ಕನ್ನಡ ಸುದ್ದಿ  /  Cricket  /  Rodrigues Capsey Star As Delhi Capitals Beat Rcb By 1 Run In Last Ball Thriller To Qualify For Playoff Richa Ghosh Prs

ಡೆಲ್ಲಿಗೆ ರೋಚಕ 1 ರನ್ ಗೆಲುವು, ಹೋರಾಡಿ ಸೋತ ಆರ್​​ಸಿಬಿ; ಪ್ಲೇಆಫ್​ಗೆ ಕ್ಯಾಪಿಟಲ್ಸ್, ಸಂಕಷ್ಟದಲ್ಲಿ ಸ್ಮೃತಿ ಮಂಧಾನ ಪಡೆ

Royal Challengers Bangalore vs Delhi Capitals: ರಣರೋಚಕ ಫೈಟ್​​ನಲ್ಲಿ 1 ರನ್ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ತಂಡವಾಗಿ ಡಬ್ಲ್ಯುಪಿಎಲ್​ ಪ್ಲೇಆಫ್​ಗೆ ಪ್ರವೇಶಿಸಿದೆ.

ಡೆಲ್ಲಿಗೆ  ರೋಚಕ 1 ರನ್ ಗೆಲುವು, ಹೋರಾಡಿ ಸೋತ ಆರ್​​ಸಿಬಿ
ಡೆಲ್ಲಿಗೆ ರೋಚಕ 1 ರನ್ ಗೆಲುವು, ಹೋರಾಡಿ ಸೋತ ಆರ್​​ಸಿಬಿ (PTI)

ವುಮೆನ್ಸ್ ಪ್ರೀಮಿಯರ್​ ಲೀಗ್​ 2024 ದಿನೆ ದಿನೇ ರೋಚಕ ತಿರುವು ಪಡೆಯುತ್ತಿದೆ. ಅಂತಹ ರೋಚಕತೆಗೆ ಮತ್ತೊಂದು ಪಂದ್ಯ ಸೇರ್ಪಡೆಯಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಒಂದು ರನ್​ ರೋಚಕ ಗೆಲುವು ಸಾಧಿಸಿದೆ. ತನ್ನ ಕಳೆದ ಪಂದ್ಯದಲ್ಲಿ ಯುಪಿ ವಿರುದ್ಧ 1 ರನ್ನಿಂದ ಸೋತಿದ್ದ ಕ್ಯಾಪಿಟಲ್ಸ್, ಇದೀಗ ಅದೇ ಒಂದು ರನ್ನಿಂದ ಜಯ ಸಾಧಿಸಿದೆ. ಇದರೊಂದಿಗೆ ಮುಂಬೈ ಇಂಡಿಯನ್ಸ್ ಬಳಿಕ ಮೆಗ್​ ಲ್ಯಾನಿಂಗ್​ ಪಡೆ 2ನೇ ತಂಡವಾಗಿ ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದೆ.

