ವಿರಾಟ್ ಕೊಹ್ಲಿ ಅಥವಾ ಕೆಎಲ್ ರಾಹುಲ್ ಅಲ್ಲ; ಆರ್ಸಿಬಿ ತಂಡದ ನಾಯಕತ್ವಕ್ಕೆ ಅಚ್ಚರಿ ಹೆಸರು ಸೂಚಿಸಿದ ರಾಬಿನ್ ಉತ್ತಪ್ಪ
Robin Uthappa: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದ ಸ್ಥಾನಕ್ಕೆ ಯಾರು ಸೂಕ್ತ ಆಟಗಾರ ಎಂದು ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ಸೂಚಿಸಿದ್ದಾರೆ. ಆದರೆ ಅವರು ವಿರಾಟ್ ಕೊಹ್ಲಿ ಹೆಸರನ್ನು ಸೂಚಿಸಿಲ್ಲ ಎಂಬುದು ಅಚ್ಚರಿ ಮೂಡಿಸಿದೆ.
18ನೇ ಆವೃತ್ತಿಯ ಐಪಿಎಲ್ ಮೆಗಾ ಹರಾಜಿಗೆ (IPL 2025 Mga Auction) ಬಿಸಿಸಿಐ ಸಿದ್ಧತೆ ನಡೆಸಿದೆ. ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಆಕ್ಷನ್ ನಡೆಯಲಿದೆ. ಎಲ್ಲಾ ತಂಡಗಳು ತಮಗೆ ಬೇಕಾದ ಆಟಗಾರರ ಖರೀದಿಗೆ ಭರ್ಜರಿ ತಯಾರಿ ಮಾಡಿಕೊಂಡಿವೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹರಾಜಿನಲ್ಲಿ ಯಾವ ಆಟಗಾರರಿಗೆ ಮಣೆ ಹಾಕಲಿದೆ, ನಾಯಕ ಯಾರು, ವಿಕೆಟ್ ಕೀಪರ್ ಯಾರು, ವಿರಾಟ್ ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸಲು ಯಾವ ಆಟಗಾರರನ್ನು ಖರೀದಿ ಮಾಡಲಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಹರಾಜಿಗೂ ಮುನ್ನ ವಿರಾಟ್ ಕೊಹ್ಲಿ (Virat Kohli) ಮತ್ತೆ ಕ್ಯಾಪ್ಟನ್ ಆಗುತ್ತಾರೆ ಎಂದು ವದಂತಿ ಹಬ್ಬಿದೆ. ಒಂದು ವೇಳೆ ಕೆಎಲ್ ರಾಹುಲ್ (KL Rahul) ಅವರನ್ನು ಖರೀದಿಸಿದರೆ ಅವರನ್ನೇ ನಾಯಕನನ್ನಾಗಿ ಮಾಡಬಹುದು ಎಂದು ಹೇಳಲಾಗುತ್ತಿದೆ. ಆದರೆ, ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ (Robin Uthappa) ಮನಸ್ಸಿನಲ್ಲಿ ಬೇರೆಯದ್ದೇ ಹೆಸರಿದೆ.
JioCinema ಜೊತೆಗಿನ ಸಂವಾದದಲ್ಲಿ ಮಾತನಾಡಿದ ರಾಬಿನ್ ಉತ್ತಪ್ಪ ಅವರು, ಆರ್ಸಿಬಿ ಮುಂದಿನ ನಾಯಕ ಯಾರಾಗಬೇಕೆಂದು ಸೂಚಿಸಿದ್ದಾರೆ. ಆದರೆ ಅಚ್ಚರಿ ಹೆಸರು ಸೂಚಿಸುವ ಮೂಲಕ ಗಮನ ಸೆಳೆದಿದ್ದಾರೆ. ಯಾರೂ ಆ ಹೆಸರನ್ನು ಊಹೆ ಮಾಡಿರುವುದಿಲ್ಲ. 'ಮುಂದಿನ ಮೂರರಿಂದ ಐದು ವರ್ಷಗಳ ಕಾಲ ನಾಯಕತ್ವ ವಹಿಸುವ ನಾಯಕನನ್ನು ನೇಮಿಸುವ ಅಗತ್ಯ ಇದೆ. ಹೀಗಾಗಿ 31 ವರ್ಷದ ರಜತ್ ಪಾಟೀದಾರ್ ಅವರನ್ನು ನೇಮಿಸಬೇಕು' ಎಂದು ಫ್ರಾಂಚೈಸಿಗೆ ಸೂಕ್ತ ಸಲಹೆ ನೀಡಿದ್ದಾರೆ. ಪಾಟೀದಾರ್ಗೆ ಏಕೆ ಮಣೆ ಹಾಕಬೇಕು ಎಂದೂ ಉತ್ತಪ್ಪ ವಿವರಿಸಿದ್ದಾರೆ. ಆದರೆ, ಆರ್ಸಿಬಿ ನಾಯಕತ್ವಕ್ಕೆ ವಿರಾಟ್ ಹೆಸರು ಸೂಚಿಸದ ಕಾರಣ ರೆಡ್ ಆರ್ಮಿ ಮಾಜಿ ಕ್ರಿಕೆಟಿಗನ ವಿರುದ್ಧ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
