ಕನ್ನಡ ಸುದ್ದಿ  /  Cricket  /  Robin Uthappa On Virat Kohli I Have Still Got It Remark Amidst T20 World Cup 2024 Suspense Cricket News T20 Cricket Prs

ಟಿ20 ವಿಶ್ವಕಪ್​ಗೆ ತಂಡದ ಆಯ್ಕೆ ಸೆಲೆಕ್ಟರ್ಸ್​ಗೆ ಬಿಟ್ಟಿದ್ದು; ವಿರಾಟ್ ಕೊಹ್ಲಿ ಹೇಳಿಕೆಗೆ ರಾಬಿನ್ ಉತ್ತಪ್ಪ ಆಕ್ಷೇಪ

Robin uthappa on Virat Kohli: ಮಾರ್ಚ್ 26ರಂದು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ನಂತರ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ವಿರಾಟ್ ಕೊಹ್ಲಿ ಅವರು ನೀಡಿದ್ದ ಹೇಳಿಕೆಗೆ ರಾಬಿನ್ ಉತ್ತಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಹೇಳಿಕೆಗೆ ರಾಬಿನ್ ಉತ್ತಪ್ಪ ಆಕ್ಷೇಪ
ವಿರಾಟ್ ಕೊಹ್ಲಿ ಹೇಳಿಕೆಗೆ ರಾಬಿನ್ ಉತ್ತಪ್ಪ ಆಕ್ಷೇಪ

ಐಪಿಎಲ್​ ಮಧ್ಯೆಯೇ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಇರಬೇಕೇ ಬೇಡವೇ ಎನ್ನುವುದರ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಇಂಡಿಯನ್ ಪ್ರೀಮಿಯರ್​ ಲೀಗ್​​ ಆರಂಭಕ್ಕೂ ಮುನ್ನವೂ ಈ ಬಗ್ಗೆ ಡಿಬೇಟ್​​ಗಳು ನಡೆದಿದ್ದವು. ಇದೀಗ ಇತ್ತೀಚೆಗೆ ಭಾರತದ ಮಾಜಿ ಹೆಡ್​ಕೋಚ್ ರವಿ ಶಾಸ್ತ್ರಿ, ಮಾಜಿ ಆಟಗಾರ ರಾಬಿನ್ ಉತ್ತಪ್ಪ ಮತ್ತು ಇಂಗ್ಲೆಂಡ್ ಮಾಜಿ ಆಟಗಾರ ಕೆವಿನ್ ಪೀಟರ್​ಸನ್ ಅವರು ಕೂಡ ಇದೇ ವಿಚಾರದ ಕುರಿತು ಚರ್ಚೆ ನಡೆಸಿದ್ದಾರೆ.

ಮಾರ್ಚ್ 26ರಂದು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ನಂತರ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ವಿರಾಟ್ ಕೊಹ್ಲಿ ಅವರು ನೀಡಿದ್ದ ಹೇಳಿಕೆಗೆ ರಾಬಿನ್ ಉತ್ತಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದನ್ನು ‘ಅನಗತ್ಯ’ ಹೇಳಿಕೆ ಎಂದು ಲೇಬಲ್ ಅಂಟಿಸಿದ್ದಾರೆ. ಯುಎಸ್ಎ ಟಿ20 ವಿಶ್ವಕಪ್​ಗೆ ಆತಿಥ್ಯ ವಹಿಸುತ್ತಿದ್ದು, ಆಟವನ್ನು ಉತ್ತೇಜಿಸುವ ಸಲುವಾಗಿ ಕೊಹ್ಲಿಗೆ ಮಣೆ ಹಾಕಬೇಕೇ ಎಂಬ ಚರ್ಚೆಯ ವೇಳೆ ಉತ್ತಪ್ಪ ಹೀಗೆ ಹೇಳಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧ 49 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್​ ಸಹಿತ 77 ರನ್ ಗಳಿಸಿದ ವಿರಾಟ್, ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ವೇಳೆ ಮಾತನಾಡಿದ ಕೊಹ್ಲಿ, ತಮ್ಮ ಟಿ20 ವಿಶ್ವಕಪ್ ಸ್ಥಾನಮಾನದ ಬಗ್ಗೆ ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡರು. ‘ಟಿ20 ಕ್ರಿಕೆಟ್​ಗೆ ಬಂದಾಗ ವಿಶ್ವದ ಅನೇಕ ಭಾಗಗಳಲ್ಲಿ ಆಟವನ್ನು ಉತ್ತೇಜಿಸಲು ನನ್ನ ಹೆಸರು ಬಳಸಿಕೊಳ್ಳಲಾಗುತ್ತಿದೆ ಎಂದು ನನಗೆ ತಿಳಿದಿದೆ. ಆದರೆ ನಾನು ಇನ್ನೂ ಅದನ್ನು ಹೊಂದಿದ್ದೇನೆ ಎಂದು ಊಹಿಸುತ್ತೇನೆ’ ಎಂದಿದ್ದರು.

