ಬೋಲ್ಟ್ ಬೊಂಬಾಟ್, ಪರಾಗ್ ಫಿನಿಶಿಂಗ್; ರಾಜಸ್ಥಾನ್ ರಾಯಲ್ಸ್ ಹ್ಯಾಟ್ರಿಕ್ ಗೆಲುವು, ಮುಂಬೈಗೆ ಸತತ ಮೂರನೇ ಸೋಲು
ಕನ್ನಡ ಸುದ್ದಿ  /  ಕ್ರಿಕೆಟ್  /  ಬೋಲ್ಟ್ ಬೊಂಬಾಟ್, ಪರಾಗ್ ಫಿನಿಶಿಂಗ್; ರಾಜಸ್ಥಾನ್ ರಾಯಲ್ಸ್ ಹ್ಯಾಟ್ರಿಕ್ ಗೆಲುವು, ಮುಂಬೈಗೆ ಸತತ ಮೂರನೇ ಸೋಲು

ಬೋಲ್ಟ್ ಬೊಂಬಾಟ್, ಪರಾಗ್ ಫಿನಿಶಿಂಗ್; ರಾಜಸ್ಥಾನ್ ರಾಯಲ್ಸ್ ಹ್ಯಾಟ್ರಿಕ್ ಗೆಲುವು, ಮುಂಬೈಗೆ ಸತತ ಮೂರನೇ ಸೋಲು

Mumbai Indians vs Rajasthan Royals: ಐಪಿಎಲ್‌ 2024ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ಹ್ಯಾಟ್ರಿಕ್‌ ಸೋಲು ಕಂಡರೆ, ರಾಜಸ್ಥಾನ್‌ ರಾಯಲ್ಸ್‌ ಹ್ಯಾಟ್ರಿಗೆ ಗೆಲುವು ಒಲಿಸಿಕೊಂಡಿದೆ. ಹಾರ್ದಿಕ್‌ ಪಾಂಡ್ಯ ಬಳಗವನ್ನು ಅವರದ್ದೇ ತವರು ವಾಂಖೆಡೆ ಮೈದಾನದಲ್ಲಿ ಸಂಜು ಸ್ಯಾಮ್ಸನ್‌ ಪಡೆ ಸೋಲಿಸಿದೆ.

ರಾಜಸ್ಥಾನ್ ರಾಯಲ್ಸ್ ಹ್ಯಾಟ್ರಿಕ್ ಗೆಲುವು, ಮುಂಬೈಗೆ ಸತತ ಮೂರನೇ ಸೋಲು
ರಾಜಸ್ಥಾನ್ ರಾಯಲ್ಸ್ ಹ್ಯಾಟ್ರಿಕ್ ಗೆಲುವು, ಮುಂಬೈಗೆ ಸತತ ಮೂರನೇ ಸೋಲು (AFP)

ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡವು ಹ್ಯಾಟ್ರಿಕ್ ಸೋಲು ಕಂಡಿದೆ. ನೂತನ ನಾಯಕ ಹಾರ್ದಿಕ್‌ ಪಾಂಡ್ಯ ನಾಯಕತ್ವದಲ್ಲಿ, ತವರು ನೆಲ ಮುಂಬೈಯಲ್ಲೂ ಮೊದಲ ಗೆಲುವು ಕಾಣಲು ಎಂಐ ವಿಫಲವಾಗಿದೆ. ಏಪ್ರಿಲ್‌ 1ರ ಸೋಮವಾರ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವು ಭರ್ಜರಿ 6 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಇದರೊಂದಿಗೆ ಸಂಜು ಸ್ಯಾಮ್ಸನ್‌ ಬಳಗವು ಹ್ಯಾಟ್ರಿಕ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ, ಸತತ ವಿಕೆಟ್‌ ಕಳೆದುಕೊಂಡ ಪರಿಣಾಮವಾಗಿ 9 ವಿಕೆಟ್‌ ನಷ್ಟಕ್ಕೆ ಕೇವಲ 125 ರನ್ ಗಳಿಸಿತು. ಸಾಧಾರಣ ಗುರಿ ಬೆನ್ನಟ್ಟಿದ ರಾಯಲ್ಸ್, ಕೇವಲ 15.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 127 ರನ್‌ ಗಳಿಸಿತು. ಇದರೊಂದಿಗೆ ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಸತತ ಮೂರನೇ ಗೆಲುವು ಸಾಧಿಸುವ ಮೂಲಕ ಅಜೇಯ ತಂಡವಾಗಿ ಮುನ್ನಡೆಯಿತು.

