ಡೆಲ್ಲಿ ಕ್ಯಾಪಿಟಲ್ಸ್‌ ಭಾರತೀಯ ಆಟಗಾರರಿಗೆ ಸಪೋರ್ಟ್‌ ಮಾಡಲ್ಲ; ಡಿಸಿ ಆಟದ ತಂತ್ರಕ್ಕೆ ರಾಬಿನ್ ಉತ್ತಪ್ಪ ಅಸಮಾಧಾನ
ಕನ್ನಡ ಸುದ್ದಿ  /  ಕ್ರಿಕೆಟ್  /  ಡೆಲ್ಲಿ ಕ್ಯಾಪಿಟಲ್ಸ್‌ ಭಾರತೀಯ ಆಟಗಾರರಿಗೆ ಸಪೋರ್ಟ್‌ ಮಾಡಲ್ಲ; ಡಿಸಿ ಆಟದ ತಂತ್ರಕ್ಕೆ ರಾಬಿನ್ ಉತ್ತಪ್ಪ ಅಸಮಾಧಾನ

ಡೆಲ್ಲಿ ಕ್ಯಾಪಿಟಲ್ಸ್‌ ಭಾರತೀಯ ಆಟಗಾರರಿಗೆ ಸಪೋರ್ಟ್‌ ಮಾಡಲ್ಲ; ಡಿಸಿ ಆಟದ ತಂತ್ರಕ್ಕೆ ರಾಬಿನ್ ಉತ್ತಪ್ಪ ಅಸಮಾಧಾನ

ಪಂಜಾಬ್‌ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಾಲ್ವರು ವಿದೇಶಿ ಬ್ಯಾಟರ್‌ಗಳನ್ನು ಕಣಕ್ಕಿಳಿಸಿತು. ಇದು ಮಾಜಿ ಆಟಗಾರ ರಾಬಿನ್ ಉತ್ತಪ್ಪಗೆ ಸರಿ ಕಾಣಿಸಿಲ್ಲ. ಡೆಲ್ಲಿ ತಂಡವು ಭಾರತೀಯ ಆಟಗಾರರನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ಭಾರತೀಯ ಆಟಗಾರರಿಗೆ ಸಪೋರ್ಟ್‌ ಮಾಡಲ್ಲ
ಡೆಲ್ಲಿ ಕ್ಯಾಪಿಟಲ್ಸ್‌ ಭಾರತೀಯ ಆಟಗಾರರಿಗೆ ಸಪೋರ್ಟ್‌ ಮಾಡಲ್ಲ (PTI)

ಡೆಲ್ಲಿ ಕ್ಯಾಪಿಟಲ್ಸ್ ಮ್ಯಾನೇಜ್ಮೆಂಟ್, ತನ್ನ ತಂಡದಲ್ಲಿ ಭಾರತೀಯ ಆಟಗಾರರಿಗೆ ಸೂಕ್ತ ಬೆಂಬಲ ನೀಡುವುದಿಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಬಹಿರಂಗವಾಗಿ ಹೇಳಿದ್ದಾರೆ. ಚಂಡೀಗಢದ ಮುಲ್ಲಾನ್ಪುರದಲ್ಲಿ ಶನಿವಾರ ನಡೆದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ತಂಡಗಳ ನಡುವಿನ ಪಂದ್ಯದ ವೇಳೆ ಕನ್ನಡಿಗ ಈ ಹೇಳಿಕೆ ನೀಡಿದ್ದಾರೆ. ಆಟಗಾರರು ಫಾರ್ಮ್‌ನಲ್ಲಿರುವಾಗ ಅವರನ್ನು ಸೂಕ್ತ ರೀತಿಯಲ್ಲಿ ಬಳಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

“ನೀವೇ ಆಯ್ಕೆ ಮಾಡಿದ ಭಾರತೀಯ ಆಟಗಾರರಿಗೆ ಏಕೆ ಬೆಂಬಲ ನೀಡುತ್ತಿಲ್ಲ? ಡೆಲ್ಲಿಯಂಥ ಫ್ರಾಂಚೈಸಿ ಭಾರತೀಯ ಆಟಗಾರರಿಗೆ ಯಾಕೆ ಸಪೋರ್ಟ್‌ ಮಾಡುವುದಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ಡಿಸಿಯೊಂದಿಗೆ ನನಗಿರುವ ಸಮಸ್ಯೆ ಇದುವೇ. ಆ ಫ್ರಾಂಚೈಸ್‌ ಎಂದಿಗೂ ನಮ್ಮ ಭಾರತೀಯ ಆಟಗಾರರನ್ನು ಆಡಿಸಿ ನೋಡುವುದಿಲ್ಲ” ಎಂದು ಉತ್ತಪ್ಪ ಜಿಯೋ ಸಿನಿಮಾದಲ್ಲಿ ಹೇಳಿದ್ದಾರೆ.

ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ತಂಡವು ತನ್ನ ಅಗ್ರ ಕ್ರಮಾಂಕದ ಆರು ಬ್ಯಾಟರ್‌ಗಳಲ್ಲಿ ನಾಲ್ವರು ವಿದೇಶಿ ಬ್ಯಾಟರ್‌ಗಳಿಗೆ ಮಣೆ ಹಾಕಿತು. ಆಸೀಸ್‌ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಬ್ಯಾಟಿಂಗ್ ಆರಂಭಿಸಿದರೆ, ಶಾಯ್ ಹೋಪ್ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಹೀಗಾಗಿ ಸ್ಫೋಟಕ ಆರಂಭಿಕ ಆಟಗಾರ ಪೃಥ್ವಿ ಶಾ ಅವರನ್ನು ಕೈಬಿಟ್ಟಿತು. ಅಭಿಷೇಕ್ ಪೊರೆಲ್ ಅವರನ್ನು ಆರಂಭಿಕ ಆಡುವ ಬಳಗದಿಂದ ಹೊರಗಿಡಲಾಯ್ತು. ಆದರೆ ಡಿಸಿ ತಂಡವು ಅಲ್ಪ ಮೊತ್ತಕ್ಕೆ ಕುಸಿಯುವ ಹಂತದಲ್ಲಿದ್ದಾಗ ತಂಡದ ರಕ್ಷಣೆಗೆ ಬಂದಿದ್ದೇ ಯುವ ಆಟಗಾರ ಪೊರೆಲ್. ಇವರು ಕಣಕ್ಕಿಳಿದಿದ್ದು ಇಂಪ್ಯಾಕ್ಟ್ ಪ್ಲೇಯರ್ ಆಗಿ ಎಂಬುದನ್ನು ಮರೆಯುವಂತಿಲ್ಲ.

ಇದನ್ನೂ ಓದಿ | ಆರ್‌ಸಿಬಿ vs ಪಂಜಾಬ್‌ ಐಪಿಎಲ್‌ ಹಣಾಹಣಿ ಯಾವಾಗ; ನೇರಪ್ರಸಾರ ಹಾಗೂ ಮೊಬೈಲ್‌ನಲ್ಲಿ ಉಚಿತ ವೀಕ್ಷಣೆ ಹೇಗೆ?

ಅಗ್ರ ಕ್ರಮಾಂಕದಲ್ಲಿ ಪೊರೆಲ್ ಅವರಂಥ ಸ್ಫೋಟಕ ಆಟಗಾರನನ್ನು ಬ್ಯಾಟಿಂಗ್ ಮಾಡಲು ಸೂಕ್ತ ಎಂಬುದಾಗಿ ಪರಿಗಣಿಸುವಂತೆ ಉತ್ತಪ್ಪ ಸಲಹೆ ನೀಡಿದ್ದಾರೆ. “ಪೊರೆಲ್ ಅವರ ತಂತ್ರವನ್ನು ನೋಡಿದರೆ, ಅವರು ಅಗ್ರ ಕ್ರಮಾಂಕದಲ್ಲಿ ಭಾರಿ ಯಶಸ್ಸು ಗಳಿಸಬಹುದು ಎಂದು ನಾನು ಭಾವಿಸುತ್ತೇನೆ. ಆದರೆ ನೀವು ಅವರಿಗೆ ಅವಕಾಶ ಕೊಡದಿದ್ದರೆ ನಿಮಗೆ ಅದು ಹೇಗೆ ತಿಳಿಯುತ್ತದೆ? ಅವರನ್ನು 3 ಅಥವಾ 4ನೇ ಕ್ರಮಾಂಕದಲ್ಲಿ ಏಕೆ ಆಡಿಸಬಾರದು? ಅವರು 9ನೇ ಕ್ರಮಾಂಕದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದರು. ಮಾತ್ರವಲ್ಲ ತಂಡವನ್ನು ಬಹುತೇಕ ಉಳಿಸಿದರು,” ಎಂದು ಉತ್ತಪ್ಪ ಹೇಳಿದ್ದಾರೆ.

ಹರ್ಷಲ್‌ ಪಟೇಲ್‌ ಅವರ ಕೊನೆಯ ಓವರ್‌ನಲ್ಲಿ ಪೊರೆಲ್‌ 25 ರನ್ ಕಲೆ ಹಾಕಿದರು. ತಮ್ಮ ಇನ್ನಿಂಗ್ಸ್‌ನಲ್ಲಿ ಎದುರಿಸಿದ ಕೇವಲ 10 ಎಸೆತಗಳಲ್ಲಿ ಪೊರೆಲ್ ಅಜೇಯ 32 ರನ್ ಗಳಿಸಿ ಮಿಂಚಿದರು. ಇದರಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್‌ಗಳು ಸೇರಿವೆ.

ಭಾರತದ ಪ್ರಮುಖ ಆಲ್‌ರೌಂಡರ್‌ ಅಕ್ಷರ್ ಪಟೇಲ್ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆಯೂ ಮಾಜಿ ಬ್ಯಾಟರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಋತುವಿನಲ್ಲಿ ಡಿಸಿ ತಂಡದ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನನ್ನು ತೀರಾ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಕಳಿಸಿದ್ದು ಉತ್ತಪ್ಪಗೆ ಇಷ್ಟವಾಗಿಲ್ಲ. ಫಾರ್ಮ್‌ನಲ್ಲಿರುವ ಭಾರತೀಯ ಆಟಗಾರರ ಫಾರ್ಮ್ ಅನ್ನು ಸೂಕ್ತ ರೀತಿಯಲ್ಲಿ ಯಾವಾಗ ಬಳಸುತ್ತೀರಿ? ಎಂದು ಅವರು ಪ್ರಶ್ನಿಸಿದ್ದಾರೆ.

Whats_app_banner