'ರಜತ್ ನಾಯಕತ್ವ ಪಾತ್ರ ನಿರ್ವಹಿಸಬಲ್ಲರು'
ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕತ್ವವನ್ನು ರಜತ್ ಪಾಟೀದಾರ್ ವಹಿಸಿಕೊಂಡರೆ ಉತ್ತಮ ಎಂದು ನಾನು ಭಾವಿಸುತ್ತೇನೆ. ಫಾಫ್ ಡು ಪ್ಲೆಸಿಸ್ ಅವರ ಜಾಗಕ್ಕೆ ರಜತ್ ತಂದು ಕೂರಿಸಬೇಕು. ಆರ್ಸಿಬಿಗೆ ಮೂರು ವರ್ಷಗಳ ನಂತರ ನೂತನ ನಾಯಕನ ಅಗತ್ಯ ಇದೆ. ಮುಂದಿನ ಮೂರು ವರ್ಷ ಅಥವಾ ಐದು ವರ್ಷಗಳಿಗೆ ನಾಯಕತ್ವದ ಅಗತ್ಯ ಇದೆ. ಹಾಗಾಗಿ, ರಜತ್ ಅವರು ನಿಜವಾಗಿಯೂ ಆ ಪಾತ್ರವನ್ನು ನಿರ್ವಹಿಸಬಲ್ಲ ಆಟಗಾರರಲ್ಲಿ ಒಬ್ಬರು ಎಂದು ಉತ್ತಪ್ಪ ಹೇಳಿದ್ದಾರೆ. ಈಗಾಗಲೇ ಹಲವು ನಾಯಕರನ್ನು ಆರ್ಸಿಬಿ ನೋಡಿದೆ. ಅನುಭವಿಗಳು ಜವಾಬ್ದಾರಿ ಹೊತ್ತಿದ್ದಾರೆ. ಆದರೆ ಟ್ರೋಫಿ ಮರೀಚಿಕೆಯಾಗಿದೆ. ರಜತ್ ನಾಯಕತ್ವದ ಅನುಭವವನ್ನೇ ಹೊಂದಿರದ ಕಾರಣ ಒಂದು ವೇಳೆ ಅವಕಾಶ ಸಿಕ್ಕರೆ ಜಗತ್ತಿನಲ್ಲಿ ದೊಡ್ಡ ಅಭಿಮಾನಿಗಳನ್ನು ಹೊಂದಿರುವ ಆರ್ಸಿಬಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಸದ್ಯದ ಕುತೂಹಲ.
ಆರ್ಸಿಬಿ ಉಳಿಸಿಕೊಂಡ ಮೂವರಲ್ಲಿ ರಜತ್ ಒಬ್ಬರು
ಮುಂದಿನ ಆವೃತ್ತಿಗೆ ಆರ್ಸಿಬಿ ಮೂವರನ್ನಷ್ಟೇ ಉಳಿಸಿಕೊಂಡಿದೆ. ವಿಲ್ ಜ್ಯಾಕ್ಸ್, ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್ವೆಲ್ ಸೇರಿದಂತೆ ಪ್ರಮುಖರನ್ನು ಕೈಬಿಟ್ಟು ಅಚ್ಚರಿ ಮೂಡಿಸಿರುವ ಬೆಂಗಳೂರು, ನಿರೀಕ್ಷೆಯಂತೆ ವಿರಾಟ್ ಕೊಹ್ಲಿ ಅವರಿಗೆ 21 ಕೋಟಿ ರೂಪಾಯಿ ಬೃಹತ್ ಮೊತ್ತವನ್ನು ನೀಡಿ ಮೊದಲ ಆಯ್ಕೆಯಾಗಿ ಉಳಿಸಿಕೊಂಡಿದೆ. ಆ ಬಳಿಕ ರಜತ್ ಪಾಟೀದಾರ್ಗೆ ಮಣೆ ಹಾಕಿದೆ. ಐಪಿಎಲ್ 2021ರ ಹರಾಜಿನಲ್ಲಿ ಪಾಟೀದಾರ್ ಅವರನ್ನು 20 ಲಕ್ಷಕ್ಕೆ ಖರೀದಿಸಲಾಗಿತ್ತು. ಮಧ್ಯಮ ಕ್ರಮಾಂಕದ ಬ್ಯಾಟರ್ಗೆ ರೆಡ್ ಆರ್ಮಿ 11 ಕೋಟಿ ನೀಡಿದೆ. ವೇಗದ ಬೌಲರ್ ಯಶ್ ದಯಾಳ್ ಅವರಿಗೆ 5 ಕೋಟಿ ನೀಡಿ ಮೂರನೇ ಆಯ್ಕೆಯಾಗಿ ಉಳಿಸಿಕೊಳ್ಳಲಾಗಿದೆ. ಈ ಮೂವರು ಕಳೆದ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಪರಿಣಾಮ ಆರ್ಸಿಬಿ ಪ್ಲೇಆಫ್ ಪ್ರವೇಶಿಸಿತ್ತು.