನ ನೀಡಿ ಫೈನಲ್ ತಲುಪಿತ್ತು. ಐಪಿಎಲ್ 2025ರಲ್ಲಿ ಕಮಿನ್ಸ್ ಅವರೇ ತಂಡವನ್ನು ಮುನ್ನಡೆಸುವ ನಿರೀಕ್ಷೆಯಿದೆ.