ಕೊಹ್ಲಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಉತ್ತಪ್ಪ

ವಿರಾಟ್ ಅವರ ಈ ಹೇಳಿಕೆಗೆ ಸಂಬಂಧಿಸಿ ಆರ್​​ಸಿಬಿ 3ನೇ ಪಂದ್ಯ ಪ್ರಾರಂಭಕ್ಕೂ ಮುನ್ನ ಜಿಯೋ ಸಿನೆಮಾದೊಂದಿಗೆ ಮಾತನಾಡಿದ ಭಾರತದ ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್​ಮನ್​ ರಾಬಿನ್ ಉತ್ತಪ್ಪ, ‘ಇದು ಕೊಹ್ಲಿಯ ಅನಗತ್ಯ ಕೃತ್ಯ’ ಎಂದು ಹೇಳಿದ್ದಾರೆ. ಹೇಳಿಕೆಯ ಮೂಲಕ ಕೊಹ್ಲಿಯ ಉದ್ದೇಶಗಳನ್ನು ಅರ್ಥಮಾಡಿಕೊಂಡಿದ್ದರೂ, 2007ರ ಶೈಲಿಯ ಯುವ ತಂಡವನ್ನು ಬಯಸಬೇಕೇ ಅಥವಾ ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ಸೂತ್ರಗಳೊಂದಿಗೆ ಹೋಗಬೇಕೇ ಎಂದು ನಿರ್ಧರಿಸುವುದು ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಗೆ ಬಿಟ್ಟದ್ದು ಎಂದು ಉತ್ತಪ್ಪ ಹೇಳಿದ್ದಾರೆ.

‘ಕಳೆದ ಪಂದ್ಯದಲ್ಲಿ ಅವರು (ಕೊಹ್ಲಿ) ಹೇಳಿದ್ದು ತುಂಬಾ ಅನಗತ್ಯವೆಂದು ನಾನು ಭಾವಿಸುತ್ತೇನೆ. ಕೊಹ್ಲಿ ಸಾಮರ್ಥ್ಯದ ಬಗ್ಗೆ ಎಂದಿಗೂ ಪ್ರಶ್ನೆಯಿಲ್ಲ. ಆದರೆ ಅವರು ಅದನ್ನು ಹೇಳುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಅವರ ಸಾಮರ್ಥ್ಯದ ಬಗ್ಗೆ ಯಾರ ಮನಸ್ಸಿನಲ್ಲಿಯೂ ಪ್ರಶ್ನೆ ಇರಲಿಲ್ಲ ಎಂದು ನಾನು ಭಾವಿಸುತ್ತೇನೆ. ಬ್ಯಾಟಿಂಗ್​ಗೆ ಸಂಬಂಧಿಸಿದಂತೆ ಅವರು ಕ್ಲಾಸ್ ಆಕ್ಟ್. ಅವರು ಟಿ20 ವಿಶ್ವಕಪ್​ಗೆ ಭಾಗವಾಗಲು ಬಯಸುತ್ತಾರೆ ಎಂಬುದು ಅವರ ಉದ್ದೇಶವಾಗಿದೆ’ ಎಂದು ಉತ್ತಪ್ಪ ಹೇಳಿದ್ದಾರೆ.

‘ಯುವ ತಂಡವನ್ನು ನೋಡಲಿದ್ದಾರೆಯೇ ಅಥವಾ ದೇಶಕ್ಕಾಗಿ ಮತ್ತು ಈ ಹಿಂದೆ ಐಪಿಎಲ್​​ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ, ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ಅನುಭವಿಗಳೊಂದಿಗೆ ಹೋಗುತ್ತಾರೆಯೇ ಎಂಬುದು ಆಯ್ಕೆದಾರರಿಗೆ ಬಿಟ್ಟದ್ದು. ವಿರಾಟ್ ಅವರನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಿದರೆ ಅವರು ಅದ್ಭುತ ಪ್ರದರ್ಶನ ನೀಡಲು ನಾನು ಕೂಡ ಬಯಸುತ್ತೇನೆ’ ಎಂದು ಅವರು ಹೇಳಿದರು. ಐಪಿಎಲ್ ಮುಗಿದ ಐದು ದಿನಗಳ ನಂತರ ಟಿ20 ವಿಶ್ವಕಪ್​ ಟೂರ್ನಿ ನಡೆಯಲಿದೆ. ಏಪ್ರಿಲ್ ಕೊನೆಯಲ್ಲಿ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಕೊಹ್ಲಿ ಸ್ಥಾನ ಪಡೆಯುತ್ತಾರಾ ಇಲ್ಲವೇ ಎಂಬುದನ್ನು ಕಾದುನೋಡಬೇಕಿದೆ.

IPL_Entry_Point