ರೋಹಿತ್ ಶರ್ಮಾ ದಾಖಲೆಯ ಶತಕ; ರಿಂಕು ಬೊಂಬಾಟ್ ಫಿನಿಶಿಂಗ್; ಅಫ್ಘಾನಿಸ್ತಾನಕ್ಕೆ ಬೃಹತ್ ಗುರಿ ನೀಡಿದ ಭಾರತ
India vs Afghanistan 3rd T20I: ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ರನ್ ಮಳೆ ಹರಿದಿದೆ. ರೋಹಿತ್ ಶರ್ಮಾ ದಾಖಲೆಯ ಶತಕ ಹಾಗೂ ರಿಂಕು ಸಿಂಗ್ ಜೊತೆಗಿನ ಅಮೋಘ ಜೊತೆಯಾಟದ ನೆರವಿಂದ ಅಫ್ಘಾನಿಸ್ತಾನ ತಂಡಕ್ಕೆ ಬೃಹತ್ ಗುರಿ ನೀಡಿದೆ.
ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ (India vs Afghanistan) ಭಾರತ ಅಬ್ಬರಿಸಿದೆ. ಒಂದು ಹಂತದಲ್ಲಿ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಟೀಮ್ ಇಂಡಿಯಾಗೆ ಆಸರೆಯಾದ ನಾಯಕ ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್, ಭಾರತದ ಮೊತ್ತವನ್ನು ಹಿಗ್ಗಿಸಿದ್ದಾರೆ. ಹಿಟ್‌ಮ್ಯಾನ್ ಆಕರ್ಷಕ ಶತಕ ಹಾಗೂ ಉಭಯ ಆಟಗಾರರ ಆಕರ್ಷಕ ಶತಕದ ಜೊತೆಯಾಟದ ನೆರವಿನಿಂದ ಭಾರತ ಬೃಹತ್ ಮೊತ್ತ ಪೇರಿಸಿದ್ದಾರೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತವು, ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ಆದರೆ ರೋಹಿತ್ ಹಾಗೂ ರಿಂಕು ಅಮೋಘ ಜೊತೆಯಾಟದ ನೆರವಿಂದ ಭಾರತವು 4 ವಿಕೆಟ್ ಕಳೆದುಕೊಂಡು 212 ರನ್ ಕಲೆ ಹಾಕಿದೆ. ಆ ಮೂಲಕ ಅಫ್ಘನ್ ಗೆಲುವಿಗೆ 213 ರನ್‌ಗಳ ಬೃಹತ್ ಗುರಿ ನೀಡಿದೆ.
ಫರೀದ್ ಅಹ್ಮದ್ ಎಸೆತವನ್ನು ಸಿಕ್ಸರ್‌ಗಟ್ಟಲು ಪ್ರಯತ್ನಿಸಿದ ಯಶಸ್ವಿ ಜೈಸ್ವಾಲ್ 4(6) ರನ್ ಗಳಿಸಿ ಮೊದಲನೆಯವರಾಗಿ ಔಟಾದರು. ಈ ವೇಳೆ ಮೈದಾನಕ್ಕೆ ಬಂದ ಬೆಂಗಳೂರಿಗರ ಫೇವರೆಟ್ ಆಟಗಾರ ವಿರಾಟ್ ಕೊಹ್ಲಿ, ಮೊದಲ ಎಸೆತದಲ್ಲೇ ಔಟಾಗಿ ನಿರಾಶೆ ಮೂಡಿಸಿದರು. ಫರೀದ್ ಅಹ್ಮದ್ ಸತತ ಎರಡು ವಿಕೆಟ್ ಪಡೆದು ಅಬ್ಬರಿಸಿದರು.
ಲೈವ್ ಅಪ್ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ | IND vs AFG Live Updates: ಇಂಡೋ-ಅಫ್ಘನ್ 3ನೇ ಟಿ20; ಭಾರತ ಬೃಹತ್ ಮೊತ್ತ
ಮೊದಲೆರಡು ಪಂದ್ಯಗಳಲ್ಲಿ ಅಜೇಯ ಅರ್ಧಶತಕ ಸಿಡಿಸಿದ್ದ ಶಿವಂ ದುಬೆ ಕೂಡಾ ಕೇವಲ 1 ರನ್ ಗಳಿಸಿ ಔಟಾದರು. ಅವರ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಕೂಡಾ ಗೋಲ್ಡನ್ ಡಕ್‌ಗೆ ಬಲಿಯಾದರು. 4.3 ಓವರ್ ಆಗುವಷ್ಟರಲ್ಲಿ ಭಾರತವು ಕೇವಲ 22 ರನ್‌ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ಈ ವೇಳೆ ಆರಂಭವಾಗಿದ್ದೇ ನಾಯಕ ಹಿಟ್‌ಮ್ಯಾನ್ ಹಾಗೂ ರಿಂಕು ಜುಗಲ್‌ಬಂದಿ.