ಪಂದ್ಯದಲ್ಲಿ ಮುಂಬೈ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೂವರು ಬ್ಯಾಟರ್‌ಗಳು ಒಬ್ಬರ ನಂತರ ಮತ್ತೊಬ್ಬರಂತೆ ಗೋಲ್ಡನ್ ಡಕ್ ಆದರು. ಮಾಜಿ ನಾಯಕ ರೋಹಿತ್‌ ಶರ್ಮಾ, ನಮನ್ ಧಿರ್ ಹಾಗೂ ಡೆವಾಲ್ಡ್ ಬ್ರೆವಿಸ್ ಶೂನ್ಯಕ್ಕೆ ಔಟಾದರು. ಮೂವರನ್ನೂ ಪೆವಿಲಿಯನ್‌ ಕಳುಹಿಸಿದ ಟ್ರೆಂಟ್‌ ಬೋಲ್ಟ್‌, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದನ್ನೂ ಓದಿ | ಫಾಸ್ಟ್​ ಬಾಲ್ ಹಾಕಿ ಫಾರ್ಲೋವರ್ಸ್ ಏರಿಸಿಕೊಂಡ ಮಯಾಂಕ್ ಯಾದವ್; ರಾತ್ರೋರಾತ್ರಿ ಹೀರೋ ಆದ ವೇಗಿಗೆ ಮೊದಲಿದ್ದಿದ್ದೇ 4000!

ಇಶಾನ್‌ ಕಿಶನ್‌ 16 ರನ್‌ ಗಳಿಸಿ ಬರ್ಗರ್‌ಗೆ ವಿಕೆಟ್‌ ಒಪ್ಪಿಸಿದರು. ನಾಯಕನಾಟವಾಡಲು ಬಂದ ಹಾರ್ದಿಕ್‌ ಪಾಂಡ್ಯ 21 ಎಸೆತಗಳಲ್ಲಿ 34 ರನ್‌ ಗಳಿಸಿ ಔಟಾದರು. ಪಿಯೂಷ್‌ ಚಾವ್ಲಾ 3 ರನ್‌ ಗಳಿಸಿದರೆ, ಕ್ರೀಸ್‌ಕಚ್ಚಿ ಆಡುತ್ತಿದ್ದ ತಿಲಕ್‌ ವರ್ಮಾ 32 ರನ್‌ ಕಲೆ ಹಾಕಿ ಚಹಾಲ್‌ ಮೋಡಿಗೆ ಬಲಿಯಾದರು. ಕೆಳಕ್ರಮಾಂಕದಲ್ಲಿ ಟಿಮ್‌ ಡೇವಿಡ್‌ 17 ರನ್‌ ಪೇರಿಸಿದರು.

ರಾಜಸ್ಥಾನ ಸುಲಭ ಚೇಸಿಂಗ್

ಮುಂಬೈ ನೀಡಿದ 125 ರನ್‌ಗಳ ಅತ್ಯಲ್ಪ ಗುರಿ ಬೆನ್ನಟ್ಟಿದ ರಾಜಸ್ಥಾನ್‌, ಸುಲಭವಾಗಿ ಗುರಿ ತಲುಪಿತು. ಅಲ್ಪ ಗುರಿ ಪಡೆದರೂ, ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾದ ಯಶಸ್ವಿ ಜೈಸ್ವಾಲ್‌ ಮತ್ತು ಜೋಸ್‌ ಬಟ್ಲರ್‌ ಟೂರ್ನಿಯಲ್ಲಿ ಮತ್ತೆ ವಿಫಲರಾದರು. ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಮಫಾಕಾ, 10 ರನ್‌ ಗಳಿಸಿದ್ದ ಯಶಸ್ವಿ ಜೈಸ್ವಾಲ್‌ ವಿಕೆಟ್‌ ಕಬಳಿಸಿದರು. ಬಟ್ಲರ್‌ ಆಟ 13 ರನ್‌ಗಳಿಗೆ ಅಂತ್ಯವಾಯ್ತು.

ರಿಯಾನ್‌ ಪರಾಗ್‌ ಮತ್ತೊಂದು ಅಜೇಯ ಅರ್ಧಶತಕ

ನಾಯಕ ಸಂಜು ಸ್ಯಾಮ್ಸನ್‌ 12 ರನ್‌ ಗಳಿಸಿ ಕ್ಲೀನ್‌ ಬೋಲ್ಡ್‌ ಆದರು. ರವಿಚಂದ್ರನ್‌ ಅಶ್ವಿನ್‌ 16 ರನ್ ಕಾಣಿಕೆ ನೀಡಿದರು. ಮತ್ತೊಮ್ಮೆ ಸ್ಫೋಟಕ ಇನ್ನಿಂಗ್ಸ್‌ ಆಡಿದ ರಿಯಾನ್‌ ಪರಾಗ್‌, 39 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 54 ರನ್‌ ಗಳಿಸಿದರು. ಸತತ ಎರಡು ಪಂದ್ಯಗಳಲ್ಲಿ ಅಜೇಯ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಅಲ್ಲದೆ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮುಂಬೈ ತಂಡದ ಪ್ರಮುಖ ಮೂರು ವಿಕೆಟ್‌ ಕಬಳಿಸಿದ ಟ್ರೆಂಟ್‌ ಬೋಲ್ಟ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Whats_app_banner