ಡೆಲ್ಲಿ ವಿರುದ್ಧ ಸತತ 4ನೇ ಸೋಲು ಕಂಡಿರುವ ಆರ್​ಸಿಬಿ ತಂಡದ ಪ್ಲೇ ಆಫ್ ಹಾದಿ ಇನ್ನಷ್ಟು ದುರ್ಗಮಗೊಂಡಿದೆ. ಬೆಂಗಳೂರು ಜೊತೆಗೆ ಯುಪಿ ವಾರಿಯರ್ಸ್​ ತಂಡಕ್ಕೂ ಪ್ಲೇ ಆಫ್​ ಪ್ರವೇಶಿಸುವ ಅವಕಾಶವನ್ನು ಮತ್ತಷ್ಟು ಹೆಚ್ಚಿಸಿದೆ. ಅಲ್ಲದೆ, ಗುಜರಾತ್ ಜೈಂಟ್ಸ್ ತಂಡಕ್ಕೂ ಅವಕಾಶ ಇದೆ. ಆದರೆ ಉಳಿದ ಎಲ್ಲಾ ಪಂದ್ಯಗಳನ್ನೂ ಗೆಲ್ಲಬೇಕು. ಸದ್ಯ ಆರ್​ಸಿಬಿ ಒಂದು ಪಂದ್ಯ ಮಾತ್ರ ಬಾಕಿ ಇದ್ದು, ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಉತ್ತಮ ಆರಂಭ ಪಡೆಯಿತು. ಶಫಾಲಿ ವರ್ಮಾ (23) ಎಂದಿನಂತೆ ಬಿರುಸಿನ ಬ್ಯಾಟಿಂಗ್ ನಡೆಸಿ ಕೆಲ ಹೊತ್ತು ಮನರಂಜನೆ ನೀಡಿ ಹೊರ ನಡೆದರು. ಓವರ್​ವೊಂದರಲ್ಲಿ 4 ಬೌಂಡರಿ ಬಾರಿಸಿದ ಮೆಗ್​ ಲ್ಯಾನಿಂಗ್​ 29 ರನ್​ ಗಳಿಸಿ ಔಟಾದರು. ಆಶಾ ಶೋಭನಾ ಮತ್ತು ಶ್ರೇಯಾಂಕಾ ಪಾಟೀಲ್ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು.

ಕ್ಯಾಪ್ಸಿ ಮತ್ತು ಜೆಮಿಮಾ ಅಬ್ಬರ

ಆರಂಭಿಕರು ಹಾಕಿಕೊಟ್ಟ ಉತ್ತಮ ಭದ್ರಬುನಾದಿಗೆ ಮತ್ತಷ್ಟು ಕೊಡುಗೆ ನೀಡಿದ ಅಲಿಸ್ ಕ್ಯಾಪ್ಸಿ ಮತ್ತು ಜೆಮಿಮಾ ರೋಡ್ರಿಗಸ್ ಭರ್ಜರಿ ಬ್ಯಾಟಿಂಗ್​ ನಡೆಸಿ 103 ರನ್​ಗಳ ಪಾಲುದಾರಿಕೆ ನೀಡಿದರು. ಸೂಪರ್​ ಫಾರ್ಮ್​ನಲ್ಲಿರುವ ರೋಡ್ರಿಗಸ್ ಮತ್ತೊಂದು ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದರು. 36 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್​ ಸಹಿತ 58 ರನ್ ಗಳಿಸಿದರು. ಆದರೆ ಕ್ಯಾಪ್ಸಿ ಅರ್ಧಶತಕದ ಅಂಚಿನಲ್ಲಿ ಎಡವಿದರು. ಅವರು 8 ಬೌಂಡರಿ ಸಹಿತ 48 ರನ್ ಗಳಿಸಿ ಔಟಾದರು.

ಈ ಇಬ್ಬರನ್ನೂ ಶ್ರೇಯಾಂಕಾ ಪಾಟೀಲ್ ಔಟ್ ಮಾಡುವಲ್ಲಿ ಯಶಸ್ವಿಯಾದರು. ಮರಿಜಾನ್ನೆ ಕಪ್ ಅಜೇಯ 12 ಗಳಿಸಿದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್, 5 ವಿಕೆಟ್ ನಷ್ಟಕ್ಕೆ 181 ರನ್ ಕಲೆ ಹಾಕಿತು. ಶ್ರೇಯಾಂಕಾ 4 ವಿಕೆಟ್ ಪಡೆದು ಮಿಂಚಿದರು.

