ಕನ್ನಡ ಸುದ್ದಿ  /  ಕ್ರಿಕೆಟ್  /  ಇದು ಧೋನಿಯ ಕೊನೆಯ ಐಪಿಎಲ್ ಎಂದು ಭಾವಿಸಬೇಡಿ; ಆರ್‌ಸಿಬಿ ಗೆಲುವಿಗೆ ಸಿಎಸ್‌ಕೆ ಅಡ್ಡಿಯಾಗೋದು ಪಕ್ಕಾ ಎಂದ ರಾಬಿನ್ ಉತ್ತಪ್ಪ

ಇದು ಧೋನಿಯ ಕೊನೆಯ ಐಪಿಎಲ್ ಎಂದು ಭಾವಿಸಬೇಡಿ; ಆರ್‌ಸಿಬಿ ಗೆಲುವಿಗೆ ಸಿಎಸ್‌ಕೆ ಅಡ್ಡಿಯಾಗೋದು ಪಕ್ಕಾ ಎಂದ ರಾಬಿನ್ ಉತ್ತಪ್ಪ

Robin Uthappa on MS Dhoni: ಐಪಿಎಲ್ 2024ರಲ್ಲಿ ಆರ್‌ಸಿಬಿ ವಿರುದ್ಧದ ಸಿಎಸ್‌ಕೆ ತಂಡದ ಅಂತಿಮ ಲೀಗ್ ಪಂದ್ಯಕ್ಕೆ ಮುಂಚಿತವಾಗಿ ಎಂಎಸ್ ಧೋನಿ ಅವರ ನಿವೃತ್ತಿ ವದಂತಿಗಳ ಕುರಿತು ರಾಬಿನ್ ಉತ್ತಪ್ಪ ಮಾತನಾಡಿದ್ದಾರೆ.

ಆರ್‌ಸಿಬಿ ಗೆಲುವಿಗೆ ಸಿಎಸ್‌ಕೆ ಅಡ್ಡಿಯಾಗೋದು ಪಕ್ಕಾ ಎಂದ ರಾಬಿನ್ ಉತ್ತಪ್ಪ
ಆರ್‌ಸಿಬಿ ಗೆಲುವಿಗೆ ಸಿಎಸ್‌ಕೆ ಅಡ್ಡಿಯಾಗೋದು ಪಕ್ಕಾ ಎಂದ ರಾಬಿನ್ ಉತ್ತಪ್ಪ (PTI)

ದಿಗ್ಗಜ ಕ್ರಿಕೆಟಿಗ ಹಾಗೂ ಟೀಮ್‌ ಇಂಡಿಯಾ ಕಂಡ ಯಶಸ್ವಿ ನಾಯಕರಲ್ಲಿ ಒಬ್ಬರಾದ ಎಂಎಸ್ ಧೋನಿ, ಐಪಿಎಲ್‌ 2024ರ ನಂತರ ಎಲ್ಲಾ ರೀತಿಯ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ವರ್ಷಗಳಿಂದ ಮುನ್ನಡೆಸಿಕೊಂಡು ಬರುತ್ತಿರುವ ಮಾಹಿ, ಈ ಬಾರಿಯ ಆವೃತ್ತಿಗೂ ಮುನ್ನ ನಾಯಕತ್ವ ತ್ಯಜಿಸಿದರು. ಅದರ ಬೆನ್ನಲ್ಲೇ, ಅವರು ಸಿಎಸ್‌ಕೆ ತಂಡದ ಪರ ಈ ಆವೃತ್ತಿಯಲ್ಲಿ ಕೊನೆಯ ಬಾರಿಗೆ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಚೆಪಾಕ್‌ ಮೈದಾನದಲ್ಲಿ ನಡೆದ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ, ಸ್ಟೇಡಿಯಂನಲ್ಲಿ ಸೇರಿದ್ದ ಅಭಿಮಾನಿಗಳಿಗೆ ತಂಡದಿಂದ ವಿಶೇಷ ರೀತಿಯಲ್ಲಿ ಧನ್ಯವಾದ ಸಲ್ಲಿಸಿದರು. ಇದು ನಿವೃತ್ತಿ ವದಂತಿಗಳನ್ನು ಹೆಚ್ಚಿಸಿದೆ.

ಟ್ರೆಂಡಿಂಗ್​ ಸುದ್ದಿ

ಇದೀಗ ಮೇ 18ರ ಶನಿವಾರದಂದು ಚೆನ್ನೈ ತಂಡವು ಲೀಗ್‌ ಹಂತದ ಕೊನೆಯ ಪಂದ್ಯ ಆಡುತ್ತಿದೆ. ಅದು ಆರ್‌ಸಿಬಿ ವಿರುದ್ಧ. ಇದರೊಂದಿಗೆ ಮಾಹಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕೊನೆಯ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಪಂದ್ಯವು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಹೆಚ್ಚು ಅಂತರದಿಂದ ಸೋತರೆ ಚೆನ್ನೈ ಟೂರ್ನಿಯಿಂದ ಹೊರಬೀಳಲಿದೆ. ಗೆದ್ದರೆ ಮಾತ್ರ ಪ್ಲೇಆಫ್‌ ಪ್ರವೇಶಿಸಿ, ಮತ್ತೆ ಚೆಪಾಕ್‌ ಮೈದಾನದಲ್ಲಿ ಆಡುವ ಅವಕಾಶ ಪಡೆಯುತ್ತದೆ.