ಕೆಲಕಾಲ ಕ್ರೀಸ್‌ಕಚ್ಚಿ ಆಡಿ ವಿಕೆಟ್ ಉಳಿಸಿಕೊಂಡ ಇಬ್ಬರು ಬ್ಯಾಟರ್‌ಗಳು ಆ ಬಳಿಕ ಸ್ಫೋಟಕ ಆಟಕ್ಕೆ ಮಣೆ ಹಾಕಿದರು. ನೋಡ ನೋಡುತ್ತಿದ್ದಂತೆಯೇ ಅರ್ಧಶತಕ ಹಾಗೂ ಶತಕದ ಜೊತೆಯಾಟವಾಡಿದರು.
ಹಿಟ್‌ಮ್ಯಾನ್ ಆಕರ್ಷಕ ಶತಕ
ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಡಕೌಟ್ ಆಗಿದ್ದ ಹಿಟ್‌ಮ್ಯಾನ್ ಈ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದರು. ಮೇಲಿಂದ ಮೇಲೆ ಬೌಂಡರಿ ಸಿಕ್ಸರ್‌ಗಳ ಸುರಿಮಳೆ ಸಿಡಿಸಿದ ಅವರು ಚುಟುಕು ಶತಕದೊಂದಿಗೆ ಹಲವು ದಾಖಲೆ ನಿರ್ಮಿಸಿದರು. ಈ ಸ್ವರೂಪದಲ್ಲಿ 5 ಶತಕಗಳೊಂದಿಗೆ ಅಧಿಕ ಸೆಂಚುರಿ ಸಿಡಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದರು.
ಕೇವಲ 69 ಎಸೆತಗಳನ್ನು ಎದುರಿಸಿದ ಹಿಟ್‌ಮ್ಯಾನ್ 11 ಬೌಂಡರಿ ಹಾಗೂ 8 ಸ್ಫೋಟಕ ಸಿಕ್ಸರ್ ನೆರವಿನಿಂದ ಬರೋಬ್ಬರಿ 121 ರನ್ ಕಲೆ ಹಾಕಿದರು. ಟಿ20 ಸ್ವರೂಪದಲ್ಲಿ ಇದು ಅವರ ಅತಿ ಹೆಚ್ಚು ಸ್ಕೋರ್.
ಇದೇ ವೇಳೆ ರೋಹಿತ್ ಶರ್ಮಾ ವಿಶೇಷ ದಾಖಲೆ ನಿರ್ಮಿಸಿದರು. ಭಾರತ ತಂಡದ ನಾಯಕನಾಗಿ ಟಿ20 ಸ್ವರೂಪದಲ್ಲಿ ಅಧಿಕ ರನ್ ಕಲೆ ಹಾಕಿದರು. ಆ ಮೂಲಕ ವಿರಾಟ್ ಕೊಹ್ಲಿ ದಾಖಲೆ ಬ್ರೇಕ್ ಮಾಡಿದರು. ಕೊಹ್ಲಿ ನಾಯಕನಾಗಿ 1570 ರನ್ ಗಳಿಸಿದ್ದು, ರೋಹಿತ್ ಶರ್ಮಾ ಆ ರನ್ ಮೀರಿಸಿದ್ದಾರೆ. 1572ಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ.
ಅತ್ತ ಭರ್ಜರಿ ಫಿನಿಶಿಂಗ್ ಮಾಡಿದ ರಿಂಕು ಸಿಂಗ್ 39 ಎಸೆತಗಳಲ್ಲಿ 2 ಬೌಂಡರಿ ಹಾಗೂ 6 ಸಿಕ್ಸರ್ ನೆರವಿಂದ 69 ರನ್ ಪೇರಿಸಿದರು.
ಕೊನೆಯ ಓವರ್‌ನಲ್ಲಿ 36 ರನ್
ಕರೀಮ್ ಎಸೆದ ಕೊನೆಯ ಓವರ್‌ನಲ್ಲಿ ರಿಂಕು ಮತ್ತು ರೋಹಿತ್ ಬರೋಬ್ಬರಿ 36 ರನ್ ಕಲೆ ಹಾಕಿದರು. ಒಂದು ನೋಬಾಲ್ ಎಸೆದ ಬೌಲರ್ ಕೈಸುಟ್ಟುಕೊಂಡರು. ಓವರ್‌ನಲ್ಲಿ ಒಟ್ಟು 5 ಸಿಕ್ಸರ್ ಹಾಗೂ 1 ಬೌಂಡರಿ ಸಿಡಿಯಿತು.