ಹೋರಾಡಿ ಸೋತ ಆರ್​​ಸಿಬಿ

ಈ ಸ್ಕೋರ್ ಬೆನ್ನಟ್ಟಿದ ಆರ್​ಸಿಬಿಗೆ ಸ್ಮೃತಿ ಮಂಧಾನ (5) ಮತ್ತೆ ನಿರಾಸೆ ಮೂಡಿಸಿದರು. ಬಳಿಕ ಸೋಫಿ ಮೊಲಿನೆಕ್ಸ್ ಮತ್ತು ಎಲ್ಲಿಸ್ ಪೆರ್ರಿ ತಂಡವನ್ನು ಆಧರಿಸಿದರು. ಎರಡನೇ ವಿಕೆಟ್​ಗೆ 80 ರನ್​ಗಳ ಜೊತೆಯಾಟ ಕಟ್ಟಿದರು. ಇದು ತಂಡದ ಗೆಲುವಿಗೆ ಮುನ್ಸೂಚನೆ ನೀಡಿತ್ತು. ಆದರೆ ಪೆರ್ರಿ 49 ರನ್ ಗಳಿಸಿದ್ದ ಅವಧಿಯಲ್ಲಿ ರನೌಟ್​ ಆಗಿ ಅರ್ಧಶತಕದ ಅಂಚಿನಲ್ಲಿ ಎಡವಿದರು. ಇದರ ಬೆನ್ನಲ್ಲೇ ಮೊಲಿನಿಕ್ಸ್ ಸಹ 33 ರನ್ ಗಳಿಸಿ ಔಟಾದರು.

ಆ ಬಳಿಕ ಕಣಕ್ಕಿಳಿದ ಸೋಫಿ ಡಿವೈನ್ ಮತ್ತು ರಿಚಾ ಘೋಷ್​ ತಂಡದ ಗೆಲುವಿಗೆ ಹೋರಾಡಿದರು. ಈ ಜೋಡಿ ಆಕ್ರಮಣಕಾರಿ ಆಟದೊಂದಿಗೆ ಡೆಲ್ಲಿ ಬೌಲರ್​ಗಳಿಗೆ ಬೆಂಡೆತ್ತಿದರು. ಆದರೆ ಡಿವೈನ್ 23 ರನ್ ಗಳಿಸಿ ಔಟಾದರು. ಈ ವೇಳೆ ಜಾರ್ಜಿಯಾ ವೇರ್ಹ್ಯಾಮ್ 12 ರನ್ ಗಳಿಸಿದರೆ, ಘೋಷ್ ಅಬ್ಬರದ ಹೋರಾಟ ಮುಂದುವರೆಸಿದರು. ಕೊನೆಯ ಓವರ್​​​ನಲ್ಲಿ ಗೆಲುವಿಗೆ 17 ರನ್ ಬೇಕಿತ್ತು. ಭರ್ಜರಿ ಎರಡು ಸಿಕ್ಸರ್​ ಸಿಡಿಸಿದ ರಿಚಾ ಕೊನೆಯ ಎಸೆತದಲ್ಲಿ 2 ರನ್ ಕಲೆ ಹಾಕಲು ವಿಫಲರಾದರು.

29 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಿತ 51 ರನ್ ಗಳಿಸಿದ ರಿಚಾ ಘೋಷ್, ಗೆಲುವಿಗೆ ಕೊನೆಯ ಎಸೆತದಲ್ಲಿ 2 ರನ್ ಗಳಿಸಬೇಕಿತ್ತು. ಆದರೆ ಬ್ಯಾಕ್​ವರ್ಡ್​ ಕಡೆಗೆ ಚೆಂಡನ್ನು ಬಾರಿಸಿದ ರಿಚಾ, ಒಂದು ರನ್ ಕದಿಯಲು ಯತ್ನಿಸಿದರಾದರೂ ಕೇವಲ ಇಂಚುಗಳಲ್ಲಿ ರನೌಟ್ ಆದರು. ಇದರೊಂದಿಗೆ ಆರ್​ಸಿಬಿ ಹೋರಾಡಿ ಸೋಲನುಭವಿಸಿತು. ಪಂದ್ಯಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗದ್ದಕ್ಕೆ ರಿಚಾ ಘೋಷ್ ಕಣ್ಣೀರಿಟ್ಟರು. ಆರ್​ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಮಾರ್ಚ್ 12ರಂದು ಮುಂಬೈ ತಂಡವನ್ನು ಎದುರಿಸಲಿದೆ.

IPL_Entry_Point