ಟೂರ್ನಿಯಲ್ಲಿ ಈವರೆಗೆ ಆರ್‌ಸಿಬಿ ಆಡಿರುವ 13 ಪಂದ್ಯಗಳಲ್ಲಿ 6 ಗೆಲುವು ಹಾಗೂ 7 ಸೋಲಿನೊಂದಿಗೆ 12 ಅಂಕ ಪಡೆದಿದೆ. ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಅತ್ತ ಸಿಎಸ್‌ಕೆ ಆಡಿರುವ 13 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 14 ಅಂಕ ಪಡೆದು ನಾಲ್ಕನೇ ಸ್ಥಾನದಲ್ಲಿದೆ. ಹೀಗಾಗಿ ಮಾಡು ಅಥವಾ ಮಡಿ ಪಂದ್ಯದಲ್ಲಿ ಉಭಯ ತಂಡಗಳು ಗೆಲ್ಲಲೇಬೇಕಾದ ಅನಿವಾರ್ಯತೆ ಹೊಂದಿದೆ.

ಧೋನಿ ಗುಡ್‌ ಬೈ ಹೇಳಲ್ಲ ಎಂದ ರಾಬಿನ್‌ ಉತ್ತಪ್ಪ

ಈ ಆವೃತ್ತಿಯು ಮಾಹಿಯ ಕೊನೆಯ ಐಪಿಎಲ್‌ ಟೂರ್ನಿ ಆಗಲಿದೆ ಎಂಬುದಕ್ಕೆ ವ್ಯತಿರಿಕ್ತವಾಗಿ, ಸಿಎಸ್‌ಕೆ ಮಾಜಿ ಆಟಗಾರ ರಾಬಿನ್‌ ಉತ್ತಪ್ಪ ಮಾತನಾಡಿದ್ದಾರೆ. “ಸಿಎಸ್‌ಕೆ ವಿಷಯಕ್ಕೆ ಬಂದರೆ, ಇದು ಎಂಎಸ್ ಧೋನಿಯ ಅವರ ಕೊನೆಯ ಪಂದ್ಯಾವಳಿಯೇ? ಇಲ್ಲ, ನನಗೆ ಹಾಗನಿಸುತ್ತಿಲ್ಲ. ವೈಯಕ್ತಿಕವಾಗಿ, ನಾನು ಹಾಗೆ ಭಾವಿಸುವುದಿಲ್ಲ. ಹಾಗಿದ್ದರೆ ಅವರ ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮಕ್ಕೆ ಎಳ್ಳು ನೀರು ಬಿಡುತ್ತಾರೆಯೇ? ಖಂಡಿತಾ ಹೌದು. ಋತುರಾಜ್ ಗಾಯಕ್ವಾಡ್‌ ನಾಯಕನಾಗಿ ತಮ್ಮ ಮೊದಲ ಋತುವಿನಲ್ಲಿ ತಮ್ಮ ತಂಡವನ್ನು ನಾಕೌಟ್ ಹಂತಕ್ಕೆ ಕೊಂಡೊಯ್ಯಲು ಬಯಸುತ್ತಾರೆ. ಇದು ಅವರ ಮತ್ತು ಸಿಎಸ್‌ಕೆ ತಂಡದ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಏನಾಗುತ್ತದೆ ನೋಡೋಣ” ಎಂದು ಅವರು ಜಿಯೋ ಸಿನಿಮಾದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ | ಮಳೆಯಿಂದ ಪಂದ್ಯ ರದ್ದು; ಪ್ಲೇಆಫ್​ಗೆ ಲಗ್ಗೆಯಿಟ್ಟ ಎಸ್​ಆರ್​​ಹೆಚ್, ಗುಜರಾತ್​ಗೆ ನಿರಾಸೆ, ಡೆಲ್ಲಿ ಕ್ಯಾಪಿಟಲ್ಸ್ ಹೊರಕ್ಕೆ

ಪ್ರಸಕ್ತ ಆವೃತ್ತಿಯಲ್ಲಿ ಧೋನಿ ಅಮೋಘ ಆಟ ಪ್ರದರ್ಶಿಸಿದ್ದಾರೆ. ಆಡಿದ 10 ಇನ್ನಿಂಗ್ಸ್‌ಗಳಲ್ಲಿ 161 ರನ್ ಸಿಡಿಸಿದ್ದಾರೆ. 226.66ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿ ಫಿನಿಶರ್‌ ಸ್ಥಾನದಲ್ಲಿ ಅಬ್ಬರಿಸಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿರುದ್ಧ 9 ಪಂದ್ಯಗಳನ್ನು ಆಡಿರುವ ಧೋನಿ, 125.33ರ ಸರಾಸರಿ ಹಾಗೂ 184.31ರ ಸ್ಟ್ರೈಕ್ ರೇಟ್‌ನಲ್ಲಿ ಬರೋಬ್ಬರಿ 376 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧಶತಕಗಳು ಕೂಡಾ ಸೇರಿವೆ. ಚಿನ್ನಸ್ವಾಮಿ ಮಾಹಿಯ ಫೇವರೆಟ್‌ ಮೈದಾನಗಳಲ್ಲೊಂದು.

ಇದನ್ನೂ ಓದಿ | ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ಮಳೆಯಿಂದ ರದ್ದಾದರೆ ಬೆಂಗಳೂರು ಎಲಿಮನೇಟ್‌; 5 ಓವರ್‌ ಪಂದ್ಯ ನಡೆದರೆ ಪ್ಲೇಆಫ್‌ ಲೆಕ್ಕಾಚಾರವೇನು?

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